ರಾಜ್ಯ ಸರ್ಕಾರದ ಸ್ಪಂದನೆಗೆ ಭಿಕ್ಕು ಸಂಘದ ಕೃತಜ್ಞತೆ, ಮೇ 12ಕ್ಕೆ ಬುದ್ಧ ಜಯಂತಿ ಆಚರಣೆ

ಬೆಂಗಳೂರು, ಮೇ 5: ಪೂಜ್ಯ ಬೋಧಿದತ್ತ ಮತ್ತು ಭಿಕ್ಕು ಸಂಘವು ಈ ಹಿಂದೆ ಗುಲ್ಬರ್ಗ ಜಿಲ್ಲೆಯ ಸನ್ನತಿ ಸ್ಮಾರಕದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ವರೆಗೆ ನಡೆಸಿದ ಕಾಲ್ನಡಿಗೆ ಜಾಥಾ ಹಾಗೂ ಆಮರಣಾಂತ ಉಪವಾಸ ಸತ್ಯಾಗ್ರಹಕ್ಕೆ ರಾಜ್ಯ ಸರ್ಕಾರವು ಸಕಾರಾತ್ಮಕವಾಗಿ ಸ್ಪಂದಿಸಿತ್ತು. ಈ ಹೋರಾಟದ ಫಲವಾಗಿ, ಸನ್ನತಿ ಸ್ಮಾರಕ ಅಭಿವೃದ್ಧಿ ಪ್ರಾಧಿಕಾರ ರಚನೆ, ಬೌದ್ಧ ಅಧ್ಯಯನ ಅಕಾಡೆಮಿ ಸ್ಥಾಪನೆ ಮತ್ತು ಬುದ್ಧ ಜಯಂತಿಯನ್ನು ರಾಜ್ಯ ಸರ್ಕಾರವೇ ಆಚರಿಸುವ ಮಹತ್ವದ ಆದೇಶಗಳನ್ನು ಹೊರಡಿಸಿದ್ದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಭಿಕ್ಕು ಸಂಘವು ತುಂಬು ಹೃದಯದ ಕೃತಜ್ಞತೆಗಳನ್ನು ಸಲ್ಲಿಸಿದೆ.

