ಅಕ್ಟೋಬರ್ 9, 2024 ರಂದು ಬಹುಜನ ನಾಯಕರಾದ ಮಾನ್ಯವಾರ್ ಕಾನ್ಶಿ ರಾಮ್  ಸಾಹೇಬರ 18ನೇ ಪರಿನಿಬ್ಬಾಣ ದಿನವನ್ನು ಬಹುಜನ ಸಮಾಜದ ದೃಢಸಂಕಲ್ಪ ದಿನವನ್ನಾಗಿ ಎಲ್ಲಾ ತಾಲ್ಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ನಡೆಸಲಾಗುತ್ತದೆ.

ಕಳೆದ 40-50 ವರ್ಷಗಳಿಂದ ಪರಿಶಿಷ್ಟ ಜಾತಿಯ ಪಟ್ಟಿಯೊಳಗೆ ವರ್ಗೀಕರಣವನ್ನು ಜಾರಿಗೆ ತರಲು ಒತ್ತಾಯಿಸಿ ಪಂಜಾಬ್, ಹರಿಯಾಣ, ತಮಿಳುನಾಡು, ಆಂಧ್ರಪ್ರದೇಶ ಮತ್ತು ಕರ್ನಾಟಕ ರಾಜ್ಯಗಳಲ್ಲಿ, ಅವಕಾಶವಂಚಿತ ಪರಿಶಿಷ್ಟ ಜಾತಿಗಳು ಹೋರಾಡುತ್ತಲೇ ಇವೆ. ಅನೇಕ ರಾಜ್ಯಗಳಲ್ಲಿ ಆಯಾ ಸರ್ಕಾರಗಳು ನೇಮಿಸಿದ್ದ ಆಯೋಗಗಳು ಆಯಾ ರಾಜ್ಯ ಸರ್ಕಾರಗಳಿಗೆ ವರದಿಗಳನ್ನು ಸಲ್ಲಿಸಿ. ವರ್ಗಿಕರಣಕ್ಕೆ ಶಿಫಾರಸು ಮಾಡಿವೆ. ಆದರೆ. ಇ.ವಿ.ಚಿನ್ನಯ್ಯ V/s ಆಂಧ್ರಪ್ರದೇಶ ಸರ್ಕಾರ ಪ್ರಕರಣದಲ್ಲಿ, “ವರ್ಗೀಕರಣದಿಂದಾಗಿ ಸಂವಿಧಾನದ ಉಲ್ಲಂಘನೆಯಾಗುತ್ತದೆ” ಎಂದು ಸುಪ್ರಿಂಕೋರ್ಟ್ ತೀರ್ಪು ನೀಡಿದ ಪ್ರಯುಕ್ತ, ಈ ಶಿಫಾರಸುಗಳು ಜಾರಿಯಾಗಲಿಲ್ಲ. ಆದರೆ, ಆಗಸ್ಟ್ 1, 2024 ರಂದು ಏಳು ನ್ಯಾಯಧೀಶರ ಪೂರ್ಣಪೀಠವು “ಒಳಮೀಸಲಾತಿ ನೀತಿಯು ಸಂವಿಧಾನ ಬದ್ಧವಾಗಿದೆ” ಎಂದು ಹೇಳಿದ್ದಲ್ಲದೆ, ಎಸ್‌ಸಿ ಮೀಸಲಾತಿಯಲ್ಲಿ ವರ್ಗೀಕರಣ ಮಾಡಲು ರಾಜ್ಯ ಸರ್ಕಾರಗಳಿಗೆ ಅಧಿಕಾರವನ್ನೂ ನೀಡಿತು. ಈ ತೀರ್ಪಿನ ವಿರುದ್ಧ ಕೆಲವರು ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಗಳನ್ನು 4.10.2024 ರಂದು ಸನ್ಮಾನ್ಯ ಸುಪ್ರಿಂಕೋರ್ಟ್ ವಜಾಮಾಡಿದೆ. ಅಂದರೆ, ಇಲ್ಲಿಯತನಕ ಇದ್ದಂತಹ ಎಲ್ಲಾ ಅಡ್ಡಿಗಳು ಇದೀಗ ನಿವಾರಣೆಯಾಗಿವೆ. ಈಗ ರಾಜ್ಯ ಸರ್ಕಾರಗಳು ಯಾವುದೇ ಸಬೂಬು ಹೇಳದೆ ಒಳಮೀಸಲಾತಿಯನ್ನು ಜಾರಿಗೆ ತರಲು ಕೂಡಲೇ ಕಾರ್ಯೋನ್ಮುಖವಾಗಬೇಕಿದೆ.


