
ಬೆಂಗಳೂರು, ಮೇ 30: ಖ್ಯಾತ ಚಿತ್ರ ನಟ ಕಮಲ್ ಹಾಸನ್ ಅವರು ತಮ್ಮ ಮುಂದಿನ ಚಿತ್ರ ‘ಥಗ್ ಲೈಫ್’ನ ಪ್ರಚಾರಕ್ಕಾಗಿ ಬೆಂಗಳೂರಿಗೆ ಆಗಮಿಸಿದ ಸಂದರ್ಭ ನೀಡಿದ ವಿವಾದಾತ್ಮಕ ಹೇಳಿಕೆಯು ರಾಜ್ಯದಾದ್ಯಂತ ಆಕ್ರೋಶ ಹುಟ್ಟಿಸಿದೆ. “ಕನ್ನಡವು ತಮಿಳಿನಿಂದ ಹುಟ್ಟಿದ್ದು” ಎಂಬ ಅವರ ಹೇಳಿಕೆಯನ್ನು ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆಯಾಗಿ ಕಾಣಲಾಗಿದ್ದು, ಈ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿದೆ.
ಕನ್ನಡ ಪರ ಸಂಘಟನೆಗಳು, ಪ್ರತಿಪಕ್ಷ ಬಿಜೆಪಿಯವರು, ಕರ್ನಾಟಕ ರಕ್ಷಣಾ ವೇದಿಕೆ (ಕರವೇ), ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸೇರಿದಂತೆ ಹಲವಾರು ಸಂಘಟನೆಗಳು ಈ ಹೇಳಿಕೆಯನ್ನು ಖಂಡಿಸಿವೆ. ಕಮಲ್ ಹಾಸನ್ ಅವರು ತಕ್ಷಣವೇ ಬೇಷರತ್ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿರುವ ಸಂಘಟನೆಗಳು, ಕ್ಷಮೆ ಕೇಳದಿದ್ದರೆ ಅವರ ಯಾವುದೇ ಚಿತ್ರಗಳನ್ನೂ ಕರ್ನಾಟಕದಲ್ಲಿ ಬಿಡುಗಡೆಯಾಗದಂತೆ ತಡೆ ಮಾಡುವ ಎಚ್ಚರಿಕೆಯನ್ನು ನೀಡಿವೆ.

ಈ ಸಂಬಂಧ, ಕನ್ನಡ ಪರ ಸಂಘಟನೆಗಳು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಮನವಿ ಪತ್ರ ಸಲ್ಲಿಸಿ, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿವೆ. ಈ ಕುರಿತು ತಮಿಳು ಬಾಷಾ ಕನ್ನಡಿಗರ ಸಂಘದ ಅಧ್ಯಕ್ಷರು ಮತ್ತು ಸಿಟಿ ಟುಡೇ ನ್ಯೂಸ್ ನ ಸಂಪಾದಕರಾದ ಜಿ. ಎಸ್. ಗೋಪಾಲ್ ರಾಜ್ ಪತ್ರಿಕಾ ಪ್ರಕಟಣೆಯೊಂದರಲ್ಲಿ ಮಾತನಾಡುತ್ತಾ, “ಕನ್ನಡ ಭಾಷೆಗೆ ನಾಲ್ಕು ಸಾವಿರದಿಂದ ಐದು ಸಾವಿರ ವರ್ಷಗಳ ಇತಿಹಾಸವಿದೆ. ಇಂತಹ ಹೇಳಿಕೆಗಳಿಂದ ದ್ರಾವಿಡ ಭಾಷೆಗಳ ಒಗ್ಗಟ್ಟು ಹದಗೆಡುವ ಅಪಾಯವಿದೆ. ಕಮಲ್ ಹಾಸನ್ ಅವರು ಉತ್ತಮ ಕಲಾವಿದರಾದರೂ, ಅವರ ಈ ಹೇಳಿಕೆ ಕನ್ನಡಿಗರ ಆತ್ಮಾವಮಾನಕ್ಕೆ ಕಾರಣವಾಗಿದೆ,” ಎಂದು ವಿಷಾದ ವ್ಯಕ್ತಪಡಿಸಿದರು.
ಭಾಷೆಗಳ ನಡುವಿನ ಬಾಂಧವ್ಯ, ಸಹವಾಸಕ್ಕೆ ಧಕ್ಕೆ ಉಂಟುಮಾಡುವ ಮಾತುಗಳನ್ನು ಸಾರ್ವಜನಿಕ ವ್ಯಕ್ತಿಗಳು ಬದಲಿಸುವ ಅಗತ್ಯವಿದೆ ಎಂದು ಸಂಘಟನೆಗಳು ಅಭಿಪ್ರಾಯಪಟ್ಟಿವೆ. ಕನ್ನಡ ಒಂದು ಪ್ರಾಚೀನ ದ್ರಾವಿಡ ಭಾಷೆಯಾಗಿ ಸಾಂಸ್ಕೃತಿಕ, ಸಾಹಿತ್ಯಿಕವಾಗಿ ವೈಶಿಷ್ಟ್ಯ ಹೊಂದಿರುವುದನ್ನು ಅವರು ಪುನರುಚ್ಚರಿಸಿದ್ದಾರೆ.
City Today News 9341997936
