
ಬೆಂಗಳೂರು, ಮೇ 8:
ಪರಿಶಿಷ್ಟ ಜಾತಿಗಳ (SC) ಉಪವರ್ಗೀಕರಣ ಸಂಬಂಧ ನ್ಯಾಯಮೂರ್ತಿ ನಾಗಮೋಹನದಾಸ ಅವರು ಸರ್ಕಾರಕ್ಕೆ ಸಲ್ಲಿಸಿದ ಮಧ್ಯಂತರ ವರದಿಯಲ್ಲಿ, ಸುಪ್ರೀಂ ಕೋರ್ಟ್ ಆದೇಶದಂತೆ ಪ್ರಾಯೋಗಿಕ ದತ್ತಾಂಶ (Empirical Data) ಸಂಗ್ರಹಣೆ ಮಾಡದೆ ಒಳಮೀಸಲಾತಿ ನೀಡುವುದು ಸಾಧ್ಯವಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಹಿನ್ನಲೆಯಲ್ಲಿ, ಕರ್ನಾಟಕ ಸರ್ಕಾರ SC ಸಮುದಾಯದಲ್ಲಿ ಬರುವ ಪ್ರತಿ ಜಾತಿಯ ಸ್ಥಿತಿಗತಿಯ ಕುರಿತು ಸಮಗ್ರ ಅಧ್ಯಯನ ನಡೆಸಲು ಆದೇಶಿಸಿದೆ.
ಈ ಅಧ್ಯಯನದ ಭಾಗವಾಗಿ ಆಯೋಗವು ಶಾಲಾ ಶಿಕ್ಷಕರನ್ನು ನೇಮಿಸಿ ತರಬೇತಿ ನೀಡಿ, ಮೇ 5 ರಿಂದ ಮೇ 17 ರ ವರೆಗೆ ಸಮೀಕ್ಷೆ ಕೈಗೊಂಡಿದೆ. ಆದರೆ ಈ ಸಮೀಕ್ಷೆಯ ಪ್ರಕ್ರಿಯೆ ಹಾಗೂ ವಿಧಾನ ಕುರಿತು ಹಲವು ಸಮುದಾಯದ ಸಂಘಟನೆಗಳು ತೀವ್ರ ಆತಂಕ ವ್ಯಕ್ತಪಡಿಸುತ್ತಿವೆ.
ಪ್ರೆಸ್ ಕ್ಲಬ್ ಆಫ್ ಬೆಂಗಳೂರುನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪ್ರಮುಖ ಸಮುದಾಯದ ನಾಯಕರು ಈ ಕೆಳಗಿನ ಬೇಡಿಕೆಗಳನ್ನೂ ಮತ್ತು ಆತಂಕಗಳನ್ನೂ ಸರ್ಕಾರದ ಗಮನಕ್ಕೆ ತಂದರು:
1. ಸಮೀಕ್ಷೆಯ ಅಂಶಗಳ ಬಗ್ಗೆ ಸ್ಪಷ್ಟತೆ ಇಲ್ಲ: ಸಮೀಕ್ಷೆಯಲ್ಲಿ ಯಾವ ಮಾಹಿತಿಯನ್ನು ಕೇಳಲಾಗುತ್ತದೆ ಎಂಬುದು ಸಾರ್ವಜನಿಕರಿಗೆ ತಿಳಿಯದೆ ಉಳಿದಿದೆ. ಬಹುತೇಕ ಜನರು ದಾಖಲೆ ರಹಿತ ತಾಂಡಾಗಳಲ್ಲಿ ವಾಸಿಸುವವರು, ಅನಕ್ಷರಸ್ತರು, ಅಥವಾ ಇತರ ಜಿಲ್ಲೆ/ರಾಜ್ಯಗಳಿಗೆ ಕೆಲಸಕ್ಕಾಗಿ ವಲಸೆ ಹೋಗಿರುವವರು. ಈ ಇಳಿ ಅವಧಿಯ ಸಮೀಕ್ಷೆಯಲ್ಲಿ ಅವರ ಮಾಹಿತಿಯನ್ನೆಲ್ಲಾ ಸಂಗ್ರಹಿಸುವುದು ಸಾಧ್ಯವಿಲ್ಲ.
2. ವೈವಿಧ್ಯಮಯ ಜಾತಿಗಳ ಸ್ಥಿತಿಗತಿಯ ಪ್ರತಿಬಿಂಬ ಇಲ್ಲದ ಭೀತಿ: ಪರಿಶಿಷ್ಟ ಜಾತಿಗಳ ಜೀವನಶೈಲಿ, ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಪರಿಸ್ಥಿತಿಗಳು ಪರಸ್ಪರ ಭಿನ್ನವಾಗಿದ್ದು, ಸಮೀಕ್ಷಾ ನಮೂನೆಯಲ್ಲಿ ಎಲ್ಲಾ ಸಮುದಾಯಗಳ ವಿಶೇಷತೆಗಳು ಪ್ರತಿಬಿಂಬಿಸಬೇಕು. ಈ ಕುರಿತಾಗಿ ಸಮೀಕ್ಷಾ ನಮೂನೆಯ ವಿವರಗಳು ಇನ್ನೂ ಬಹಿರಂಗವಾಗಿಲ್ಲ.
