
ಬೆಂಗಳೂರು, ಜುಲೈ 5, 2025: ಬೆಂಗಳೂರಿನ ಗಾಂಧಿಭವನದಲ್ಲಿ ನಡೆದ ಅಲೆಮಾರಿ ಸಮುದಾಯಗಳ ಸಭೆಯಲ್ಲಿ, ಸರ್ಕಾರದಿಂದ ಅಧಿಕೃತವಾಗಿ ಅಲೆಮಾರಿ ಸಮುದಾಯವಾಗಿ ಗುರುತಿಸಲ್ಪಟ್ಟಿದ್ದರೂ, ಕೊರಚ ಮತ್ತು ಕೊರಮ ಸಮುದಾಯದವರನ್ನು ಸಭೆಯಿಂದ ಅಣಕವಾಗಿ ಕೈಬಿಟ್ಟ ಕ್ರಮದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತವಾಯಿತು. ಮಾಜಿ ಸಚಿವ ಎಚ್. ಅಂಜನೇಯರವರ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ, ಸಮಾವೇಶಕ್ಕೂ ಮೊದಲು ಎಲ್ಲಾ ಪರಿಶಿಷ್ಟ ಜಾತಿಯ ಅಲೆಮಾರಿಗಳನ್ನು ಸಭೆಯಲ್ಲಿ ಭಾಗವಹಿಸುವಂತೆ ಕರೆ ನೀಡಲಾಗಿದ್ದರೂ, ಕೊರಚ ಸಮುದಾಯದ ನಾಯಕರಿಗೆ ವೇದಿಕೆಯಲ್ಲಿ ಸ್ಥಾನ ನೀಡದೇ ನಿರ್ಲಕ್ಷಿಸಲಾಯಿತು.
ಅಖಿಲ ಕರ್ನಾಟಕ ಕೊರಚ ಮಹಾ ಸಭಾ (ರಿ) ರಾಜ್ಯಾಧ್ಯಕ್ಷ ಆದರ್ಶ್ ಯಲ್ಲಪ್ಪ, ಕೃಷ್ಣಪ್ಪ, ಸಿದ್ದೇಶ್ ಮಾದಪುರ, ಲೇಶಪ್ಪ, ಸಂತೋಷ್ ಸಿ., ಸುರೇಶ್ ಎನ್., ಕುಂಸಿ ಶ್ರೀನಿವಾಸ್, ಸಂತೋಷ್ ಕುಮಾರ್ ಎಂ, ಶಿವಮೂರ್ತಿ ವಿ. ಸೇರಿದಂತೆ ಹಲವರು ಸಭೆಗೆ ಹಾಜರಾಗಿದ್ದರು. ಆದರೆ ವೇದಿಕೆಯಲ್ಲಿ ವಿವಿಧ ಸಮುದಾಯದ ನಾಯಕರನ್ನು ಪರಿಚಯಿಸುವ ಸಂದರ್ಭದಲ್ಲಿ ಕೊರಚ ಮತ್ತು ಕೊರಮ ಸಮುದಾಯದವರನ್ನು ಕರೆದಿಲ್ಲ. ಇದರಿಂದ ಚರ್ಚೆ ಉದ್ರಿಕ್ತವಾಗಿದ್ದು, ಸಭೆಯಲ್ಲಿ ಮಾತಿನ ಗುದ್ದಾಟ ನಡೆಯಿತು.
ಹಿಂದೆ 2016ರಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ 101 ಪರಿಶಿಷ್ಟ ಜಾತಿಗಳ ಪೈಕಿ 51 ಅಲೆಮಾರಿ ಸಮುದಾಯಗಳನ್ನು ಗುರುತಿಸಿ, ಕೊರಚ ಮತ್ತು ಕೊರಮ ಸಮುದಾಯಗಳನ್ನೂ ಆ ಪಟ್ಟಿಯಲ್ಲಿ ಸೇರಿಸಿತ್ತು. ಆದರೆ ಕೆಲವು ಅಧಿಕಾರಿಗಳ ರಾಜಕೀಯ ಕುತಂತ್ರದಿಂದಾಗಿ ಅಂತಿಮವಾಗಿ 49 ಸಮುದಾಯಗಳ ಪಟ್ಟಿ ಪ್ರಕಟಗೊಂಡಿತು. ಈ ದೋಷವನ್ನು 2018ರಲ್ಲಿ ಪ್ರಿಯಾಂಕ್ ಖರ್ಗೆಯವರ ನೇತೃತ್ವದ ಸಮಾಜ ಕಲ್ಯಾಣ ಇಲಾಖೆಯು ಸರಿಪಡಿಸಿ, ಎರಡೂ ಸಮುದಾಯಗಳನ್ನು ಪುನಃ ಪಟ್ಟಿಗೆ ಸೇರಿಸಿತು.
