ರಾಜ್ಯ ಬಜೆಟ್‌ನಲ್ಲಿ ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರ ನಿರ್ಲಕ್ಷ್ಯ – ಚಳುವಳಿ ಮುಖಂಡರ ಖಂಡನೆ

ಬೆಂಗಳೂರು, ಮಾರ್ಚ್ 07, 2025: ರಾಜ್ಯ ಸರ್ಕಾರದ 2025-26ನೇ ಸಾಲಿನ ಬಜೆಟ್‌ನಲ್ಲಿ ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರನ್ನು ಸಂಪೂರ್ಣವಾಗಿ ಕಡೆಗಣಿಸಿರುವುದಕ್ಕೆ ಲಿಂಗತ್ವ ಮತ್ತು ಲೈಂಗಿಕ ಬಹುತ್ವಕ್ಕಾಗಿ ಚಳುವಳಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ರಾಜ್ಯದ ಸಾಮಾಜಿಕ ನ್ಯಾಯಕ್ಕೆ ಬದ್ದ ಎಂದು ಪರಿಗಣಿಸಲಾದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಈ ಸಮುದಾಯದ ಅಭಿವೃದ್ಧಿಗೆ ಸ್ಪಷ್ಟ ಯೋಜನೆ ನೀಡದೆ ನಿರ್ಲಕ್ಷ್ಯ ತೋರಿಸಿರುವುದನ್ನು ಮುಖಂಡರು ಖಂಡಿಸಿದ್ದಾರೆ.

ಚಳುವಳಿಯ ಸಹಾಧ್ಯಕ್ಷೆ ವೈಶಾಲಿ ಮಾತನಾಡಿ, “ನಾವು ಫೆಬ್ರವರಿ 28ರಿಂದ ಮಾರ್ಚ್ 5ರವರೆಗೆ ಹತ್ತು ಜಿಲ್ಲೆಗಳಲ್ಲಿ ಪತ್ರಿಕಾಗೋಷ್ಠಿಗಳನ್ನು ನಡೆಸಿ, ಬಜೆಟ್ ಕುರಿತು ನಮ್ಮ ಹಕ್ಕೊತ್ತಾಯಗಳನ್ನು ಸರ್ಕಾರಕ್ಕೆ ತಿಳಿಸಿದ್ದರೂ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅದನ್ನು ಪರಿಗಣಿಸದೆ ಬಜೆಟ್ ಮಂಡಿಸಿರುವುದು ಖಂಡನೀಯ” ಎಂದು ಹೇಳಿದರು.

ರಾಜ್ಯ ಸಮಿತಿಯ ಮತ್ತೊಬ್ಬ ಸದಸ್ಯ ಮನೋಹರ್ ಎಲವರ್ತಿ, “ರಾಜ್ಯ ಸರ್ಕಾರವು ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಮಾಡಿದ ಭರವಸೆಗಳನ್ನು ಬಜೆಟ್‌ನಲ್ಲಿ ಸ್ಪಷ್ಟವಾಗಿ ಗಮನಿಸಿಲ್ಲ. ಸಮುದಾಯದ ಪುನರ್ವಸತಿ ಗಾಗಿ ಕೇವಲ ರೂ. 3 ಕೋಟಿ ಮತ್ತು ಮೈತ್ರಿ ಯೋಜನೆಗೆ ರೂ. 2.54 ಕೋಟಿ ಮೀಸಲಿಡಲಾಗಿದೆ, ಇದು ಅತ್ಯಂತ ಅಪೂರ್ಣ. ಚುನಾವಣಾ ಪ್ರಣಾಳಿಕೆಯಲ್ಲಿ ಪ್ರತಿ ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಗೆ ರೂ. 2 ಲಕ್ಷ ಉದ್ಯಮಶೀಲತೆ ನಿಧಿ ಮತ್ತು ವಾರ್ಷಿಕ ರೂ. 200 ಕೋಟಿ ಅನುದಾನ ನೀಡುವುದಾಗಿ ಹೇಳಿದ್ದರೂ, ಅದನ್ನು ಈ ಬಜೆಟ್‌ನಲ್ಲಿ ನುಡಿಯದೆ ಹೋಗಿದ್ದಾರೆ” ಎಂದು ಬೇಸರ ವ್ಯಕ್ತಪಡಿಸಿದರು.

