
ವಿವಿಧ ದೀರ್ಘಕಾಲದ ಸಮಸ್ಯೆಗಳು ಹಾಗೂ ಹಕ್ಕುಸಂಬಂಧಿತ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತೆ-ಸಹಾಯಕಿಯರ ಸ್ವತಂತ್ರ ಸಂಘಟನೆಯ ಪದಾಧಿಕಾರಿಗಳು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಮನವಿ ಸಲ್ಲಿಸಿದರು.
ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಸೇವೆಯನ್ನು ಶಾಶ್ವತಗೊಳಿಸುವುದು, ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಕೇಂದ್ರ ಸರ್ಕಾರದಿಂದ ಕನಿಷ್ಠ ವೇತನ ಜಾರಿಗೆ ಕ್ರಮ ಕೈಗೊಳ್ಳುವುದು, 2011ರಿಂದ ನಿವೃತ್ತರಾದ ಎಲ್ಲಾ ಕಾರ್ಯಕರ್ತೆಯರು-ಸಹಾಯಕಿಯರಿಗೆ ಗ್ರಾಚ್ಯುಟಿ ಮಂಜೂರು ಮಾಡುವುದು ಸೇರಿದಂತೆ ಹಲವು ಪ್ರಮುಖ ಬೇಡಿಕೆಗಳನ್ನು ಮನವಿಯಲ್ಲಿ ಪ್ರಸ್ತಾಪಿಸಲಾಗಿದೆ.
ಇದರ ಜೊತೆಗೆ, ಸಿಬ್ಬಂದಿಗೆ ಇಎಸ್‌ಐ ಸೌಲಭ್ಯ ಒದಗಿಸಿ ಗಂಭೀರ ಅನಾರೋಗ್ಯದ ಸಂದರ್ಭ ಸಂಬಳ ಸಹಿತ ರಜೆ ನೀಡಬೇಕು ಎಂದು ಆಗ್ರಹಿಸಲಾಗಿದೆ. ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಅವಧಿಯಲ್ಲಿ ಆರಂಭವಾದ ನೂರು ಅಂಗನವಾಡಿಗಳಿಗೆ ಕೇಂದ್ರ ಅನುದಾನ ಬಿಡುಗಡೆ ಆಗದೆ ಇರುವುದನ್ನು ಉಲ್ಲೇಖಿಸಿ ತಕ್ಷಣ ಹಣ ಬಿಡುಗಡೆ ಮಾಡಲು ಒತ್ತಾಯಿಸಲಾಗಿದೆ.
2018ರಲ್ಲಿ ಗೌರವಧನ ಹೆಚ್ಚಳವಾದ ಬಳಿಕ ಇದುವರೆಗೆ ಯಾವುದೇ ಪರಿಷ್ಕರಣೆ ಆಗದಿರುವುದರಿಂದ, ಪೋಶಣ ಟ್ರ್ಯಾಕರ್, ಮಾತೃ ವಂದನಾ, ಸಿಬಿಇ ಚಟುವಟಿಕೆ, ಮಿಷನ್ ಶಕ್ತಿ ಸೇರಿದಂತೆ ಹೆಚ್ಚುತ್ತಿರುವ ಹೊಣೆಗಾರಿಕೆಗೆ ತಕ್ಕಂತೆ ಕನಿಷ್ಠ ವೇತನ ಜಾರಿಗೊಳಿಸಬೇಕು ಎಂದು ಸಂಘಟನೆ ಒತ್ತಾಯಿಸಿದೆ. ಕೇಂದ್ರದಿಂದ ನೀಡಿದ 4ಜಿ ಮೊಬೈಲ್ ಸಾಧನಗಳಲ್ಲಿ ಡೇಟಾ ಮಿತಿ ಹಾಗೂ ತಾಂತ್ರಿಕ ಸಮಸ್ಯೆಗಳಿರುವುದರಿಂದ ಹೊಸ ಮೊಬೈಲ್ ಹಾಗೂ ಪ್ರತಿದಿನ ಸಮರ್ಪಕ ಡೇಟಾ ಸೌಲಭ್ಯ ಕಲ್ಪಿಸಬೇಕು ಎಂದು ಮನವಿಯಲ್ಲಿ ಹೇಳಲಾಗಿದೆ.
ಸುಪ್ರೀಂ ಕೋರ್ಟ್ ನಿರ್ದೇಶನಗಳಿದ್ದರೂ ಅಂಗನವಾಡಿ ಸಿಬ್ಬಂದಿಗೆ ಬಿಎಲ್‌ಒ ಕರ್ತವ್ಯ ಹೇರಿಕೆಯಾಗುತ್ತಿರುವುದನ್ನು ಖಂಡಿಸಿ ಅದರಿಂದ ವಿನಾಯಿತಿ ನೀಡಬೇಕು, ಪೋಶಣ ಟ್ರ್ಯಾಕರ್ ಚಟುವಟಿಕೆಗಳಿಗೆ ನೀಡಲಾಗುವ ಅನುದಾನವನ್ನು ಹೆಚ್ಚಿಸಬೇಕು, ದಾಖಲೆ ಮತ್ತು ಡಿಜಿಟಲ್ ನಿರ್ವಹಣೆಗೆ ಅಗತ್ಯ ಸಾಧನಗಳನ್ನು ಒದಗಿಸಬೇಕು ಎಂಬ ಬೇಡಿಕೆಗಳನ್ನೂ ಮುಂದಿರಿಸಲಾಗಿದೆ. ಜೊತೆಗೆ ಮಕ್ಕಳ ಪೌಷ್ಟಿಕಾಹಾರಕ್ಕೆ ನಿಗದಿಯಾದ ದಿನಸಿ ವೆಚ್ಚವನ್ನು ₹8ರಿಂದ ₹15ಕ್ಕೆ ಹೆಚ್ಚಿಸಬೇಕು ಮತ್ತು ಫಲಾನುಭವಿಗಳ ಫೇಸ್ ಕ್ಯಾಪ್ಚರ್ ಪ್ರಕ್ರಿಯೆಯನ್ನು ಪ್ರಾಯೋಗಿಕವಾಗಿ ಆರು ತಿಂಗಳಿಗೆ ಅಥವಾ ವರ್ಷಕ್ಕೆ ಒಮ್ಮೆ ನಡೆಸಲು ಅವಕಾಶ ನೀಡಬೇಕು ಎಂದು ಮನವಿ ಉಲ್ಲೇಖಿಸಿದೆ.
ರಾಜ್ಯಾಧ್ಯಕ್ಷೆ ಬಿ. ಪ್ರೇಮ, ಕಾರ್ಯದರ್ಶಿ ಉಮಾವಾಣಿ, ಖಜಾಂಚಿ ವಿಶಾಲಾಕ್ಷಿ, ನಿರ್ಮಲ ಬಿ.ಎಸ್. ರಾಜ್ಯ ಉಪಾಧ್ಯಕ್ಷರು,ಪ್ರೇಮ ರಾಜ್ಯ ಸಹಕಾರ್ಯದರ್ಶಿ, ಸೇರಿದಂತೆ ರಾಜ್ಯ, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
City Today News 9341997936

You must be logged in to post a comment.