
ಬೆಂಗಳೂರು: ಕೆಲಸದ ಸ್ಥಳದಲ್ಲೇ ಲೈಂಗಿಕ ಶೋಷಣೆ, ಹಣ ವಂಚನೆ, ಜೀವ ಬೆದರಿಕೆ ಮತ್ತು ಅಪ್ರಾಪ್ತ ಬಾಲಕಿಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಆರೋಪಿಯನ್ನು ರಕ್ಷಿಸುವ ಸಲುವಾಗಿ ಸೋಲದೇವನಹಳ್ಳಿ ಪೊಲೀಸ್ ಠಾಣಾಧಿಕಾರಿಗಳು ತಮ್ಮ ಕರ್ತವ್ಯವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ನತದೃಷ್ಟ ಮಹಿಳೆ ಶೇಕಮ್ಮ ಗಂಭೀರ ಆರೋಪ ಮಾಡಿದ್ದಾರೆ.
ಪ್ರೆಸ್ ಕ್ಲಬ್ ಆಫ್ ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶೇಕಮ್ಮ, ತಾನು ಕೆಲಸ ಮಾಡುತ್ತಿದ್ದ ಎ.ಕೆ.ಎನ್. ಫಾರಂನ ಮಾಲೀಕ ಅನಂತಕುಮಾರ್ ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ, ಅದರ ದೃಶ್ಯಗಳನ್ನು ವಿಡಿಯೋ ಮಾಡಿ ಬೆದರಿಕೆ ಹಾಕಿ ದುಡಿಯಿಸಿಕೊಂಡು ಸಂಬಳ ನೀಡದೆ ಮೂರು ಲಕ್ಷ ರೂಪಾಯಿ ಪಡೆದು ವಂಚಿಸಿದ್ದಾನೆ. ದೂರು ನೀಡುವುದಾಗಿ ಹೇಳಿದಾಗ ದಿನಾಂಕ 12-12-2025ರಂದು ತನ್ನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಹೇಳಿದರು.

ಇದಕ್ಕೂ ಮೊದಲು, ಅನಂತಕುಮಾರ್ ಜೊತೆಗೆ ಬಂದ ಸೋಲದೇವನಹಳ್ಳಿ ಠಾಣೆಯ ಎ.ಎಸ್.ಐ. ಶ್ರೀನಿವಾಸಮೂರ್ತಿ ತನ್ನ ಮೊಬೈಲ್ ಕಿತ್ತುಕೊಂಡು, ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ವಿಡಿಯೋಗಳನ್ನು ಡಿಲಿಟ್ ಮಾಡಿ, ಊರು ಬಿಟ್ಟು ಹೋಗುವಂತೆ ಬೆದರಿಕೆ ಹಾಕಿದ್ದಾರೆ ಎಂದು ಶೇಕಮ್ಮ ಆರೋಪಿಸಿದರು.
ಅತ್ಯಂತ ಗಂಭೀರವಾಗಿ, ದಿನಾಂಕ 16-12-2025ರಂದು ಅನಂತಕುಮಾರ್ ತನ್ನ 9 ವರ್ಷದ ಅಪ್ರಾಪ್ತ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಈ ಕುರಿತು ಠಾಣೆಗೆ ದೂರು ನೀಡಿದಾಗ ಆರಂಭದಲ್ಲಿ ಪೊಲೀಸರು ದೂರು ಸ್ವೀಕರಿಸಲು ನಿರಾಕರಿಸಿದ್ದು, ಉಪ ಪೊಲೀಸ್ ಆಯುಕ್ತರಿಗೆ ಕರೆ ಮಾಡಿದ ನಂತರ ಮಾತ್ರ ಅಪರಾಧ ಸಂಖ್ಯೆ 0476/2025ರಡಿ ಪ್ರಕರಣ ದಾಖಲಾಗಿದೆ ಎಂದು ವಿವರಿಸಿದರು.
ಆದರೆ ನಂತರ ಠಾಣೆಗೆ ಕರೆಸಿ, ಠಾಣಾಧಿಕಾರಿ ರಘು ಅವರು ಬಾಲಕಿಯನ್ನು ಗದರಿಸಿ, ಆರೋಪಿಯ ಪರವಾಗಿ ಹೇಳಿಕೆ ನೀಡುವಂತೆ ಒತ್ತಾಯಿಸಿ, ಬೆದರಿಸಿ ವಿಡಿಯೋ ದಾಖಲಿಸಿಕೊಂಡಿದ್ದಾರೆ. ಬಾಲಕಿ ಸತ್ಯ ಹೇಳಲು ಮುಂದಾದಾಗ ತಾಯಿ ಜೈಲಿಗೆ ಹೋಗುತ್ತಾಳೆ ಎಂದು ಹೆದರಿಸಲಾಗಿದೆ ಎಂಬ ಆರೋಪವೂ ಮಾಡಿದರು.
ಇದೇ ವೇಳೆ ಠಾಣಾಧಿಕಾರಿ ರಘು ಅವರು ತನ್ನನ್ನು ಅಸಭ್ಯ ಪದಗಳಿಂದ ನಿಂದಿಸಿ, ಮುಖಕ್ಕೆ ಉಗುಳಿ ಮಾನಸಿಕ ಹಿಂಸೆ ನೀಡಿದ್ದಾರೆ ಎಂದು ಶೇಕಮ್ಮ ಕಣ್ಣೀರಿನಿಂದ ವಿವರಿಸಿದರು. ದಿನಾಂಕ 18-12-2025ರಂದು ಮನೆಗೆ ಬಂದು ಖಾಲಿ ಹಾಗೂ ಭರ್ತಿ ಮಾಡಿದ ಕಾಗದಗಳಿಗೆ ಸಹಿ ಪಡೆದು ಮತ್ತೆ ಬೆದರಿಕೆ ಹಾಕಿದ್ದಾರೆ ಎಂದು ದೂರಿದರು.
ಪೊಲೀಸರೇ ಆರೋಪಿಯನ್ನು ರಕ್ಷಿಸಿ ಬಡವರಾದ ನಮಗೆ ಅನ್ಯಾಯ ಮಾಡಲು ಯತ್ನಿಸುತ್ತಿದ್ದಾರೆ. ಈ ಪ್ರಕರಣವನ್ನು ನಿಷ್ಠಾವಂತ ಉನ್ನತ ಅಧಿಕಾರಿಗಳಿಗೆ ವರ್ಗಾವಣೆ ಮಾಡಿ ಪಾರದರ್ಶಕ ತನಿಖೆ ನಡೆಸಬೇಕು. ತನಗೂ ತನ್ನ ಅಪ್ರಾಪ್ತ ಮಗುವಿಗೂ ರಕ್ಷಣೆ ಹಾಗೂ ನ್ಯಾಯ ಒದಗಿಸಬೇಕು ಎಂದು ಶೇಕಮ್ಮ ಮನವಿ ಮಾಡಿದರು.
ಈ ಗಂಭೀರ ಆರೋಪಗಳು ಪೊಲೀಸ್ ವ್ಯವಸ್ಥೆಯ ಮೇಲೆಯೇ ಪ್ರಶ್ನಾರ್ಥಕ ಚಿಹ್ನೆ ಎತ್ತಿದ್ದು, ಮಹಿಳೆ ಹಾಗೂ ಬಾಲಕಿಗೆ ನ್ಯಾಯ ದೊರಕಿಸುವಂತೆ ನಾಗರಿಕ ವಲಯಗಳು ಒತ್ತಾಯಿಸಿವೆ.
City Today News 9341997936
