ಬೆಸ್ಕಾಂನಲ್ಲಿ ಮತ್ತೊಂದು ಭ್ರಷ್ಟಾಚಾರ – ಕಾನೂನು ಮೀರಿ ನೇಮಕಾತಿ ಮಾಡಿದ ಅಧಿಕಾರಿಗಳ ಪಟ್ಟಿ ಬಹಿರಂಗ

ಬೆಸ್ಕಾಂನಲ್ಲಿ ನಕಲಿ ಅನುಕಂಪದ ನೇಮಕಾತಿ ಬಯಲು – 13 ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯ

ಬೆಂಗಳೂರು, ಸೆಪ್ಟೆಂಬರ್ 2025:
ಬೆಸ್ಕಾಂನಲ್ಲಿ ಮತ್ತೊಂದು ನಕಲಿ ಅನುಕಂಪದ ನೇಮಕಾತಿ ಪ್ರಕರಣ ಬೆಳಕಿಗೆ ಬಂದಿದೆ. ದಾವಣಗೆರೆ ನಗರ ಉಪವಿಭಾಗ–1ರ ಕಿರಿಯ ಸಹಾಯಕಿ ಶ್ರೀಮತಿ ಪ್ರೇಮಲೀಲಾ ಅವರನ್ನು 2015ರ ಕವಿಪ್ರನಿನಿ ಆದೇಶವನ್ನು ಉಲ್ಲೇಖಿಸಿ ಅಂಗವೈಕಲ್ಯದ ಆಧಾರದ ಮೇಲೆ ನಿವೃತ್ತಿಗೊಳಿಸಲಾಯಿತು. ಆದರೆ ಅವರು 2019ರಲ್ಲಿ ND-CPS ನಿಯಮಾವಳಿಯಡಿಯಲ್ಲಿ ನೇಮಕಗೊಂಡ ನೌಕರರಾಗಿರುವುದರಿಂದ ಇಂತಹ ನಿವೃತ್ತಿಗೆ ಸರ್ಕಾರದ ನಿಯಮಗಳು ಅನ್ವಯವಾಗುವುದಿಲ್ಲ.

ಆದರೂ ನಿಯಮಾವಳಿಗಳನ್ನು ಮರೆಮಾಚಿ, ಅವರ ಪುತ್ರ ವಿನಾಯಕ ಅವರಿಗೆ 2021ರ ತಿದ್ದುಪಡಿ ಆದೇಶವನ್ನು ಆಧಾರವಿಲ್ಲದೆ ಬಳಸಿಕೊಂಡು ನಕಲಿ ಅನುಕಂಪದ ಆಧಾರದ ಮೇಲೆ ಉದ್ಯೋಗ ನೀಡಲಾಗಿದೆ. ಈ ಬಗ್ಗೆ ಸಲ್ಲಿಕಾದ ದೂರು ಆಧರಿಸಿ ನಡೆದ ತನಿಖೆಯಲ್ಲಿ, ಮುಖ್ಯ ಇಂಜಿನಿಯರ್ (ವಿ) ಬೆಂಗಳೂರು ಮಹಾನಗರ ಉತ್ತರ ವಲಯ ತನಿಖಾ ವರದಿ ತಯಾರಿಸಿ, ನಿಯಮಗಳನ್ನು ಗಾಳಿಗೆ ತೂರಿ, ದುರುದ್ದೇಶಪೂರ್ವಕವಾಗಿ ನೇಮಕಾತಿ ನಡೆದಿರುವುದು ಬಹಿರಂಗಪಡಿಸಿದ್ದಾರೆ.

