75 ವರ್ಷದ ತಾಯಿಯಿಂದ ಮಗನಿಗೆ ಕಿಡ್ನಿ ಕಸಿ: ಯಶವಂತಪುರದ ಸ್ಪರ್ಶ್ ಆಸ್ಪತ್ರೆಯಲ್ಲಿ ಮೊದಲ ರೊಬೊಟಿಕ್ ಶಸ್ತ್ರಚಿಕಿತ್ಸೆ ಯಶಸ್ವಿ
ಬೆಂಗಳೂರು: ಯಶವಂತಪುರದ ಸ್ಪರ್ಶ್ ಆಸ್ಪತ್ರೆಯಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ರೊಬೊಟಿಕ್ ತಂತ್ರಜ್ಞಾನ ಬಳಸಿ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನೆರವೇರಿಸಲಾಗಿದೆ. 75 ವರ್ಷದ ವೃದ್ಧ ತಾಯಿ ತಮ್ಮ ಮಗನಿಗೆ ಕಿಡ್ನಿ ದಾನ ಮಾಡುವ ಮೂಲಕ ಮರುಜೀವ ನೀಡಿದ್ದು, ನಗರ ವೈದ್ಯಕೀಯ ಕ್ಷೇತ್ರದಲ್ಲಿ ಇದು ಮಹತ್ವದ ಸಾಧನೆಯಾಗಿ ಗುರುತಿಸಿಕೊಂಡಿದೆ.
38 ವರ್ಷದ ಯುವಕ ಕಳೆದ ಎರಡು ವರ್ಷಗಳಿಂದ ಗಂಭೀರ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು. ಕಿಡ್ನಿಗಳು ಚಿಕ್ಕದಾಗಿದ್ದ ಕಾರಣ ಬಯಾಪ್ಸಿ ಸಾಧ್ಯವಾಗದೇ, ದೀರ್ಘಕಾಲ ಡಯಾಲಿಸಿಸ್ ತಪ್ಪಿಸಲು ಕಿಡ್ನಿ ಕಸಿಗೆ ಮುಂದಾಗಿದ್ದರು. ವಿವಿಧ ಆಸ್ಪತ್ರೆಗಳಲ್ಲಿ ಸಲಹೆ ಪಡೆದ ಬಳಿಕ ಅವರು ಸ್ಪರ್ಶ್ ಆಸ್ಪತ್ರೆಯನ್ನು ಸಂಪರ್ಕಿಸಿದರು.

ಯಶವಂತಪುರ ಸ್ಪರ್ಶ್ ಆಸ್ಪತ್ರೆಯ ಹಿರಿಯ ಸಮಾಲೋಚಕ ಮೂತ್ರಪಿಂಡ ರೋಗ ಹಾಗೂ ಕಸಿ ತಜ್ಞರಾದ ಡಾ. ಅರುಣ್ ಕುಮಾರ್ ಅವರ ನೇತೃತ್ವದಲ್ಲಿ ನಡೆದ ಸವಿಸ್ತಾರ ಪರೀಕ್ಷೆಗಳ ನಂತರ ಕಿಡ್ನಿ ಕಸಿಯೇ ಸೂಕ್ತ ಮಾರ್ಗವೆಂದು ನಿರ್ಧರಿಸಲಾಯಿತು. ಆದರೆ ದಾನಕ್ಕೆ ಮುಂದಾದ ತಾಯಿಯ ವಯಸ್ಸು 75 ಆಗಿದ್ದರಿಂದ ಮೂತ್ರಪಿಂಡ ತೆಗೆಯುವಿಕೆ ವೈದ್ಯಕೀಯವಾಗಿ ದೊಡ್ಡ ಸವಾಲಾಗಿತ್ತು.
ಈ ಹಿನ್ನೆಲೆ ದಾನಿಯ ಸುರಕ್ಷತೆ ಹಾಗೂ ಕಡಿಮೆ ಶಸ್ತ್ರಘಾತವನ್ನು ಗಮನದಲ್ಲಿಟ್ಟು ರೊಬೊಟಿಕ್ ತಂತ್ರಜ್ಞಾನ ಬಳಸಿ ಶಸ್ತ್ರಚಿಕಿತ್ಸೆ ನಡೆಸಲಾಯಿತು ಎಂದು ಹಿರಿಯ ಸಮಾಲೋಚಕ ಹಾಗೂ ಕಸಿ ತಜ್ಞ ಡಾ. ಪ್ರಶಾಂತ್ ಗಣೇಶ್ ತಿಳಿಸಿದ್ದಾರೆ. ರೊಬೊಟಿಕ್ ವಿಧಾನದಿಂದ ಶಸ್ತ್ರಚಿಕಿತ್ಸೆ ನಂತರ ತಾಯಿಗೆ ಹೆಚ್ಚಿನ ತೊಂದರೆ ಆಗದೇ ಶೀಘ್ರವೇ ಸಾಮಾನ್ಯ ಸ್ಥಿತಿಗೆ ಮರಳಲು ಸಾಧ್ಯವಾಯಿತು ಎಂದು ಅವರು ಹೇಳಿದರು.
ಈ ಅಪರೂಪದ ಕಸಿ ಶಸ್ತ್ರಚಿಕಿತ್ಸೆಯಲ್ಲಿ ಡಾ. ಅಶ್ವಿನ್, ಅರಿವಳಿಕೆ ತಜ್ಞರಾದ ಡಾ. ಜ್ಯೋತಿ, ಡಾ. ಜಾನ್‌ಪಾಲ್ ಸೇರಿದಂತೆ ವಿವಿಧ ವಿಭಾಗಗಳ ತಜ್ಞರು ಭಾಗವಹಿಸಿದ್ದರು. ಎಸ್‌ಎಸ್ ಸ್ಪರ್ಶ್ ಆರ್‌ಆರ್‌ನಗರ ಶಾಖೆಯ ಡಾ. ರವೀಂದ್ರ ಅವರು ವಿಶೇಷ ನೆರವು ನೀಡಿದರು.
ಪ್ರಸ್ತುತ ತಾಯಿ ಮತ್ತು ಮಗ ಇಬ್ಬರೂ ಆರೋಗ್ಯವಾಗಿದ್ದು, ಕಸಿ ಮಾಡಿಕೊಂಡ ರೋಗಿ ಡಯಾಲಿಸಿಸ್‌ನಿಂದ ಮುಕ್ತರಾಗಿದ್ದಾರೆ. ವಯೋವೃದ್ಧ ದಾನಿಗಳಿಂದಲೂ ರೊಬೊಟಿಕ್ ತಂತ್ರಜ್ಞಾನದ ಸಹಾಯದಿಂದ ಸುರಕ್ಷಿತವಾಗಿ ಅಂಗಾಂಗ ಕಸಿ ಸಾಧ್ಯವೆಂಬುದಕ್ಕೆ ಈ ಶಸ್ತ್ರಚಿಕಿತ್ಸೆ ಸ್ಪಷ್ಟ ಉದಾಹರಣೆಯಾಗಿದೆ ಎಂದು ಆಸ್ಪತ್ರೆ ಪ್ರಕಟಣೆ ತಿಳಿಸಿದೆ.
City Today News 9341997936
