
ಬೆಂಗಳೂರು, ಅಕ್ಟೋಬರ್ 24, 2025:
ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಸಂಘಗಳ ಸಂಯುಕ್ತ ಸಂಘರ್ಷ ಸಮಿತಿ – ಕರ್ನಾಟಕದ ಆಶ್ರಯದಲ್ಲಿ, ನಿವೃತ್ತಿಯಾದ 20 ಸಾವಿರಕ್ಕೂ ಹೆಚ್ಚು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ತಮ್ಮ ಗ್ರಾಚ್ಯುಟಿ (ನಿವೃತ್ತಿ ಉಪಧನೆ) ಹಕ್ಕು ಸಾಧನೆಗಾಗಿ ನವೆಂಬರ್ 6ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅನಿರ್ಧಿಷ್ಟಕಾಲದ ಮುಷ್ಕರ ಆರಂಭಿಸಲು ತೀರ್ಮಾನಿಸಿದ್ದಾರೆ.
1975ರಿಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿನ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಗ್ರಾಚ್ಯುಟಿ ಕಾಯಿದೆ 1972 ಮತ್ತು ಸರ್ವೋಚ್ಚ ನ್ಯಾಯಾಲಯದ 2022ರ ಏಪ್ರಿಲ್ 25ರ ತೀರ್ಪು ಪ್ರಕಾರ ನಿವೃತ್ತಿ ಉಪಧನೆಗೆ ಅರ್ಹರಾಗಿದ್ದರೂ, ಸರ್ಕಾರ 2011-12ರಿಂದ ನಿವೃತ್ತರಾದ ಸಾವಿರಾರು ಮಹಿಳೆಯರಿಗೆ ಗ್ರಾಚ್ಯುಟಿ ನೀಡದಿರುವುದನ್ನು ಸಂಘಟನೆ ತೀವ್ರವಾಗಿ ಖಂಡಿಸಿದೆ.
2023-24ರಲ್ಲಿ ನಿವೃತ್ತರಾದ ಕೆಲವರಿಗೆ ಮಾತ್ರ ಗ್ರಾಚ್ಯುಟಿ ಹಣ ನೀಡಿರುವುದು, ಇತರ ನಿವೃತ್ತರಿಗೆ ನ್ಯಾಯವಲ್ಲ ಎಂದು ಸಂಘಟನೆ ಆರೋಪಿಸಿದೆ. 30 ವರ್ಷಕ್ಕೂ ಹೆಚ್ಚು ಕಾಲ ಮಹಿಳೆಯರ ಮತ್ತು ಮಕ್ಕಳ ಹಿತಾಸಕ್ತಿಗಾಗಿ ಸೇವೆ ಸಲ್ಲಿಸಿದ ಈ ಮಹಿಳೆಯರು ಇಂದು ನಿವೃತ್ತಿ ವೇತನವಿಲ್ಲದೆ, ಗ್ರಾಚ್ಯುಟಿ ಸೌಲಭ್ಯವಿಲ್ಲದೆ ಆರ್ಥಿಕ ಸಂಕಷ್ಟದಲ್ಲಿರುವುದು ವಿಷಾದನೀಯವಾಗಿದೆ ಎಂದು ನಾಯಕರು ತಿಳಿಸಿದ್ದಾರೆ.
ಹೋರಾಟದ ಪ್ರಮುಖ ಬೇಡಿಕೆಗಳು:
1. 2011-12ರಿಂದ ನಿವೃತ್ತಿಯಾದ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ತಕ್ಷಣವೇ ಗ್ರಾಚ್ಯುಟಿ (ನಿವೃತ್ತಿ ಉಪಧನೆ) ನೀಡಬೇಕು.
2. ಸರ್ಕಾರವು ನಿವೃತ್ತಿಯಾದ ಎಲ್ಲರಿಗೂ ಕಡ್ಡಾಯವಾಗಿ ನಿವೃತ್ತಿ ವೇತನ ವ್ಯವಸ್ಥೆ ಜಾರಿಗೆ ತರಬೇಕು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಪಾಲಿಸದೆ ಗ್ರಾಚ್ಯುಟಿ ಕಾಯಿದೆ 1972 ಹಾಗೂ ಕರ್ನಾಟಕ ಸರ್ಕಾರದ ಗ್ರಾಚ್ಯುಟಿ ನಿಯಮಾವಳಿ 1973 ಉಲ್ಲಂಘನೆ ಮಾಡಿರುವುದಾಗಿ ಸಂಘಟನೆ ಆರೋಪಿಸಿದೆ.
ಸಂಘರ್ಷ ಸಮಿತಿಯ ನಾಯಕರಾದ ಜಿ.ಆರ್. ಶಿವಶಂಕರ್ (ಅಧ್ಯಕ್ಷರು), ಬಿ. ನಾಗರತ್ನಮ್ಮ (ಪ್ರಧಾನ ಕಾರ್ಯದರ್ಶಿ), ಬಿ. ಅಮ್ಮದ್ (ಅಧ್ಯಕ್ಷರು), ಎಂ. ಜಯಮ್ಮ (ಪ್ರಧಾನ ಕಾರ್ಯದರ್ಶಿ) ಮತ್ತು ಎಂ. ಉಮಾದೇವಿ (ಪ್ರಧಾನ ಕಾರ್ಯದರ್ಶಿ) ಅವರು ಇಂದು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ನಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಈ ಕುರಿತು ಘೋಷಣೆ ಮಾಡಿದರು.
ಅವರು ಸರ್ಕಾರದ ನಿರ್ಲಕ್ಷ್ಯವನ್ನು ತೀವ್ರವಾಗಿ ಖಂಡಿಸಿ,
“ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಇಡೀ ಜೀವನವನ್ನು ಸಮಾಜ ಸೇವೆಗೆ ಮುಡಿದಿದ್ದಾರೆ. ಈಗ ಅವರ ಹಕ್ಕುಗಳನ್ನು ಕಸಿದುಕೊಳ್ಳುವುದು ನೈತಿಕವಾಗಿಯೂ, ಕಾನೂನುಬದ್ಧವಾಗಿಯೂ ಅನ್ಯಾಯ,” ಎಂದು ಹೇಳಿದರು.
ಹೀಗಾಗಿ ನವೆಂಬರ್ 6ರಿಂದ ಫ್ರೀಡಂ ಪಾರ್ಕ್‌ನಲ್ಲಿ ಆರಂಭಗೊಳ್ಳುವ ಈ ಅನಿರ್ಧಿಷ್ಟಕಾಲದ ಹೋರಾಟದಲ್ಲಿ ನಿವೃತ್ತರಾದ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಅವರು ಮನವಿ ಮಾಡಿದರು.
City Today News 9341997936
