
ಬೆಂಗಳೂರು, ಜೂನ್ 18 – ರಾಜ್ಯದ ಪ್ರಮುಖ ಸಾಮಾಜಿಕ ಸಂಘಟನೆಯಾದ ಕರ್ನಾಟಕ ಪ್ರದೇಶ ಬಲಜಿಗ ಸಂಘ ತನ್ನ ನಿಬಂಧನೆಗಳ ಪ್ರಕಾರ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ. ಬಲಿಜ ಜಾತಿಯ ಸಹಸ್ರಾರು ಅರ್ಹ ವ್ಯಕ್ತಿಗಳಿಗೆ ಸದಸ್ಯತ್ವ ನೀಡಲು ನಿರಾಕರಣೆ ಮಾಡಲಾಗಿದೆ ಎಂಬುದಾಗಿ ಹಿರಿಯ ವಕೀಲರು ಹಾಗೂ ಬಾರ್ ಕೌನ್ಸಿಲ್ ಸದಸ್ಯ ಬಿ.ವಿ. ಶ್ರೀನಿವಾಸ್ ಅವರು ಬೆಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ.

1962ರ ಕರ್ನಾಟಕ ಸಂಘಗಳ ಅಧಿನಿಯಮದ ಅಡಿಯಲ್ಲಿ ನೋಂದಾಯಿತ ಈ ಸಂಘವು, ಬಲಿಜ ಸಮುದಾಯದ ಸಾಮಾಜಿಕ ಮತ್ತು ಆರ್ಥಿಕ ಸಬಲೀಕರಣಕ್ಕೆ ಬದ್ಧವಾಗಿದೆ. ಆದರೆ, ರಾಜ್ಯದ 30-35 ಲಕ್ಷ ಬಲಿಜ ಜನಸಂಖ್ಯೆಯ ನಡುವೆಯೂ ಕೇವಲ 12,346 ಮಂದಿ ಮಾತ್ರ ಸದಸ್ಯರಾಗಿರುವುದು ಸಂಘದ ನೈಜ ಉದ್ದೇಶಗಳಿಗೆ ವಿರುದ್ಧವಾಗಿದೆ ಎಂಬ ಆರೋಪ ಕೇಳಿಬರುತ್ತಿದೆ.
ಅರ್ಹತೆಯಿರುವ ಹಲವು ವ್ಯಕ್ತಿಗಳು ಸದಸ್ಯತ್ವಕ್ಕಾಗಿ ನೂರಾರು ಬಾರಿ ಸಂಘವನ್ನು ಸಂಪರ್ಕಿಸಿದರೂ, ಅಡಳಿತ ಮಂಡಳಿ ಏಕಪಕ್ಷೀಯ ಧೋರಣೆಯಿಂದ ಸದಸ್ಯತ್ವ ನೀಡಲು ನಿರಾಕರಿಸಿದ್ದು, ಈ ಮೂಲಕ ಸಂಘವನ್ನು ಕೆಲವು ವ್ಯಕ್ತಿಗಳ ಹಿಡಿತದಲ್ಲಿಟ್ಟುಕೊಳ್ಳುವ ಪ್ರಯತ್ನ ನಡೆದಿದೆ.
ಈ ಸಂಬಂಧ ಮೇ 28ರಂದು ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದ್ದು, ಜಿಲ್ಲಾ ಸಹಕಾರ ಸಂಘಗಳ ನೋಂದಣಾಧಿಕಾರಿಯ 2022ರ ನಿರ್ದೇಶನವನ್ನು ಅನುಸರಿಸಿ ಅರ್ಹ ವ್ಯಕ್ತಿಗಳಿಗೆ ಸದಸ್ಯತ್ವ ನೀಡಬೇಕು, ಮತದಾರರ ಪಟ್ಟಿಯನ್ನು ಸಿದ್ಧಪಡಿಸಿ ಮೂರು ತಿಂಗಳೊಳಗೆ ಚುನಾವಣೆ ನಡೆಸಬೇಕು ಎಂದು ಸ್ಪಷ್ಟ ಸೂಚನೆ ನೀಡಿದೆ. ನ್ಯಾಯಾಲಯದ ಆದೇಶದ ಪ್ರಕಾರ, ಸದಸ್ಯತ್ವ ಅರ್ಜಿ ಪರಿಗಣನೆ ನಾಲ್ಕು ವಾರಗಳ ಒಳಗೆ ಪೂರ್ಣಗೊಳ್ಳಬೇಕಾಗಿದೆ.
ಹೆಚ್ಚುವರಿ ವಿವಾದದಂತೆ, ಸಂಘವು ಏಕಪಕ್ಷೀಯವಾಗಿ ಕೇವಲ ರಿಟ್ ಅರ್ಜಿದಾರರಿಗೂ ಮಾತ್ರ ಸದಸ್ಯತ್ವ ನೀಡಲು ನಿರ್ಧರಿಸಿರುವುದಾಗಿ ಹೇಳಲಾಗಿದ್ದು, ಇದು ನ್ಯಾಯಾಲಯದ ಆದೇಶ ಹಾಗೂ ಜಿಲ್ಲಾ ನೋಂದಣಾಧಿಕಾರಿಯ ನಿರ್ದೇಶನಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಸಾರ್ವಜನಿಕರು ಸದಸ್ಯತ್ವ ಅರ್ಜಿ ಹಾಗೂ ಶುಲ್ಕ ಸಲ್ಲಿಸಲು ಸಂಘದ ಕಚೇರಿಗೆ ತೆರಳಿದಾಗ, ಅರ್ಜಿಗಳನ್ನು ಸ್ವೀಕರಿಸದೆ, ಅವರಿಗೆ ಅವಕಾಶವನ್ನೇ ನೀಡದಿರುವುದಾಗಿ ದೂರವಿದೆ.
“ಸಂಘವು ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಕಡೆಗಣಿಸಿ, ಖಾಸಗಿ ಕಂಪನಿಯಂತೆ ಕಾರ್ಯನಿರ್ವಹಿಸುತ್ತಿದೆ. ಇದು ಬಲಿಜ ಜನಾಂಗದ ಹಿತಕ್ಕೆ ವಿರುದ್ಧವಾಗಿದ್ದು, ಕೂಡಲೇ ಸಂಘವು ನ್ಯಾಯಾಲಯ ಹಾಗೂ ಜಿಲ್ಲಾಧಿಕಾರಿಗಳ ನಿರ್ದೇಶನದ ಪ್ರಕಾರ ಸದಸ್ಯತ್ವ ನೀಡಬೇಕಿದೆ” ಎಂದು ಶ್ರೀನಿವಾಸ್ ಅವರು ಹೇಳಿದರು.
ಅವರು ಸರ್ಕಾರ, ಸಹಕಾರ ಇಲಾಖೆ ಮತ್ತು ಸಂಬಂಧಿತ ಪ್ರಾಧಿಕಾರಗಳಿಗೆ ಕರೆ ನೀಡುತ್ತಾ –
“ಬಲಿಜ ಸಮಾಜದ ಎಲ್ಲ ಅರ್ಹ ವ್ಯಕ್ತಿಗಳಿಗೆ ಮುಕ್ತವಾಗಿ ಸದಸ್ಯತ್ವ ನೀಡಲಾಗಬೇಕು. ಸಂಘದ ಆಡಳಿತ ಪದ್ಧತಿಯಲ್ಲಿ ಪಾರದರ್ಶಕತೆ ಹಾಗೂ ನಿಷ್ಠೆ ಇರಬೇಕಾಗಿದೆ” ಎಂದು ಒತ್ತಾಯಿಸಿದರು.
City Today News 9341997936
