
ಬೆಂಗಳೂರು, ಮಾರ್ಚ್ 24, 2026:
ಪ್ರೆಸ್ ಕ್ಲಬ್ ಆಫ್ ಬೆಂಗಳೂರುದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪ್ರಾಚೀನ ಆರೋಗ್ಯ ಪರಂಪರೆ ಸಂರಕ್ಷಣಾ ಟ್ರಸ್ಟ್ (ರಿ), ಬೆಂಗಳೂರು ವತಿಯಿಂದ ಭಾರತದೆಲ್ಲೆಡೆ ಪ್ರಸಿದ್ಧಿ ಪಡೆದ ಪಾರಂಪರಿಕ ಚಿಕಿತ್ಸಾ ಪದ್ಧತಿಗಳ ಸಂರಕ್ಷಣೆ ಮತ್ತು ಪ್ರಚಾರದ ಉದ್ದೇಶದಿಂದ ಎರಡು ದಿನಗಳ “ಪ್ರಾಚೀನ ಆರೋಗ್ಯ ಪರಂಪರಾ ವೈದ್ಯ ಸಂಗಮ” ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ ಎಂದು ಘೋಷಿಸಲಾಯಿತು.
ಈ ಕಾರ್ಯಕ್ರಮವು ಏಪ್ರಿಲ್ 1 ಮತ್ತು 2, 2026 ರಂದು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಗೇರುಸೊಪ್ಪದಲ್ಲಿ, ಶ್ರೀ ಕ್ಷೇತ್ರ ಬಂಗಾರ ಮಕ್ಕಿ ಸೆಲೆಕ್ಟ್ ಫೌಂಡೇಶನ್ ಸಹಯೋಗದಲ್ಲಿ ನಡೆಯಲಿದೆ. ಮೊದಲ ದಿನ ವೈದ್ಯರ ಸಮ್ಮೇಳನ ನಡೆಯಲಿದ್ದು, ವಿವಿಧ ಪಾರಂಪರಿಕ ಚಿಕಿತ್ಸಾ ಪದ್ಧತಿಗಳನ್ನು ಅನುಸರಿಸುವ ವೈದ್ಯರು ಒಂದೇ ವೇದಿಕೆಯಲ್ಲಿ ಸೇರಲಿದ್ದಾರೆ. ಎರಡನೇ ದಿನ ಸಾರ್ವಜನಿಕರಿಗಾಗಿ ಉಚಿತ ಆರೋಗ್ಯ ತಪಾಸಣೆ ಹಾಗೂ ಔಷಧ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಸಂಸ್ಥೆಯ ಪ್ರತಿನಿಧಿಗಳು ಮಾತನಾಡಿ, ಪ್ರಾಚೀನ ಆರೋಗ್ಯ ಪರಂಪರೆಗಳಾದ ಮನೆಮದ್ದು, ಜನಪದ ವೈದ್ಯ, ನಾಟಿ ವೈದ್ಯ, ಪಶುವೈದ್ಯ, ಗಿಡಮೂಲಿಕೆ ವೈದ್ಯ, ವಿಷ ವೈದ್ಯ, ಮೂಳೆ ವೈದ್ಯ, ಯೋಗ, ಯುನಾನಿ, ಆಯುರ್ವೇದ, ಸಿದ್ಧ ವೈದ್ಯ, ಅಕ್ಯುಪ್ರೆಶರ್, ಅಕ್ಯುಪಂಕ್ಚರ್, ಸಂಮೋಹನ ಚಿಕಿತ್ಸೆ, ಸುಗಂಧ ದ್ರವ್ಯ ಚಿಕಿತ್ಸೆ, ಮಸಾಜ್, ತೈಲ ಚಿಕಿತ್ಸೆ, ನಾಭಿ ಚಿಕಿತ್ಸೆ, ಪಾದ ಚಿಕಿತ್ಸೆ, ಜಲ ಚಿಕಿತ್ಸೆ, ಪಂಚಕರ್ಮ, ವರ್ಮಾ ಚಿಕಿತ್ಸೆ ಸೇರಿದಂತೆ ಅನೇಕ ವಿಧಾನಗಳನ್ನು ಉಳಿಸಿ ಬೆಳೆಸುವುದು ಟ್ರಸ್ಟ್‌ನ ಪ್ರಮುಖ ಧ್ಯೇಯವಾಗಿದೆ ಎಂದು ತಿಳಿಸಿದರು.
ಈ ಹಿನ್ನೆಲೆಯಲ್ಲಿ ಪಾರಂಪರಿಕ ವೈದ್ಯರನ್ನು ಗುರುತಿಸಿ ಗೌರವಿಸುವ ಉದ್ದೇಶದಿಂದ “ಪ್ರಾಚೀನ ವೈದ್ಯರತ್ನ ಪ್ರಶಸ್ತಿ” ಪ್ರದಾನ ಮಾಡಲಾಗುತ್ತದೆ. ರಾಜ್ಯದ ಮೂವರು ಗಣ್ಯ ವೈದ್ಯರನ್ನು ಆಯ್ಕೆ ಮಾಡಲಾಗಿದ್ದು, ಪ್ರತಿಯೊಬ್ಬರಿಗೆ ರೂ. 10,000 ನಗದು, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆ ನೀಡಿ ಸನ್ಮಾನಿಸಲಾಗುತ್ತದೆ. ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.
ಕಾರ್ಯಕ್ರಮದಲ್ಲಿ ಭಾಗವಹಿಸುವ ಎಲ್ಲಾ ವೈದ್ಯರಿಗೆ ವಸತಿ ವ್ಯವಸ್ಥೆ ಕಲ್ಪಿಸಲಾಗಿದ್ದು, ಯಾವುದೇ ನೋಂದಣಿ ಅಥವಾ ಪ್ರವೇಶ ಶುಲ್ಕ ಇರುವುದಿಲ್ಲ ಎಂದು ಸಂಘಟಕರು ಸ್ಪಷ್ಟಪಡಿಸಿದರು.
ಸುಮಾರು 500ಕ್ಕೂ ಹೆಚ್ಚು ವೈದ್ಯರು ಭಾಗವಹಿಸುವ ನಿರೀಕ್ಷೆಯಿದ್ದು, ಇನ್ನಷ್ಟು ವೈದ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಆಯೋಜಕರು ಮನವಿ ಮಾಡಿದ್ದಾರೆ.
City Today News 9341997936

You must be logged in to post a comment.