ಒಳಮೀಸಲಾತಿಯನ್ನು ತಕ್ಷಣವೇ ಜಾರಿಗೆ ತರಲು ಕರ್ನಾಟಕ ರಾಜ್ಯದಲ್ಲಿ, ಅತ್ಯಂತ ಸೂಕ್ತವಾದ ವಾತಾವರಣವು ನಿರ್ಮಾಣವಾಗಿದೆ. ಒಳಮೀಸಲಾತಿಯ ತೀರ್ಪನ್ನು ಎಸ್‌ಸಿ ಪಟ್ಟಿಯೊಳಗಿನ ಬಹುತೇಕ ಉಪಜಾತಿಗಳು ಸ್ವಾಗತಿಸಿವೆ. ಆದರೂ ಒಂದೆರಡು ಉಪಜಾತಿಗಳು ಕ್ಷೀಣವಾಗಿ ವಿರೋಧ ವ್ಯಕ್ತಪಡಿಸಿವೆ. ಎಸ್‌ಸಿ ಪಟ್ಟಿಯೊಳಗಿನ ಎಲ್ಲಾ ಜಾತಿಗಳಿಗೆ, ಅವರವರ ಜನಸಂಖ್ಯೆಗೆ ಅನುಗುಣವಾಗಿ ಸೂಕ್ತ ಪ್ರಾತಿನಿಧ್ಯ ನೀಡುವುದರಲ್ಲಿ ಅವರಿಗೆ ಯಾವುದೇ ತಕರಾರು ಇರಲು ಸಾಧ್ಯವಿಲ್ಲ. ಆದರೆ, ನ್ಯಾ.ಸದಾಶಿವ ಆಯೋಗವು ನಡೆಸಿದ ಅಧ್ಯಯನದ ರೀತಿಯ ಬಗ್ಗೆ ಅವರುಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಾನ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಅವರುಗಳನ್ನು ಚರ್ಚೆಗೆ ಕರೆದು, ಅವರ ಅನುಮಾನಗಳನ್ನು ಶೀಘ್ರವೇ ಪರಿಹರಿಸಬೇಕು. ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರ್‌ರ 68ನೇ ಪರಿನಿಬ್ಬಾಣದ ದಿನವಾದ ಡಿಸೆಂಬರ್ 6, 2024ರೊಳಗೆ ಸುಪ್ರಿಂಕೋರ್ಟ್ ತೀರ್ಪನ್ನು ಜಾರಿಮಾಡಲು ಕ್ರಮ ಕೈಗೊಳ್ಳಬೇಕೆಂದು ನಾವು ಸರ್ಕಾರವನ್ನು ಒತ್ತಾಯಿಸುತ್ತೇವೆ.


ಒಳಮೀಸಲಾತಿ ತೀರ್ಪನ್ನು ನೀಡಿದಾಗ. ಮಾನ್ಯ ಸುಪ್ರಿಂಕೋರ್ಟ್ ನ್ಯಾಯಾಧೀಶರುಗಳು ಜಾತಿಗಳ ದತ್ತಾಂಶವನ್ನು ವೈಜ್ಞಾನಿಕ ರೀತಿಯಲ್ಲಿ ಸಂಗ್ರಹಿಸಿ. ವರ್ಗೀಕರಣವನ್ನು ಅನುಷ್ಠಾನಕ್ಕೆ ತರಬೇಕೆಂದು ಹೇಳಿದ್ದಾರೆ. ಇತರೆ ರಾಜ್ಯಗಳಲ್ಲಿ ಅಂತಹ ದತ್ತಾಂಶ ಸಂಗ್ರಹಣೆ ನಡೆದಿಲ್ಲದಿರಬಹುದು. ಆದರೆ ಕರ್ನಾಟಕದಲ್ಲಿ. 2015 ರಲ್ಲಿ ಕಾಂತರಾಜ ಆಯೋಗವು ಅತ್ಯಂತ ವೈಜ್ಞಾನಿಕವಾಗಿ ಎಲ್ಲಾ ಜಾತಿಗಳ ದತ್ತಾಂಶ ಸಂಗ್ರಹಿಸಿ ತನ್ನ ವರದಿಯನ್ನು ನೀಡಿದೆ. ಈ ವರದಿಯಲ್ಲಿ ಪ್ರತಿಯೊಂದು ಜಾತಿಯ/ಸಮುದಾಯದ ಸಾಮಾಜಿಕ ಮತ್ತು ಆರ್ಥಿಕ ವಿವರಗಳನ್ನು ನೀಡಲಾಗಿದೆ. ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಯಾವುದೇ ಒತ್ತಡಕ್ಕೂ ಮಣಿಯದೆ, ಕಾಂತರಾಜ ಆಯೋಗದ ಈ ವರದಿಯನ್ನು ಅಂಗೀಕರಿಸಬೇಕೆಂದು ನಾವು ಒತ್ತಾಯಿಸುತ್ತೇವೆ.

