ಜೀತ ಪದ್ಧತಿ ರದ್ದತಿ ಕಾನೂನು 1976ರ ಸಮರ್ಪಕ ಅನುಷ್ಠಾನದ ಕುರಿತು ಜೀವಿಕ ಹಾಗೂ ಕರ್ನಾಟಕ ಜೀತದಾಳು ಮತ್ತು ಕೃಷಿ ಕಾರ್ಮಿಕರ ಒಕ್ಕೂಟದಿಂದ ಫೆಬ್ರವರಿ 7ರಂದು ಫ್ರೀಡಂ ಪಾರ್ಕ್‌ ನಲ್ಲಿ ರಾಜ್ಯ ಮಟ್ಟದ ಜಾಗೃತಿ ಕಾರ್ಯಕ್ರಮ

ಜೀತ ಪದ್ಧತಿ ರದ್ದತಿ ಕಾನೂನು 1976ರ ಸಮರ್ಪಕ ಅನುಷ್ಠಾನದ ಕುರಿತು ಜೀವಿಕ ಹಾಗೂ ಕರ್ನಾಟಕ ಜೀತದಾಳು ಮತ್ತು ಕೃಷಿ ಕಾರ್ಮಿಕರ ಒಕ್ಕೂಟದಿಂದ ಫೆಬ್ರವರಿ 7ರಂದು ಫ್ರೀಡಂ ಪಾರ್ಕ್‌ ನಲ್ಲಿ ರಾಜ್ಯ ಮಟ್ಟದ ಜಾಗೃತಿ ಕಾರ್ಯಕ್ರಮವನ್ನು ನೆರವೇರಿಸಲಾಗುತ್ತಿದೆ.

ಜೀತ ಪದ್ಧತಿ ರದ್ದತಿ ಕಾನೂನು ಒಂದು ಉತ್ತಮ ಹಾಗೂ ವಿಶಿಷ್ಟ ಕಾನೂನು, ಜೀತ ಪದ್ಧತಿ ಮಾನವ ಹಕ್ಕುಗಳ ಘೋರ ಉಲ್ಲಂಘನೆಯಾದರೂ ಅದರ ನಿರ್ಮೂಲನೆಗೆ ಕಾನೂನು ಕೊಡುವ ಮೊದಲ ಆದ್ಯತೆ ಅವರನ್ನು ಬಿಡುಗಡೆ ಮಾಡಿ ಪುನರ್ವಸತಿಗೊಳಿಸುವುದು ಹಾಗೂ ಜೀತ ಬಂಧನಕ್ಕೆ ಅವರು ಪುನಃ ಸಿಕ್ಕಿಬೀಳದಂತೆ ಅವರಿಗೆ ಸಮಗ್ರ ಪುನರ್ವತಿಯನ್ನು ಕಲ್ಪಿಸುವುದು. ಅಪರಾಧಿಗಳಿಗೆ ಶಿಕ್ಷೆಯನ್ನು ಇವೆಲ್ಲಾ ಆದ ಮೇಲೆ ಡಿಸಿ/ಎಸಿಗಳೇ (ಕಾರ್ಯನಿರ್ವಾಹಕ ದಂಡಾಧಿಕಾರಿಗಳು) ಸಂಕ್ಷಿಪ್ತ ವಿಚಾರಣೆ (Summary Trial) ಮೂಲಕ ಕೊಡಬಹದೆಂದು ಕಾನೂನು ಸೂಚಿಸುತ್ತದೆ. ಆದರೆ ಕೇಂದ್ರ ಮತ್ತು ಕರ್ನಾಟಕ ಸರ್ಕಾರಗಳ ಜೀತ ಕುರಿತ SOP (ಮಾದರಿ ಕಾರ್ಯವಿಧಾನ)ಗಳು ಇವುಗಳಿಗೆ ವ್ಯತಿರಿಕ್ತವಾಗಿ ಅಧಿಕಾರಿಗಳಿಗೆ ನಿರ್ದೇಶನಗಳನ್ನು ನೀಡಿ ಕಾನೂನನ್ನು ತಿರುಚುವ ಕೆಲಸ ಮಾಡುತ್ತಿವೆ. FIR ಹಾಕಬೇಕೆಂಬ ನಿರ್ದೇಶನದಿಂದ ಒಂದು ಕಡೆ ಬಿಡುಗಡೆ ಪತ್ರ ಸಿಕ್ಕಿದ ಜೀತವಿಮುಕ್ತರಿಗೆ ಸಮಗ್ರ ಪುನರ್ವಸತಿ ಲಭ್ಯವಾಗುತ್ತಿಲ್ಲ. ಇವುಗಳ ಅಂಕಿಅಂಶಗಳನ್ನು ಕರಪತ್ರದಲ್ಲಿ ನೀಡಲಾಗಿದೆ. ಮಾತ್ರವಲ್ಲದೇ ಹಳ್ಳಿಗಳಲ್ಲಿಯ ವ್ಯವಸಾಯ ಕ್ಷೇತ್ರ, ರೇಷ್ಮೆ ಫ್ಯಾಕ್ಟರಿಗಳು, ಪ್ಲಾಂಟೇಶನ್‌ಗಳಲ್ಲಿರುವ ಜೀತದಾಳುಗಳು ಹಾಗೂ ಉತ್ತರ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಬಿಟ್ಟಿ ಚಾಕ್ರಿ ಮಾಡುವವರು ತಮ್ಮ ಬಿಡುಗಡೆಗೆ ಅರ್ಜಿ ಸಲ್ಲಿಸಲು ಮುಂದೆ ಬರುತ್ತಿಲ್ಲ. 2020ರಿಂದ ಒಬ್ಬ ಜೀತದಳುವೂ ಅರ್ಜಿ ಕೊಡಲು ತಿಳಿವಳಿಕೆ ಕೊಡಲು ಜೀವಿಕಕ್ಕೆ ಆಗುತ್ತಿಲ್ಲ!

