ಬೆಂಗಳೂರು, ಡಿ.23: ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಕೋಗಿಲು ಬಡಾವಣೆಯಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಅಧಿಕಾರಿಗಳ ಸಂವಿಧಾನ ವಿರೋಧಿ ಕ್ರಮಗಳಿಂದ ಮನೆ ಕಳೆದುಕೊಂಡ 400ಕ್ಕೂ ಹೆಚ್ಚು ಕುಟುಂಬಗಳಿಗೆ ಅದೇ ಸ್ಥಳದಲ್ಲಿ ಶಾಶ್ವತ ಮನೆಗಳನ್ನು ನಿರ್ಮಿಸಿಕೊಡಬೇಕು ಎಂದು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.

ಮಂಗಳವಾರ ಬಿಡುಗಡೆ ಮಾಡಿದ ಪತ್ರಿಕಾ ಹೇಳಿಕೆಯಲ್ಲಿ ಸಮಿತಿಯ ಕಾರ್ಯದರ್ಶಿ ಕುಮಾರ್ ಸಮತಳ ಅವರು, ಬೆಂಗಳೂರು ಉತ್ತರ ತಾಲ್ಲೂಕಿನ ಯಲಹಂಕ ಹೋಬಳಿಯ ಕೋಗಿಲು ಗ್ರಾಮದ ಸರ್ವೇ ನಂಬರ್ 99ರ ಸರ್ಕಾರಿ ಭೂಮಿಯಲ್ಲಿ ದಲಿತರು, ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ವರ್ಗಗಳಿಗೆ ಸೇರಿದ ವಸತಿ ರಹಿತ ಕುಟುಂಬಗಳು 25–30 ವರ್ಷಗಳಿಂದ ನೆಲೆಸಿದ್ದವು ಎಂದು ತಿಳಿಸಿದ್ದಾರೆ. ಸ್ಥಳ ಮಂಜೂರಿಗಾಗಿ 94ಸಿ ಕಲಂ ಅಡಿಯಲ್ಲಿ ಅರ್ಜಿ ಸಲ್ಲಿಸಿ, ಸರ್ಕಾರದಿಂದ ತಾತ್ಕಾಲಿಕ ಹಕ್ಕುಪತ್ರಗಳನ್ನೂ ಪಡೆದಿದ್ದರು. ಆದರೆ ಯಾವುದೇ ಮುನ್ಸೂಚನೆ ಇಲ್ಲದೆ ಆ ಹಕ್ಕುಪತ್ರಗಳನ್ನು ರದ್ದುಗೊಳಿಸಿ, ಮೂರು ತಿಂಗಳ ಮುಂಚಿತ ನೋಟಿಸ್ ನೀಡದೇ ಏಕಾಏಕಿ ತೆರವು ಕಾರ್ಯಾಚರಣೆ ನಡೆಸಲಾಗಿದೆ ಎಂದು ಆರೋಪಿಸಿದ್ದಾರೆ.
ಬಡ ಕುಟುಂಬಗಳು ಕೂಲಿ ಕೆಲಸದಿಂದ ಸಂಗ್ರಹಿಸಿದ್ದ ಆಹಾರ, ಬಟ್ಟೆ ಮತ್ತು ಗೃಹೋಪಯೋಗಿ ವಸ್ತುಗಳನ್ನು ತೆಗೆದುಕೊಳ್ಳಲು ಕೂಡ ಅವಕಾಶ ನೀಡದೇ ಪೊಲೀಸ್ ಬಲದೊಂದಿಗೆ ಮನೆಗಳನ್ನು ಧ್ವಂಸ ಮಾಡಲಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಕಂದಾಯ ಸಚಿವರ ಸ್ವಕ್ಷೇತ್ರದಲ್ಲೇ ಇಂತಹ ಅಮಾನವೀಯ ಘಟನೆ ನಡೆದಿರುವುದು ದುಃಖಕರ ಎಂದು ಅವರು ಹೇಳಿದರು.
ತೆರವು ಕಾರ್ಯಾಚರಣೆಯಿಂದ ವಸತಿ ಕಳೆದುಕೊಂಡ ಎಲ್ಲ ಕುಟುಂಬಗಳಿಗೆ ತಕ್ಷಣವೇ ವಾಸಯೋಗ್ಯ ತಾತ್ಕಾಲಿಕ ಶೆಡ್‌ಗಳು, ಮೂಲಭೂತ ಸೌಕರ್ಯಗಳು ಹಾಗೂ ಪ್ರತಿ ತಿಂಗಳು ಅಗತ್ಯ ಆಹಾರ ಸಾಮಗ್ರಿಗಳನ್ನು ಸರ್ಕಾರವೇ ಪೂರೈಸಬೇಕು ಎಂದು ಸಮಿತಿ ಒತ್ತಾಯಿಸಿದೆ.
City Today News 9341997936

You must be logged in to post a comment.