
ಬೆಂಗಳೂರು: ರಾಜ್ಯ ಪಶುಸಂಗೋಪನೆ ಇಲಾಖೆಯ ಆಸ್ಪತ್ರೆಗಳಿಗೆ ಹೊರಗುತ್ತಿಗೆ ಆಧಾರದಲ್ಲಿ ಡಿ-ಗ್ರೂಪ್ ನೌಕರರನ್ನು ಒದಗಿಸುವ ಟೆಂಡರ್ ಪ್ರಕ್ರಿಯೆಯಲ್ಲಿ ಭಾರೀ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಈ ಅಕ್ರಮದಿಂದ ರಾಜ್ಯ ಸರ್ಕಾರಕ್ಕೆ ಸುಮಾರು ₹50 ಕೋಟಿ ನಷ್ಟ ಉಂಟಾಗಿದೆ ಎಂದು ಒಕ್ಕೂಟದ ರಾಜ್ಯ ವಕ್ತಾರ ಎಂ.ಬಿ. ನಾಗಣ್ಣಗೌಡ ಆರೋಪಿಸಿದರು. ಈ ಕುರಿತು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದರೂ, ಇಲಾಖೆಯ ಸಚಿವ ಕೆ. ವೆಂಕಟೇಶ್ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಪಶು ಚಿಕಿತ್ಸಾಲಯಗಳಲ್ಲಿ ಖಾಲಿ ಇರುವ 2,256 ಡಿ-ಗ್ರೂಪ್ ಹುದ್ದೆಗಳನ್ನು ಭರ್ತಿ ಮಾಡಲು 2015ರಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಸೇವೆ ಪಡೆಯಲು ಅನುಮತಿ ನೀಡಲಾಗಿತ್ತು. ಆದರೆ, ನೇರ ನೇಮಕಾತಿ ನಡೆಯುವವರೆಗೆ ಮಾತ್ರ ಟೆಂಡರ್ ಮೂಲಕ ಸೇವೆ ಪಡೆಯಬೇಕೆಂಬ ನಿಯಮವನ್ನು ಇಲಾಖೆ ಅಧಿಕಾರಿಗಳು ಉಲ್ಲಂಘಿಸಿದ್ದಾರೆ ಎಂದು ಹೇಳಿದರು.
ಧಾರವಾಡ ಮೂಲದ ಮಾತಾ ಟೆಕ್ನಾಲಜೀಸ್ ಹಾಗೂ ಅಪ್ಟೆಕ್ಟ್ ಟೆಕ್ನಾಲಜೀಸ್ ಎಂಬ ಎರಡು ಏಜೆನ್ಸಿಗಳಿಗೆ ಕಳೆದ 11 ವರ್ಷಗಳಿಂದ ಯಾವುದೇ ಹೊಸ ಟೆಂಡರ್ ನಡೆಸದೆ ಗುತ್ತಿಗೆ ಮುಂದುವರಿಸಲಾಗಿದೆ. ಇದು ಕೆಟಿಟಿಪಿ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಪ್ರತಿ ವರ್ಷ ಟೆಂಡರ್ ನಡೆಸಬೇಕಾದ ನಿಯಮವಿದ್ದರೂ, ಅದನ್ನು ಪಾಲಿಸಿಲ್ಲ ಎಂದು ಅವರು ಆರೋಪಿಸಿದರು.
ಹೆಚ್ಚುವರಿ ಆರೋಪವಾಗಿ, ಶೇ.2ರ ಸೇವಾಶುಲ್ಕದಲ್ಲಿ ಸೇವೆ ನೀಡಲು ಹಲವು ಏಜೆನ್ಸಿಗಳು ಸಿದ್ಧವಿದ್ದರೂ, ಶೇ.11.5ರಷ್ಟು ಹೆಚ್ಚಿನ ಶುಲ್ಕದಲ್ಲಿ ಈ ಏಜೆನ್ಸಿಗಳನ್ನು ಮುಂದುವರಿಸಲಾಗಿದೆ. ಇದರಿಂದ ವರ್ಷಕ್ಕೆ ಸುಮಾರು ₹5 ಕೋಟಿ, ಒಟ್ಟು ₹50 ಕೋಟಿ ನಷ್ಟ ಸರ್ಕಾರಕ್ಕೆ ಉಂಟಾಗಿದೆ ಎಂದು ಹೇಳಿದರು.
ಈ ಬಗ್ಗೆ ಸಚಿವ ವೆಂಕಟೇಶ್ ಅವರಿಗೆ ಮನವಿ ಸಲ್ಲಿಸಿದರೂ ಯಾವುದೇ ಸ್ಪಂದನೆ ದೊರಕಿಲ್ಲ. ಸಚಿವರು ಸಹ ಈ ಅಕ್ರಮದಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ ಎಂದು ನಾಗಣ್ಣಗೌಡ ಹೇಳಿದರು.
ಲೋಕಾಯುಕ್ತದಲ್ಲಿ ದೂರು ದಾಖಲಾದ ನಂತರ, ಸಂಬಂಧಿತ ಏಜೆನ್ಸಿಗಳ ಮೂಲಕ ನ್ಯಾಯಾಲಯದಲ್ಲಿ ದಾವೆ ಹೂಡಿಸಿ, ಬಾಕಿ ಹಣಕ್ಕೆ ಬಡ್ಡಿ ನೀಡುವಂತೆ ಮತ್ತು ಟೆಂಡರ್ ರದ್ದುಪಡಿಸದಂತೆ ಕ್ರಮ ಕೈಗೊಳ್ಳಲಾಗಿದೆ. ಇದರಿಂದ ಪ್ರಕರಣ ನ್ಯಾಯಾಲಯದಲ್ಲಿದೆ ಎಂಬ ನೆಪದಲ್ಲಿ ಸರ್ಕಾರ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿದೆ ಎಂದು ಅವರು ಆರೋಪಿಸಿದರು.ನ್ಯಾಯಾಲಯ ಯಾವುದೇ ಮಧ್ಯಂತರ ತಡೆ ಆದೇಶ ನೀಡದಿದ್ದರೂ, ಅದನ್ನು ಕಾರಣವನ್ನಾಗಿ ಮಾಡಿಕೊಂಡು ಗುತ್ತಿಗೆ ಮುಂದುವರಿಸಲಾಗುತ್ತಿದೆ. ಇದರಿಂದ ಸರ್ಕಾರಕ್ಕೆ ಮತ್ತಷ್ಟು ನಷ್ಟವಾಗುತ್ತಿದೆ ಎಂದು ಹೇಳಿದರು.
ಈ ವಿಷಯವನ್ನು ರಾಜ್ಯದ 224 ಶಾಸಕರು ಹಾಗೂ ವಿಧಾನಪರಿಷತ್ ಸದಸ್ಯರ ಗಮನಕ್ಕೆ ತರಲು ದಾಖಲೆಗಳೊಂದಿಗೆ ಮಾಹಿತಿ ನೀಡಲಾಗುವುದು. ಹಣಕಾಸು ಸಚಿವ ಸಿದ್ದರಾಮಯ್ಯ ಅವರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಸಂಬಂಧಿತ ಸಚಿವರು ಹಾಗೂ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು ಟೆಂಡರ್ ರದ್ದುಪಡಿಸಿ ನಷ್ಟವನ್ನು ವಸೂಲಿಸಬೇಕು ಎಂದು ಅವರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಒಕ್ಕೂಟದ ಇತರೆ ಮುಖಂಡರು ಉಪಸ್ಥಿತರಿದ್ದರು.
City Today News 9341997936
