ಯಾರು ಸಂವಿಧಾನವನ್ನು ರಕ್ಷಿಸುತ್ತಾರೋ, ಅನುಷ್ಠಾನಗೊಳಿಸುತ್ತಾರೋ ನನ್ನ ಬೆಂಬಲ ಅವರಿಗೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ನಾಗಮೋಹನದಾಸ್ ಹೇಳಿದ್ದಾರೆ.

ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ಯಾರು ಸಂವಿಧಾನವನ್ನು ರಕ್ಷಿಸುತ್ತಾರೋ, ಅನುಷ್ಠಾನಗೊಳಿಸುತ್ತಾರೋ ನನ್ನ ಬೆಂಬಲ ಅವರಿಗೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ನಾಗಮೋಹನದಾಸ್ ಹೇಳಿದ್ದಾರೆ.

ಕೇಂದ್ರೀಯ ವಿದ್ಯುತ್ ಸಂಶೋಧನಾ ಸಂಸ್ಥೆ ಸೋಮವಾರ ಸಂಸ್ಥೆಯ ರಜತ ಮಹೋತ್ಸವ ಸಭಾಂಗಣದಲ್ಲಿ ಆಯೋಜಿಸಿದ್ದ ಭಾರತರತ್ನ ಡಾ.ಬಿ.ಆ‌ರ್.ಅಂಬೇಡ್ಕ‌ರ್ ಅವರ 133ನೇ ಜಯಂತಿ ಆಚರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಸಂವಿಧಾನವನ್ನು ಓದಬೇಕು, ಅರ್ಥಮಾಡಿಕೊಳ್ಳಬೇಕು ಅದರಂತೆ ಬದುಕಬೇಕು ಈ ಕೆಲಸದ ಮೂಲಕವೇ ಸಂವಿಧಾನವನ್ನು ರಕ್ಷಿಸಲು ಸಾಧ್ಯ ಎಂದು ಅವರು ಹೇಳಿದರು.

ಸ್ವತಂತ್ರ ಭಾರತದಲ್ಲಿ ಅನೇಕ ಸಮಸ್ಯೆ ಮತ್ತು ಸವಾಲುಗಳಿವೆ. ಕೆಲವರು ನಮ್ಮ ಸಂವಿಧಾನ ಇದಕ್ಕೆಲ್ಲಾ ಕಾರಣ ಎಂದು ದೂಷಿಸುತ್ತಾರೆ ಆದರೆ ಅದು ಸರಿಯಲ್ಲ. ಹೀಗೆ ಹೇಳುವವರಲ್ಲಿ ಒಬ್ಬನೇ ಒಬ್ಬ ನಮ್ಮ ಸಂವಿಧಾನಕ್ಕೆ ಪರ್ಯಾಯ ಏನು ಎಂಬುದನ್ನು ಹೇಳುವುದಿಲ್ಲ ಎಂದರು.

ವಾಸ್ತವವಾಗಿ ದೋಷವಿರುವುದು ನಮ್ಮ ಸಂವಿಧಾನದಲ್ಲಿ ಅಲ್ಲ, ನಮ್ಮಲ್ಲಿ. ಸಂವಿಧಾನವನ್ನು ನಾವು ಸರಿಯಾಗಿ ಓದಿಕೊಂಡು ಅದನ್ನು ಅನುಷ್ಠಾನಗೊಳಿಸುವಲ್ಲಿ ನಾವು ಎಡವಿದ್ದೇವೆ ಎಂದೂ ಅವರು ಅಭಿಪ್ರಾಯಪಟ್ಟರು.

ಅಧ್ಯಕ್ಷತೆವಹಿಸಿದ್ದ ಸಂಸ್ಥೆಯ ಮಹಾ ನಿರ್ದೇಶಕ ಬಿ.ಎ.ಸಾವಲೆ ಅವರು ಮಾತನಾಡಿ ಬಡತನ ಮತ್ತು ಅಸ್ಪೃಶ್ಯತೆ ಎಂಬ ಸಂಕೋಲೆಗಳ ನಡುವೆ ವಿದ್ಯಾಭ್ಯಾಸ ಮಾಡಿದ ಅಂಬೇಡ್ಕರ್ ಅವರು ಆಧುನಿಕ ಭಾರತ ನಿರ್ಮಾಣಕ್ಕಾಗಿ ದೂರದೃಷ್ಟಿ ಹಾಗೂ ವಿದ್ಯುತ್ ಮತ್ತು ಜಲಸಂಪನ್ಮೂಲ ಕ್ಷೇತ್ರಕ್ಕೂ ಅಪಾರ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದರು.

ಸಂಸ್ಥೆಯ ಅಂಬೇಡ್ಕ‌ರ್ ಆಚರಣಾ ಸಮಿತಿ ಅಧ್ಯಕ್ಷ ಆ‌ರ್.ಶಂಕ‌ರ್ ಅವರು ಕಾರ್ಯಕ್ರಮದ ಯಶಸ್ಸಿನ ಕುರಿತು ಹರ್ಷ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಪರೀಕ್ಷೆಗಳಲ್ಲಿ ಸಾಧನೆ ಮಾಡಿದ ಸಂಸ್ಥೆಯ ಉದ್ಯೋಗಿಗಳ ಮಕ್ಕಳಿಗೆ ಪ್ರಶಂಸಾ ಪತ್ರ ಹಾಗೂ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದ ಮುಖ್ಯ ಸಂಯೋಜಕ ಹಾಗೂ ಸಂಸ್ಥೆಯ ಹೆಚ್ಚುವರಿ ನಿರ್ದೇಶಕ ಗುಜ್ಜಾಲ ಬಿ ಬಾಲರಾಜು ಮತ್ತಿತರರು ಉಪಸ್ಥಿತರಿದ್ದರು.

City Today News
9341997936