ಚಳುವಳಿಯ ಮತ್ತೊಬ್ಬ ಸಹಾಧ್ಯಕ್ಷೆ ಕಾಂತಾದೇವಿ, “ಈ ಬಜೆಟ್ ಸರ್ಕಾರದ ಲಿಂಗತ್ವ ಅಲ್ಪಸಂಖ್ಯಾತರ ಬಗ್ಗೆ ಇರುವ ನಿರ್ಲಕ್ಷ್ಯವನ್ನು ತೋರಿಸುತ್ತದೆ. ಸರ್ಕಾರ ನಮಗೆ ಬೇರೇನು ಕೆಲಸ ಸಾಧ್ಯವಿಲ್ಲ, ಭಿಕ್ಷಾಟನೆ ಮತ್ತು ಲೈಂಗಿಕ ದುಡಿಮೆಯಲ್ಲೇ ಜೀವನ ಸಾಗಿಸಬೇಕು ಎಂದು ಹೇಳಿದಂತೆ ಆಗುತ್ತಿದೆ. ಇದು ಗೌರವಾನ್ವಿತ ಬದುಕಿನ ಹಕ್ಕಿನ ಮೇಲಿನ ದಾಳಿಯಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಜೆಟ್‌ನಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಕುರಿತು ನಿರ್ಲಕ್ಷ್ಯ:
ಲಿಂಗ ಪರಿವರ್ತನೆ ಮಾಡಿರುವ ಪುರುಷ ಸೈಯದ್, “ರೂ. 4 ಲಕ್ಷ ಕೋಟಿ ಮೊತ್ತದ 148 ಪುಟದ ಬಜೆಟ್‌ನಲ್ಲಿ ನಮ್ಮ ಸಮುದಾಯಕ್ಕೆ ಯಾವುದೇ ಪ್ರಸ್ತಾಪವೂ ಇಲ್ಲ. ನಮ್ಮ ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆಗಳಿಗೆ, ಉದ್ಯಮಶೀಲತೆಗೆ ಸರ್ಕಾರವೇನೂ ಅನುದಾನ ನೀಡಿಲ್ಲ. ಈ ನಿರ್ಲಕ್ಷ್ಯ ನಮ್ಮನ್ನು ತೀವ್ರ ನಿರಾಸೆಗೆ ದೂಡಿದೆ” ಎಂದು ಹೇಳಿದರು.

ಲಿಂಗತ್ವ ಅಲ್ಪಸಂಖ್ಯಾತ ಮಹಿಳೆ ಜಾನು, “ನಾವು ಹಾಸನ, ಕೋಲಾರ, ಗದಗ, ಬೆಂಗಳೂರು, ಬೀದರ್, ಬೆಳಗಾವಿ, ಕಲಬುರಗಿ, ಚಿಕ್ಕಮಗಳೂರು, ಬಳ್ಳಾರಿ, ಹೊಸಪೇಟೆಗಳಲ್ಲಿ ಬಜೆಟ್ ಗೋಷ್ಠಿಗಳನ್ನು ನಡೆಸಿದ್ದರೂ ಸರ್ಕಾರ ನಮ್ಮ ಬಗ್ಗೆ ಗಮನ ಹರಿಸಿಲ್ಲ. ನಮ್ಮ ಹೋರಾಟವನ್ನು ಸರ್ಕಾರ ನಿರ್ಲಕ್ಷಿಸುತ್ತಿರುವುದು ದುರದೃಷ್ಟಕರ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಚಳುವಳಿಯ ಮುಖ್ಯ ಹಕ್ಕೊತ್ತಾಯಗಳು:

1. ಲಿಂಗತ್ವ ಅಲ್ಪಸಂಖ್ಯಾತರಿಗೆ ಪ್ರತ್ಯೇಕ ವಸತಿ ಯೋಜನೆ ರೂಪಿಸಬೇಕು.


2. ಉದ್ಯಮಶೀಲತೆಗೆ ಪ್ರತಿ ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಗೆ ರೂ. 2,00,000 ಆರ್ಥಿಕ ನೆರವು ನೀಡಬೇಕು.


3. ಉಚಿತ ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆಯ ನಂತರ ಆರೈಕೆಗೆ ಬಜೆಟ್ ಮೀಸಲಿಡಬೇಕು.