2011ರ ಜನಗಣತಿ ಪ್ರಕಾರ ಕೊರಚ ಸಮುದಾಯದ ಜನಸಂಖ್ಯೆ ಕೇವಲ 55,000 ಮಾತ್ರ ಇದ್ದು, ಇದು ಸೂಕ್ಷ್ಮ ಸಮುದಾಯದ ಮಾನದಂಡಕ್ಕೆ ಅತೀ ಸೂಕ್ತವಾಗಿದ್ದು, ಈ ಸಮುದಾಯದವರು ಎಲ್ಲ ಅಲೆಮಾರಿ ಸವಲತ್ತುಗಳಿಗೂ ಅರ್ಹರಾಗಿದ್ದಾರೆ ಎಂದು ನಾಯಕರಾಗಿದ ಆದರ್ಶ್ ಯಲ್ಲಪ್ಪ ವಾದಿಸಿದರು.
ಸಭೆಯಲ್ಲಿ ಪ್ರಸ್ತಾಪಿಸಿದ 49 ಸಮುದಾಯಗಳ ವಿಷಯವನ್ನು ಪ್ರಶ್ನಿಸಿದಾಗ, ಕೊರಚ ಸಮುದಾಯದ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿ, ತಮ್ಮನ್ನು ಹೊರಗಿಡಲು ನಡೆಯುತ್ತಿರುವ ಕೃತ್ಯವನ್ನು ಖಂಡಿಸಿದರು. ಸಭೆಯಲ್ಲಿ ಉದ್ವೇಗದ ವಾತಾವರಣ ಉಂಟಾದ ಬಳಿಕ, ಮಾಜಿ ಸಚಿವ ಎಚ್. ಅಂಜನೇಯರು ವೇದಿಕೆಗೆ ಬಂದು ಪರಿಸ್ಥಿತಿಗೆ ಶಮನಕರೆದು, ಎಲ್ಲ 51 ಸಮುದಾಯಗಳನ್ನೂ ಅಲೆಮಾರಿಗಳಾಗಿ ಪರಿಗಣಿಸಲಾಗುವುದು ಮತ್ತು ಮುಂದಿನ ದಿನಗಳಲ್ಲಿ ಎಲ್ಲರನ್ನು ಒಳಗೊಂಡ ಸಭೆ ಕರೆಯಲಾಗುವುದು ಎಂದು ಭರವಸೆ ನೀಡಿದರು.
ಕೊರಚ ಸಮುದಾಯದ ಮುಖಂಡರು “ಅನುಮಾನಾತ್ಮಕ ಧೋರಣೆ, ಅನುದಾನ ವಂಚನೆ ಹಾಗೂ ಯೋಜನೆಗಳ ಹಂಚಿಕೆಯಲ್ಲಿ ನಡೆಸುತ್ತಿರುವ ಅಸಮಾನತೆ ಖಂಡನೀಯ” ಎಂದು ಹೇಳಿದ್ದಾರೆ. ಅತಿಸಣ್ಣ ಸಮುದಾಯಗಳ ಪ್ರತಿನಿಧಿಗಳನ್ನು ಜಿಲ್ಲಾ ಅನುಷ್ಠಾನ ಸಮಿತಿಗಳಲ್ಲಿ ಒಳಗೊಂಡಂತೆ ಎಲ್ಲಾ ಸಮುದಾಯಗಳಿಗೆ ಸಮಾನತೆ ಒದಗಿಸಲು ಸರ್ಕಾರ ಬದ್ಧವಾಗಿರಬೇಕು ಎಂಬ ಬೇಡಿಕೆಯನ್ನು ಪತ್ರಿಕಾಗೋಷ್ಠಿಯಲ್ಲಿ ಒತ್ತಿ ಹೇಳಲಾಯಿತು.
ಅಂತಿಮವಾಗಿ, ಕೊರಚ ಸಮುದಾಯದವರು ಸರ್ಕಾರದ ಮೇಲೆ ನಂಬಿಕೆ ಇಟ್ಟು ಮುಂದಿನ ಸಭೆಗಾಗಿ ನಿರೀಕ್ಷೆಯಲ್ಲಿದ್ದು, ಸಮಸ್ತ ಅಲೆಮಾರಿ ಸಮುದಾಯಗಳ ಒಗ್ಗಟ್ಟು ಮತ್ತು ಹಕ್ಕುಗಳ ಸಂರಕ್ಷಣೆಗೆ ನಿರಂತರ ಹೋರಾಟ ಮುಂದುವರಿಸುತ್ತಾರೆ ಎಂದು ಹೇಳಿದರು.
City Today News 9341997936