3. ವಲಸೆ ಹೋದ ಜನರನ್ನು ತಲುಪಲು ಕಷ್ಟ: ಸಮೀಕ್ಷೆಗೆ ನೀಡಿರುವ ಕೇವಲ ಕೆಲವು ದಿನಗಳ ಅವಧಿಯಲ್ಲಿ ವಲಸೆ ಹೋದವರು ವಾಪಸ್ ಬರುವ ಸಾಧ್ಯತೆ ಕಡಿಮೆ. ಹಾಗಾಗಿ, ಸಮೀಕ್ಷಾ ಅವಧಿಯನ್ನು ದೀಪಾವಳಿವರೆಗೂ ವಿಸ್ತರಿಸಬೇಕು, ಅಥವಾ ಅವರು ವಾಸವಿರುವ ಸ್ಥಳದಲ್ಲಿ ಸಮೀಕ್ಷೆ ನಡೆಯಬೇಕು, ಇಲ್ಲದಿದ್ದರೆ ಅವರ ಪರವಾಗಿ ಮಾಹಿತಿಯನ್ನು ನೀಡಲು ಸಂಬಂಧಿತರಿಗೆ ಅವಕಾಶ ಕೊಡಬೇಕು.
4. ಕೇಂದ್ರ ಸರ್ಕಾರದ ಜಾತಿ ಜನಗಣನೆ ನಿರ್ಧಾರ: ಕೇಂದ್ರ ಸರ್ಕಾರ ಜಾತಿಗಣತಿ ಕೈಗೊಳ್ಳುತ್ತಿರುವ ಹಿನ್ನಲೆಯಲ್ಲಿ, ವೈಜ್ಞಾನಿಕವಾಗಿ ನಡೆಯುವ ಈ ಪ್ರಕ್ರಿಯೆಯಿಂದ ಎಲ್ಲ ಸಮುದಾಯಗಳಿಗೂ ನ್ಯಾಯ ಸಿಗಲಿದೆ ಎಂಬ ನಂಬಿಕೆ ವ್ಯಕ್ತವಾಯಿತು. ಇದರಿಂದ ರಾಜ್ಯ ಮಟ್ಟದ ಉಪವರ್ಗೀಕರಣ ಸಮೀಕ್ಷೆಯ ಅಗತ್ಯತೆ ಪ್ರಶ್ನಾರ್ಹವಾಗಿದೆ.
5. ಹುಡುಕಾಟವಿಲ್ಲದ ಸಮೀಕ್ಷೆ ಅಸಮಾನತೆಯ ಮೂಲವಾಗಬಹುದು: ಸಮಗ್ರವಾದ ಪೂರ್ವ ಸಿದ್ಧತೆ ಇಲ್ಲದೇ ನಡೆಸಲಾಗುತ್ತಿರುವ ಸಮೀಕ್ಷೆಯಿಂದ ಸತ್ಯದ ಚಿತ್ರಣ ಸಿಗದು ಮತ್ತು ಇದು ಅನೇಕ ಸಮುದಾಯಗಳಿಗೆ ಅನ್ಯಾಯವನ್ನುಂಟುಮಾಡಬಹುದು.
6. ಮುಖ್ಯಮಂತ್ರಿಗಳ ಗಮನಾರ್ಹತೆ ಕೊರತೆ: ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರಿಗೆ ಹಲವಾರು ಬಾರಿ ಸಮುದಾಯದ ಮುಖಂಡರು ಭೇಟಿಯಾಗಿ ಸಭೆ ಮಾಡಬೇಕೆಂದು ಮನವಿ ಮಾಡಿದರೂ, ಸಭೆ ನಡೆಸದೆ ನಿರ್ಲಕ್ಷ್ಯ ತೋರಲಾಗಿದೆ. ಕೆಲವೆ ಸಮುದಾಯಗಳೊಂದಿಗೆ ಮಾತ್ರ ಸಭೆ ನಡೆಸಿ ಇತರರನ್ನು ಕಡೆಗಣಿಸಲಾಗಿದೆ ಎಂಬ ಆರೋಪವಿದೆ.
7. ರಾಜಕೀಯ ಪಕ್ಷಗಳಿಂದ ಶೋಷಣೆ: ಎಲ್ಲಾ ರಾಜಕೀಯ ಪಕ್ಷಗಳು ಪರಿಶಿಷ್ಟ ಜಾತಿ ಸಮುದಾಯಗಳನ್ನು ತಮ್ಮ ರಾಜಕೀಯ ಲಾಭಕ್ಕಾಗಿ ಬಳಸಿಕೊಂಡಿದ್ದು, ಅವರ ಮೂಲಭೂತ ಸಮಸ್ಯೆಗಳ ಪರಿಹಾರಕ್ಕೆ ಹಿಂದೆ ಮುಂದಾಗಿಲ್ಲವೆಂದು ಸಂಘಟನೆಯ ಅಧ್ಯಕ್ಷ ರಾಜನಾಯ್ಕ, ಪ್ರಧಾನ ಕಾರ್ಯದರ್ಶಿ ರವಿಕಾಂತ್ ಆರ್. ಅಂಗಡಿ, ಮಹಿಳಾ ಮುಖಂಡ ಲಲಿತಾ ನಾಯ್ಕ ಮತ್ತು ಇತರ ಮುಖಂಡರು ಈ ವೇಳೆ ಹೇಳಿದರು.
ಸಂಘಟನೆ, ಸರ್ಕಾರ ಮತ್ತು ಆಯೋಗಕ್ಕೆ ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಸಮೀಕ್ಷಾ ಪ್ರಕ್ರಿಯೆಯಲ್ಲಿ ತಕ್ಷಣ ಸೂಕ್ತ ತಿದ್ದುಪಡಿ ಮಾಡಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟಿದೆ.
City Today News 9341997936