4. 1% ಮೀಸಲಾತಿ ಉದ್ಯೋಗಗಳಿಗಾಗಿ ತರಬೇತಿ ಮತ್ತು ಕೋಚಿಂಗ್ ನೀಡಲು ಸರ್ಕಾರ ಬಜೆಟ್‌ನಲ್ಲಿ ನಿದಿ ಮೀಸಲಿಡಬೇಕು.


5. ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಸಮಗ್ರ ಅಭಿವೃದ್ಧಿಗೆ ವಾರ್ಷಿಕ ರೂ. 200 ಕೋಟಿ ಮೀಸಲಿಟ್ಟು, ಪ್ರತ್ಯೇಕ ಸಮಿತಿಯನ್ನು ರಚಿಸಬೇಕು.



ಈ ಎಲ್ಲಾ ಬೇಡಿಕೆಗಳನ್ನು ಸರ್ಕಾರ ತ್ವರಿತವಾಗಿ ಪರಿಗಣಿಸಬೇಕು ಎಂದು ಲಿಂಗತ್ವ ಮತ್ತು ಲೈಂಗಿಕ ಬಹುತ್ವಕ್ಕಾಗಿ ಚಳುವಳಿ ಮುಖಂಡರು ಒತ್ತಾಯಿಸಿದರು.

City Today News 9341997936

ಮೂಲ ವೇತನ ನೀಡದಿದ್ದರೆ ಸಾಮೂಹಿಕ ರಾಜೀನಾಮೆ: ರಾಧಾ ಸುರೇಶ್ ಎಚ್ಚರಿಕೆ

ಬೆಂಗಳೂರು, ಮಾರ್ಚ್ 7: ಶುಶ್ರೂಷಾಧಿಕಾರಿಗಳಿಗೆ (ನರ್ಸಿಂಗ್ ಆಫೀಸರ್) ಮೂಲ ವೇತನ ನೀಡದಿದ್ದರೆ, ಗಾಂಧಿ ದಂಡಿಯ ಸತ್ಯಾಗ್ರಹ ದಿನವಾದ ಮಾರ್ಚ್ 12ರಂದು ಸಾಮೂಹಿಕ ರಾಜೀನಾಮೆ ನೀಡಲಾಗುವುದು ಎಂದು ಕರ್ನಾಟಕ ರಾಜ್ಯ ಗುತ್ತಿಗೆ ಶುಶ್ರೂಷಾಧಿಕಾರಿಗಳ ನೌಕರರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷೆ ರಾಧಾ ಸುರೇಶ್ P.N. ಎಚ್ಚರಿಸಿದ್ದಾರೆ.

ಶುಕ್ರವಾರ ಪ್ರಕಟಣೆ ನೀಡಿದ ಅವರು, ಸಂಘದ ಸದಸ್ಯರು ಬೆಂಗಳೂರು ಫ್ರೀಡಂ ಪಾರ್ಕ್‌ನಲ್ಲಿ ನಡೆಸುತ್ತಿದ್ದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹಕ್ಕೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಭೇಟಿ ನೀಡಿ, ಶುಶ್ರೂಷಾಧಿಕಾರಿಗಳ ಬೇಡಿಕೆಗಳನ್ನು ಇತ್ಯರ್ಥಗೊಳಿಸಲು ಮಾರ್ಚ್ 10 ರಂದು ಸಭೆ ನಡೆಸಲಾಗುವುದು ಎಂದು ಭರವಸೆ ನೀಡಿದ್ದಾಗಿ ತಿಳಿಸಿದರು. ಸಚಿವರ ಈ ಭರವಸೆಯನ್ನು ಗೌರವಿಸಿ, ತಾತ್ಕಾಲಿಕವಾಗಿ ಧರಣಿ ಹಿಂಪಡೆಯಲಾಗಿದೆ ಎಂದು ಅವರು ಹೇಳಿದರು.

ಆದರೆ, ಮಾರ್ಚ್ 10ರಂದು ನಡೆಯುವ ಮಹತ್ವದ ಸಭೆಯಲ್ಲಿ ಮೂಲ ವೇತನ ಸೇರಿದಂತೆ ಬೇಡಿಕೆಗಳಿಗೆ ಸರಕಾರ ಸ್ಪಷ್ಟ ಪರಿಹಾರ ನೀಡದಿದ್ದರೆ, ಮಾರ್ಚ್ 12ರಂದು ಮುಖ್ಯಮಂತ್ರಿಗಳಿಗೆ ಸಾಮೂಹಿಕ ರಾಜೀನಾಮೆ ಸಲ್ಲಿಸಲಾಗುವುದು. ಅಲ್ಲದೆ, ಫ್ರೀಡಂ ಪಾರ್ಕ್‌ನಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಕೈಗೊಳ್ಳುವುದಾಗಿ ರಾಧಾ ಸುರೇಶ್ ಎಚ್ಚರಿಸಿದ್ದಾರೆ.

