ಶೃಂಗಾರ್ ಪ್ಯಾಲೆಸ್ ನಲ್ಲಿ ಬ್ಯಾರಿ ಕೂಟ 2026: ಸಿಎಂ–ಡಿಸಿಎಂ ಭಾಗವಹಿಸುವ ನಿರೀಕ್ಷೆ

ಬೆಂಗಳೂರು | ದಿನಾಂಕ: 29-01-2026
ಬ್ಯಾರೀಸ್ ಸೆಂಟ್ರಲ್ ಕಮಿಟಿ ಬೆಂಗಳೂರು (ರಿ) ವತಿಯಿಂದ ಇಂದು ಪ್ರೆಸ್ ಕ್ಲಬ್ ಆಫ್ ಬೆಂಗಳೂರುನಲ್ಲಿ ಪತ್ರಿಕಾಗೋಷ್ಠಿ ಆಯೋಜಿಸಲಾಯಿತು. ಈ ಗೋಷ್ಠಿಯಲ್ಲಿ ಕಮಿಟಿಯ ಅಧ್ಯಕ್ಷರಾದ ಶಬೀರ್ ಬ್ರಿಗೇಡ್, ಪ್ರಮುಖ ಮುಖಂಡರಾದ ನಾಸೀರ್ ಕೆಂಪಿ, ರಿಫಾಯಿ, ಅಥಾವುಲ್ಲ, ಪೂಂಜಾಲಕಟ್ಟೆ, ಬಶೀರ್ ಅಡ್ಯನಡ್ಕ ಸೇರಿದಂತೆ ಇತರ ಪದಾಧಿಕಾರಿಗಳು ಭಾಗವಹಿಸಿ, ಮುಂದಿನ ದಿನಗಳಲ್ಲಿ ಆಯೋಜಿಸಲಾಗಿರುವ ಮಹತ್ವದ ಕಾರ್ಯಕ್ರಮದ ವಿವರಗಳನ್ನು ಮಾಧ್ಯಮದೊಂದಿಗೆ ಹಂಚಿಕೊಂಡರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಬ್ಯಾರಿ ಕೂಟ 2026” ಎಂಬ ಭವ್ಯ ಸಮಾವೇಶವನ್ನು ದಿನಾಂಕ 01-02-2026 ರಂದು ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಬೆಂಗಳೂರಿನ ಅರಮನೆ ಮೈದಾನದ ಗೇಟ್ ನಂ.8 ರಲ್ಲಿರುವ ಶೃಂಗಾರ್ ಪ್ಯಾಲೆಸ್ ನಲ್ಲಿ ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಈ ಕಾರ್ಯಕ್ರಮಕ್ಕೆ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಭಾಪತಿ ಯು.ಟಿ. ಖಾದರ್, ಸಚಿವ ಜಮೀರ್ ಅಹ್ಮದ್ ಖಾನ್, ಶಾಸಕ ರಿಜ್ವನ್ ಅರ್ಷದ್ ಸೇರಿದಂತೆ ರಾಜ್ಯದ ಹಲವು ಗಣ್ಯ ನಾಯಕರು ಮುಖ್ಯ ಅತಿಥಿಗಳಾಗಿ ಭಾಗವಹಿಸುವ ನಿರೀಕ್ಷೆಯಿದೆ. ಜೊತೆಗೆ ಬ್ಯಾರಿ ಸಮುದಾಯದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಉದ್ಯಮಿಗಳು, ಸಮಾಜದ ಗಣ್ಯರು, ಸಂಘಟನೆಯ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಸಹ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

“ಬ್ಯಾರಿ ಕೂಟ 2026” ಕಾರ್ಯಕ್ರಮವು ಬ್ಯಾರಿ ಸಮುದಾಯದ ಸಾಂಸ್ಕೃತಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಬೆಳವಣಿಗೆಯನ್ನು ಪ್ರತಿಬಿಂಬಿಸುವ ವೇದಿಕೆಯಾಗಲಿದೆ ಎಂದು ಆಯೋಜಕರು ಅಭಿಪ್ರಾಯಪಟ್ಟರು. ಈ ಸಮಾವೇಶದಲ್ಲಿ ಸುಮಾರು 20,000 ರಿಂದ 25,000 ಜನರು ಭಾಗವಹಿಸುವ ನಿರೀಕ್ಷೆಯಿದೆ ಎಂದು ಅವರು ಮಾಹಿತಿ ನೀಡಿದರು.

ಬ್ಯಾರಿ ಸಮುದಾಯದ ಏಕತೆ, ಪರಸ್ಪರ ಸಹಕಾರ ಮತ್ತು ಮುಂದಿನ ಪೀಳಿಗೆಗೆ ಶಕ್ತಿಶಾಲಿ ದಿಕ್ಕು ನೀಡುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಎಲ್ಲಾ ಸಮುದಾಯದ ಬಾಂಧವರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕಮಿಟಿಯವರು ಮನವಿ ಮಾಡಿದರು.

City Today News 9341997936