
“ನಮಗೀಗ 60 “ಎಂದಾಕ್ಷಣ “ಗುಜರಿಗೆ ಹಾಕು” ಎನ್ನುವ ಸ್ಟೇಜು ಬಂದಾಗಿದೆ. ಅದು ಸರಕಾರೀ ಆಜ್ಞೆ ! ಅರವತ್ತು ದಾಟಿದ ಯಾರೂ ಸಹ ಹೊಸಿಲು ದಾಟಬಾರದು ಎಂದು ಹದಿವಯಸ್ಸಿನ ಹುಡುಗಿಯರಿಗೆ ಅಂದಿನ ಕಾಲದ ಅಜ್ಜಿಯರು ಹೇಳಿದ ಹಾಗಿದೆ ಈ ಮಾತು. ಇನ್ನು ಏನಿದ್ದರೂ ಅವರುಗಳು ಮನೆಯೊಳಗೇ ಉಸಿರಾಡಿಕೊಂಡು, ಕೊಸರಾಡಿಕೊಂಡು ಬದುಕಿರಬೇಕೇ ವಿನ: ‘ನೋ ಅದರ್ ಫೆಸಿಲಿಟೀಸ್” ! ಮುಖ್ಯವಾಗಿ ಕಲಾವಿದರಿಗೆ ಮಾತ್ರವೇ ಅನ್ವಯಿಸುವಂತೆ ಹೀಗೆ ಎಚ್ಚರಿಕೆ ನೀಡಿದೆ ಘನ ಸರ್ಕಾರ. ವಿಚಿತ್ರ ಎಂದರೆ ತೊಂಭತ್ತರ ಸನಿಹದವರು ರಾಜಕೀಯ ಚದುರಂಗದಾಟದಲ್ಲಿ ಓಲಾಡುತ್ತಿದ್ದಾರೆ, ಎಂಭತ್ತರ ಸಮೀಪದವರು ರಾಜ್ಯ ಸರ್ಕಾರದ ಚುಕ್ಕಾಣಿ ಹಿಡಿದಿದ್ದಾರೆ, ಎಪ್ಪತ್ತರ ವಯೋಮಾನದವರು ವಿಧಾನಸಭೆಯ ಅಸ್ತಿತ್ವವನ್ನೇ ಅಡಿಗಡಿಗೂ ಅಲುಗಾಡಿಸುತ್ತಿದ್ದಾರೆ, ಅವರತ್ತು ದಾಟಿದವರಂತೂ “ಇನ್ನೂ ಗದ್ದುಗೆ ಹಿಡಿಯದಿದ್ದರೆ ತಾವು ಬದುಕಿ ಪ್ರಯೋಜನವಾದರೂ ಏನು” ಎಂಬಂತೆ ಜಂಗೀಕುಸ್ತಿಗೂ ಅಖಾಡ ಸಿದ್ಧ ಪಡಿಸಿರುತ್ತಾರೆ. ನ್ಯಾಯಾಲಯದಲ್ಲಿ ಅನ್ಯಾಯದ ಜುಟ್ಟು ಹಿಡಿದು, ತೊಡೆ ತಟ್ಟುವ ಅತಿರಥ , ಮಹಾರಥರ ‘ಏಜು’ ‘ಅರವತ್ತಕ್ಕೆ’ ಏರುವುದೇ ಇಲ್ಲವೇ ? ಉದ್ಯೋಗಪತಿಗಳು, ಷಷ್ಠಿಪೂರ್ತಿ ಮಾಡಿಕೊಂಡಿರುವ ಸಾವಿರಾರು ಮಹಾನುಭಾವರು ಹೊರಬಂದು ದುಡಿಯುವುದೇ ಇಲ್ಲವೇ ! ‘ಕಾನೂನು ಎಲ್ಲರಿಗೂ ಒಂದೇ’ ಎನ್ನುವುದಾದರೆ ,

ದಯವಿಟ್ಟು “ಮೋದಿ”ಯಾದಿಯಾಗಿ ಎಲ್ಲರೂ ಶಸ್ತ್ರತ್ಯಾಗ ಮಾಡಿ , ಅರವತ್ತರ ಒಳಗೇ ಅಂತ:ಪುರ ಸೇರುವಂಥ ಕಾನೂನು ರೂಪಿಸಲಿ. ಮುಚ್ಚಿದ ಬಾಗಿಲ ಒಳಗೆ , ಸರ್ಕಾರದ ನಿರ್ಧಾರಕ್ಕೆ ಹಿಡಿಶಾಪ ಹಾಕುತ್ತಿರುವವರು”ಕಲಾವಿದ”ರೇ ವಿನ: ಮತ್ಯಾರೂ ಅಲ್ಲ ! ಉಳಿದವರಿಗಿರುವ ಸ್ವಾತಂತ್ರ್ಯ ಕಲಾವಿದರಿಗೆ ಮಾತ್ರ ಇಲ್ಲ “ಎನ್ನುವುದು ನಿಜಕ್ಕೂ ಶೋಚನೀಯ ಸಂಗತಿ ! ಕಿರುತೆರೆ, ಹಿರಿತೆರೆಯನ್ನೇ ಜೀವನೋಪಾಯ ಮಾಡಿಕೊಂಡು,ಕಲೆಯನ್ನೇ ಬದುಕಾಗಿಸಿಕೊಂಡಿರುವ ತಾಂತ್ರಿಕ ವರ್ಗದವರಿಗೆ ಏಕಿಲ್ಲ ಹೊರಬಂದು ದುಡಿಯುವ ಸ್ವಾತಂತ್ರ್ಯ.’ಕಾನೂನು ಎಲ್ಲರಿಗೂ ಒಂದೇ’ ಎಂದಾಗ ಅದನ್ನು ಪ್ರಶ್ನಿಸುವ ನೈತಿಕ ಹಕ್ಕು ಕಲಾವಿದರಿಗೆ ಮಾತ್ರ ಇಲ್ಲವೇ ?
ಕೃಪೆ: ಹಿರಿಯೂರು ರಾಘವೇಂದ್ರ
City Today News
(citytoday.media)
9341997936








You must be logged in to post a comment.