
ಬೆಂಗಳೂರು ನಗರವು ಹೆಮ್ಮೆ, ಕೃತಜ್ಞತೆ ಮತ್ತು ಭವಿಷ್ಯದ ದೃಷ್ಟಿಕೋನದಿಂದ ತುಂಬಿದ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು. ಶ್ರೀ ಮಹಾವೀರ್ ಜೈನ್ ಶಿಕ್ಷಣ ಸಂಘವು ಬಿಬಿಯುಎಲ್ ಜೈನ್ ವಿದ್ಯಾಲಯದ 40 ವರ್ಷಗಳ ಸಾರ್ಥಕ ಪಯಣ ಹಾಗೂ ಸಿ.ಬಿ. ಭಂಡಾರಿ ಜೈನ್ ಕಾಲೇಜಿನ 25 ವರ್ಷದ ಯಶಸ್ವಿ ಸೇವೆಯನ್ನು ಭವ್ಯವಾಗಿ ಆಚರಿಸಿ ಗಮನ ಸೆಳೆದಿತು.

ಈ ಪ್ರತಿಷ್ಠಿತ ಸಮಾರಂಭಕ್ಕೆ ಕರ್ನಾಟಕ ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮುಖ್ಯ ಅತಿಥಿಯಾಗಿ ಆಗಮಿಸಿ ಕಾರ್ಯಕ್ರಮಕ್ಕೆ ಗೌರವ ಹೆಚ್ಚಿಸಿದರು. ಜೊತೆಗೆ ಕೇಂದ್ರ ಸರ್ಕಾರದ ರಾಷ್ಟ್ರೀಯ ವ್ಯಾಪಾರಿಗಳ ಕಲ್ಯಾಣ ಮಂಡಳಿಯ ಅಧ್ಯಕ್ಷ ಸುನಿಲ್‌ಜಿ ಸಿಂಗ್ (ನವದೆಹಲಿ), ಬೆಂಗಳೂರು ಕೇಂದ್ರ ಲೋಕಸಭಾ ಸದಸ್ಯ ಪಿ.ಸಿ. ಮೋಹನ್ ಹಾಗೂ ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್ ಜಿ ಸಿರೋಯಾ ಅವರು ಗೌರವ ಅತಿಥಿಗಳಾಗಿ ಭಾಗವಹಿಸಿದರು. ಗಣ್ಯರು ಶ್ರೀ ಮಹಾವೀರ್ ಜೈನ್ ಶಿಕ್ಷಣ ಸಂಘದ ಸಾಧನಾಮಯ ಪಯಣವನ್ನು ಶ್ಲಾಘಿಸಿ, ಮೌಲ್ಯಾಧಾರಿತ ಶಿಕ್ಷಣ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಅದರ ನಿರಂತರ ಕೊಡುಗೆಗೆ ಅಭಿನಂದನೆ ಸಲ್ಲಿಸಿದರು.

ಸಂಘದ ಅಧ್ಯಕ್ಷ ಚಂಪಾಲಾಲ್‌ಜಿ ಭಂಡಾರಿ ಅವರು ಅತಿಥಿಗಳು ಹಾಗೂ ಉಪಸ್ಥಿತರನ್ನು ಆತ್ಮೀಯವಾಗಿ ಸ್ವಾಗತಿಸಿ, ಟ್ರಸ್ಟಿಗಳು, ಶಿಕ್ಷಕರು, ಹಳೆಯ ವಿದ್ಯಾರ್ಥಿಗಳು, ಪೋಷಕರು ಮತ್ತು ಹಿತೈಷಿಗಳ ಸಮೂಹ ಸಹಕಾರವೇ ಸಂಸ್ಥೆಯ ಜಾಗತಿಕ ಖ್ಯಾತಿ ಮತ್ತು ಅಸಾಧಾರಣ ಬೆಳವಣಿಗೆಗೆ ಕಾರಣವಾಗಿದೆ ಎಂದು ತಿಳಿಸಿದರು. ಶ್ರೇಷ್ಠತೆ, ನೈತಿಕತೆ ಮತ್ತು ಸಮಗ್ರ ಶಿಕ್ಷಣಕ್ಕೆ ಸಂಘ ಬದ್ಧವಾಗಿದೆ ಎಂದು ಅವರು ಹೇಳಿದರು.
ಸಂಘದ ಉಪಾಧ್ಯಕ್ಷರು ಹಾಗೂ ಸ್ಮರಣ ಸಂಚಿಕೆ ಸಮಿತಿಯ ಅಧ್ಯಕ್ಷರಾದ ಹೇಮರಾಜ್‌ಜಿ (ಮನ್ನು ಭಾಯಿ) ಅವರು ಸಂಸ್ಥೆಗೆ ಸೇವೆ ಸಲ್ಲಿಸುವ ಅವಕಾಶ ದೊರೆತಿರುವುದಕ್ಕೆ ಕೃತಜ್ಞತೆ ವ್ಯಕ್ತಪಡಿಸಿ, ಶಿಸ್ತು, ಮೌಲ್ಯಗಳು ಮತ್ತು ಜವಾಬ್ದಾರಿಯುತ ನಾಗರಿಕರನ್ನು ರೂಪಿಸುವ ಸಂಘದ ಧ್ಯೇಯವನ್ನು ಸ್ಮರಿಸಿದರು.
