ಕ್ರೈಸ್ಟ್ ವಿಶ್ವವಿದ್ಯಾಲಯದ ಸಂಶೋಧನೆ ಹಣ್ಣುಗಳ ಸಿಪ್ಪೆಗಳಿಂದ ಜಲಚರ ಸಾಕಣೆ  ಬೆಳವಣಿಗೆಗೆ ಉತ್ತೇಜನ

ಬೆಂಗಳೂರು – ಅಡುಗೆ ಮನೆಯಲ್ಲಿ ಉಂಟಾಗುವ ತ್ಯಾಜ್ಯ, ಹಣ್ಣುಗಳ ಸಿಪ್ಪೆಗಳು , ಕೃಷಿಕರಿಗೆ ಆರೋಗ್ಯಕರ ಮೀನು ಮತ್ತು ಸಿಗಡಿಗಳನ್ನು ಬೆಳೆಸಲು ಸಹಾಯ ಮಾಡಬಹುದೆಂದು ನಂಬಬಹುದೇ? ಕ್ರೈಸ್ಟ್ (ಘೋಷಿತ ವಿಶ್ವವಿದ್ಯಾಲಯ), ಬೆಂಗಳೂರು ಇವರ ಅಧ್ಯಯನದ ಪ್ರಕಾರ ಅದು ಸಾದ್ಯ. ಈ ಸಂಶೋಧನೆಯು ಜೈವಿಕ ತ್ಯಾಜ್ಯದ ಮೌಲ್ಯವನ್ನು ಪರಿವರ್ತಿಸುವ ನೂತನ ಮಾರ್ಗವಾಗಬಹುದು.

ಕ್ರೈಸ್ಟ್ ವಿಶ್ವವಿದ್ಯಾಲಯದ ಜೀವ ವಿಜ್ಞಾನ ವಿಭಾಗದ ಸಂಶೋಧಕರು, ವಿಶೇಷವಾಗಿ ದಾಳಿಂಬೆ ಸಿಪ್ಪೆಗಳ ಬಳಕೆಯಿಂದ, ಜಲದ ಸಿಗಡಿಗಳಿಗೆ (ಮ್ಯಾಕ್ರೋಬ್ರಾಕಿಯಮ್ ರೋಸೆನ್‌ಬರ್ಗೀ) ಪೋಷಕಾಂಶ ಪೂರಕ ಆಹಾರವನ್ನು ತಯಾರಿಸಿದ್ದಾರೆ.

ಪಿಎಚ್‌ಡಿ ವಿದ್ಯಾರ್ಥಿನಿ ಜಿ.ಆರ್ .ಜನನಿ ಅವರು ಈ ಬಗ್ಗೆ ಮಾತನಾಡುತ್ತಾ, “ಸಾಧಾರಣವಾಗಿ ರಾಸಾಯನಿಕಗಳನ್ನು ಬಳಸುವ ಜಟಿಲ ವಿಧಾನಗಳ ಬದಲಿಗೆ, ನಾವು ದಾಳಿಂಬೆ ಸಿಪ್ಪೆಗಳನು ನೈಸರ್ಗಿಕ ರೂಪದಲ್ಲೇ ಬಳಸಿದೆವು. ಇದು ಆಹಾರ ಖರ್ಚನ್ನು ಕಡಿಮೆ ಮಾಡುತ್ತದೆ, ತ್ಯಾಜ್ಯವನ್ನು ಕಡಿಮೆ ಮಾಡುತ್ತದೆ ಹಾಗೂ ಸಿಗಡಿಗಳ ಆರೋಗ್ಯವನ್ನು ಉತ್ತಮಗೊಳಿಸುತ್ತದೆ” ಎಂದು ಹೇಳಿದರು.

ಅನೇಕ ಹಣ್ಣಿನ ಸಿಪ್ಪೆಗಳ ವೈಜ್ಞಾನಿಕ ವಿಶ್ಲೇಷಣೆಯು ಈ ಸಂಶೋಧನೆಯ ಭಾಗವಾಗಿತ್ತು — ಪೈನಾಪಲ್, ಬಾಳೆಹಣ್ಣು (ಕ್ಯಾವೆಂಡಿಷ್), ಪಪ್ಪಾಯಿ, ಡ್ರ್ಯಾಗನ್ ಫ್ರೂಟ್ ಮತ್ತು ದಾಳಿಂಬೆ. ಈ ಎಲ್ಲಾ ಸಿಪ್ಪೆಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣಗಳನ್ನು ಹೊಂದಿದ್ದು, ಅವುಗಳಲ್ಲಿ ದಾಳಿಂಬೆ ಸಿಪ್ಪೆ ಅತ್ಯಂತ ಶ್ರೇಷ್ಠವಾಗಿದೆ ಎಂಬುದು ತಿಳಿಯಿತು.