ಕೇಂದ್ರ ಸರ್ಕಾರದ 2016ರ ಪುನರ್ವಸತಿ ಯೋಜನೆಯ ಸೆಕ್ಷನ್ 6.2 ಮತ್ತು 6.3ರಲ್ಲಿ ಕೇಂದ್ರದಿಂದ ಪರಿಹಾರ ರೂಪದ ಬಾಕಿ ಹಣ ನೀಡಬೇಕಾದರೆ ಅಪರಾಧಿಗಳಿಗೆ ನೀಡಿದ ಶಿಕ್ಷೆಯ ವರದಿ ಕೊಡಬೇಕೆಂಬ ಷರತ್ತು ಹಾಕಿರುವುದರಿಂದ ಕಾನೂನಿಗೆ ವಿರುದ್ಧವಾಗಿ ಪುನರ್ವಸತಿಯನ್ನು ಶಿಕ್ಷೆಯ ಜೊತೆಗೆ ತಾಳಹಾಕಲಾಗಿದೆ. ಇದರಿಂದ ಎಷ್ಟೋ ಮಂದಿ ಜೀತವಿಮುಕ್ತರು ಸಮಗ್ರ ಪುನರ್ವಸತಿಯಿಂದ ವಂಚಿತರಾಗುತ್ತಿದ್ದಾರೆ. ಕರ್ನಾಟಕ ಒಂದು ರಾಜ್ಯದಲ್ಲೇ ಅಂತಹ ಜೀತವಿಮುಕ್ತರು ಸುಮಾರು 2000 ಮಂದಿ ಇದ್ದಾರೆ. ತಾಲೂಕುವಾರು ವಿವರಗಳು ಕರಪತ್ರದಲ್ಲಿವೆ.

ಜೊತೆಗೆ ಅದೇ ಯೋಜನೆಯ ಸೆಕ್ಷನ್ 5ರ ಪ್ರಕಾರ ಶಿಕ್ಷೆ ವಿಧಿಸುವ ಮುಂಚೆಯೇ ಕರ್ನಾಟಕ ಸರ್ಕಾರವು ಒದಗಿಸಬೇಕಾಗಿದ್ದ ಸಮಗ್ರ ಪುನರ್ವಸತಿಯನ್ನು ಎಲ್ಲಾ ಜೀತವಿಮುಕ್ತರಿಗೆ ಕಲ್ಪಿಸಿದ್ದೇ ಆದರೆ ಜೀತವಿಮುಕ್ತರು ತಮ್ಮ ಜೀವನವನ್ನು ಉತ್ತಮವಾಗಿ ನಿರ್ವಹಿಸುವ ಸಾಮರ್ಥ್ಯವು ಅವರಿಗೆ ದಕ್ಕುತ್ತಿತ್ತು. ಆದರೆ ಆ ಯೋಜನೆಯನ್ವಯ ಕರ್ನಾಟಕ ಸರ್ಕಾರವು ಅಷ್ಟೂ ಮಂದಿಗೆ ಕೇಂದ್ರದ ಪರಿಹಾರ ಹಣದ ಜೊತೆಗೆ ಕಲ್ಪಿಸಬೇಕಾಗಿದ್ದ ಸಮಗ್ರ ಪುನರ್ವಸತಿಯನ್ನೂ ಇನ್ನೂ ಒದಗಿಸಿಲ್ಲ!

