
ಬೆಂಗಳೂರು: ಕರ್ನಾಟಕದಲ್ಲಿ 250 ಅಡಿ ಎತ್ತರದ ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಯನ್ನು ನಿರ್ಮಿಸಲು ಕರ್ನಾಟಕ ಭೀಮ್ ಸೇನೆ (ರಿ.) ಸಂಘಟನೆಯ ಮುಖಂಡರು ರಾಜ್ಯ ಸರ್ಕಾರದ ಗಮನ ಸೆಳೆದಿದ್ದಾರೆ. ಈ ಕುರಿತಂತೆ ರಾಜ್ಯದ ಮುಖ್ಯಮಂತ್ರಿಗಳಿಗೆ ಮತ್ತು ಸಂಬಂಧಪಟ್ಟ ಸಚಿವರಿಗೆ ಒತ್ತಾಯಿಸುತ್ತಾ, ಸಂಘಟನೆ ಪ್ರೆಸ್ ಕ್ಲಬ್ ಆಫ್ ಬೆಂಗಳೂರುನಲ್ಲಿ ಪತ್ರಿಕಾ ಗೋಷ್ಠಿ ಆಯೋಜಿಸಿತು.
ಈ ಕುರಿತಂತೆ ಕರ್ನಾಟಕ ಭೀಮ್ ಸೇನೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಶಂಕರ್ ರಾಮಲಿಂಗಯ್ಯ ಮಾತನಾಡಿ, “ತೆಲಂಗಾಣ ಮತ್ತು ಆಂಧ್ರಪ್ರದೇಶ ರಾಜ್ಯಗಳು ಅಂಬೇಡ್ಕರ್ ಪ್ರತಿಮೆ ನಿರ್ಮಾಣಕ್ಕೆ ಮುಂದಾದ ಬೆನ್ನಲ್ಲೇ, ಕರ್ನಾಟಕದಲ್ಲೂ ಅಂಬೇಡ್ಕರ್ ಪ್ರತಿಮೆ ನಿರ್ಮಾಣ ಅಗತ್ಯ. ಬೆಂಗಳೂರು ನಗರದಲ್ಲಿ ಪ್ರಸಿದ್ಧ ಪ್ರವಾಸಿ ತಾಣವಾದ ಲಾಲ್‌ಬಾಗ್ 245 ಎಕರೆ ವಿಸ್ತೀರ್ಣವಿದ್ದು, ಪ್ರತಿಮೆ ನಿರ್ಮಾಣಕ್ಕೆ ಇದು ಸೂಕ್ತ ಸ್ಥಳ” ಎಂದು ತಿಳಿಸಿದ್ದಾರೆ.

ಸಂಘಟನೆಯ ಹಿರಿಯ ಸದಸ್ಯರು, ಹೈಕೋರ್ಟ್ ವಕೀಲ ಹಾಗೂ ಅಂಬೇಡ್ಕರ್ ವಾದಿ ಉಮಾಶಂಕರ್ ಎಲ್, ಬೆಂಗಳೂರು ನಗರ ಅಧ್ಯಕ್ಷ ಮಂಜುನಾಥ್, ನಗರ ಉಸ್ತುವಾರಿ ಅಧ್ಯಕ್ಷ ರಾಮು ಸೇರಿದಂತೆ ಅನೇಕ ಮುಖಂಡರು ಈ ಪತ್ರಿಕಾ ಗೋಷ್ಠಿಯಲ್ಲಿ ಭಾಗವಹಿಸಿ, ಸರ್ಕಾರವು 2025-26 ನೇ ಸಾಲಿನ ಬಜೆಟ್‌ನಲ್ಲಿ ಈ ಮಹತ್ವದ ಯೋಜನೆಯನ್ನು ಘೋಷಿಸಬೇಕು ಎಂದು ಆಗ್ರಹಿಸಿದರು.
ಸರ್ಕಾರಕ್ಕೆ ಮರುಮನವಿ
ಸಂಘಟನೆಯ ಮುಖಂಡರು, ಕಳೆದ ಒಂದು ವರ್ಷದಿಂದ ರಾಜ್ಯದ 30 ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಮುಖ್ಯ ಕಾರ್ಯದರ್ಶಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಮಾಜ ಕಲ್ಯಾಣ ಸಚಿವ ಹೆಚ್.ಸಿ. ಮಹದೇವಪ್ಪ, ಗೃಹ ಸಚಿವ ಪರಮೇಶ್ವರ್, ಪ್ರಿಯಾಂಕಾ ಖರ್ಗೆ, ಸತೀಶ್ ಜಾರಕಿಹೊಳಿ ಸೇರಿದಂತೆ ಹಲವು ಸಚಿವರು, ಶಾಸಕರು, ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಈ ಬಗ್ಗೆ ಮನವಿ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.
“ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ಹಿಂದುಳಿದ ಸಮುದಾಯ ಪ್ರಮುಖ ಪಾತ್ರವಹಿಸಿದೆ. ಆದ್ದರಿಂದ, ಸರ್ಕಾರ ನಮ್ಮ ಮನವಿಯನ್ನು ಗೌರವಿಸಿ, ಅಂಬೇಡ್ಕರ್ ಅವರ 250 ಅಡಿ ಎತ್ತರದ ಪ್ರತಿಮೆಯನ್ನು ರಾಜ್ಯದ ಹೆಮ್ಮೆಯ ಸಂಕೇತವಾಗಿ ಬೆಂಗ್ಳೂರಿನಲ್ಲಿ ನಿರ್ಮಿಸಬೇಕು” ಎಂದು ಶಂಕರ್ ರಾಮಲಿಂಗಯ್ಯ ಒತ್ತಾಯಿಸಿದರು.
City Today News 9341997936

You must be logged in to post a comment.