ಈ ಬೆಳವಣಿಗೆ ರಾಜ್ಯದ ಆರೋಗ್ಯ ಸೇವೆಗಳ ಮೇಲಾದ ಪರಿಣಾಮದ ಬಗ್ಗೆ ಸಾರ್ವಜನಿಕರು ಹಾಗೂ ಸರ್ಕಾರ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ನರ್ಸಿಂಗ್ ಆಫೀಸರ್‌ಗಳ ಹೋರಾಟದ ಮುಂದಿನ ನಡೆಯು ರಾಜ್ಯದ ಆರೋಗ್ಯ ವ್ಯವಸ್ಥೆಯಲ್ಲಿ ಹೊಸ ತಿರುವು ತರಬಹುದೆಂದು ನಿರೀಕ್ಷಿಸಲಾಗಿದೆ.

City Today News 9341997936

ಗ್ರಾಮೀಣ ಎಲ್.ಪಿ.ಜಿ. ವಿತರಕರ ಹಕ್ಕುಗಳಿಗಾಗಿ ಅನಿರ್ಧಿಷ್ಟಾವಧಿ ಹೋರಾಟದಿನಾಂಕ: 25.03.2025 | ಸ್ಥಳ: ಫ್ರೀಡಂ ಪಾರ್ಕ್, ಬೆಂಗಳೂರು

ಬೆಂಗಳೂರು: ದೇಶಾದ್ಯಂತ 2017ರಿಂದ 9000ಕ್ಕೂ ಹೆಚ್ಚು ಹೊಸ ಗ್ರಾಮೀಣ ಎಲ್.ಪಿ.ಜಿ. ವಿತರಕರನ್ನು ಆಯಿಲ್ ಮಾರ್ಕೆಟಿಂಗ್ ಕಂಪನಿಗಳು (OMCs) ನೇಮಕ ಮಾಡಿದ್ದರೂ, ಹಳೆಯ ಬಲಾಡ್ಯ ವಿತರಕರು ಹಾಗೂ ಅಧಿಕಾರಿಗಳ ಅಕ್ರಮದಿಂದ ಹೊಸ ವಿತರಕರು ಮತ್ತು ಗ್ರಾಮೀಣ ಗ್ರಾಹಕರು ತೀವ್ರ ಹಿಂಸೆ ಅನುಭವಿಸುತ್ತಿದ್ದಾರೆ. ಹೊಸ ವಿತರಕರು ಬಂಡವಾಳ ಹೂಡಿಕೊಂಡು ಉದ್ಯೋಗ ಆರಂಭಿಸಿದ್ದರೂ, ಹಳೆಯ ವಿತರಕರು ಹಾಗೂ ಅಧಿಕಾರಿಗಳ ಅವ್ಯವಸ್ಥೆಯಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಅವ್ಯವಸ್ಥೆಯ ವಿರುದ್ಧ ರಾಜ್ಯದ ಗ್ರಾಮೀಣ ಎಲ್.ಪಿ.ಜಿ. ವಿತರಕರ ಫೆಡರೇಶನ್ ಅನಿರ್ಧಿಷ್ಟಾವಧಿ ಮುಷ್ಕರವನ್ನು ಪ್ರಾರಂಭಿಸಲಿದೆ.

ಹೋರಾಟದ ಪ್ರಮುಖ ಬೇಡಿಕೆಗಳು:

15 ಕಿ.ಮೀ ವ್ಯಾಪ್ತಿಗೆ ಮೀರಿದ ವಿತರಣೆ ತಕ್ಷಣ ಸ್ಥಗಿತಗೊಳಿಸಬೇಕು: ಹಳೆಯ ನಗರ ವಿತರಕರು, ನಿಯಮ ಉಲ್ಲಂಘಿಸಿ, 50-70 ಕಿ.ಮೀ ವ್ಯಾಪ್ತಿಯಲ್ಲಿ ಗ್ಯಾಸ್ ವಿತರಣೆ ಮಾಡುತ್ತಿರುವುದು ಗ್ರಾಮೀಣ ವಿತರಕರ ಹಕ್ಕುಗಳಿಗೆ ಧಕ್ಕೆ ಉಂಟುಮಾಡಿದೆ.

