ಭಾರತರತ್ನ ಡಾ. ಬಿ.ಆರ್. ಅಂಬೇಡ್ಕರ್ ಸಿದ್ಧಾಂತಗಳೇ ನಮ್ಮ ರಾಜಕೀಯ ದಿಕ್ಕು: ರಾಜಶೇಖರ್ ಡೊಡ್ಡಣ್ಣ ಮೌರ್ಯ

ಬೆಂಗಳೂರು, ಪ್ರೆಸ್ ಕ್ಲಬ್: ಬ್ಲೂ ಇಂಡಿಯಾ ಪಾರ್ಟಿಯ ವತಿಯಿಂದ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಸಂಸ್ಥಾಪಕ ಹಾಗೂ ರಾಜ್ಯಾಧ್ಯಕ್ಷರಾದ ರಾಜಶೇಖರ್ ಡೊಡ್ಡಣ್ಣ ಮೌರ್ಯ, ಉಪಾಧ್ಯಕ್ಷರಾದ ಗೋಪಿನಾಥ್, ಕಲ್ಲಪ್ಪ, ಉಸ್ಮಾನ್ ಹಾಗೂ ಮೋಹನ್ ಗೌಡ ಭಾಗವಹಿಸಿದ್ದರು.
ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ರಾಜಶೇಖರ್ ಡೊಡ್ಡಣ್ಣ ಮೌರ್ಯ ಅವರು, ಬುದ್ಧ, ಬಸವ, ಜ್ಯೋತಿ ಬಾಪುಲೆ ಹಾಗೂ ಭಾರತರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ ಸಿದ್ಧಾಂತ ಮತ್ತು ಮಾರ್ಗದರ್ಶನದಲ್ಲಿ ಬ್ಲೂ ಇಂಡಿಯಾ ಪಾರ್ಟಿ ದಕ್ಷಿಣ ಭಾರತದಲ್ಲಿ ಬಲಿಷ್ಠ ರಾಜಕೀಯ ಶಕ್ತಿಯಾಗಿ ಹೊರಹೊಮ್ಮುತ್ತಿದೆ ಎಂದು ಹೇಳಿದರು.
ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳು ಕೇಂದ್ರ ಸರ್ಕಾರದ ಅಧೀನದಲ್ಲಿರಬೇಕು. ಈ ಮೂಲಭೂತ ಸೇವೆಗಳು ಪ್ರತಿಯೊಬ್ಬ ನಾಗರಿಕನಿಗೂ ಉಚಿತವಾಗಿ ಲಭ್ಯವಾಗಬೇಕು. ಜೊತೆಗೆ ಪ್ರತಿಯೊಬ್ಬರಿಗೆ ಉದ್ಯೋಗದ ಹಕ್ಕು ಖಚಿತವಾಗಬೇಕು ಎಂದು ಅವರು ಒತ್ತಿ ಹೇಳಿದರು.
ಖಾಸಗೀಕರಣದ ವಿರುದ್ಧ ನಮ್ಮ ಪಕ್ಷದ ದೃಢ ನಿಲುವು ಇದೆ. ಶೋಷಿತ, ವಂಚಿತ ಜನಸಾಮಾನ್ಯರು ಅಧಿಕಾರ ಹಿಡಿಯಬೇಕೆಂಬುದು ನಮ್ಮ ಆಶಯ. ಪಟಬದ್ಧ ಹಿತಾಸಕ್ತಿಗಳ ವಿರುದ್ಧ ನಮ್ಮ ಹೋರಾಟ ನಿರಂತರವಾಗಿರಲಿದೆ ಎಂದು ತಿಳಿಸಿದರು.
ನೂರಾರು ಸರ್ಕಾರಿ ಆಸ್ಪತ್ರೆಗಳು ಹಾಗೂ ಸಾವಿರಾರು ಸರ್ಕಾರಿ ಶಾಲೆಗಳು ಮುಚ್ಚಲ್ಪಟ್ಟಿರುವುದು ಅತ್ಯಂತ ಆತಂಕಕಾರಿ ಬೆಳವಣಿಗೆ. ಈ ಅನ್ಯಾಯದ ವಿರುದ್ಧ ಬ್ಲೂ ಇಂಡಿಯಾ ಪಾರ್ಟಿ ರಾಜ್ಯಾದ್ಯಂತ ಹೋರಾಟ ಮುಂದುವರಿಸಲಿದೆ ಎಂದು ರಾಜಶೇಖರ್ ಡೊಡ್ಡಣ್ಣ ಮೌರ್ಯ ಹೇಳಿದರು.
ಮುಂಬರುವ ಗ್ರೇಟರ್ ಬೆಂಗಳೂರು ಅಥಾರಿಟಿ (ಜಿಬಿಎ) ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಲಿದ್ದು, ಸಮ ಸಮಾಜ ಹಾಗೂ ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣವೇ ನಮ್ಮ ಘೋಷಣಾಪತ್ರಿಕೆಯ ಮೂಲ ಗುರಿ. ಜನಸೇವೆಯ ಮನೋಭಾವ ಹೊಂದಿರುವ ಅರ್ಹ ಹಾಗೂ ಉತ್ತಮ ಅಭ್ಯರ್ಥಿಗಳು ಪಕ್ಷಕ್ಕೆ ಸೇರ್ಪಡೆಯಾಗಲು ಅವಕಾಶವಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಉಪಾಧ್ಯಕ್ಷ ಗೋಪಿನಾಥ್ ಅವರು, ಬ್ಲೂ ಇಂಡಿಯಾ ಪಾರ್ಟಿ ಭಾರತರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ ಆಶಯ ಮತ್ತು ಸಂವಿಧಾನಾತ್ಮಕ ಸಿದ್ಧಾಂತಗಳ ಆಧಾರದಲ್ಲೇ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು. ಮೂಲ ಸಂವಿಧಾನದ ಅಡಿಯಲ್ಲಿ ಸರ್ವರಿಗೂ ಸಮಪಾಲು ಹಾಗೂ ಸಮಬಾಳು ಎಂಬ ತತ್ವವನ್ನು ಜಾರಿಗೊಳಿಸುವುದೇ ನಮ್ಮ ಪಕ್ಷದ ಬದ್ಧತೆ ಎಂದು ಹೇಳಿದರು.
City Today News 9341997936
