ಬೆಂಗಳೂರು, ಮಾ. 26: ನಗರದಲ್ಲಿ ಕಸ ಸಂಗ್ರಹಣೆ ಕಾರ್ಯದಲ್ಲಿ ತೊಡಗಿರುವ ಪೌರ ಕಾರ್ಮಿಕರಾದ ಚಾಲಕರು ಮತ್ತು ಸಹಾಯಕರಿಗೆ ಆರೋಗ್ಯ ವಿಮೆ ಹಾಗೂ ಅಗತ್ಯ ಸುರಕ್ಷತಾ ಸಾಧನಗಳನ್ನು ತಕ್ಷಣ ಒದಗಿಸಬೇಕು ಎಂದು ಇಂಡಿಯನ್ ವೆಹಿಕಲ್ ಡ್ರೈವರ್ಸ್ ಟ್ರೇಡ್ ಯೂನಿಯನ್ ಮತ್ತು ಸ್ನೇಹಜೀವಿ ಚಾಲಕರ ಟ್ರೇಡ್ ಯೂನಿಯನ್ ಒತ್ತಾಯಿಸಿವೆ.

ಈ ಕುರಿತು ಪ್ರಕಟಣೆ ನೀಡಿದ ಇಂಡಿಯನ್ ವೆಹಿಕಲ್ ಡ್ರೈವರ್ಸ್ ಟ್ರೇಡ್ ಯೂನಿಯನ್ ಅಧ್ಯಕ್ಷ ಗಂಡಸಿ ಸದಾನಂದ ಸ್ವಾಮಿ ಹಾಗೂ ಸ್ನೇಹಜೀವಿ ಚಾಲಕರ ಟ್ರೇಡ್ ಯೂನಿಯನ್ ಅಧ್ಯಕ್ಷ ಸಂತೋಷ್ ಕುಮಾರ್ ಮತ್ತು ಪ್ರಧಾನ ಕಾರ್ಯದರ್ಶಿ ರಾಜು ಕನ್ನಡಿಗ, ಬೆಂಗಳೂರು ಘನ ತ್ಯಾಜ್ಯ ನಿರ್ವಹಣಾ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಆಟೋ ಮತ್ತು ಲಾರಿ ಚಾಲಕರು ಹಾಗೂ ಸಹಾಯಕರ ಆರೋಗ್ಯ ದಿನೇದಿನೇ ಹದಗೆಡುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ಸಂಬಂಧಿತ ಅಧಿಕಾರಿಗಳು ಈ ವಿಚಾರದಲ್ಲಿ ನಿರ್ಲಕ್ಷ್ಯ ತೋರಿಸುತ್ತಿದ್ದು, ಕಸ ಗುತ್ತಿಗೆದಾರರು ಸಹ ಕಾರ್ಮಿಕರ ಆರೋಗ್ಯ ರಕ್ಷಣೆಗೆ ತಕ್ಕ ಪ್ರಾಮುಖ್ಯತೆ ನೀಡುತ್ತಿಲ್ಲ ಎಂದು ಆರೋಪಿಸಿದರು.
ಕಸ ವಿಂಗಡಣೆ ವೇಳೆ ಕೈಯಿಂದಲೇ ಕೆಲಸ ನಿರ್ವಹಿಸುವ ಚಾಲಕರು ಮತ್ತು ಸಹಾಯಕರಿಗೆ ಸೂಜಿ, ಬ್ಲೇಡ್ ಸೇರಿದಂತೆ ಅಪಾಯಕಾರಿ ವಸ್ತುಗಳಿಂದ ಗಾಯಗಳಾಗುತ್ತಿವೆ. ದುರ್ವಾಸನೆ ಮತ್ತು ಧೂಳಿನ ಪರಿಣಾಮವಾಗಿ ಚರ್ಮ ಸಂಬಂಧಿತ ಕಾಯಿಲೆಗಳು ಹೆಚ್ಚುತ್ತಿವೆ ಎಂದು ಅವರು ವಿವರಿಸಿದರು.
ಇದರಿಂದಾಗಿ ಕಾರ್ಮಿಕರಿಗೆ ಆರೋಗ್ಯ ವಿಮೆ ಸೌಲಭ್ಯ ಕಲ್ಪಿಸುವುದರ ಜೊತೆಗೆ ಮುಖಾವರಣ, ಕೈಗವಸು, ಬೂಟುಗಳು, ಸ್ಯಾನಿಟೈಸರ್ ಹಾಗೂ ಸಮವಸ್ತ್ರವನ್ನು ಉಚಿತವಾಗಿ ನೀಡಬೇಕು ಎಂದು ಆಗ್ರಹಿಸಿದರು. ಜೊತೆಗೆ ಅಪಘಾತಗಳು ಅಥವಾ ಆರೋಗ್ಯ ಹಾನಿ ಸಂಭವಿಸಿದಲ್ಲಿ ಸಮರ್ಪಕ ಪರಿಹಾರ ನೀಡಬೇಕು ಎಂದು ತಿಳಿಸಿದರು.
ನಗರದಲ್ಲಿ ಸುಮಾರು 8 ಸಾವಿರಕ್ಕೂ ಹೆಚ್ಚು ಮಹಿಳಾ ಪೌರ ಕಾರ್ಮಿಕರು ಸೇರಿದಂತೆ ಚಾಲಕರು ಮತ್ತು ಸಹಾಯಕರು ಶ್ರಮಿಸುತ್ತಿದ್ದು, ಅವರ ಸೇವೆಯನ್ನು ಗುರುತಿಸಿ ಸರ್ಕಾರವು ‘ಸ್ವಚ್ಛತಾ ಸೇವಾರತ್ನ’ ಪ್ರಶಸ್ತಿಯನ್ನು ನೀಡಿ ಗೌರವಿಸಬೇಕು ಎಂದು ಮನವಿ ಮಾಡಿದ್ದಾರೆ.
City Today News 9341997936

You must be logged in to post a comment.