
ಬೆಂಗಳೂರು: “ಮನೆಯೇ ಮೊದಲ ಶಾಲೆ ಎನ್ನುವ ದಿನಗಳು ಹೋದವು. ಈಗ ಮೊಬೈಲೇ ಮಕ್ಕಳ ಮೊದಲ ಶಾಲೆಯಾಗಿದೆ,” ಎಂದು ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ವಿಷಾದ ವ್ಯಕ್ತಪಡಿಸಿದರು.
ಪ್ರೆಸ್ ಕ್ಲಬ್ ಹಾಗೂ ಬಾಲಭವನದ ಆಶ್ರಯದಲ್ಲಿ ನಡೆದ “ಮಕ್ಕಳ ಜಾತ್ರೆ” ಸಾಂಸ್ಕೃತಿಕ ಹಬ್ಬವನ್ನು ಉದ್ಘಾಟಿಸಿ ಮಾತನಾಡಿದ ಅವರು, “ನಗರದ ಮಕ್ಕಳು ಮಣ್ಣಿನಿಂದ, ನೆಲದ ಆಟಪಾಠಗಳಿಂದ ದೂರವಾಗುತ್ತಿದ್ದಾರೆ. ಆಜ್ಜ-ಅಜ್ಜಿ ಕತೆಗಳಿಂದ ವಂಚಿತರಾಗುತ್ತಿದ್ದಾರೆ. ತಮ್ಮ ಆಟಿಕೆಗಳನ್ನು ತಾವೇ ಸೃಷ್ಟಿಸಿಕೊಳ್ಳುವ ಕ್ರಿಯಾಶೀಲತೆ ನಶಿಸುತ್ತಿದೆ. ಪ್ಲಾಸ್ಟಿಕ್ ಹಾಗೂ ಬ್ಯಾಟರಿ ಆಟಿಕೆಗಳಲ್ಲಿ ಬೆರೆತು ಮಕ್ಕಳ ಮನೋಲೋಕ ವಿಸ್ತರಿಸುವ ಬದಲು ಕುಗ್ಗುತ್ತಿದೆ” ಎಂದು ಅಭಿಪ್ರಾಯಪಟ್ಟರು.

ಅವರು ಮುಂದುವರಿದು, “ರಾಗಿರೊಟ್ಟಿ ಬದಲು ಬರ್ಗರ್, ಜೋಳದ ರೊಟ್ಟಿ ಬದಲು ಪಿಜ್ಜಾ, ಮುದ್ದೆ ಬದಲು ಪಾಸ್ತಾ, ಡೋನಟ್ – ಇವು ಮಕ್ಕಳ ಆಹಾರ ಸಂಸ್ಕೃತಿಯನ್ನು ಬದಲಿಸುತ್ತಿವೆ. ಇದು ಅಪಾಯಕಾರಿ ಸಾಂಸ್ಕೃತಿಕ ರಾಜಕಾರಣ. ಇದನ್ನು ಗಂಭೀರವಾಗಿ ಆಲೋಚಿಸುವ ಅಗತ್ಯವಿದೆ” ಎಂದರು.
ವೀಡಿಯೋ ಗೇಮ್‌ಗಳ ದುಷ್ಪರಿಣಾಮವನ್ನು ಎಚ್ಚರಿಸಿದ ಅವರು, “ಮಕ್ಕಳನ್ನು ಕುಟುಂಬ-ಸಮಾಜದಿಂದ ಬೇರ್ಪಡಿಸಿ ಹಿಂಸಾತ್ಮಕ ಮನೋಭಾವ, ಕೋಪ, ಅಸಹನೆ, ಆಕ್ರಮಣಶೀಲತೆಯನ್ನು ಬೆಳೆಸುತ್ತಿವೆ. ಇಂತಹ ಮನಸ್ಥಿತಿಯ ಮಕ್ಕಳು ಭವಿಷ್ಯದಲ್ಲಿ ಹೇಗೆ ರೂಪುಗೊಳ್ಳುತ್ತಾರೆ ಎಂಬುದು ಗಂಭೀರ ಪ್ರಶ್ನೆ” ಎಂದು ಹೇಳಿದರು.
ಮಕ್ಕಳ ಬಗ್ಗೆ ಜವಾಹರಲಾಲ್ ನೆಹರೂ ಅವರ ದೃಷ್ಟಿಕೋನವನ್ನು ಉಲ್ಲೇಖಿಸಿದ ಪ್ರಭಾಕರ್, “ಮಕ್ಕಳು ತೋಟದ ಮೊಗ್ಗುಗಳಂತಿದ್ದಾರೆ. ಅವುಗಳನ್ನು ಪ್ರೀತಿಯಿಂದ, ಎಚ್ಚರಿಕೆಯಿಂದ ಪೋಷಿಸಿದಾಗ ಮಾತ್ರ ಜವಾಬ್ದಾರಿಯುತ ನಾಗರಿಕರು ಬೆಳೆದು ಬರುತ್ತಾರೆ. ಈ ನಿಲುವಿನ ಮೇಲೇ ನೆಹರೂ ಬಾಲಭವನ ಕಾರ್ಯಕ್ರಮಗಳನ್ನು ರೂಪಿಸಿದ್ದರು” ಎಂದು ವಿವರಿಸಿದರು.
City Today News 9341997936

You must be logged in to post a comment.