
ಕಾಡುಗೊಲ್ಲ ಸಂಸ್ಕೃತಿಯ ಪುನುರುತ್ಥಾನದ ಮಹೋದ್ದೇಶವನ್ನು ಇಟ್ಟುಕೊಂಡು ಸ್ಥಾಪಿತವಾದ ಮಹಾಮಾನವತಾವಾದಿ ಕರಡಿಬುಳ್ಳಪ್ಪ ವಿಚಾರವೇದಿಕೆಯವತಿಯಿಂದ ಈ ಮೂಲಕ ತಮ್ಮಲ್ಲಿ ವಿನಂತಿಸಿಕೊಳ್ಳುವುದೇನೆಂದರೆ ಮಧ್ಯ ಕರ್ನಾಟಕದ ಕಾಡುಗೊಲ್ಲರ ಹಿರಿಯವನಾದ ಕರಡಿಬುಳ್ಳಪ್ಪ ಒಂದು ಮಹಾನ್ ಸಂಸ್ಕೃತಿಗೆ ಕಾರಣನಾದನೆಂಬುದು ಒಂದು ಅನನ್ಯ ಸಂಗತಿ. ಈತ ಪ್ರತಿನಿಧಿಸಿದ ಕಾಡುಗೊಲ್ಲರು ಮಧ್ಯ ಕರ್ನಾಟಕದ ಮೂಲನಿವಾಸಿ ಬುಡಕಟ್ಟು ಸಮುದಾಯದವರು. ಸಾಂಸ್ಕೃತಿಕವಾಗಿ ನೆಲಮೂಲ ಸಂಸ್ಕೃತಿಯ ಇವರು ದ್ರಾವಿಡ ಪರಂಪರೆಯಲ್ಲಿ ತಮ್ಮ ಬದುಕನ್ನು ಕಟ್ಟಿಕೊಂಡವರು. ಹಾಗೂ ಸಂಸ್ಕೃತಿಯಲ್ಲಿ ಪ್ರಕೃತಿ ಅರಾಧಕರು. ನಾವು ಮಧ್ಯ ಕರ್ನಾಟಕದ ಒಟ್ಟು ಹನ್ನೊಂದು ಜಿಲ್ಲೆ ಹಾಗೂ 38 ತಾಲ್ಲೂಕುಗಳಲ್ಲಿ ಒಟ್ಟು 1264ಹಟ್ಟಿಗಳಲ್ಲಿ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಮತ್ತು ರಾಜ್ಯದ ಕೆಲವು ನಗರ ಪಟ್ಟಣಗಳಲ್ಲಿ ನೌಕರಿ ಹಾಗೂ ವ್ಯಾಪಾರದ ಕಾರಣ ಬಂದು ವಿರಳವಾಗಿ ವಾಸಿಸುತ್ತಿದ್ದಾರೆ. ಕಾಡುಗೊಲ್ಲರು ಪ್ರಧಾನವಾಗಿ ಸಣ್ಣರೈತರು ಮತ್ತು ಪಶುಪಾಲಕರು, ಪಶುಪಾಲನೆಯಲ್ಲಿ ಕುರಿಗಾರಿಕೆ ಪ್ರಧಾನ ವೃತ್ತಿ. ಇಂದಿಗೂ ಅಚ್ಚ ಬುಡಕಟ್ಟು ಜೀವನ ಪದ್ದತಿಯಲ್ಲಿ ಬದುಕುತ್ತಿರುವ ಇವರು ಗ್ರಾಮ ಬಹಿಧ್ವಾಸಿಗಳು ಮತ್ತು