“ಸನಾತನ ಧರ್ಮ ರಕ್ಷಣೆಯ ಹೆಸರಲ್ಲಿ ಅಸಹನೆ — ಸಿಜೆಐ ಮೇಲಿನ ದಾಳಿಗೆ ದಲಿತ ಸೇನೆಯ ಆಕ್ರೋಶ”

ಬೆಂಗಳೂರು, ಅಕ್ಟೋಬರ್ 7:
ಕೋರ್ಟ್ ಕಲಾಪದ ವೇಳೆ ವಕೀಲರೊಬ್ಬರಿಂದ ಭಾರತದ ಮುಖ್ಯ ನ್ಯಾಯಮೂರ್ತಿಯವರ (CJI) ಮೇಲಿನ ದಾಳಿ ಯತ್ನ ನಡೆದಿರುವ ಘಟನೆ ಅತ್ಯಂತ ಆತಂಕಕಾರಿ ಮತ್ತು ದೇಶದಲ್ಲಿ ಹೆಚ್ಚುತ್ತಿರುವ ಕೋಮು ಆಸಹನೆಯ ಪರಾಕಾಷ್ಠೆಯನ್ನು ತೋರಿಸುತ್ತದೆ ಎಂದು ದಲಿತ ಸೇನೆ ಖಂಡಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಲಿತ ಸೇನೆಯ ಸಂಘಟನಾ ಕಾರ್ಯದರ್ಶಿ ಜಾವೀದ್ ಖಾನ್ ಅವರು, “ಭಾರತದ ಅತಿ ಉನ್ನತ ನ್ಯಾಯಾಂಗ ಸ್ಥಾನದಲ್ಲಿ ಪರಿಶಿಷ್ಟ ಜಾತಿ ಸಮುದಾಯದ ವ್ಯಕ್ತಿಯೊಬ್ಬರು ಕುಳಿತಿರುವುದು ಕೆಲವು ಸ್ವಯಂಘೋಷಿತ ‘ಸನಾತನ ಧರ್ಮ ರಕ್ಷಕರಿಗೆ’ ಅಸಹನೆಯ ವಿಷಯವಾಗಿದೆಯೆಂಬುದು ಈ ಘಟನೆಯಿಂದ ಸ್ಪಷ್ಟವಾಗಿದೆ. ದೇಶದಾದ್ಯಂತ ಹೆಚ್ಚುತ್ತಿರುವ ಕೋಮು ಮನೋಭಾವ ಇದೀಗ ನ್ಯಾಯಾಂಗದ ಮಂಟಪವನ್ನೇ ಪ್ರವೇಶಿಸಿದೆ,” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅವರು ಮುಂದುವರಿದು, “ಒಬ್ಬ ಹಿರಿಯ ವಕೀಲರಿಂದ ನಡೆದ ಇಂತಹ ಅಕ್ಷಮ್ಯ ಕೃತ್ಯವು ನಮ್ಮ ಸಂವಿಧಾನದ ಗೌರವ ಮತ್ತು ನ್ಯಾಯಾಂಗದ ಪವಿತ್ರತೆಯ ಮೇಲಿನ ನೇರ ದಾಳಿಯಾಗಿದೆ. ಇಂತಹ ದುರ್ಘಟನೆಯು ದೇಶದ ಪ್ರಜಾಪ್ರಭುತ್ವದ ಮೌಲ್ಯಗಳ ಮೇಲೆ ಕಪ್ಪು ಬರೆಹ ಬರೆದಂತಾಗಿದೆ,” ಎಂದು ಹೇಳಿದರು.

ಘಟನೆಯನ್ನು ಗರಿಷ್ಠ ಶಾಂತತೆ ಮತ್ತು ಸಂಯಮದಿಂದ ನಿಭಾಯಿಸಿದ ಮುಖ್ಯ ನ್ಯಾಯಮೂರ್ತಿಯವರ ನಡೆಗೆ ಜಾವೀದ್ ಖಾನ್ ಪ್ರಶಂಸೆ ಸಲ್ಲಿಸಿದರು. “ಪ್ರತಿ ಸಂವಿಧಾನ ಪ್ರೇಮಿ ಮತ್ತು ಪ್ರಜಾಪ್ರಭುತ್ವಾಭಿಮಾನಿಗಳು ಈ ಹೀನ ಕೃತ್ಯವನ್ನು ತೀವ್ರವಾಗಿ ಖಂಡಿಸಬೇಕು. ಅಂಥ ಕೃತ್ಯ ಎಸಗಿದವರ ಪರವಾಗಿ ಸಹಾನುಭೂತಿ ಮೂಡಿಸಲು ಯತ್ನಿಸುವ ಫ್ಯಾಸಿಸ್ಟ್ ಶಕ್ತಿಗಳ ಪ್ರಚಾರವನ್ನು ತಡೆಗಟ್ಟಬೇಕು,” ಎಂದು ಅವರು ಕರೆ ನೀಡಿದರು.

ದಲಿತ ಸೇನೆ ಸಂವಿಧಾನದ ಮೌಲ್ಯಗಳು ಮತ್ತು ಸಾಮಾಜಿಕ ಸೌಹಾರ್ದತೆಯ ರಕ್ಷಣೆಗೆ ಬದ್ಧವಿದ್ದು, ಕೋಮು ಮತ್ತು ಜಾತ್ಯಾತೀತ ಅಸಹನೆಗೆ ವಿರುದ್ಧವಾಗಿ ಸಮಾಜ ಎಚ್ಚರಿಕೆಯಿಂದ ಇರಬೇಕೆಂದು ಕರೆ ನೀಡಿದೆ.

City Today News 9341997936

Leave a comment

This site uses Akismet to reduce spam. Learn how your comment data is processed.