ಹಳೆಯ ವಿತರಕರು ಮಾಡುತ್ತಿರುವ ಅಕ್ರಮ ನಿವಾರಣೆ: ಉಜ್ವಲ ಯೋಜನೆ ಅಡಿಯಲ್ಲಿ ಹಳೆಯ ವಿತರಕರು ಮಿತಿಮೀರಿದ ವ್ಯಾಪ್ತಿಯಲ್ಲಿ ಹೊಸ ಗ್ರಾಹಕರನ್ನು ದಾಖಲಿಸಿಕೊಂಡಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು.

ಹೆಚ್ಚುವರಿ ದಂಡದ ರದ್ದು: ಹೊಸ ವಿತರಕರಿಗೆ ಸಣ್ಣ ಪುಟ್ಟ ತಪ್ಪುಗಳಿಗಾಗಿಯೇ ಅಧಿಕ ಪ್ರಮಾಣದಲ್ಲಿ ದಂಡ ವಿಧಿಸುತ್ತಿರುವುದನ್ನು ತಕ್ಷಣ ರದ್ದು ಮಾಡಬೇಕು.

OMCs ವಿರುದ್ಧ ಕ್ರಮ: ಹಳೆಯ ವಿತರಕರ ಪರವಾಗಿ ಅಧಿಕಾರಿಗಳು ಕೆಲಸ ಮಾಡುತ್ತಿದ್ದು, ಅವರ ವಿರುದ್ಧ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು.

ಮಾಫಿಯಾ ಸಂಚು ತೆರವು: ಕಂಪನಿಯ ಉನ್ನತ ಅಧಿಕಾರಿಗಳು ಈ ಅವ್ಯವಸ್ಥೆಯನ್ನು ನೋಡಿಕೊಳ್ಳಲು ನಿರಾಕರಿಸುತ್ತಿದ್ದು, ಇದಕ್ಕೆ ಹಿಂದೆ ದೊಡ್ಡ ಮಾಫಿಯಾ ಚಟುವಟಿಕೆ ಕಾರ್ಯನಿರ್ವಹಿಸುತ್ತಿದೆ ಎಂಬ ಅನುಮಾನ ಮೂಡಿದೆ. ಈ ಬಗ್ಗೆ ಸರ್ಕಾರ ತಕ್ಷಣ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು.


ಈ ಎಲ್ಲಾ ಬೇಡಿಕೆಗಳ ಈಡೇರಿಕೆಗಾಗಿ ಕರ್ನಾಟಕ ಎಲ್.ಪಿ.ಜಿ. ಗ್ರಾಮೀಣ ವಿತರಕರ ಫೆಡರೇಶನ್ ನೇತೃತ್ವದಲ್ಲಿ ಮಾರ್ಚ್ 25, 2025ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅನಿರ್ಧಿಷ್ಟಾವಧಿ ಹೋರಾಟ ಆರಂಭವಾಗಲಿದೆ. ಗ್ರಾಮೀಣ ವಿತರಕರು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹಕ್ಕುಗಳಿಗಾಗಿ ಹೋರಾಟ ನಡೆಸುವಂತೆ ಮನವಿ ಮಾಡಲಾಗಿದೆ ಎಂದು ಬಸವರಾಜ.ಕೆ., ಗೌರವ ಅಧ್ಯಕ್ಷರು, ಕರ್ನಾಟಕ ಎಲ್.ಪಿ.ಜಿ. ಗ್ರಾಮೀಣ ವಿತರಕರ ಫೆಡರೇಶನ್ ವತಿಯಿಂದ ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ತಿಳಿಸಲಾಯಿತು.

