
ಕರ್ನಾಟಕ ಸರ್ಕಾರದ ಅಧೀನ ಸಂಸ್ಥೆಯಾದ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯು ಹೊರಡಿಸಿರುವ ಭೂ-ಸ್ವಾಧೀನ ಆದೇಶವು ನಮ್ಮ ತಾಲ್ಲೂಕಿನ ರೈತರಲ್ಲಿ ದೊಡ್ಡ ಆತಂಕವನ್ನುಂಟುಮಾಡಿದೆ. ಕೃಷಿಯನ್ನೇ ಆಧಾರವಾಗಿಸಿಕೊಂಡು ಜೀವನ ನಡೆಸುತ್ತಿರುವ ಲಕ್ಷಾಂತರ ರೈತರ ಬದುಕುಗಳಿಗೆ ದೊಡ್ಡ ಸಂಕಷ್ಟವನ್ನು ತಂದೊಡ್ಡಲಿದೆ. ರೈತರ ಬಾಳು ಬೀದಿಗೆ ಬೀಳುವ ಆತಂಕ ಶುರುವಾಗಿದೆ. ಕೃಷಿ ಭೂಮಿಗಳನ್ನು ಸ್ವಾಧೀನಪಡಿಸಿಕೊಂಡು ಅಲ್ಲಿ ಕೈಗಾರಿಕೆಗಳನ್ನು ನಿರ್ಮಿಸಿ, ಇಲ್ಲಿನ ಮೂಲ ಕೃಷಿಕರು ಗುಳೆ ಹೋಗುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ತಲತಲಾಂತರಗಳಿಂದ ವಾಸವಾಗಿರುವ ಇಲ್ಲಿನ ಮೂಲ ನಿವಾಸಿಗಳಾದ ದಲಿತರು, ವಕ್ಕಲಿಗರು, ರೆಡ್ಡಿಗರು ಇತರೆ ಜನಾಂಗದವರನ್ನು ಒಕ್ಕಲೆಬ್ಬಿಸಿ ಅನ್ಯ ರಾಜ್ಯಗಳ ನಿವಾಸಿಗಳನ್ನು ತಂದಿರಿಸುವ ಕೆಲಸವನ್ನು ಇಲ್ಲಿನ ಸರ್ಕಾರ ಮಾಡುತ್ತಿದೆ.
ಈಗಾಗಲೇ ನಮ್ಮ ತಾಲ್ಲೂಕಿನಲ್ಲಿರುವ 6 ಕೈಗಾರಿಕಾ ವಲಯಗಳು, 4 ಕರ್ನಾಟಕ ಗೃಹ ಮಂಡಳಿಯ ವಲಯಗಳು, 2 ಐ.ಟಿ.ಹಬ್‌ಗಳಿಂದಾಗಿ ಅಪಾರವಾದ ಕೃಷಿ ಭೂಮಿ ನಷ್ಟ, ಅಂತರ್ಜಲ ಕುಸಿತ, ಪರಿಸರ ಮಾಲಿನ್ಯ, ಕುಡಿಯುವ ನೀರಿನ ಅಭಾವ, ಸಾಮಾಜಿಕ ಅಭದ್ರತೆ, ಜನಸಂಖ್ಯಾ ಸ್ಪೋಟದಂತಹ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಕೃಷಿ ಭೂಮಿ ಕಳೆದುಕೊಂಡ ಹಲವಾರು ರೈತರು ಬೀದಿಗೆ ಬಿದ್ದಾಗಿದೆ. ಇದೇ ರೀತಿ ಮುಂದುವರೆದರೆ ನಮ್ಮ ಮುಂದಿನ ಪೀಳಿಗೆಗೆ ತಾಲ್ಲೂಕಿನ ರೈತಾಪಿ ವರ್ಗವನ್ನು ನೋಡಲು ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ.
