ಮೀಸಲಾತಿ ಜಗಳದಿಂದ ಸಮುದಾಯಗಳಲ್ಲಿ ವಿಭಜನೆ: ಆರ್‌ಪಿಐ (ಅಂಬೇಡ್ಕರ್) ಆತಂಕ

ಒಳ ಮೀಸಲಾತಿ ಕುರಿತಾಗಿ ರಾಜ್ಯದಲ್ಲಿ ಉಂಟಾಗಿರುವ ಗೊಂದಲಗಳು ಸಮಾಜದಲ್ಲಿ ಉದ್ವಿಗ್ನತೆಯನ್ನು ಹೆಚ್ಚಿಸುತ್ತಿರುವುದಾಗಿ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಅಂಬೇಡ್ಕರ್) ಪಕ್ಷವು ಆತಂಕ ವ್ಯಕ್ತಪಡಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ರಾಜ್ಯಾಧ್ಯಕ್ಷರಾದ, ಪ್ರಭು ಜಿ.ಸಿ., ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ದೃಷ್ಟಿಯಲ್ಲಿ ಮೀಸಲಾತಿ ಶಾಶ್ವತ ಸೌಲಭ್ಯವಲ್ಲ, ಅದು ಸಾಮಾಜಿಕ ನ್ಯಾಯ ಮತ್ತು ಸಮಾನ ಅವಕಾಶಗಳನ್ನು ಸಾಧಿಸಲು ರೂಪಿಸಲಾದ ತಾತ್ಕಾಲಿಕ ವ್ಯವಸ್ಥೆಯಾಗಿದೆ ಎಂದು ಹೇಳಿದರು. ಶತಮಾನಗಳ ಅನ್ಯಾಯ, ಅಸಮಾನತೆ ಮತ್ತು ಅಸ್ಪೃಶ್ಯತೆಯನ್ನು ನಿವಾರಿಸಲು ಸಂವಿಧಾನದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ವಿಶೇಷ ರಕ್ಷಣೆಯನ್ನು ಒದಗಿಸಲಾಗಿದೆ. ಶಿಕ್ಷಣ, ಉದ್ಯೋಗ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಸಮಾನ ಅವಕಾಶ ಸಿಗುವಂತೆ ಮಾಡುವುದೇ ಇದರ ಮುಖ್ಯ ಉದ್ದೇಶವಾಗಿತ್ತು ಎಂದು ಅವರು ವಿವರಿಸಿದರು.

ಸಂವಿಧಾನದ ವಿಧಿ 15(4), 16(4), 46, 341 ಮತ್ತು 342ರ ಮೂಲಕ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಅವಕಾಶ ಕಲ್ಪಿಸಲಾಗಿದೆ. ಜೊತೆಗೆ, ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮೀಸಲಾತಿ ನೀಡುವ ಮೂಲಕ ರಾಜಕೀಯ ಪ್ರತಿನಿಧಿತ್ವವೂ ಖಚಿತಪಡಿಸಲಾಗಿದೆ. ಆದರೆ ಇಂದಿನ ಪರಿಸ್ಥಿತಿಯಲ್ಲಿ ಒಳ ಮೀಸಲಾತಿ ವಿಚಾರವು ಒಂದೇ ಸಮುದಾಯದೊಳಗೆ ವಿಭಜನೆಗೆ ಕಾರಣವಾಗುತ್ತಿದ್ದು, ಪರಸ್ಪರ ಅವಿಶ್ವಾಸ ಮತ್ತು ಸಂಘರ್ಷವನ್ನು ಹೆಚ್ಚಿಸುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.

ಸಮಸ್ಯೆಯ ಮೂಲ ಶಿಕ್ಷಣ ಮತ್ತು ಉದ್ಯೋಗದ ಕೊರತೆಯಾಗಿದ್ದು, ಅದು ಕಡೆಗಣನೆಯಾಗುತ್ತಿದೆ. ಇದರಿಂದ ನಿಜವಾದ ಹಿಂದುಳಿದ ವರ್ಗಗಳು ಇನ್ನೂ ಅವಕಾಶಕ್ಕಾಗಿ ಹೋರಾಟ ನಡೆಸುತ್ತಿವೆ. ಸ್ವಾತಂತ್ರ್ಯಕ್ಕೆ ದಶಕಗಳು ಕಳೆದರೂ ಕೆಲವು ಭಾಗಗಳಲ್ಲಿ ಅಸ್ಪೃಶ್ಯತೆ ಮನೋಭಾವ ಇನ್ನೂ ಜೀವಂತವಾಗಿದೆ ಎಂಬುದು ವಿಷಾದನೀಯ ಎಂದು ಹೇಳಿದರು.