ಕಾಡಂಚಿನಲ್ಲೇ ಇವರ ಬದುಕು. ಸುಮಾರು ಆರರಿಂದ ಏಳು ಲಕ್ಷ ಜನಸಂಖ್ಯೆ ಹೊಂದಿರುವ ಇವರು ಅಂದಾಜು ಶೇ40ರಷ್ಟು ಸಾಕ್ಷರತೆ ಮತ್ತು ಶೇ 5ರಷ್ಟು ಸರ್ಕಾರಿ ನೌಕರಿ ಮತ್ತು ಇತರೆ ವರ್ಗದ ನೌಕರರು ಇದ್ದಾರೆ. ಆರ್ಥಿಕವಾಗಿ, ಶೈಕ್ಷಣಿಕವಾಗಿ ಮತ್ತು ರಾಜಕೀಯವಾಗಿ ಇನ್ನೂ ತೀರಾ ನಿಕೃಷ್ಟತೆಯಲ್ಲಿದ್ದಾರೆಂದರೆ ಆಶ್ವರ್ಯವೇನೂ ಇಲ್ಲ. ಸಾಮಾಜಿಕವಾಗಿಯೂ ಒಂದು ನಿಖರವಾದ ಮತ್ತು ಪ್ರಭುದ್ಧವಾದ ನಾಯಕತ್ವವೇ ಇಲ್ಲದ ಕಾರಣ ಇವರು ತೀರಾ ಅಸಂಘಟಿತರೆನ್ನುವುದು ವಾಸ್ತವ ವಿಚಾರ.
ಕಾಡುಗೊಲ್ಲರನ್ನು ಕಳೆದ 200 ವರ್ಷಗಳಿಂದಲೂ ದೇಶ ವಿದೇಶದ ಅನೇಕ ಮಹಾನ್ ವಿದ್ವಾಂಸರು ಅಧ್ಯಯನ ಮಾಡಿ ಇವರು ಬುಡಕಟ್ಟು ಜನ ಎಂದು ಹೇಳಿದರೂ ನಾವು ಇನ್ನೂ ಪರಿಶಿಷ್ಟ ಪಂಗಡಕ್ಕೆ ಸೇರಿಲ್ಲ. ಈ ಬಗ್ಗೆ ಕಳೆದ 2010-12ಳಲ್ಲಿ ಕುಲಶಾಸ್ತ್ರ ಅಧ್ಯಯನಕ್ಕೆ ಶಿಫಾರಸ್ ಆಗಿ 2013ರಲ್ಲಿ ವರದಿ ಬಂದು 2014 ಡಿಸೆಂಬರ್ ತಿಂಗಳಲ್ಲಿ ಅಂದಿನ ಮಾನ್ಯ ಸಿದ್ದರಾಮಯ್ಯನವರ ಸರ್ಕಾರದಲ್ಲಿ ಕೇಂದ್ರಕ್ಕೆ ಶಿಫಾರಸ್ ಆಯಿತು. ಇಲ್ಲಿಯವರೆಗೂ ಅಂದರೆ ಒಂಬತ್ತು ವರ್ಷ ಕೇಂದ್ರ ಸರ್ಕಾರದ ಇಲಾಖೆಯಲ್ಲಿ ಹಾಗೆ ಇದೆ. ಇಲ್ಲಿಯವರೆಗೂ ರಾಜ್ಯದ ಬಹಳಷ್ಟು ನಾಯಕರು ಭರವಸೆ ಕೊಟ್ಟಿದ್ದಾಗ್ಯೂ ಇನ್ನೂ ನಮ್ಮ ಬೇಡಿಕೆ ಈಡೇರಿಲ್ಲದಿರುವುದು ವಿಷಾಧಕರ ಸಂಗತಿಯಾಗಿದೆ.
