ಮಾಜಿ ಕಾರ್ಪೋರೇಟರ್ ಲಕ್ಷ್ಮೀನಾರಾಯಣ ವಿರುದ್ಧ ಉಮಾ ಮಹೇಶ್ವರ ಸ್ವಾಮೀಜಿ ಗಂಭೀರ ಆರೋಪ

ಬೆಂಗಳೂರು, ಜ.27: ಚಿಕ್ಕಬಳ್ಳಾಪುರ ತಾಲ್ಲೂಕು ಕಸಬಾ ಹೋಬಳಿಯ ಸ್ಕಂದಗಿರಿ ತಪ್ಪಲಿನಲ್ಲಿ ಇರುವ “ಓಂಕಾರ ಜ್ಯೋತಿ ಮಠ ಟ್ರಸ್ಟ್”ಗೆ ಸೇರಿದ ಆಸ್ತಿಯನ್ನು ಕಬಳಿಸುವ ಉದ್ದೇಶದಿಂದ ಮಾಜಿ ಕಾರ್ಪೋರೇಟರ್ ಲಕ್ಷ್ಮೀನಾರಾಯಣ ಹಾಗೂ ಅವರ ಸಹಚರರು ವ್ಯವಸ್ಥಿತ ಷಡ್ಯಂತ್ರ ರೂಪಿಸಿ ಹಲ್ಲೆ, ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಮಠದ ಅಧ್ಯಕ್ಷರಾದ ಉಮಾ ಮಹೇಶ್ವರ ಸ್ವಾಮೀಜಿ ಆರೋಪಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಠದ ಆಸ್ತಿಯನ್ನು ಬಲವಂತವಾಗಿ ವಶಪಡಿಸಿಕೊಳ್ಳಲು ಜನವರಿ 10ರಂದು ಲಕ್ಷ್ಮೀನಾರಾಯಣ ಸೇರಿದಂತೆ ನೂರಾರು ಮಂದಿ ಏಕಾಏಕಿ ಮಠದ ಮೇಲೆ ದಾಳಿ ನಡೆಸಿದರು. ತಮ್ಮ ಮೇಲೆ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಠಡಿಯಲ್ಲಿ ಬಂಧಿಸಿ ಮಠದಿಂದ ಹೊರಹಾಕಲು ಯತ್ನಿಸಿದರು ಎಂದು ದೂರಿದರು. ಈ ಕುರಿತು ಪೊಲೀಸ್ ದೂರು ಸಲ್ಲಿಸಿದ್ದರೂ ಇದುವರೆಗೆ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಳ್ಳಲಾಗಿಲ್ಲ ಎಂದರು.
ಇದಕ್ಕೂ ಮುನ್ನ ಡಿಸೆಂಬರ್ 17ರಂದು ಕೂಡ ಇದೇ ವ್ಯಕ್ತಿಗಳು ತಮ್ಮನ್ನು ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದರು. ಆ ಸಂದರ್ಭದಲ್ಲಿಯೂ ದೂರು ನೀಡಲಾಗಿತ್ತು. ಆದರೆ ದೌರ್ಜನ್ಯ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳದಿರುವುದು ಹಾಗೂ ಕರ್ತವ್ಯ ನಿರ್ಲಕ್ಷ್ಯ ವಹಿಸಿರುವ ಪೊಲೀಸರ ನಡೆ ತೀವ್ರ ನಿರಾಸೆ ತಂದಿದೆ. ಮಠದ ಆಸ್ತಿ ಹಾಗೂ ಭದ್ರತೆಯನ್ನು ಸರ್ಕಾರ ತಕ್ಷಣ ರಕ್ಷಿಸಬೇಕು ಎಂದು ಅವರು ಆಗ್ರಹಿಸಿದರು.
ಮರಿಯಪ್ಪ ಎಂಬುವವರು ಸುಮಾರು 26 ವರ್ಷಗಳ ಹಿಂದೆ 2.12 ಗುಂಟೆ ಜಮೀನನ್ನು ಖರೀದಿಸಿ ಓಂಕಾರ ಜ್ಯೋತಿ ಮಠವನ್ನು ಸ್ಥಾಪಿಸಿದ್ದರು. ನಂತರ ಅವರ ಪತ್ನಿ ಸಾಧಿ ಜಯಮ್ಮ ಅವರು ಮಠದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು. ಇತ್ತೀಚೆಗೆ ಇದೇ ತಿಂಗಳ 9ರಂದು ತಮ್ಮ ಪಟ್ಟಾಭಿಷೇಕ ನೆರವೇರಿದ್ದು, ತಾವು ಪೀಠಾಧಿಪತಿಯಾಗಿ ಹಾಗೂ ಸಾಧಿ ಜಯಮ್ಮ ಅವರು ಗೌರವಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಇತ್ತೀಚೆಗೆ ದಾಳಿ ನಡೆಸುತ್ತಿರುವವರು ಹಿಂದೆಂದೂ ಮಠದೊಂದಿಗೆ ಯಾವುದೇ ಸಂಬಂಧ ಹೊಂದಿರಲಿಲ್ಲ ಎಂದು ಸ್ವಾಮೀಜಿ ತಿಳಿಸಿದರು.ದಾಳಿ ನಡೆಸಿದವರು ತಾವು ಜಯಮ್ಮ ಅವರ ರಕ್ತ ಸಂಬಂಧಿಗಳು ಎಂದು ಹೇಳಿಕೊಂಡು, ಮಠ ತೆರವುಗೊಳಿಸಬೇಕು ಹಾಗೂ ಜಾಗ ತಮ್ಮದೇ ಎಂದು ಗಲಾಟೆ ಮಾಡುತ್ತಿದ್ದಾರೆ. ಇಷ್ಟೆಲ್ಲಾ ದೌರ್ಜನ್ಯ ನಡೆಯುತ್ತಿದ್ದರೂ ಸರ್ಕಾರ ಮತ್ತು ಪೊಲೀಸರು ಮೂಕಪ್ರೇಕ್ಷಕರಾಗಿ ವರ್ತಿಸುತ್ತಿರುವುದು ಅತ್ಯಂತ ನೋವುಂಟು ಮಾಡಿದೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು.
ಮಾಜಿ ಪಾಲಿಕೆ ಸದಸ್ಯ ಲಕ್ಷ್ಮೀನಾರಾಯಣ ಅವರ ಜೊತೆಗೆ ಪಾರ್ಥಸಾರಥಿ, ಲೀಲಾ, ಚಂದ್ರಶೇಖರ್, ವೆಂಕಟರೆಡ್ಡಿ, ಗೋಪಿನಾಥ್, ಪ್ರಕಾಶ, ಗುರುಪ್ರಸಾದ ಹಾಗೂ ಸೂರ್ಯ ಎಂಬವರು ಮಠದ ಟ್ರಸ್ಟಿಗಳು ಮತ್ತು ತಮ್ಮಿಗೆ ನಿರಂತರವಾಗಿ ಕರೆ ಮಾಡಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದರು. ದಾಳಿಯಿಂದ ತಮಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕಾಯಿತು ಎಂದು ಹೇಳಿದರು.
ಪೊಲೀಸರು ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡುವುದರ ಜೊತೆಗೆ ಕಾನೂನು ಹೋರಾಟ ನಡೆಸಲಾಗುವುದು ಎಂದು ಮಠದ ಅಧ್ಯಕ್ಷ ಉಮಾ ಮಹೇಶ್ವರ ಸ್ವಾಮೀಜಿ ಎಚ್ಚರಿಕೆ ನೀಡಿದರು.
City Today News 9341997936