ವರದಿಯಲ್ಲಿ ಈ ನೇಮಕಾತಿ ಪ್ರಕರಣದಲ್ಲಿ 13 ಮಂದಿ ಅಧಿಕಾರಿಗಳು ಮತ್ತು ನೌಕರರು ನೇರವಾಗಿ ಭಾಗಿಯಾಗಿರುವುದಾಗಿ ಪತ್ತೆಯಾಗಿದ್ದು, ಅವರನ್ನು ಕೂಡಲೇ ಅಮಾನತ್ತು ಮಾಡಿ ಶಿಸ್ತು ಕ್ರಮ ಕೈಗೊಳ್ಳಲು ಶಿಫಾರಸು ಮಾಡಲಾಗಿದೆ. ಆದರೆ ದಿನಾಂಕ 10-06-2025ರಂದು ವರದಿ ಸಲ್ಲಿಕೆಯಾಗಿದ್ದರೂ, ಇದುವರೆಗೆ ಯಾವುದೇ ಕ್ರಮ ಕೈಗೊಳ್ಳದೇ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸಲಾಗುತ್ತಿದೆ ಎಂದು ದೂರುದಾರ, ಸಾಮಾಜಿಕ ಹೋರಾಟಗಾರ ಬಿ.ಎಸ್. ಮಲ್ಲಿಕಾರ್ಜುನ ರೆಡ್ಡಿ ಅವರು ಆರೋಪಿಸಿದ್ದಾರೆ.

ಅವರ ಪ್ರಕಾರ, ಈ ಪ್ರಕ್ರಿಯೆಯನ್ನು ಮುಚ್ಚಿಹಾಕಲು ಪ್ರಧಾನ ವ್ಯವಸ್ಥಾಪಕ (ಆಡಳಿತ ಮತ್ತು ಮಾನವ ಸಂಪನ್ಮೂಲ) ಬಿ.ಆರ್. ದಯಾನಂದ್ ಪ್ರಮುಖ ಪಾತ್ರವಹಿಸುತ್ತಿದ್ದಾರೆ. ದಯಾನಂದ್ ಅವರು ಹಿಂದೆಯೂ ಕಂದಾಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ, ವಿಜಯ ಬ್ಯಾಂಕ್ ಆಫೀಸರ್ಸ್ ಕಾಲೋನಿ ಖಾತೆ ಅಕ್ರಮ ಬದಲಾವಣೆ (2015) ಹಾಗೂ 6 ಎಕರೆ 26 ಗುಂಟೆ ಬಫರ್ ಜೋನ್ ಕೆರೆ ಭೂಮಿ ಅಕ್ರಮ ಹಂಚಿಕೆ (2020) ಪ್ರಕರಣಗಳಲ್ಲಿ ಭ್ರಷ್ಟಾಚಾರ ಆರೋಪ ಎದುರಿಸಿ, ಲೋಕಾಯುಕ್ತ ಕಚೇರಿಯಿಂದ ಬಂಧಿತರಾಗಿದ್ದರು.

ಇಂತಹ ಭ್ರಷ್ಟ ಅಧಿಕಾರಿ ಇಂದಿಗೂ ಬೆಸ್ಕಾಂನಲ್ಲಿ ಹಾಗೂ ಕಂದಾಯ ಇಲಾಖೆಯಲ್ಲಿಯೂ ಏಕಕಾಲದಲ್ಲಿ ಜವಾಬ್ದಾರಿ ವಹಿಸಿಕೊಂಡಿರುವುದು ಗಂಭೀರ ಸಂಗತಿ. ಮಲ್ಲಿಕಾರ್ಜುನ ರೆಡ್ಡಿ ಅವರು, “ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತ್ತುಗೊಳಿಸಿ ಕಾನೂನು ಪ್ರಕಾರ ಶಿಕ್ಷೆ ನೀಡಬೇಕು. ಇಲ್ಲದಿದ್ದರೆ ಇದು ಜನರ ತೆರಿಗೆ ಹಣವನ್ನು ಪೋಲು ಮಾಡುವಂತಾಗುತ್ತದೆ” ಎಂದು ಇಂಧನ ಸಚಿವ ಶ್ರೀ ಕೆ.ಜೆ. ಜಾರ್ಜ್ ಹಾಗೂ ಇಂಧನ ಇಲಾಖೆಯ ಅಪರ ಕಾರ್ಯದರ್ಶಿಗಳಿಗೆ ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ಒತ್ತಾಯಿಸಿದರು.

City Today News 9341997936