ಈ ಮಧ್ಯೆ 2020ರಲ್ಲಿ ಶಿರಾ ವಿಧಾನಸಭಾ ಉಪಚುನಾವಣೆಯಲ್ಲಿ ಕಾಡುಗೊಲ್ಲರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುತ್ತೇವೆ ಎಂದು ಬಿಜೆಪಿ ನಾಯಕರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು, ಅಂದಿನ ಬಿಜೆಪಿ ಪಕ್ಷದ ಮುಖಂಡರಾದ ಬಿ.ವೈ.ವಿಜಯೇಂದ್ರರವರು, ಮೈಸೂರಿನ ಸಂಸದರಾದ ಪ್ರತಾಪ್ ಸಿಂಹ ಅವರು ಮತ್ತು ಚಿತ್ರದುರ್ಗದ ಸಂಸದರಾದ ಶ್ರೀಮಾನ್ ನಾರಾಯಣಸ್ವಾಮಿಯವರು ‘ಖಂಡಿತವಾಗಿ ನಾವು ಕಾಡುಗೊಲ್ಲರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುತ್ತೇವೆ’ ಎಂದು ದೊಡ್ಡ ಧ್ವನಿಯಲ್ಲಿ ಇಡೀ ರಾಜ್ಯದಲ್ಲಿಯೇ ಸಾರಿದರು. ಅದನ್ನು ನಂಬಿದ ನಾವು ಅವರಿಗೆ ಬೆಂಬಲ ನೀಡಿ ಅವರ ಅಭ್ಯರ್ಥಿ ಡಾ.ರಾಜೇಶ್ ಗೌಡರನ್ನು ಹೆಚ್ಚಿನ ಅಂತರದಿಂದ ಗೆಲ್ಲಿಸಿದೆವು. ಅಲ್ಲಿಂದ ಇಲ್ಲಿಗೆ ನಾಲ್ಕು ವರ್ಷಗಳಾದರೂ ನಮ್ಮ ಎಸ್.ಟಿ.ಕಡತ ಒಂದಿಂಚೂ ಚಲಿಸಿಲ್ಲ. ಹಾಗೆ ಮೊನ್ನೆ ಮೊನ್ನೆ ಮಾಜಿ ಪ್ರಧಾನಿಗಳಾದ ಸನ್ಮಾನ್ಯ ಹೆಚ್.ಡಿ.ದೇವೇಗೌಡರು ಆಶ್ವಾಸನೆ ನೀಡಿ ಸನ್ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರಮೋದೀಜಿಯವರಲ್ಲಿ ಚರ್ಚಿಸಿ ಆಶ್ವಾಸನೆ ಪಡೆದಂತೆ ‘ಇದೇ ಅವಧಿಯಲ್ಲಿ ನಿಮ್ಮನ್ನು ಎಸ್.ಟಿ.ಪಟ್ಟಿಗೆ ಸೇರಿಸುತ್ತೇವೆ’ ಎಂದು ಅಭಯ ನೀಡಿದರು. ಆದರೆ ಪ್ರಸ್ತುತ ಸಂಸತ್ತಿನ ಅವಧಿಯೂ ಮುಗಿಯಿತು. ಮತ್ತು ಎಸ್.ಟಿ.ಸೇರ್ಪಡೆ ಆಶೆಯೂ ಬತ್ತಿ ಹೋಯಿತು. ಇಂತಹ ಪ್ರಮುಖ ನಾಯಕರೆ ನಮ್ಮನ್ನು ಕೈಬಿಟ್ಟಮೇಲೆ ನಾವು ಯಾವ ರೀತಿ ಮುಂದುವರಿಯುವುದು? ಆದಕಾರಣ ಈ ಚುನಾವಣೆಯಲ್ಲಿ ನಮ್ಮ ಸಂಘದ ಬಹುಜನಗಳ ಆಶೋತ್ತರದಂತೆ ನಾವು ಈ ಸಾರಿ ಕಾಂಗ್ರೆಸ್‌ನ್ನು ಬೆಂಬಲಿಸಲು ತೀರ್ಮಾನಿಸಿದ್ದೇವೆ. ವಿಶೇಷವಾಗಿ ನಮ್ಮ ಸಂಘದ ಬಂಧುಗಳು ಹೆಚ್ಚಿರುವ ತುಮಕೂರಿನಲ್ಲಿ ನಿವೃತ್ತ ನ್ಯಾಯಮೂರ್ತಿಗಳಾದ ಮುದ್ದಹನುಮೇಗೌಡರು ಮತ್ತು ಚಿತ್ರದುರ್ಗದಲ್ಲಿ ಅನುಭವಿಗಳು ಮತ್ತು ಸಹೃದಯರಾದ ಬಿ.ಎನ್.ಚಂದ್ರಪ್ಪನವರು ಕಾಂಗ್ರೆಸ್ ಅಭ್ಯರ್ಥಿಗಳಾಗಿದ್ದಾರೆ. ಇನ್ನು ನಮ್ಮಂತಹ ತೀರಾ ಹಿಂದುಳಿದವರ ಬಗ್ಗೆ ಸಕಾರಾತ್ಮಕ ಧೋರಣೆಯ ಸಹೃದಯೀ ಶ್ರೀಮಾನ್ ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿದ್ದಾರೆ. ಇಡೀ ಸ್ವಾತಂತ್ರೋತ್ತರ ಕರ್ನಾಟಕದಲ್ಲಿ ಕಾಡುಗೊಲ್ಲರನ್ನು ಗುರ್ತಿಸಿ ದೊಡ್ಡದಾಗಿ ಬೆಂಬಲ ಕೊಟ್ಟವರು ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು. ಅವರ ಕಳೆದ ಅವಧಿಯಲ್ಲಿ ಅವರು ನೀಡಿದ ಸವಲತ್ತುಗಳು. ಶ್ರೀಮತಿ ಜಯಮ್ಮಬಾಲರಾಜರನ್ನು ವಿಧಾನಪರಿಷತ್ತಿಗೆ ನಾಮಕರಣ ಮಾಡಿದರು. ಕಾಡುಗೊಲ್ಲರನ್ನು ಪರಿಶಿಷ್ಟಪಟ್ಟಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ ಮಾಡಿದರು. ಅಲ್ಲಿಯವರೆಗೂ ಕನಸಾಗಿದ್ದ ರಾಜ್ಯ ಯೋಜನಾಮಂಡಳಿಗೆ ಡಾ.ಶಿವಚಿತ್ತಪ್ಪರನ್ನು ಸದಸ್ಯರನ್ನಾಗಿಸಿದರು. ಹಾಗೆ ಪ್ರೊ: ಎಂ.ಗುರುಲಿಂಗಯ್ಯರನ್ನು ಹಿಂದುಳಿದ ಶಾಶ್ವತ ಆಯೋಗಕ್ಕೆ ಸದಸ್ಯರನ್ನಾಗಿಸಿದರು. ಡಾ.ಕರಿಸಿದ್ದಪ್ಪನವರನ್ನು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ ಉಪಕುಲಪತಿಗಳನ್ನಾಗಿ ನೇಮಿಸಿದರು. ಅರಣ್ಯ ಮತ್ತು ಪರಿಸರ ಇಲಾಖೆಯ ರಾಜ್ಯ ನಿಷ್ಕರ್ಷ ಮಂಡಳಿಗೆ ನಿವೃತ್ತ ಐಎಫ್‌ಎಸ್. ಅಧಿಕಾರಿ ಬಿ.