ಇವನ್ನೆಲ್ಲಾ ಪಡೆಯಲು ಕೇಂದ್ರ ಸರ್ಕಾರದ 2016ರ ಪುನರ್ವಸತಿ ಯೋಜನೆಯಲ್ಲಿಯ ಸೆಕ್ಷನ್ 6.2, 6.3ಗಳನ್ನು ಸೂಕ್ತವಾಗಿ ಮಾರ್ಪಡಿಸಬೇಕು. ಕೇಂದ್ರ ಮತ್ತು ಕರ್ನಾಟಕ ಸರ್ಕಾರದ SOPಗಳನ್ನು ಹಿಂಪಡೆದು ಹೊಸ SOPಗಳನ್ನು ಹೊರಡಿಸಬೇಕು.

ಕೇಂದ್ರದ ಪುನರ್ವಸತಿ ಯೋಜನೆಯ ಸಮಗ್ರ ಪುನರ್ವಸತಿಯ ಅಂಶಗಳ ಪ್ರಕಾರ ಎಲ್ಲಾ ಸೌಲಭ್ಯಗಳು ಜೀತವಿಮುಕ್ತರಿಗೆ ಶೀಘ್ರದಲ್ಲಿ ಸಿಗಬೇಕು. ಅದರ ಜೊತೆಗೆ ಎಲ್ಲಾ ಜೀತವಿಮುಕ್ತರಿಗೆ ಹಲವಾರು ರೀತಿಯ ಇತರ ಪೂರಕ ಸೌಭ್ಯಗಳೂ ಸಿಗಬೇಕು. ಅವುಗಳನ್ನು ಕರಪತ್ರದಲ್ಲಿ ವಿವರಿಸಲಾಗಿದೆ.

ಹಳ್ಳಿಗಳಲ್ಲಿರುವ ಪ್ರತಿ ಜೀತವಿಮುಕ್ತರಿಗೆ ಬಹು ಮುಖ್ಯವಾಗಿ ಸಿಗಬೇಕಾಗಿದ್ದು 5 ಎಕ್ರೆ ಜಮೀನು ಮತ್ತು ಒಳ್ಳೆಯ ಉತ್ಪನ್ನ ಸಿಗಲು ಎಲ್ಲಾ ಸೌಲಭ್ಯಗಳ ಪೂರೈಕೆ. ಜೊತೆಗೆ ಬಹುತೇಕ ಜೀತದಾಳುಗಳು ಅನುಸೂಚಿತ ಜಾತಿ ಮತ್ತು ಜನಾಂಗದವರಾಗಿದ್ದರಿಂದ ಸಮಾಜ ಕಲ್ಯಾಣ ಇಲಾಖೆಯಿಂದ ಅವರಿಗೆ ಒಂದು ವಿಶಿಷ್ಟ ಯೋಜನೆಯನ್ನು ರೂಪಿಸಿ ಕಾರ್ಯಗತಗೊಳಿಸಬೇಕು. ಇದಕ್ಕೋಸ್ಕರ ಸರ್ಕಾರದ ಮುಂದಿನ ಬಜೆಟ್‌ನಲ್ಲಿ 100 ಕೋಟಿಗಳನ್ನು ಮೀಸಲಿಡಬೇಕು. ಜೀತವಿಮುಕ್ತರಿಗೋಸ್ಕರ ಜೀತ ಸಮಸ್ಯೆ ಬಗ್ಗೆ ಕೆಲಸ ಮಾಡುತ್ತಿರುವ ಅನುಭವಿ ತಜ್ಞರಿಂದ ಕೂಡಿದ ರಾಜ್ಯ ಮಟ್ಟದಲ್ಲಿ ಒಂದು ಪ್ರತ್ಯೇಕ ಆಯೋಗ ರಚಿಸಬೇಕು ಎಂದು ಜೀವಿಕ ಹಾಗೂ ಕರ್ನಾಟಕ ಜೀತದಾಳು ಮತ್ತು ಕೃಷಿ ಕಾರ್ಮಿಕರ ಒಕ್ಕೂಟದಿಂದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಲಾಯಿತು.

ಪತ್ರಿಕಾ ಗೋಷ್ಠಿಯಲ್ಲಿ ಡಾ. ಕಿರಣ ಕಮಲ ಪ್ರಸಾದ,ಸಂಚಾಲಕರು – ಜೀವಿಕ,ಶ್ರೀಮತಿ ಪೂರ್ಣಿಮಾ ಮಧುಕುಮಾ‌ರ್, ಅಧ್ಯಕ್ಷರು – ವಿಮುಕ್ತಿ ಟ್ರಸ್ಟ್ ಮತ್ತು ರಾಮಸ್ವಾಮಿ, ರಾಜ್ಯ ಕಲಾ ಸಂಚಾಲಕರು ಉಪಸ್ತಿತಿಯಿದ್ದರು.

City Today News 9341997936