ಮುಂದಿನ ದಿನಗಳಲ್ಲಿ ನಡೆಯಲಿರುವ 2669ನೇ ಬುದ್ಧ ಜಯಂತಿ ಆಚರಣೆಯ ಕುರಿತು ಭಾನುವಾರ ಬೆಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿಯನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಭಿಕ್ಕು ಸಂಘದ ಮುಖಂಡರು, ಮೇ 12ರಂದು ನಡೆಯುವ ಬುದ್ಧ ಜಯಂತಿಯ ಅಂಗವಾಗಿ ಲೋಕಶಾಂತಿಯನ್ನು ಬಯಸಿ ಮೇ 6ರಿಂದ ಮೇ 12ರವರೆಗೆ “ಬೋಧಿ ಸಪ್ತಾಹ”ವನ್ನು ಆಚರಿಸಲಾಗುವುದು ಎಂದು ತಿಳಿಸಿದರು.
ಬೆಂಗಳೂರಿನ ಗಾಂಧಿನಗರ, ಯಶವಂತಪುರ, ಮಲ್ಲೇಶ್ವರಂ ಮತ್ತು ಹೆಬ್ಬಾಳ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ಬಡವರ ಕಾಲೋನಿಗಳಲ್ಲಿ ಈ ಬೋಧಿ ಸಪ್ತಾಹವು ನಡೆಯಲಿದೆ. ಸಾರ್ವಜನಿಕರಿಗೆ ಬೌದ್ಧ ಚಿಂತನೆಗಳ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಭಿಕ್ಕು ಸಂಘವು ಈ ಏಳು ಕಾಲೋನಿಗಳಲ್ಲಿ ಏಳು ದಿನಗಳ ಕಾಲ “ಬೋಧಿ ಪ್ರವಚನ” ಕಾರ್ಯಕ್ರಮವನ್ನು ಆಯೋಜಿಸಿದೆ.
ಬುದ್ಧ ಜಯಂತಿಯ ದಿನವಾದ ಮೇ 12ರಂದು ಬೆಳಿಗ್ಗೆ 8:30ಕ್ಕೆ ಶ್ರೀರಾಮಪುರದ ಗೌತಮ ಕಾಲೋನಿಯಿಂದ ಬುದ್ಧ ಪ್ರತಿಮೆಯನ್ನೊಳಗೊಂಡ “ಬೋಧಿರಥ”ದ ಮೆರವಣಿಗೆಯು ವಿಜೃಂಭಣೆಯಿಂದ ನಡೆಯಲಿದೆ. ಈ ರಥವು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಏಳು ನಿಗದಿತ ಕಾಲೋನಿಗಳ ಮೂಲಕ ಹಾದು ಮಧ್ಯಾಹ್ನ 12 ಗಂಟೆಗೆ ಸದಾಶಿವನಗರದ ನಾಗಸೇನಾ ಬುದ್ಧ ವಿಹಾರವನ್ನು ತಲುಪಲಿದೆ. ನಂತರ ಅಲ್ಲಿ ಬುದ್ಧ ಜಯಂತಿ ಆಚರಣೆಯು ನೆರವೇರಲಿದೆ.
ಇದರೊಂದಿಗೆ, ಮಕ್ಕಳಿಗಾಗಿ ಮೇ 6ರಿಂದ ವಿಶೇಷ “ಪಬ್ಬಜ ತರಬೇತಿ ಕಾರ್ಯಕ್ರಮ”ವನ್ನು ಆಯೋಜಿಸಲಾಗಿದೆ. ಈ ಶಿಬಿರದಲ್ಲಿ ಪ್ರತಿದಿನ ಬೌದ್ಧ ತತ್ವಜ್ಞಾನಿಗಳು ಮತ್ತು ಚಿಂತಕರಿಂದ ಉಪನ್ಯಾಸಗಳನ್ನು ನೀಡಲಾಗುವುದು. ಮೇ 9ರಂದು ಮಹಾಬೋಧಿ ಬುದ್ಧ ವಿಹಾರದ ಪೂಜ್ಯ ಆನಂದ ಭಂತೇಜಿ ಅವರು ವಿಶೇಷ ಪ್ರವಚನವನ್ನು ನೀಡಲಿದ್ದಾರೆ.

ಬುದ್ಧ ಜಯಂತಿ ಕಾರ್ಯಕ್ರಮದಲ್ಲಿ ಖ್ಯಾತ ಬೌದ್ಧ ಸಾಹಿತಿಗಳಾದ ಮೂಡ್ಯಾಕ್ಕೋಡು ಚಿನ್ನಸ್ವಾಮಿ ಹಾಗೂ ಮಾಜಿ ಸಚಿವರು ಮತ್ತು ಸಾಹಿತಿಗಳಾದ ಬಿ.ಟಿ.ಲಲಿತಾ ನಾಯಕ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಡಾ. ಎಂ. ವೆಂಕಟಸ್ವಾಮಿ (ರಾಷ್ಟ್ರೀಯ ಉಪಾಧ್ಯಕ್ಷರು), ವರಜ್ಯೋತಿ ಭಂತೇಜಿ (ಹಿರಿಯ ಬಿಕ್ಕುಗಳು, ನಾಗಸೇನಾ ಬುದ್ಧ ವಿಹಾರ), ಡಾ. ಹೆಚ್. ಆರ್. ಸುರೇಂದ್ರ (ಹಿರಿಯ ಧಮ್ಮಾಚಾರಿಗಳು, ನಾಗಸೇನಾ ಬುದ್ಧ ವಿಹಾರ) ಮತ್ತು ಬುದ್ಧಮ್ಮ (ನಿವಾಸಿ ಬಿಕ್ಕುಣಿ, ನಾಗಸೇನಾ ಬುದ್ಧ ವಿಹಾರ) ಅವರು ಜಂಟಿಯಾಗಿ ಮಾಹಿತಿ ನೀಡಿದರು.

City Today News 9341997936