ಒಳ ಮೀಸಲಾತಿ ಕುರಿತು ಸುಪ್ರೀಂ ಕೋರ್ಟ್ 2024ರ ತೀರ್ಪು ರಾಜ್ಯಗಳಿಗೆ ಅವಕಾಶ ನೀಡಿದರೂ, ಅದು ಕಡ್ಡಾಯವಲ್ಲ. ಈ ಕ್ರಮವನ್ನು ಜಾರಿಗೆ ತರಲು ಸಮಗ್ರ ಮತ್ತು ವೈಜ್ಞಾನಿಕ ಮಾಹಿತಿ ಅಗತ್ಯವಾಗಿದ್ದು, ಯಾವುದೇ ತುರ್ತು ಅಥವಾ ರಾಜಕೀಯ ಒತ್ತಡದ ನಿರ್ಧಾರಗಳು ತಪ್ಪು ದಾರಿಗೆ ಕೊಂಡೊಯ್ಯಬಹುದು ಎಂದು ಅವರು ಎಚ್ಚರಿಸಿದರು. ಪ್ರಸ್ತುತ ಡೇಟಾ ಅಪೂರ್ಣವಾಗಿರುವುದರಿಂದ ಈ ವಿಷಯದಲ್ಲಿ ಎಚ್ಚರಿಕೆಯಿಂದ ನಡೆದುಕೊಳ್ಳಬೇಕು ಎಂದು ಹೇಳಿದರು.

ಈ ಹಿನ್ನೆಲೆಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಆದಿವಾಸಿ ಸಮುದಾಯಗಳ ಏಕತೆಯನ್ನು ಕಾಪಾಡುವುದು ಅತ್ಯಂತ ಮುಖ್ಯವಾಗಿದೆ. ನ್ಯಾಯಮೂರ್ತಿ ನಾಗಮೋಹನ್ ದಾಸ್ ವರದಿಯನ್ನು ತಕ್ಷಣ ಕೈಬಿಡಬೇಕು ಮತ್ತು ಸಂವಿಧಾನದ ಮಾರ್ಗಸೂಚಿಗಳ ಪ್ರಕಾರ ಪ್ರಸ್ತುತ ಇರುವ ಮೀಸಲಾತಿ ವ್ಯವಸ್ಥೆಯನ್ನು ಮುಂದುವರಿಸಬೇಕು ಎಂದು ಅವರು ಒತ್ತಾಯಿಸಿದರು.

ಒಳ ಮೀಸಲಾತಿ ವಿಚಾರದಲ್ಲಿ ಯಾವುದೇ ಸಮುದಾಯದ ವಿರುದ್ಧ ದ್ವೇಷ ಅಥವಾ ವೈಮನಸ್ಸು ಉಂಟಾಗದಂತೆ ಸರ್ಕಾರ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಬಾಂಧವ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.
ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಪಕ್ಷದ ವತಿಯಿಂದ ತೀವ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಈ ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಮಟ್ಟದ ಕಾರ್ಯದರ್ಶಿ ರಮೇಶ್ ನಾಟಕರ್, ರಾಜ್ಯ ಸಂಚಾಲಕ ಬಸವರಾಜ್, ಹಾಸನ ಜಿಲ್ಲಾಧ್ಯಕ್ಷ ದರ್ಶನ್, ಬೆಂಗಳೂರು ದಕ್ಷಿಣ ಘಟಕದ ಅಧ್ಯಕ್ಷ ಮುನಿರಾಜು, ಸಾಮಾಜಿಕ ಚಿಂತಕ ಮದ್ದೂರಪ್ಪ, ಸಂಘಟನೆ ಸಂಚಾಲಕ ಗಿರೀಶ್ ಹಾಗೂ ಆನೇಕಲ್ ತಾಲೂಕು ಯುವ ಘಟಕದ ಅಧ್ಯಕ್ಷ ಸುಮನ್ ಉಪಸ್ಥಿತರಿದ್ದರು.

City Today News 9341997936