ಆದ್ದರಿಂದ ಸರ್ಕಾರ ಹೊರಡಿಸಿರುವ ಇಂತಹ ಅವೈಜ್ಞಾನಿಕ ಹಾಗೂ ಅಕ್ರಮ ಆದೇಶದ ವಿರುದ್ಧ ನಾವು ಮುಂಚಿತವಾಗಿಯೇ ಎಚ್ಚೆತ್ತುಕೊಳ್ಳಬೇಕಿದೆ. ನಮ್ಮ ನೆಲ ಜಲವನ್ನು, ನಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಕೂಡಲೇ ಹೋರಾಟಗಳನ್ನು ಮಾಡಬೇಕಿದೆ. ಅದಕ್ಕೆ ಪೂರಕವಾಗಿ ಇದೇ 04 ಜನವರಿ 2025 ರ ಶನಿವಾರದಂದು ಆನೇಕಲ್ ತಾಲ್ಲೂಕಿನ ರೈತರ ಬೃಹತ್ ಸಮಾವೇಶವನ್ನು ಏರ್ಪಡಿಸಲಾಗಿದೆ.
ಆದ್ದರಿಂದ ತಾಲ್ಲೂಕಿನ ಎಲ್ಲಾ ರೈತ ಬಾಂಧವರು, ಹಿರಿಯ ಮುಖಂಡರು, ಸಂಘ ಸಂಸ್ಥೆಗಳ ಮುಖಂಡರು, ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸರ್ಕಾರಕ್ಕೆ ನಮ್ಮ ಐಕ್ಯತೆಯನ್ನು ಪ್ರದರ್ಶಿಸಬೇಕಿದೆ. ಈ ಮೂಲಕ ನಾವು ಯಾವುದೇ ಕಾರಣಕ್ಕೂ ಒಂದಿಂಚೂ ಭೂಮಿಯನ್ನು ಬಿಟ್ಟುಕೊಡುವುದಿಲ್ಲ ಎಂಬ ಸಂದೇಶವನ್ನು ಸರ್ಕಾರಕ್ಕೆ ರವಾನಿಸಬೇಕಿದೆ. ಆದ್ದರಿಂದ ಆನೇಕಲ್ ತಾಲ್ಲೂಕಿನ ಎಲ್ಲಾ ನಾಗರೀಕರು ಹಾಗೂ ರೈತ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸೋಣ ಎಂದು ಅನೇಕಲ್ ತಾಲ್ಲೂಕು ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ವತಿಯಿಂದ ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ತಿಳಿಸಿದರು.
“ಬೃಹತ್ ರೈತ ಸಮಾವೇಶ”
ದಿನಾಂಕ: 04-01-2025, ಶನಿವಾರ. ಸಮಯ: ಬೆಳಗ್ಗೆ 10.00 ಗಂಟೆಗೆ
ಸ್ಥಳ : ಎಸ್.ವಿ.ಪಿ ಕಾಲೇಜು ಮೈದಾನ, ಸರ್ಜಾಪುರ ಸರ್ಕಲ್
ಬಾಗವಹಿಸುವವರು :
ಡಾ|| ಸಿ.ಎನ್.ಮಂಜುನಾಥ್, ಸಂಸದರು, ಬೆಂ.ಗ್ರಾ.ಲೋಕಸಭಾ ಕ್ಷೇತ್ರ
ಶ್ರೀ ಬಿ.ಶಿವಣ್ಣ, ಶಾಸಕರು, ಆನೇಕಲ್ ವಿಧಾನಸಭಾ ಕ್ಷೇತ್ರ
ಶ್ರೀ ಗೋಪಿನಾಥರೆಡ್ಡಿ, ವಿಧಾನಪರಿಷತ್ ಸದಸ್ಯರು, ಬೆಂ.ನಗರ
ಶ್ರೀ ಡಿ.ಕೆ.ಸುರೇಶ್, ಮಾಜಿ ಸಂಸದರು, ಬೆಂ.ಗ್ರಾ.ಲೋಕಸಭಾ ಕ್ಷೇತ
ಶ್ರೀ ಎ.ನಾರಾಯಣಸ್ವಾಮಿ, ಮಾಜಿ ಸಂಸದರು, ಚಿತ್ರದುರ್ಗ ಲೋಕಸಭಾ ಕ್ಷೇತ
ಡಾ|| ಯಲ್ಲಪ್ಪರೆಡ್ಡಿ, ಪರಿಸರವಾದಿಗಳು.

City Today News 9341997936

You must be logged in to post a comment.