ಟೆಲಿ ಕಾರ್ಡಿಯೋಲಜಿ ಮೂಲಕ 600 ಜೀವ ಉಳಿಸಲಾಗಿದೆ: ದಿನೇಶ್ ಗುಂಡೂರಾವ್

ಬೆಂಗಳೂರು, ನವೆಂಬರ್ 30:ರಾಜ್ಯ ಸರ್ಕಾರ ಜಾರಿಗೊಳಿಸಿದ ಟೆಲಿ ಕಾರ್ಡಿಯೋಲಾಜಿ ಸೇವೆಯು ಒಂದೂವರೆ ವರ್ಷದೊಳಗೆ 600ಕ್ಕೂ ಹೆಚ್ಚು ಜೀವಗಳನ್ನು ಉಳಿಸಲು ನೆರವಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ರಾಜ್ಯದ 82 ತಾಲೂಕು ಆಸ್ಪತ್ರೆಗಳಲ್ಲಿ ಈಗಾಗಲೇ ಈ ಸೇವೆ ಆರಂಭವಾಗಿದ್ದು, ಅಗತ್ಯವಾದ ದುಬಾರಿ ಹೃದಯ ಇಂಜೆಕ್ಷನ್‌ಗಳನ್ನು ಸಂಪೂರ್ಣ ಉಚಿತವಾಗಿ ರೋಗಿಗಳಿಗೆ ನೀಡಲಾಗುತ್ತಿದೆ.

ನಗರದ ಐಐಎಸ್‌ಸಿ ಟಾಟಾ ಸಭಾಂಗಣದಲ್ಲಿ ನಡೆದ ಟೆಲಿಮೆಡಿಸಿನ್ ಸೊಸೈಟಿ ಆಫ್ ಇಂಡಿಯಾದ 21ನೇ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ಕೇವಲ 8 ರಿಂದ 9 ನಿಮಿಷಗಳಲ್ಲಿ ಇಸಿಜಿ ಪರಿಶೀಲಿಸಿ ಪರಿಣಿತರಿಂದ ತಕ್ಷಣ ಸೂಕ್ತ ಸಲಹೆ ದೊರೆಯುವ ವ್ಯವಸ್ಥೆಯನ್ನು ಈ ವರ್ಷವೇ ಎಲ್ಲಾ ತಾಲೂಕು ಆಸ್ಪತ್ರೆಗೆ ವಿಸ್ತರಿಸಲಾಗುತ್ತದೆ ಎಂದು ಹೇಳಿದರು.

ಸಚಿವರು ಮುಂದುವರಿದು, ಆರೋಗ್ಯ ಉಪಕರಣಗಳ ನಿರ್ವಹಣೆಗೆ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುತ್ತಿದ್ದು, ದೂರದಲ್ಲಿರುವ ಪರಿಣಿತರ ಸಲಹೆ ಹಳ್ಳಿಯಲ್ಲಿರುವ ರೋಗಿಗಳಿಗೆ ತಲುಪುವಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. “ಎಐ ಮತ್ತು ಡಿಜಿಟಲ್ ತಂತ್ರಜ್ಞಾನ ನಮ್ಮಂತಹ ದೊಡ್ಡ ಜನಸಂಖ್ಯೆಯ ರಾಜ್ಯಕ್ಕೆ ಅತ್ಯಂತ ಸಹಾಯಕ. ಉತ್ತಮ ಗುಣಮಟ್ಟದ ಕ್ಯಾಮೆರಾ ಹಾಗೂ ನವೀಕರಿಸಿದ ಸಾಧನಗಳ ಮೂಲಕ ತಜ್ಞರು ದೂರದಿಂದಲೇ ಸ್ಥಳೀಯ ವೈದ್ಯರಿಗೆ ಚಿಕಿತ್ಸೆ ನೀಡುವಲ್ಲಿ ನೆರವಾಗುತ್ತಿದ್ದಾರೆ,” ಎಂದು ಅವರು ವಿವರಿಸಿದರು.

ಟೆಲಿ-ರೆಡಿಯಾಲಜಿ ಮತ್ತು ಟೆಲಿ-ಆಪ್ತಮಾಲಜಿ ಮೂಲಕ ರೋಗ ಪತ್ತೆಯ ನವೀನ ವ್ಯವಸ್ಥೆ ಜಾರಿಗೆ ತರಲು ಆರೋಗ್ಯ ಇಲಾಖೆ ಸಿದ್ಧವಾಗಿದೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.

ಸಮ್ಮೇಳನದಲ್ಲಿ 700ಕ್ಕೂ ಹೆಚ್ಚು ದೇಶೀಯ ಮತ್ತು ಅಂತರರಾಷ್ಟ್ರೀಯ ಪ್ರತಿನಿಧಿಗಳು ಭಾಗವಹಿಸಿದ್ದರು. ಡಾ. ಗಂಗಾಧರ, ಡಾ. ಸತ್ಯಮೂರ್ತಿ, ಡಾ. ಸುನಿಲ್ ಶ್ರಾಫ್, ಡಾ. ಉಮಾ ನಂಬಿಯಾರ್, ಡಾ. ಭಾಸ್ಕರ್ ರಾಜಕುಮಾರ್ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.

City Today News 9341997936

Leave a comment

This site uses Akismet to reduce spam. Learn how your comment data is processed.