
ಬೆಂಗಳೂರು: ಭೋವಿ–ವಡ್ಡರ ಸಮಾಜದ ಇತಿಹಾಸ ಮತ್ತು ಪರಿಶಿಷ್ಟ ಜಾತಿ ಸ್ಥಾನಮಾನ ಕುರಿತು ತಪ್ಪು ಮಾಹಿತಿ ಹರಡಬಾರದು ಎಂದು ಭೋವಿ ವಡ್ಡರ ಸಮಾಜದ ರಾಜ್ಯ ಕಾರ್ಯಾಧ್ಯಕ್ಷ ಲಯನ್ ಶ್ರೀಧರ್ ಅವರು ಎಚ್ಚರಿಕೆ ನೀಡಿದರು.
ಪ್ರೆಸ್ ಕ್ಲಬ್ ಆಫ್ ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಸಾಮಾಜಿಕ ನ್ಯಾಯ ಮತ್ತು ಮೀಸಲಾತಿ ವ್ಯವಸ್ಥೆಗೆ ಮಹತ್ವದ ಕೊಡುಗೆ ನೀಡಿದವರು ಮಹಾತ್ಮಾ ಛತ್ರಪತಿ ಶಾಹು ಮಹಾರಾಜರು ಹಾಗೂ ಮೈಸೂರು ರಾಜ್ಯದ ನಾಲ್ವಡಿ ಕೃಷ್ಣರಾಜ ವಡೆಯರ್ ಎಂದು ಹೇಳಿದರು. ಇವರ ಕಾಲದಲ್ಲೇ ಮಿಲ್ಲರ್ ಆಯೋಗ ರಚನೆಯಾಗಿ ಶೇ.75 ರಷ್ಟು ಮೀಸಲಾತಿ ಜಾರಿಗೆ ತರಲು ಪ್ರಯತ್ನ ನಡೆದಿತ್ತು ಎಂದು ತಿಳಿಸಿದರು.
ಅದೇ ಸಂದರ್ಭದಲ್ಲಿ ಮಿಲ್ಲರ್ ಆಯೋಗದ ಶಿಫಾರಸುಗಳನ್ನು ವಿರೋಧಿಸಿದ್ದ ಕಾರಣಕ್ಕೆ ಅಂದಿನ ದಿವಾನ್ ಸರ್ ಎಂ. ವಿಶ್ವೇಶ್ವರಯ್ಯರನ್ನು ಪದವಿಯಿಂದ ವಜಾಗೊಳಿಸಲಾಗಿತ್ತು ಎಂದು ಅವರು ಹೇಳಿದರು. ಮೈಸೂರು ರಾಜ್ಯದಲ್ಲಿ 1917ರಲ್ಲೇ ಭೋವಿ–ವಡ್ಡರ ಸಮುದಾಯವನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸಲಾಗಿತ್ತು ಎಂದು ಕೂಡ ಅವರು ವಿವರಿಸಿದರು.
ಭಾರತದ ಸಂವಿಧಾನ ಜಾರಿಗೆ ಬಂದ ಬಳಿಕ ಡಾ. ಬಿ.ಆರ್. ಅಂಬೇಡ್ಕರ್ ಅವರ ನೇತೃತ್ವದಲ್ಲಿ ನಾಲ್ವಡಿ ಕೃಷ್ಣರಾಜ ವಡೆಯರ್ ಸಲ್ಲಿಸಿದ್ದ ಪರಿಶಿಷ್ಟ ಜಾತಿ ಹಾಗೂ ಹಿಂದುಳಿದ ವರ್ಗಗಳ ಪಟ್ಟಿಯನ್ನು ಮುಂದುವರಿಸುವಂತೆ ಆದೇಶ ನೀಡಲಾಗಿತ್ತು ಎಂದು ಅವರು ಹೇಳಿದರು.
