ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಶಿಫಾರಸ್ಸು: ಮಾರ್ಚ್ 16ರಂದು ಅಹೋರಾತ್ರಿ ಪ್ರತಿಭಟನೆ

ಬೆಂಗಳೂರು: ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಮಾರ್ಚ್ 16, 2026ರಂದು ಅಹೋರಾತ್ರಿ ಪ್ರತಿಭಟನೆ ನಡೆಸಲು ಮಡಿವಾಳ ಸಮುದಾಯದ ಸಂಘಟನೆಗಳು ತೀರ್ಮಾನಿಸಿವೆ.
ಈ ಕುರಿತು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಎಂ.ಕೆ. ಹನುಮಂತಪ್ಪ, ಪ್ರಧಾನ ಕಾರ್ಯದರ್ಶಿ ಮಲ್ಲೇಶ್ ಹಾಗೂ ಇತರ ಮುಖಂಡರು ಮಾಹಿತಿ ನೀಡಿದರು.
ದೇಶದ 17 ರಾಜ್ಯಗಳು ಹಾಗೂ ನಾಲ್ಕು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮಡಿವಾಳ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸಲಾಗಿದೆ. ಆದರೆ ಕರ್ನಾಟಕದಲ್ಲಿ ಮಾತ್ರ ಈ ಸೌಲಭ್ಯ ಲಭ್ಯವಾಗಿಲ್ಲ ಎಂದು ಅವರು ಆಕ್ಷೇಪಿಸಿದರು.
ಸಮುದಾಯದ ಹಲವು ದಶಕಗಳ ಹೋರಾಟದ ಫಲವಾಗಿ 2009ರಲ್ಲಿ ಕರ್ನಾಟಕ ರಾಜ್ಯ ಮಡಿವಾಳರ ಕ್ಷೇಮಾಭಿವೃದ್ಧಿ ಸಂಘದ ಮನವಿಗೆ ಸ್ಪಂದಿಸಿದ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮಡಿವಾಳ ಸಮಾಜದ ಕುಲಶಾಸ್ತ್ರ ಅಧ್ಯಯನ ನಡೆಸಲು ಪ್ರೊ. ಡಾ. ಅನ್ನಪೂರ್ಣ ಅವರನ್ನು ನೇಮಕ ಮಾಡಿದ್ದರು. ರಾಜ್ಯದಾದ್ಯಂತ ಅಧ್ಯಯನ ನಡೆಸಿದ ಅವರು 2011ರಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿ, ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸುವಂತೆ ಶಿಫಾರಸ್ಸು ಮಾಡಿದ್ದರು ಎಂದು ತಿಳಿಸಿದರು.
ಆದರೆ 2011ರಿಂದಲೂ ಪ್ರತಿವರ್ಷ ವಿವಿಧ ಸರ್ಕಾರಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಅಂತಿಮ ನಿರ್ಧಾರ ಕೈಗೊಳ್ಳಲಾಗಿಲ್ಲ ಎಂದು ಅವರು ವಿಷಾದ ವ್ಯಕ್ತಪಡಿಸಿದರು. 2022ರಲ್ಲಿ ಸಮಾಜ ಕಲ್ಯಾಣ ಇಲಾಖೆಯ ಮೂಲಕ ‘SWD-505 SLP-22’ ಕಡತವನ್ನು ಸಚಿವ ಸಂಪುಟಕ್ಕೆ ತರಲು ಒಪ್ಪಿಗೆಯಾದರೂ, ಮುಖ್ಯಮಂತ್ರಿಗಳ ಅನುಮೋದನೆ ಬಾಕಿ ಉಳಿದ ಕಾರಣ ವಿಷಯ ಮುಂದುವರಿಯಲಿಲ್ಲ ಎಂದು ಹೇಳಿದರು.
2025ರಲ್ಲಿ ಸಮಾಜದ ಜಗದ್ಗುರು ಡಾ. ಶ್ರೀ ಶ್ರೀ ಬಸವಮಾಚಿದೇವ ಸ್ವಾಮಿಜಿ ಹಾಗೂ ಶ್ರೀ ಶ್ರೀ ಮುಕ್ತಾನಂದ ಸ್ವಾಮಿಜಿಗಳ ಸಾನ್ನಿಧ್ಯದಲ್ಲಿ, ಉತ್ತರ ಕರ್ನಾಟಕ ಮಡಿವಾಳರ ಸಂಘದ ಸಹಭಾಗಿತ್ವದಲ್ಲಿ 19 ಮಂದಿ ಮಂತ್ರಿಗಳು ಮತ್ತು 137 ಶಾಸಕರಿಂದ ಶಿಫಾರಸ್ಸು ಪತ್ರಗಳನ್ನು ಸಂಗ್ರಹಿಸಿ, ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಮುಂದಿನ ವಿಧಾನಸಭಾ ಅಧಿವೇಶನದಲ್ಲಿಯೇ ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವ ನಿರ್ಣಯ ಕೈಗೊಳ್ಳಬೇಕೆಂದು ಒತ್ತಾಯಿಸಿ, ಮಾರ್ಚ್ 16ರಂದು ಬೆಳಿಗ್ಗೆ 8ರಿಂದ ಫ್ರೀಡಂ ಪಾರ್ಕ್‌ನಲ್ಲಿ ಅಹೋರಾತ್ರಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ರಾಜ್ಯದ ಎಲ್ಲಾ ಜಿಲ್ಲೆ, ತಾಲ್ಲೂಕು, ಹೋಬಳಿ ಮತ್ತು ಗ್ರಾಮಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಡಿವಾಳ ಸಮುದಾಯದವರು ಭಾಗವಹಿಸಲಿದ್ದಾರೆ ಎಂದು ಸಂಘಟನೆ ತಿಳಿಸಿದೆ.
City Today News 9341997936