ಚಿಕ್ಕಪ್ಪಯ್ಯನವರನ್ನು ಸದಸ್ಯರನ್ನಾಗಿಸಿದರು. ಅನೇಕ ಕಾಡುಗೊಲ್ಲ ಅರ್ಹರನ್ನು ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳಿಗೆ ಸಿಂಡಿಕೇಟ್, ಸೆನೇಟ್ ಮತ್ತು ಅಕಾಡೆಮಿಕ್ ಕೌನ್ಸಿಲ್‌ಗೆ ನಾಮಕರಣ ಮಾಡಿಸಿದರು. ಕಾಡುಗೊಲ್ಲರು ಅಪ್ಪಟ ಕುರಿ ಮತ್ತು ಪಶುಪಾಲಕರು. ಹಾಗಾಗಿ ಕುರಿಗಳ ಸಾವಿನಿಂದ ನಷ್ಟ ಅನುಭವಿಸಬಾರದೆಂದು ಕುರಿ ಅಥವಾ ರಾಸುಗಳು ಸತ್ತಾಗ ಆಗುವ ನಷ್ಟವನ್ನು ತುಂಬಲು ಅನುಗ್ರಹ ಕಾರ್ಯಕ್ರಮವನ್ನು ನೀಡಿದರು. ಹಾಗೆಯೇ ಕುರಿಗಾರರಿಗೆ ಭೇಡಪಾಲಕ್ ಯೋಜನೆ, ರಾಸುಗಳಿಗೆ ವಿಮಾ ಯೋಜನೆ ಜಾರಿ ಮಾಡಿದರು. ಪ್ರಸ್ತುತ ಸರ್ಕಾರದಲ್ಲಿ ಕರ್ನಾಟಕ ರಾಜ್ಯ ಕಾಡುಗೊಲ್ಲ. ಅಭಿವೃದ್ಧಿ ನಿಗಮವನ್ನು ನೊಂದಣಿ ಮಾಡಿಸಿ ಅದಕ್ಕೆ ಅನುದಾನವನ್ನು ಬಿಡುಗಡೆ ಮಾಡಿದರು. ಹಾಗೆ ಕರ್ನಾಟಕ ಜಾನಪದ ಅಕಾಡೆಮಿಗೆ, ಬಯಲಾಟ ಅಕಾಡೆಮಿಗೆ, ಕುವೆಂಪುಭಾಷಾ ಭಾರತಿಗೆ ಕಾಡುಗೊಲ್ಲ ಸಮುದಾಯದವರನ್ನು ಸದಸ್ಯರನ್ನಾಗಿಸಿದ್ದಾರೆ. ಮತ್ತು ಚಿತ್ರದುರ್ಗ ಜಿಲ್ಲೆಯ ಗ್ಯಾರೆಂಟಿಗಳ ಅನುಷ್ಟಾನ ಸಮಿತಿಗೆ ಜಿಲ್ಲಾಧ್ಯಕ್ಷರನ್ನು ನೇಮಿಸಿದ್ದಾರೆ. ಇಲ್ಲಿ ಹೇಳಿದಂತಹ ವಿಷಯಗಳು ಕಾಡುಗೊಲ್ಲರಿಗೆ ಪ್ರತ್ಯೇಕವಾದ ಅನುಕೂಲಗಳು. ಇನ್ನು ಸಾಮಾನ್ಯ ಕಾರ್ಯಕ್ರಮಗಳಲ್ಲಿಯೂ ಕೂಡ ಇಡೀ ರಾಜ್ಯದ ಜನರಿಗೆ ಮರೆಯಲಾರದ ಮಹಾನುಭಾವನಂತೆ ಆಡಳಿತ ನೀಡಿದರು.
ಈ ಎಲ್ಲಾ ಹಿನ್ನೆಲೆಯಂತೆ ನಮ್ಮ ಸಂಘದ ಬಹುತೇಕ ಕಾಡುಗೊಲ್ಲರು ಈ ಸಾರಿ ಕಾಂಗ್ರೆಸ್ಸನ್ನು ಬೆಂಬಲಿಸಬೇಕೆಂದು ತೀರ್ಮಾನಿಸಿದ್ದೇವೆ ಎಂದು ಮಹಾಮಾನವತಾವಾದಿ ಕರಡಿ ಬುಳ್ಳಪ್ಪ ವಿಚಾರವೇದಿಕೆ ವತಿಯಿಂದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ತುಳಿಸಿದರು.
City Today News 9341997936

You must be logged in to post a comment.