ಬೆಂಗಳೂರಿನ,ಉಮಾಮಣಿ ಕೆ.ಎಲ್ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ – ಅಂಗನವಾಡಿ ಕಾರ್ಯಕರ್ತೆಯರ ಹಕ್ಕು ಹೋರಾಟಕ್ಕೆ ಬಲ.

ಬೆಂಗಳೂರು, ಡಿಸೆಂಬರ್ 11, 2025:
ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸ್ವತಂತ್ರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಉಮಾಮಣಿ ಕೆ.ಎಲ್ (ಬೆಂಗಳೂರು) ಅವರು ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ, ಈ ಬಾರಿಯೂ ಮುಂದುವರೆಯುತಿರುವುದು ಸಂಘದಲ್ಲಿ ಹೊಸ ಉತ್ಸಾಹಕ್ಕೆ ಕಾರಣವಾಗಿದೆ. ಹಿಂದೆ ಜಿಲ್ಲಾಧ್ಯಕ್ಷೆಯ ಜೊತೆಗೆ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾಗಿಯೂ ಸೇವೆ ಸಲ್ಲಿಸಿದ್ದ ಉಮಾಮಣಿ, ಸಂಘಟನೆಗೆ ದೀರ್ಘಕಾಲದಿಂದ ನೀಡುತ್ತಿರುವ ನಿಷ್ಠೆ, ಹೋರಾಟ ಮತ್ತು ಸಂಘಟನಾ ಸಾಮರ್ಥ್ಯಕ್ಕಾಗಿ ರಾಜ್ಯದ ವಿವಿಧ ಭಾಗಗಳಿಂದ ಬಂದ ಪ್ರತಿನಿಧಿಗಳಿಂದ ಏಕಮತದಿಂದ ಆಯ್ಕೆಗೊಂಡರು.

ಬೆಂಗಳೂರಿನ ಭಾರತೀಯ ಸ್ಕೌಟ್ ಭವನದಲ್ಲಿ ನಡೆದ ಈ ಸಭೆಯಲ್ಲಿ ರಾಜ್ಯದ ಅನೇಕ ಜಿಲ್ಲೆಗಳ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಭಾಗವಹಿಸಿದ್ದು, ಸಂಘಟನೆಗೆ ಹೊಸ ಮಾರ್ಗದರ್ಶನ ನೀಡುವ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಯಿತು.

ಸಭೆಯಲ್ಲಿ ಬಿ. ಪ್ರೇಮಾ (ಶಿವಮೊಗ್ಗ) ಅವರನ್ನು ಹೊಸ ರಾಜ್ಯ ಅಧ್ಯಕ್ಷೆಯಾಗಿ ಆಯ್ಕೆ ಮಾಡಲಾಯಿತು. ಜೊತೆಗೆ –

ನಿರ್ಮಲಾ ಹರಿಹರ ಉಪಾಧ್ಯಕ್ಷೆ,

ವಿಶಾಲಾಕ್ಷಿ (ಮಂಗಳೂರು) ಖಜಾಂಚಿ,

ಪ್ರೇಮಾ (ಚನ್ನಪಟ್ಟಣ) ಸಹ ಕಾರ್ಯದರ್ಶಿ


ಎಂಬ ಹುದ್ದೆಗಳಿಗೆ ನೂತನ ಪದಾಧಿಕಾರಿಗಳು ಆಯ್ಕೆಯಾದರು.

ಮತ್ತೊಮ್ಮೆ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿ ಮುಂದುವರೆಯುತಿರುವ ಉಮಾಮಣಿ ಕೆ.ಎಲ್ ಅವರು ರಾಜ್ಯದ ಅಂಗನವಾಡಿ ಕಾರ್ಯಕರ್ತೆಯರ ಸಮಸ್ಯೆ ಪರಿಹಾರ, ವೇತನ ಭದ್ರತೆ, ಸೇವಾ ನಿಯಮಾವಳಿ ಮತ್ತು ಕಲ್ಯಾಣ ಕ್ರಮಗಳ ಕುರಿತು ಸರ್ಕಾರದೊಂದಿಗೆ ರಚನಾತ್ಮಕ ಮಾತುಕತೆಗಳನ್ನು ವೇಗಗೊಳಿಸಲು ಬದ್ಧರಾಗಿರುವುದಾಗಿ ಸಭೆಯಲ್ಲಿ ತಿಳಿಸಿದರು. “ಅಂಗನವಾಡಿ ಕಾರ್ಯಕರ್ತೆಯರ ಧ್ವನಿಯನ್ನು ಇನ್ನಷ್ಟು ಬಲವಾಗಿ ಸರ್ಕಾರದ ಮುಂದಿಡುವುದು ನಮ್ಮ ಮೊದಲ ಆದ್ಯತೆ,” ಎಂದು ಅವರು ಸ್ಪಷ್ಟಪಡಿಸಿದರು.

ಸಭೆಯಲ್ಲಿ ತೆಗೆದುಕೊಳ್ಳಲಾದ ನಿರ್ಣಯದ ಪ್ರಕಾರ, ರಾಜ್ಯದ ಎಲ್ಲಾ ಜಿಲ್ಲಾಧ್ಯಕ್ಷರು ಮತ್ತು ತಾಲೂಕು ಅಧ್ಯಕ್ಷರು ರಾಜ್ಯ ಸಮಿತಿಯ ವಿಸ್ತೃತ ತಂಡದ ಸದಸ್ಯರಾಗಿ ಕಾರ್ಯನಿರ್ವಹಿಸಲಿದ್ದು, ಸಂಘಟನೆ ಬಲವರ್ಧನೆಗೆ ಸಮಗ್ರವಾಗಿ ಕಾರ್ಯ ನಿರ್ವಹಿಸಲಿದ್ದಾರೆ.

ಸಂಘದ ಹಿರಿಯರು ಮಾತನಾಡಿ, ಉಮಾಮಣಿ ಕೆ.ಎಲ್ ಅವರ ನೇತೃತ್ವದಲ್ಲಿ ಸಂಘಟನೆ ರಾಜ್ಯಮಟ್ಟದಲ್ಲಿ ಇನ್ನಷ್ಟು ಸಂಘಟಿತವಾಗಿ, ಹೋರಾಟಪರವಾಗಿ ಮತ್ತು ಪರಿಣಾಮಕಾರಿಯಾಗಿ ಮುಂದುವರಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮಕ್ಕಳ ಪೋಷಣಾ ಸೇವೆಗಳು, ಮಹಿಳಾ ಸಬಲೀಕರಣ ಮತ್ತು ಸಮುದಾಯಾಭಿವೃದ್ಧಿಯಲ್ಲಿ ಅಂಗನವಾಡಿ ವ್ಯವಸ್ಥೆಯ ಪಾತ್ರ ಬಲಪಡಿಸಲು ಇದು ಮಹತ್ವದ ಹೆಜ್ಜೆ ಎಂದು ಅವರು ಅಭಿಪ್ರಾಯಪಟ್ಟರು.

City Today News 9341997936