ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ‘ಮನ್ನ’ ಸಮುದಾಯ ಸೇರ್ಪಡೆಗೆ ಆಗ್ರಹ – ತುಳುನಾಡ್ ಮನ್ನ ಸಮಾಜದ ಪ್ರತಿಭಟನೆ

ಬೆಂಗಳೂರು, ಮೇ 15 – ದಕ್ಷಿಣ ಕನ್ನಡ ಮೂಲದ ಅಸ್ಪೃಶ್ಯ ಸಮುದಾಯವಾಗಿರುವ ‘ಮನ್ನ’ ಸಮುದಾಯವನ್ನು ಕರ್ನಾಟಕ ಸರ್ಕಾರದ ಪರಿಶಿಷ್ಟ ಜಾತಿ (ಎಸ್.ಸಿ.) ಪಟ್ಟಿಯಲ್ಲಿ ತಕ್ಷಣ ಸೇರಿಸಬೇಕು ಎಂಬ ಆಗ್ರಹವು ಮತ್ತೊಮ್ಮೆ ಪ್ರಬಲವಾಗಿದೆ. ಸುಮಾರು 5 ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಈ ಸಮುದಾಯದವರು ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು ಹಾಗೂ ಕೇರಳದ ಕಾಸರಗೋಡು ಜಿಲ್ಲೆಗಳಲ್ಲಿ ವಾಸಿಸುತ್ತಿದ್ದಾರೆ.

ತುಳುನಾಡ್ ಮನ್ನ ಸಮಾಜ ಸೇವಾ ಸಂಘದ ಅಧ್ಯಕ್ಷ ವೆಂಕಣ್ಣ ಕೊಯ್ಯೂರು ಅವರು ಪ್ರೆಸ್ ಕ್ಲಬ್ ಆಫ್ ಬೆಂಗಳೂರುನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡುತ್ತಾ, “ನಮ್ಮ ಮನ್ನ ಸಮುದಾಯವು ತನ್ನದೇ ಆದ ಪೈತೃಕ ಆಚಾರ-ವಿಚಾರ, ಸಂಸ್ಕೃತಿ ಹಾಗೂ ಕುಲದೈವಗಳೊಂದಿಗೆ ವಿಶಿಷ್ಟ ಅಸ್ಮಿತೆ ಹೊಂದಿದ್ದು, ಈವರೆಗೆ 30 ವರ್ಷಗಳಿಂದ ಎಲ್ಲಾ ಸರ್ಕಾರಗಳಿಗೆ ಮನವಿ ನೀಡಿದರೂ ಎಸ್ಪಿ ಪಟ್ಟಿಗೆ ಸೇರ್ಪಡೆಗೊಂಡಿಲ್ಲ. ಇದು ಅತ್ಯಂತ ಬೇಸರದ ಸಂಗತಿ,” ಎಂದರು.

ಸರ್ಕಾರದ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿಗೆ ಸಂಬಂಧಿಸಿದ ಸಮೀಕ್ಷೆ ಪ್ರಸ್ತುತ ರಾಜ್ಯದಾದ್ಯಂತ ನಡೆಯುತ್ತಿದ್ದು, ಅಲ್ಲಿ 98 ಪರಿಶಿಷ್ಟ ಜಾತಿಗಳ ಹೆಸರನ್ನು ಮಾತ್ರ ಉಪಜಾತಿ ಕಾಲಂನಲ್ಲಿ ನಮೂದಿಸಲು ಅವಕಾಶವಿದೆ. ಆದರೆ, ಸರ್ಕಾರದ ಪಟ್ಟಿಗೆ ಸೇರ್ಪಡೆಯಾಗದ ‘ಮನ್ನ’ ಜಾತಿಯವರನ್ನು ಈ ಸಮೀಕ್ಷೆಯಲ್ಲಿ ಪರಿಗಣಿಸುವ ವ್ಯವಸ್ಥೆ ಇಲ್ಲದಿರುವುದು ಅವರ ಅಸ್ತಿತ್ವವನ್ನೇ ಮರೆಮಾಚುವ ಅಪಾಯಕ್ಕೆ ದಾರಿ ಮಾಡಿಕೊಡುತ್ತದೆ ಎಂದು ಸಂಘದ ಸದಸ್ಯರು ಆತಂಕ ವ್ಯಕ್ತಪಡಿಸಿದ್ದಾರೆ.

ಸರ್ಕಾರ ಹಾಗೂ ನಾಗಮೋಹನದಾಸ ಆಯೋಗಕ್ಕೆ ಸಂಘದ ಆಗ್ರಹ:

1. ಪರಿಶಿಷ್ಟ ಜಾತಿಗಳ ಸಮೀಕ್ಷೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಬೇಕು


2. ಸಮೀಕ್ಷೆ ನಮೂನೆಯಲ್ಲಿ ‘ಮನ್ನ’ ಸೇರಿದಂತೆ ಪಟ್ಟಿಗೆ ಸೇರ್ಪಡೆಯಾಗದ ಜಾತಿಗಳ ಹೆಸರನ್ನೂ ಬರೆಯಲು ಅವಕಾಶ ನೀಡಬೇಕು


3. ಮನ್ನ ಸಮುದಾಯವನ್ನು ತಕ್ಷಣ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಸೇರಿಸಿ, ಒಳ ಮೀಸಲಾತಿ ಅನುಕೂಲವನ್ನು ನೀಡಬೇಕು



ಈ ಪತ್ರಿಕಾಗೋಷ್ಠಿಯಲ್ಲಿ ಅಚ್ಯುತ ಎಸ್.ಎಂ. ಶಾಂತರಾಮ್, ಎಂ. ರಮೇಶ್ ಬೋಧಿ, ಬಿ.ಕೆ. ವಸಂತ, ಸಂಜೀವ ಮತ್ತು ಉದಯ ಉಪಸ್ಥಿತರಿದ್ದರು.

City Today News 9341997936

Leave a comment

This site uses Akismet to reduce spam. Learn how your comment data is processed.