
ಬೆಂಗಳೂರು, ಮಾ.18 — ನಗರದಲ್ಲಿ ಭಕ್ತರಿಗೆ ಆಧ್ಯಾತ್ಮಿಕ ಮಾರ್ಗದರ್ಶನ ನೀಡುವ ಉದ್ದೇಶದಿಂದ ಜಗದ್ಗುರು ರಾಮಾನಂದಾಚಾರ್ಯ ನರೇಂದ್ರಾಚಾರ್ಯ (ದಕ್ಷಿಣಪೀಠ, ನಾಣಿಜಧಾಮ, ರತ್ನಾಗಿರಿ) ಅವರ ಉಪಸ್ಥಿತಿಯಲ್ಲಿ ವಿಶೇಷ ‘ಸಮಸ್ಯೆ ಮಾರ್ಗದರ್ಶನ ಹಾಗೂ ದರ್ಶನ’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಶಂಕರಪುರದ ನ್ಯಾಷನಲ್ ಕಾಲೇಜು ಮೆಟ್ರೋ ನಿಲ್ದಾಣದ ಸಮೀಪದಲ್ಲಿರುವ ಶ್ರೀ ಚಂದ್ರಶೇಖರ ಭಾರತೀ ಕಲ್ಯಾಣ ಮಂಟಪದಲ್ಲಿ ಬೆಳಿಗ್ಗೆ 9 ಗಂಟೆಯಿಂದ ಕಾರ್ಯಕ್ರಮ ನಡೆಯಲಿದೆ. “ನೀವು ಬಾಳಿರಿ, ಇತರರನ್ನು ಬಾಳಿಸಿರಿ” ಎಂಬ ಸಂದೇಶದೊಂದಿಗೆ ನಡೆಯುವ ಈ ಕಾರ್ಯಕ್ರಮದಲ್ಲಿ ಭಕ್ತರ ವೈಯಕ್ತಿಕ ಹಾಗೂ ಸಾಮಾಜಿಕ ಸಮಸ್ಯೆಗಳಿಗೆ ಗುರುಗಳು ಮಾರ್ಗದರ್ಶನ ನೀಡಲಿದ್ದಾರೆ.
ಸಂಸ್ಥೆಯು ಸಾಮಾಜಿಕ ಸೇವೆಯಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದು, ಗ್ರಾಮ ಸ್ವಚ್ಛತಾ ಅಭಿಯಾನ, ಉಚಿತ ಇಂಗ್ಲಿಷ್ ಮಾಧ್ಯಮ ಶಾಲೆಗಳು, ವೇದಪಾಠ ಶಾಲೆಗಳು, ರಕ್ತದಾನ ಶಿಬಿರಗಳು ಮತ್ತು ಉಚಿತ ಚಿಕಿತ್ಸಾಲಯಗಳ ಮೂಲಕ ಸೇವೆ ಸಲ್ಲಿಸುತ್ತಿದೆ. ಇದಲ್ಲದೆ, 185 ಮರಣೋತ್ತರ ದೇಹದಾನ ಹಾಗೂ 143 ಅಂಗಾಂಗ ದಾನಗಳನ್ನು ಸರ್ಕಾರಿ ಆಸ್ಪತ್ರೆಗಳಿಗೆ ಒದಗಿಸಿರುವುದು ಗಮನಾರ್ಹ. ರಾಷ್ಟ್ರೀಯ ಹೆದ್ದಾರಿಗಳಲ್ಲಿ 53 ಆಂಬ್ಯುಲೆನ್ಸ್‌ಗಳ ಮೂಲಕ 24 ಗಂಟೆಗಳ ತುರ್ತು ಸೇವೆಯನ್ನೂ ನೀಡಲಾಗುತ್ತಿದೆ.
ಆರ್ಥಿಕವಾಗಿ ಹಿಂದುಳಿದವರ ಪುನರ್ವಸತಿ, ಮಹಿಳಾ ಸಬಲೀಕರಣಕ್ಕಾಗಿ ಉಚಿತ ಹೊಲಿಗೆ ಯಂತ್ರ ವಿತರಣೆ, ಕಾನೂನು ಸಾಕ್ಷರತಾ ಶಿಬಿರಗಳು ಮತ್ತು ತುರ್ತು ನೆರವು ಕಾರ್ಯಗಳನ್ನು ಸಂಸ್ಥೆ ಕೈಗೊಂಡಿದೆ. ಈ ವರ್ಷ ಜನವರಿಯಲ್ಲಿ ನಡೆದ ರಕ್ತದಾನ ಅಭಿಯಾನದಲ್ಲಿ ಕೇವಲ 15 ದಿನಗಳಲ್ಲಿ 1,71,150 ರಕ್ತದ ಬಾಟಲಿಗಳನ್ನು ಸರ್ಕಾರಿ ಆಸ್ಪತ್ರೆಗಳಿಗೆ ಒದಗಿಸಲಾಗಿದೆ. ‘ಬ್ಲಡ್ ಇನ್ ನೀಡ್’ ಮತ್ತು ‘ಏಕ್ ಪೇಡ್ ಮಾಁ ಕೆ ನಾಮ್’ ಯೋಜನೆಯಡಿ 1,11,426 ಮರಗಳನ್ನು ನೆಡುವ ಕಾರ್ಯವೂ ನಡೆದಿದೆ.
ಕಾರ್ಯಕ್ರಮಕ್ಕೆ ಆಗಮಿಸುವ ಭಕ್ತರಿಗೆ ಮಹಾಪ್ರಸಾದದ ವ್ಯವಸ್ಥೆ ಮಾಡಲಾಗಿದೆ. ಕುಟುಂಬದವರೊಂದಿಗೆ ಭಾಗವಹಿಸಿ ಗುರುಗಳ ಧರ್ಮೋಪದೇಶ ಮತ್ತು ಮಾರ್ಗದರ್ಶನದ ಪ್ರಯೋಜನ ಪಡೆಯುವಂತೆ ಬೆಂಗಳೂರು ಪೀಠದ ಪ್ರಮುಖರಾದ ಅಭಿಜಿತ್ ಅವಸರೆ, ಮಹೇಂದ್ರ ನಿಕಮ್, ಯೋಗೇಶ್ ಗೌಡ, ಬಾಳಾಸಾಹೇಟ್ ಪೊಳ್ ಹಾಗೂ ಜಗದೀಶ್ ಭೋಜೇ ಅವರು ಪ್ರೆಸ್ ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿದರು.
City Today News 9341997936