City Today News 9341997936

ಅನುದಾನಿತ ಶಾಲಾ/ಕಾಲೇಜುಗಳ ಪಿಂಚಣಿ ವಂಚಿತ ನೌಕರರಿಗೆ ಹಳೆಯ ಪಿಂಚಣಿ ನೀಡಲು ಒತ್ತಾಯ

ಬೆಂಗಳೂರು, ಮಾರ್ಚ್ 2025: ರಾಜ್ಯ ಸರ್ಕಾರವು 13,500 ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ನೀಡಲು ಸಚಿವ ಸಂಪುಟದಲ್ಲಿ ತೀರ್ಮಾನಿಸಿರುವುದು ಸ್ವಾಗತಾರ್ಹವಾದುದು. ಆದರೆ, 2006ರ ಏಪ್ರಿಲ್ 1ರ ಪೂರ್ವದಲ್ಲಿ ನೇಮಕಗೊಂಡು ನಂತರ ಅನುದಾನಕ್ಕೆ ಒಳಗೊಂಡ ಅನುದಾನಿತ ಶಾಲಾ-ಕಾಲೇಜುಗಳ ನೌಕರರು ಪಿಂಚಣಿಯಿಂದ ವಂಚಿತರಾಗಿದ್ದಾರೆ. ಸರ್ಕಾರವು ಈ ನೌಕರರಿಗೂ ಕೂಡ ಹಳೆಯ ಪಿಂಚಣಿ ನೀಡುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ವಿವಿಧ ಸಂಘಟನೆಗಳು ಆಗ್ರಹಿಸಿವೆ.

ಅನುದಾನಿತ ಶಾಲಾ/ಕಾಲೇಜುಗಳ ನೌಕರರು ಸರ್ಕಾರಿ ನೌಕರರಂತೆ ಅಧಿಸೂಚನೆ ಮೂಲಕ ನೇಮಕಗೊಂಡಿದ್ದರೂ, ದೀರ್ಘಕಾಲ ಯಾವುದೇ ಸಂಭಾವನೆ ಇಲ್ಲದೆ ಸೇವೆ ಸಲ್ಲಿಸಿದ್ದರು. ಅಂತೆಯೇ, ಪಿಂಚಣಿ ಸೌಲಭ್ಯವಿಲ್ಲದೇ ಅವರ ಸೇವೆ ಮುಕ್ತಾಯಗೊಂಡಿದೆ. ಕೆಲವರು ವಯೋನಿವೃತ್ತರಾಗಿದ್ದಾರೆ, ಕೆಲವರು ಸೇವೆಯಲ್ಲಿರುವಾಗಲೇ ಮರಣ ಹೊಂದಿದ್ದಾರೆ, ಇನ್ನೂ ಕೆಲವರು ಈಗಲೂ ಸೇವೆಯಲ್ಲಿ ಇದ್ದಾರೆ.

ಕರ್ನಾಟಕ ರಾಜ್ಯದಲ್ಲಿ ಸುಮಾರು 4,000 ಪಿಂಚಣಿ ವಂಚಿತ ನೌಕರರು ಇದ್ದುದರಿಂದ, ಸರ್ಕಾರವು ಮಾನವೀಯತೆಯ ಆಧಾರದ ಮೇಲೆ, ಸರ್ಕಾರಿ ನೌಕರರಿಗೆ ನೀಡಿದಂತೆ ಇವರಿಗೂ ಪಿಂಚಣಿ ವಿಸ್ತರಿಸಬೇಕು ಎಂದು ಒತ್ತಾಯಿಸಲಾಗಿದೆ.

ಈ ಕುರಿತಂತೆ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಎಂ.ಪಿ. ಕರಬಸಪ್ಪ (ಒಕ್ಕೂಟ ಅಧ್ಯಕ್ಷರು), ಡಾ. ಜಿ.ಆರ್. ಹೆಬ್ಬೂರ (ನಿಕಟಪೂರ್ವ ಅಧ್ಯಕ್ಷರು), ಡಾ. ಪಿ.ಎಸ್. ಕೊಕಟನೂರ (ವೇದಿಕೆ ಅಧ್ಯಕ್ಷರು), ಶ್ರೀಕಂಠಯ್ಯ (ಒಕ್ಕೂಟ ಕಾರ್ಯಾಧ್ಯಕ್ಷರು), ದಯಾನಂದ ಸ್ವಾಮಿ (ವೇದಿಕೆ ಕಾರ್ಯಾಧ್ಯಕ್ಷರು) ಮತ್ತು ಡಾ. ಜಿ.ಪಿ. ನಾಗರಾಜ್ (ಪ್ರಧಾನ ಕಾರ್ಯದರ್ಶಿ) ಅವರು ಸರ್ಕಾರ ತಕ್ಷಣ ಈ ಬಗ್ಗೆ ಸ್ಪಷ್ಟ ನಿಲುವು ತೆಗೆದು ಅನುದಾನಿತ ಶಾಲಾ-ಕಾಲೇಜುಗಳ ಪಿಂಚಣಿ ವಂಚಿತ ನೌಕರರಿಗೆ ಹಳೆಯ ಪಿಂಚಣಿ ನೀಡಬೇಕು ಎಂದು ಆಗ್ರಹಿಸಿದರು.