ಆದರೆ ಇತ್ತೀಚೆಗೆ ಕೆಲವರು ಇತಿಹಾಸವನ್ನು ತಪ್ಪಾಗಿ ನಿರೂಪಿಸುತ್ತಿದ್ದಾರೆ ಎಂದು ಆರೋಪಿಸಿದ ಶ್ರೀಧರ್, ವಿ.ಎಸ್. ಉಗ್ರಪ್ಪ ಅವರು ಭೋವಿ–ವಡ್ಡರ ಸಮುದಾಯದ ಬಗ್ಗೆ ತಪ್ಪು ಮಾಹಿತಿ ನೀಡುತ್ತಿರುವುದು ವಿಷಾದನೀಯ ಎಂದು ಹೇಳಿದರು. ಇತಿಹಾಸದ ದಾಖಲೆಗಳನ್ನು ಸರಿಯಾಗಿ ಪರಿಶೀಲಿಸದೆ ಭೋವಿ ಮತ್ತು ಬೋಯಿ ಸಮುದಾಯಗಳನ್ನು ಒಂದೇ ಎಂದು ಹೇಳುವುದು ಸರಿಯಲ್ಲ ಎಂದು ಅವರು ಹೇಳಿದರು.
1977ರ ಜುಲೈ 27ರಂದು ಕರ್ನಾಟಕ ಸರ್ಕಾರದ ಆದೇಶದ ಮೂಲಕ ‘ಭೋವಿ’ ಜಾತಿಗೆ ಸಮಾನಾರ್ಥಕ ಪದಗಳಾಗಿ ‘ಒಡವಡ್ಡೆ’ ಮತ್ತು ‘ವಡ್ಡರ’ ಎಂದು ಗುರುತಿಸಿ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಸೇರಿಸಲಾಗಿದೆ. ಬಳಿಕ 2015ರಲ್ಲಿ ಮಣ್ಣ ವಡ್ಡರ, ಕಲ್ಲವಡ್ಡರ ಸೇರಿದಂತೆ ಕೆಲವು ಉಪಜಾತಿಗಳನ್ನು ಸೇರಿಸಲಾಗಿದೆ ಎಂದು ಅವರು ವಿವರಿಸಿದರು.
ನಿಜವಾದ ಭೋವಿ–ವಡ್ಡರ ಸಮುದಾಯದವರು ಕಲ್ಲು ಒಡೆಯುವುದು, ಮಣ್ಣು ಅಗೆದು ಬಾವಿ ತೋಡುವುದು, ಮನೆಗಳು ಹಾಗೂ ದೇವಸ್ಥಾನಗಳ ನಿರ್ಮಾಣದಂತಹ ಕಠಿಣ ಕೆಲಸಗಳನ್ನು ಮಾಡುವವರು ಎಂದು ಹೇಳಿದರು. ಆದರೆ ಬೋಯಿ ಸಮುದಾಯವು ಹಿಂದುಳಿದ ವರ್ಗಕ್ಕೆ ಸೇರಿದ್ದು, ಅವರನ್ನು ಪರಿಶಿಷ್ಟ ಜಾತಿಗೆ ಸೇರಿಸುವಂತೆ ವಾದಿಸುವುದು ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟರು.
ಸರ್ಕಾರ ಹಾಗೂ ಮುಖ್ಯಮಂತ್ರಿಗಳ ಬಳಿ ತಪ್ಪು ಮಾಹಿತಿ ನೀಡಬಾರದು. ಸಂವಿಧಾನಾತ್ಮಕವಾಗಿ ನೀಡಿರುವ ಮೀಸಲಾತಿ ವ್ಯವಸ್ಥೆಯ ಬಗ್ಗೆ ಸರಿಯಾದ ಅರಿವು ಹೊಂದಿ ಮಾತನಾಡಬೇಕು ಎಂದು ಅವರು ಹೇಳಿದರು. ಈ ರೀತಿಯ ಹೇಳಿಕೆಗಳನ್ನು ಮುಂದುವರಿಸಿದರೆ ರಾಜ್ಯಾದ್ಯಂತ ಭೋವಿ–ವಡ್ಡರ ಸಮಾಜ ತೀವ್ರ ಹೋರಾಟ ನಡೆಸಲಿದೆ ಎಂದು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟದ ಮುಖಂಡರುಗಳು ಉಪಸ್ಥಿತರಿದ್ದರು.
City Today News 9341997936

You must be logged in to post a comment.