
ಬೆಂಗಳೂರು, ಮೇ 22: ಜಯನಗರ ಐದನೇ ಬ್ಲಾಕ್‌ನಲ್ಲಿ ನೆಲೆಯೂರಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ, ಮೇ 22 ಗುರುವಾರದಂದು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಉಪಕ್ರಮಗಳು ಶ್ರದ್ಧಾ ಭರಿತವಾಗಿ ಆಯೋಜಿಸಲ್ಪಟ್ಟವು.
ಪೂಜ್ಯಪಾದ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆಜ್ಞೆಯಂತೆ, ಮಠದ ಪ್ರಮುಖ ವ್ಯವಸ್ಥಾಪಕರಾದ ಶ್ರೀ ಆರ್. ಕೆ. ವಾದೀಂದ್ರಾಚಾರ್ ಅವರ ನೇತೃತ್ವದಲ್ಲಿ ಮುಂಜಾನೆ ಶ್ರೀ ರಾಯರಿಗೆ ಪಂಚಾಮೃತ ಸ್ನಾನ, ಚಿನ್ನದ ಅಭಿಷೇಕ, ವಿಶಿಷ್ಟ ಅಲಂಕಾರ, ಮಹಾಮಂಗಳಾರತಿ ಮತ್ತು ಪ್ರಸಾದ ವಿತರಣೆ ನಡೆಯಿತು ಎಂದು ಶ್ರೀ ನಂದಕಿಶೋರ್ ಆಚಾರ್ಯರು ತಿಳಿಸಿದ್ದಾರೆ.
ಸಂಜೆಯ ವೇಳೆಯಲ್ಲಿ ನಡೆದ ವಿಶೇಷ ಕಾರ್ಯಕ್ರಮಗಳಲ್ಲಿ ರಥೋತ್ಸವ, ಗಜವಾಹನ ಶೋಭಾಯಾತ್ರೆ, ಅಷ್ಟಾವಧಾನ, ತೊಟ್ಟಿಲು ಆರಾಧನೆ ಸೇರಿದಂತೆ ಅನೇಕ ವಿಧ್ಯುಕ್ತ ಸೇವೆಗಳು ಭಕ್ತಿಭಾವಪೂರ್ವಕವಾಗಿ ಜರುಗಿದವು.
ಈ ಸಂದರ್ಭದಲ್ಲಿ ನೃತ್ಯ ಕಲಾವಿದರಾದ ಶ್ರೀಮತಿ ಮೇಖಲಾ ಅಗ್ನಿಹೋತ್ರಿ ಅವರ ಮಾರ್ಗದರ್ಶನದಲ್ಲಿ ಶ್ರೀ ವಿಜಯ ವಿಠಲ ನೃತ್ಯಾಲಯದ ವಿದ್ಯಾರ್ಥಿಗಳು ನೃತ್ಯ ಸೇವೆಗಳನ್ನು ನೆರವೇರಿಸಿದರು. ಶ್ರೀಮಠದ ಧರ್ಮದರ್ಶಿಗಳಾದ ಶ್ರೀ ಜಿ. ಕೆ. ಆಚಾರ್ಯರು ಉಪಸ್ಥಿತರಿದ್ದು, ನೂರಾರು ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಾಲ ಕಲಾವಿದರ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
City Today News 9341997936
