ಜಯದೇವ ಆಸ್ಪತ್ರೆಯಲ್ಲಿ ರೋಗಿಗೆ ಅವಮಾನ – ವೈದ್ಯರಿಂದ ಗೂಂಡಾಗಿರಿ ಆರೋಪ

ಬೆಂಗಳೂರು, ಆಗಸ್ಟ್ 25: ಮೈಸೂರಿನ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ತಪಾಸಣೆಗೆ ಹೋದ ಬಡ ಕಾರ್ಮಿಕನಿಗೆ ವೈದ್ಯರಿಂದಲೇ ಅವಮಾನ ಹಾಗೂ ಗೂಂಡಾವರ್ತನೆ ನಡೆದಿರುವ ಗಂಭೀರ ಘಟನೆ ಬೆಳಕಿಗೆ ಬಂದಿದೆ.
ದಿನಗೂಲಿ ಕಾರ್ಮಿಕ ಎಸ್. ಶಿವಶಂಕರ್ (ಮೈಸೂರು) ಅವರಿಗೆ ಆಗಸ್ಟ್ 5ರಂದು ತೀವ್ರ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಸಿಜಿ, ಇಕೋ ತಪಾಸಣೆ ನಂತರ ಚಿಕಿತ್ಸೆಗಾಗಿ ವೈದ್ಯ ಡಾ. ದಿನೇಶ್ ಅವರ ಬಳಿ ಹೋದಾಗ, ಅವರು ಆಸ್ಪತ್ರೆಗೆ ತಕ್ಕ ಚಿಕಿತ್ಸೆ ನೀಡುವ ಬದಲು ಕುವೆಂಪುನಗರದಲ್ಲಿರುವ ತಮ್ಮ ಖಾಸಗಿ ಕ್ಲಿನಿಕ್‌ಗೆ ಬರುವಂತೆ ಒತ್ತಾಯಿಸಿದ್ದಾರೆ ಎಂಬುದು ಆರೋಪ.
“ನಾನು ಪರಿಶಿಷ್ಟ ಸಮುದಾಯದ ಬಡ ಕಾರ್ಮಿಕ, ಹೆಚ್ಚಿನ ವೆಚ್ಚ ಭರಿಸಲು ಆಗುವುದಿಲ್ಲವೆಂದು ತಿಳಿಸಿದಾಗ ವೈದ್ಯರು ಅವಮಾನಕಾರಿ ಪದಗಳಿಂದ ನಿಂದಿಸಿ, ಸಿಬ್ಬಂದಿಗೆ ನನ್ನನ್ನು ಆಸ್ಪತ್ರೆಗೆ ಬರದಂತೆ ಹೊರ ಹಾಕಲು ಹೇಳಿದರು” ಎಂದು ಶಿವಶಂಕರ್ ಕಣ್ಣೀರಿನಿಂದ ಮಾಧ್ಯಮಕ್ಕೆ ತಿಳಿಸಿದ್ದಾರೆ. ಅಲ್ಲದೆ, ವೈದ್ಯರ ಸಿಬ್ಬಂದಿಯಿಂದ ₹2000 ಲಂಚ ಪಡೆದಿರುವ ಸಂಗತಿಯೂ ಬಯಲಾಗಿದೆ.
ಘಟನೆಯ ನಂತರ, ಆಗಸ್ಟ್ 22ರಂದು ಮಧ್ಯಾಹ್ನ 12 ರಿಂದ 1 ಗಂಟೆಯೊಳಗೆ ವೈದ್ಯರ ಸಿಬ್ಬಂದಿಗಳಾದ ನಂಜುಂಡ ಮತ್ತು ಸುರೇಶ್ ಹಲವಾರು ಬಾರಿ ಕರೆ ಮಾಡಿ, “ಈ ವಿಚಾರವನ್ನು ಎಲ್ಲಿಗೆ ಹೇಳಬೇಡಿ” ಎಂದು ಪ್ರಾಣ ಬೆದರಿಕೆ ಹಾಕಿರುವುದಾಗಿ ದೂರು ನೀಡಿದ್ದಾರೆ.
“ಡಾ. ದಿನೇಶ್ ಪ್ರಭಾವಶಾಲಿ ವ್ಯಕ್ತಿ, ಅವರು ಮುಖ್ಯಮಂತ್ರಿಗಳ ಪತ್ನಿಯ ಸಂಬಂಧಿ. ಅವರ ವಿರುದ್ಧ ಏನೂ ಕ್ರಮ ಆಗುವುದಿಲ್ಲ” ಎಂಬ ಮಾತು ಜಯದೇವ ಆಸ್ಪತ್ರೆಯ ಒಳ ವಲಯದಲ್ಲೇ ಕೇಳಿ ಬರುತ್ತಿರುವುದಾಗಿ ದೂರುದಾರರು ಹೇಳಿದ್ದಾರೆ.
ಶಿವಶಂಕರ್ ಅವರು, “ಇಂತಹ ವೈದ್ಯರನ್ನು ಕೂಡಲೆ ಅಮಾನತ್ತು ಮಾಡಬೇಕು. ಬಡ ಮತ್ತು ದಲಿತ ರೋಗಿಗಳ ಹಕ್ಕುಗಳನ್ನು ಹಿಂಸಿಸುವ ವೈದ್ಯರ ವಿರುದ್ಧ ಸರ್ಕಾರ, ಮಾನವ ಹಕ್ಕುಗಳ ಆಯೋಗ ಮತ್ತು ಆರೋಗ್ಯ ಇಲಾಖೆ ತಕ್ಷಣ ಕಠಿಣ ಕ್ರಮ ಕೈಗೊಳ್ಳಬೇಕು. ನನಗೆ ಬಂದಿರುವ ಜೀವ ಬೆದರಿಕೆಯಿಂದ ಕೂಡಲೇ ಪೊಲೀಸ್ ರಕ್ಷಣೆ ನೀಡಬೇಕು” ಎಂದು ಮುಖ್ಯಮಂತ್ರಿ, ಆರೋಗ್ಯ ಸಚಿವರು ಹಾಗೂ ಮಾನವ ಹಕ್ಕುಗಳ ಆಯೋಗಕ್ಕೆ ಮನವಿ ಮಾಡಿದ್ದಾರೆ.
ಈ ಘಟನೆಗೆ ವಿವಿಧ ದಲಿತ ಸಂಘಟನೆಗಳು, ಕನ್ನಡ ಪರ ಹೋರಾಟಗಾರರು ಹಾಗೂ ಮಾಧ್ಯಮಗಳು ಬೆಂಬಲ ವ್ಯಕ್ತಪಡಿಸುತ್ತಿದ್ದು, ಬಡ ರೋಗಿಗಳ ಜೀವವನ್ನು ಹಾಸ್ಯ ಮಾಡುವ ವೈದ್ಯರ ವಿರುದ್ಧ ಕಾನೂನು ಕ್ರಮ ಅನಿವಾರ್ಯ ಎಂದು ಒತ್ತಾಯಿಸುತ್ತಿವೆ.
City Today News 9341997936