ಸನ್ಮಾನ್ಯ ನಾಲ್ವಡಿಕೃಷ್ಣರಾಜ ಒಡೆಯರ್ ಕಾಲದಲ್ಲಿ ನೇಮಿಸಲ್ಪಟ್ಟ ಮಿಲ್ಲರ್ ಆಯೋಗವು 1921ರಲ್ಲಿ ನೀಡಿದ ವರದಿಯ ಪ್ರಕಾರ ಬ್ರಾಹ್ಮಣೇತರ ಜಾತಿಗಳಿಗೆ 75% ಮೀಸಲಾತಿಯು ಜಾರಿಯಾಯಿತು. ಅಂದು ಆ ಮೀಸಲಾತಿಯ ಸಂಪೂರ್ಣ ಲಾಭ ಪಡೆದ ಒಕ್ಕಲಿಗ, ಅಂಗಾಯಿತ, ರೆಡ್ಡಿ, ನಾಯ್ಡುಗಳು ಇಂದು ಎಲ್ಲಾ ಕ್ಷೇತ್ರಗಳಲ್ಲೂ ಅಧಿಕ ಮತ್ತು ಅತ್ಯುನ್ನತ ಸ್ಥಾನಗಳನ್ನು ಆಕ್ರಮಿಸಿಕೊಂಡಿದ್ದಾರೆ. ಆದರೆ, ಆ ಮೀಸಲಾತಿಯ ಈ ಫಲಾನುಭವಿಗಳು ಇತರೆ ಹಿಂದುಳಿದ ವರ್ಗಗಳಿಗೆ, ಅಲ್ಪಸಂಖ್ಯಾತರಿಗೆ ಮತ್ತು ಎಸ್‌ಸಿ/ಎಸ್‌ಟಿಗಳಿಗೆ ಮೀಸಲಾತಿ ನೀಡುವುದನ್ನು ವಿರೋಧಿಸುತ್ತಿದ್ದಾರೆ ಮತ್ತು ಜಾತಿ ಜನಗಣತಿಯ ವರದಿಯನ್ನು ಅಂಗೀಕರಿಸದಿರಲು ಮಾನ್ಯ ಮುಖ್ಯಮಂತ್ರಿಗಳನ್ನು ಒತ್ತಾಯಿಸುತ್ತಿದ್ದಾರೆ. ಆದರೆ, ಅಹಿಂದ ವರ್ಗಗಳ ನಾಯಕರೆನಿಸಿಕೊಂಡಿರುವ ಮಾನ್ಯ ಸಿದ್ಧರಾಮಯ್ಯನವರು ಈ ಪ್ರಬಲ ಜಾತಿಗಳ ಯಾವುದೇ ಒತ್ತಡಕ್ಕೂ ಮಣಿಯದೆ. ಈ ತಿಂಗಳೊಳಗೆ ವಿಶೇಷ ಅಧಿವೇಶನವನ್ನು ಕರೆದು ಕಾಂತರಾಜ್ ಆಯೋಗದ ವರದಿಯನ್ನು ವಿಧಾನಸಭೆಯಲ್ಲಿ ಮಂಡಿಸಿ ಅಂಗೀಕರಿಸಬೇಕು.

ಒಳಮೀಸಲಾತಿ ಜಾರಿ ಮಾಡುವುದನ್ನು ಮತ್ತು ಕಾಂತರಾಜ್ ಆಯೋಗದ ವರದಿಯನ್ನು ಅಂಗೀಕರಿಸುವುದನ್ನು ಮಾನ್ಯ ಮುಖ್ಯಮಂತ್ರಿಗಳು ನಿರ್ಲಕ್ಷಿಸಿದರೆ ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿಯ ವತಿಯಿಂದ ರಾಜ್ಯದಾದ್ಯಂತ ಬೃಹತ್ ಹೋರಾಟವನ್ನು ಹಮ್ಮಿಕೊಳ್ಳಬೇಕಾಗುತ್ತದೆ.

ಅಕ್ಟೋಬರ್ 9, 2024 ರಂದು ಬಹುಜನ ನಾಯಕರಾದ ಮಾನ್ಯವಾರ್ ಕಾನ್ಶಿ ರಾಮ್ ಸಾಹೇಬರ 18ನೇ ಪರಿನಿಬ್ಬಾಣ ದಿನವನ್ನು ಬಹುಜನ ಸಮಾಜದ ದೃಢಸಂಕಲ್ಪ ದಿನವನ್ನಾಗಿ ಎಲ್ಲಾ ತಾಲ್ಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ನಡೆಸಲಾಗುತ್ತದೆ ಎಂದು ಮುಕಾಂಡರುಗಳಾದ ಮಾರಸಂದ್ರ ಮುನಿಯಪ್ಪ-ರಾಜ್ಯಾಧ್ಯಕ್ಷರು,ಎಂ.ಗೋಪಿನಾಥ್-ರಾಷ್ಟ್ರೀಯ ಸಂಯೋಜಕರು ಹಾಗೂ ಆ‌ರ್. ಮುನಿಯಪ್ಪ ರಾಜ್ಯ ಸಂಯೋಜಕರು ರವರುಗಳ ಸಮ್ಮುಖದಲ್ಲಿ ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

City Today News 9341997936