City Today News 9341997936

ಅತಿಥಿ ಶಿಕ್ಷಕರ ವೇತನ ಹೆಚ್ಚಳಕ್ಕೆ ಆಗ್ರಹ – ಮಾರ್ಚ್ 10ರಿಂದ ರಾಜ್ಯವ್ಯಾಪಿ ಪ್ರತಿಭಟನೆ ಘೋಷಣೆ

ಬೆಂಗಳೂರು: ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಶಿಕ್ಷಕರು ತಮ್ಮ ವೇತನ ಹೆಚ್ಚಳ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯವ್ಯಾಪಿ ಪ್ರತಿಭಟನೆಗೆ ಸಜ್ಜಾಗಿದ್ದಾರೆ. ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಅತಿಥಿ ಶಿಕ್ಷಕರ ಸಂಘ (ರಿ.) ಕರ್ನಾಟಕ ರಾಜ್ಯ ಸಮಿತಿ, ಬೆಂಗಳೂರು ನೇತೃತ್ವದಲ್ಲಿ, ಮುಖ್ಯಮಂತ್ರಿಗಳು 2025-26ನೇ ಸಾಲಿನ ಬಜೆಟ್‌ನಲ್ಲಿ ಅತಿಥಿ ಶಿಕ್ಷಕರ ವೇತನ ಹೆಚ್ಚಳ ಮತ್ತು ಸೇವಾ ಭದ್ರತೆ ಕುರಿತು ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ. ಈ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಮಾರ್ಚ್ 10ರಿಂದ ರಾಜ್ಯದ ಎಲ್ಲಾ ಅತಿಥಿ ಶಿಕ್ಷಕರು ಶಾಲೆಯನ್ನು ಬಹಿಷ್ಕರಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅಹೋರಾತ್ರಿ ಅನಿರ್ದಿಷ್ಟ ಮುಕ್ತಾಯದ ಹೋರಾಟ ಕೈಗೊಳ್ಳುವುದಾಗಿ ಸಂಘದ ಪದಾಧಿಕಾರಿಗಳು ಎಚ್ಚರಿಸಿದ್ದಾರೆ.

ಪ್ರಧಾನ ಬೇಡಿಕೆಗಳು:

1. ನಿರಂತರ ಸೇವೆಯ ಖಾತರಿಗಾಗಿ ಕ್ರಮ: ಪ್ರತಿ ಶೈಕ್ಷಣಿಕ ವರ್ಷ ಪ್ರಾರಂಭದಲ್ಲಿ ಪುನಃ ನೇಮಕಾತಿಯ ಪ್ರಕ್ರಿಯೆ ಮುಗಿಸಿ, ಈಗಾಗಲೇ ಸೇವೆ ಸಲ್ಲಿಸುತ್ತಿರುವ ಅತಿಥಿ ಶಿಕ್ಷಕರನ್ನು ಮುಂದುವರಿಸಲು ಸರ್ಕಾರ ಕ್ರಮ ವಹಿಸಬೇಕು. ಅನುಭವ ಹೊಂದಿರುವ ಶಿಕ್ಷಕರಿಗೆ ಆದ್ಯತೆ ನೀಡಬೇಕು.


2. ವೇತನ ಹೆಚ್ಚಳ: ಅತಿಥಿ ಶಿಕ್ಷಕರ ಕನಿಷ್ಠ ಮಾಸಿಕ ವೇತನವನ್ನು ₹20,000ಕ್ಕೆ ಹೆಚ್ಚಿಸಬೇಕು. ಬೇಸಿಗೆ ರಜೆ ಸೇರಿದಂತೆ 12 ತಿಂಗಳ ವೇತನ ನೀಡಬೇಕು. ಸುಪ್ರೀಂ ಕೋರ್ಟ್ ಆದೇಶದಂತೆ ಸಮಾನ ಕೆಲಸಕ್ಕೆ ಸಮಾನ ವೇತನ ಅನುಸರಿಸಬೇಕು. ಪ್ರತಿ ತಿಂಗಳ ಮೊದಲ ವಾರವೇ ವೇತನ ನೇರವಾಗಿ ಖಾತೆಗೆ ಜಮಾ ಮಾಡಬೇಕು.