ಆಚರಣಾ ಸಮಿತಿಯ ಅಧ್ಯಕ್ಷ ಪ್ರಕಾಶ್‌ಜಿ ಪಿರ್ಗಲ್ ಕಾರ್ಯಕ್ರಮದ ಯಶಸ್ಸಿನ ಹಿಂದೆ ಇರುವ ಸಮಗ್ರ ಯೋಜನೆ ಮತ್ತು ತಂಡದ ಶ್ರಮವನ್ನು ಪ್ರಸ್ತಾಪಿಸಿ, ಈ ಸಂಭ್ರಮ ದಶಕಗಳ ನಿಷ್ಠೆ ಮತ್ತು ಶೈಕ್ಷಣಿಕ ಶ್ರೇಷ್ಠತೆಗೆ ಸಲ್ಲಿಸಿದ ಗೌರವವೆಂದರು. ಕಾರ್ಯದರ್ಶಿ ಚಂಪಾಲಾಲ್‌ಜಿ ಜೈನ್ ಸಂಘದ ಸಾಧನೆಗಳು ಮತ್ತು ಭವಿಷ್ಯದ ಮಾರ್ಗಸೂಚಿಯನ್ನು ವಿವರಿಸಿ, ಆಧುನಿಕ ಅಗತ್ಯಗಳಿಗೆ ತಕ್ಕ ಗುಣಮಟ್ಟದ ಶಿಕ್ಷಣದ ಜೊತೆಗೆ ಮೌಲ್ಯಾಧಾರಿತ ದೃಷ್ಟಿಕೋನವನ್ನು ಒತ್ತಿ ಹೇಳಿದರು.
ಈ ಬೃಹತ್ ಸಮಾರಂಭದಲ್ಲಿ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರು, ಸದಸ್ಯರು ಮತ್ತು ಕುಟುಂಬದವರೊಂದಿಗೆ 2,000ಕ್ಕೂ ಹೆಚ್ಚು ಮಂದಿ ಪಾಲ್ಗೊಂಡರು. ಶಾಲೆ ಹಾಗೂ ಕಾಲೇಜಿನ 1,500ಕ್ಕೂ ಹೆಚ್ಚು ಹಳೆಯ ವಿದ್ಯಾರ್ಥಿಗಳ ಉಪಸ್ಥಿತಿ ಕಾರ್ಯಕ್ರಮಕ್ಕೆ ವಿಶೇಷ ಭಾವನಾತ್ಮಕ ಮಹತ್ವವನ್ನು ನೀಡಿತು. ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು ಹಾಗೂ ಅನೇಕ ಗಣ್ಯರು ಕಾರ್ಯಕ್ರಮದ ಕಂಗೊಳನ್ನು ಹೆಚ್ಚಿಸಿದರು.
ಆತಿಥ್ಯ ವ್ಯವಸ್ಥೆಯೊಂದಿಗೆ ಭೋಜನ ಹಾಗೂ ಹೈ–ಟೀ ವ್ಯವಸ್ಥೆ ಮಾಡಲಾಗಿದ್ದು, ಮಧ್ಯಾಹ್ನ ಸಾಂಸ್ಕೃತಿಕ ವೈಭವಕ್ಕೆ ವೇದಿಕೆ ಸಿದ್ಧವಾಯಿತು. ಶಾಲೆ ಮತ್ತು ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಹಳೆಯ ವಿದ್ಯಾರ್ಥಿಗಳ ಮನಮೋಹಕ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು. ಖ್ಯಾತ ನಟರಾದ ನವೀನ್ ಶಂಕರ್ ಮತ್ತು ಶ್ರೇಯಸ್ ಮಂಜು ಅವರು ವೇದಿಕೆಗೆ ಆಗಮಿಸಿ ಪ್ರೇಕ್ಷಕರೊಂದಿಗೆ ಸಂಭ್ರಮದಲ್ಲಿ ಪಾಲ್ಗೊಂಡರು.
ಹೈ ಆಕ್ಟೇವ್ ಬ್ಯಾಂಡ್ನ ಉತ್ಸಾಹಭರಿತ ಸಂಗೀತ ಪ್ರದರ್ಶನ ಹಳೆಯ ವಿದ್ಯಾರ್ಥಿಗಳಲ್ಲಿ ನೆನಪುಗಳ ಸುನಾಮಿ ಎಬ್ಬಿಸಿ ಆತ್ಮೀಯ ಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಿತು. ಡಿಜೆ ಸಂಗೀತದೊಂದಿಗೆ ಸಂಭ್ರಮ ಸಂತೋಷದ ಶಿಖರ ತಲುಪಿದ್ದು, ಹೆಮ್ಮೆ ಮತ್ತು ಕೃತಜ್ಞತೆಯಿಂದ ತುಂಬಿದ ಹೃದಯಗಳೊಂದಿಗೆ ಕಾರ್ಯಕ್ರಮಕ್ಕೆ ತೆರೆ ಬಿದ್ದಿತು.
ಒಟ್ಟಾರೆ, ಈ ಮಹೋತ್ಸವವು ಶ್ರೀ ಮಹಾವೀರ್ ಜೈನ್ ಶಿಕ್ಷಣ ಸಂಘದ ಆತ್ಮ, ಪರಂಪರೆ ಮತ್ತು ಪ್ರಕಾಶಮಾನ ಭವಿಷ್ಯವನ್ನು ಪ್ರತಿಬಿಂಬಿಸುವ, ಸುಸೂತ್ರ ಯೋಜನೆ ಮತ್ತು ನಿರ್ವಹಣೆಯ ಅದ್ಭುತ ಉದಾಹರಣೆಯಾಗಿ ಮೂಡಿಬಂತು.
City Today News 9341997936