ದಾಳಿಂಬೆ ಸಿಪ್ಪೆಗಳನ್ನು ಆಹಾರಕ್ಕೆ ಸೇರಿಸಿದಾಗ ಸಿಗಡಿಗಳ ಬೆಳವಣಿಗೆ, ಪೋಷಕಾಂಶ ಶೋಷಣಾ ಸಾಮರ್ಥ್ಯ ಮತ್ತು ರೋಗ ನಿರೋಧಕ ಶಕ್ತಿಯಲ್ಲಿ ಗಮನಾರ್ಹ ಸುಧಾರಣೆ ಕಂಡುಬಂದಿತು. ಸಿಗಡಿಗಳು ಸಾಮಾನ್ಯವಾಗಿ ಎದುರಿಸುವ ಬ್ಯಾಕ್ಟೀರಿಯಾ ಸೋಂಕು ಏರೋಮೊನಸ್ ಹೈಡ್ರೋಫಿಲಾ ವಿರುದ್ಧ ಉತ್ತಮ ಪ್ರತಿರೋಧತೆಯನ್ನು ತೋರಿತು.

ಈ ಸಂಶೋಧನೆಯು ಡಾ. ಕೃಷ್ಣಕುಮಾರ್. ವಿ, ಸಹಾಯಕರ ಪ್ರಾಧ್ಯಾಪಕರು ಹಾಗೂ ಜಲಚರ ವಿಜ್ಞಾನ ಮತ್ತು ಮೀನುಗಾರಿಕೆ ತಜ್ಞರ ಮಾರ್ಗದರ್ಶನದಲ್ಲಿ ನಡೆಯಿತು. ಅವರು ಈ ಬಗ್ಗೆ ಮಾತನಾಡುತ್ತಾ, “ಹಣ್ಣುಗಳ ತ್ಯಾಜ್ಯವನ್ನು ಮರುಬಳಕೆ ಮಾಡುವ ಈ ವಿಧಾನವು ವಿಜ್ಞಾನಕ್ಕೂ ಸರಿಹೊಂದುತ್ತದೆ ಮತ್ತು ನಿತ್ಯಜೀವನಕ್ಕೂ ಉಪಯುಕ್ತವಾಗಿದೆ. ಇದು ಕೃಷಿಕರಿಗೆ ಲಾಭ, ಪರಿಸರಕ್ಕೆ ರಕ್ಷಣೆ ಹಾಗೂ ಮೀನು ಸಂಪತ್ತು ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ” ಎಂದು ಹೇಳಿದರು.

ಜೀವ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ಫಾ. ಜೋಬಿ ಝೇವಿಯರ್ ಅವರ ನೇತೃತ್ವದಲ್ಲಿ ಇಂತಹ ಪರಿಸರ ಸ್ನೇಹಿ ಸಂಶೋಧನೆಗೆ ಉತ್ತೇಜನ ನೀಡಲಾಗುತ್ತಿದೆ. ಈ ಅಧ್ಯಯನವು ಈಗಾಗಲೇ ರಾಷ್ಟ್ರೀಯ ವೈಜ್ಞಾನಿಕ ವೇದಿಕೆಗಳಲ್ಲೂ ಗಮನ ಸೆಳೆದಿದ್ದು, ಸಣ್ಣ ಮಟ್ಟದ ಮೀನುಗಾರಿಕೆಯಲ್ಲಿ ಕ್ರಾಂತಿ ತರಬಹುದಾದ ಸಾಧ್ಯತೆಯಿದೆ.

ದಾಳಿಂಬೆ ಸಿಪ್ಪೆ ಪೂರಕ ಆಹಾರ – ಸಿಗಡಿಗಳ ರೋಗ ನಿರೋಧಕ ಶಕ್ತಿ, ಬೆಳವಣಿಗೆ ಹಾಗೂ ಆರ್ಥಿಕತೆಗೆ ಉತ್ತೇಜನ ನೀಡುತ್ತದೆ.

City Today News 9341997936

Leave a comment

This site uses Akismet to reduce spam. Learn how your comment data is processed.