3. ಶಿಕ್ಷಕರ ನೇಮಕಾತಿಯಲ್ಲಿ ಪ್ರಾಥಮ್ಯ: ಅತಿಥಿ ಶಿಕ್ಷಕರ ಸೇವಾ ಅವಧಿಗೆ ಪ್ರತಿ ವರ್ಷಕ್ಕೆ 5% ಕೃಪಾಂಕವನ್ನು ನಿಯೋಜನಾ ಪ್ರಕ್ರಿಯೆಯಲ್ಲಿ ನೀಡಬೇಕು.


4. ಖಾಯಂ ಸೇವೆಗೆ ಪರಿಗಣನೆ: ದೆಹಲಿ, ಹರಿಯಾಣ, ಪಂಜಾಬ್ ಮತ್ತು ಉತ್ತರ ಪ್ರದೇಶ ಸರ್ಕಾರಗಳ ಮಾದರಿಯಲ್ಲಿ ಅತಿಥಿ ಶಿಕ್ಷಕರ ಸೇವೆಯನ್ನು ಖಾಯಂಗೊಳಿಸಬೇಕು.


5. ಸೇವಾ ಪ್ರಮಾಣಪತ್ರ ಮತ್ತು ಗೌರವ: ಅತಿಥಿ ಶಿಕ್ಷಕರಿಗೆ ಸೇವಾ ಪ್ರಮಾಣಪತ್ರ ನೀಡಬೇಕು. ಇತರ ಸರಕಾರಿ ಶಿಕ್ಷಕರಿಗೆ ದೊರೆಯುವ ಸೌಲಭ್ಯಗಳು, ತರಬೇತಿ ಮತ್ತು ಗೌರವಪೂರ್ಣ ವ್ಯವಸ್ಥೆಗಳನ್ನು ಅತಿಥಿ ಶಿಕ್ಷಕರಿಗೂ ವಿಸ್ತರಿಸಬೇಕು.


6. ಹಾಜರಾತಿ ಮತ್ತು ಪದಬದಲಾವಣೆ: ಶಾಲಾ ಹಾಜರಾತಿ ಪುಸ್ತಕದಲ್ಲಿ ಅತಿಥಿ ಶಿಕ್ಷಕರ ಹಾಜರಾತಿ ದಾಖಲಿಸಬೇಕು. “ಅತಿಥಿ ಶಿಕ್ಷಕ” ಎಂಬ ಪದವನ್ನು ತೆಗೆದುಹಾಕಿ “ಗೌರವ ಶಿಕ್ಷಕ” ಅಥವಾ “ಅರೆಕಾಲಿಕ ಶಿಕ್ಷಕ” ಎಂದು ಪರಿವರ್ತಿಸಬೇಕು.


7. ವಿಮೆ ಮತ್ತು ಭದ್ರತೆ: ಅತಿಥಿ ಶಿಕ್ಷಕರಿಗೆ ಗುಂಪು ಜೀವನ ವಿಮೆ ಸೌಲಭ್ಯ ಒದಗಿಸಬೇಕು.



ಸರ್ಕಾರ ಈ ಬೇಡಿಕೆಗಳ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಂಡು ಬಜೆಟ್‌ನಲ್ಲಿ ಘೋಷಣೆ ಮಾಡಬೇಕು ಎಂದು ಸಂಘದ ರಾಜ್ಯಾಧ್ಯಕ್ಷ ಹನುಮಂತ ಎಚ್.ಎಸ್. ಪತ್ರಿಕಾ ಪ್ರಕಟಣೆಯಲ್ಲಿ ಸಂಘದ ಮುಖಂಡರುಗಳ ಸಮ್ಮುಖದಲ್ಲಿ ತಿಳಿಸಿದರು. ಬೇಡಿಕೆಗಳನ್ನು ಸರ್ಕಾರ ನಿರ್ಲಕ್ಷಿಸಿದರೆ, ರಾಜ್ಯದ ಎಲ್ಲಾ ಅತಿಥಿ ಶಿಕ್ಷಕರು ಶಿಕ್ಷಣ ಕಾರ್ಯವನ್ನು ಸ್ಥಗಿತಗೊಳಿಸಿ ಅನಿರ್ದಿಷ್ಟ ಮುಕ್ತಾಯದ ಹೋರಾಟ ನಡೆಸಲು ನಿರ್ಧರಿಸಿದರು.

City Today News 9341997936