ಹಿರಿಯ ವಕೀಲರಾದ ಸದಾಶಿವ ರೆಡ್ಡಿ ಅವರ ಮೇಲೆ ನಡೆದ ಭೀಕರ ದಾಳಿಯನ್ನು ರಾಜ್ಯ ವಕೀಲರ ಪರಿಷತ್ತು ತೀವ್ರವಾಗಿ ಖಂಡಿಸಿದೆ



ಬೆಂಗಳೂರು, ಏಪ್ರಿಲ್ 19: ಭಾರತೀಯ ವಕೀಲರ ಪರಿಷತ್ತಿನ ಸಹಾಧ್ಯಕ್ಷರು, ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರೂ ಆಗಿರುವ ಹಿರಿಯ ವಕೀಲರಾದ ಶ್ರೀ ಸದಾಶಿವ ರೆಡ್ಡಿ ಅವರ ಮೇಲೆ ದಿನಾಂಕ 16 ಏಪ್ರಿಲ್ 2025 ರಂದು ಬೆಳಿಗ್ಗೆ 8.30ಕ್ಕೆ ಅವರ ಬೆಂಗಳೂರು ಕಚೇರಿಯಲ್ಲಿ ಅಪರಿಚಿತ ವ್ಯಕ್ತಿಗಳಿಬ್ಬರು ನಡೆಸಿದ ಭೀಕರ ಹಲ್ಲೆಯನ್ನು ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ತೀವ್ರವಾಗಿ ಖಂಡಿಸಿದೆ.

ಘಟನೆಯ ಕುರಿತು ರಾಜ್ಯ ವಕೀಲರ ಪರಿಷತ್ತಿನಲ್ಲಿ ಏಪ್ರಿಲ್ 19ರಂದು ತುರ್ತು ಸಭೆ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಪರಿಷತ್ತಿನ ಅಧ್ಯಕ್ಷರು ವಹಿಸಿದ್ದರು. ಸಭೆಯಲ್ಲಿ ಘಟನೆಯ ಸಂಪೂರ್ಣ ವಿವರಗಳನ್ನು ವಿಶ್ಲೇಷಿಸಲಾಯಿತು ಮತ್ತು ಮುಂದಿನ ಕ್ರಮಗಳ ಬಗ್ಗೆ ನಿರ್ಧಾರಗಳನ್ನು ಕೈಗೊಳ್ಳಲಾಯಿತು.

ಘಟನೆಯ ವಿವರಗಳು:

ಘಟನೆಯಂದು ಶ್ರೀ ಸದಾಶಿವ ರೆಡ್ಡಿ ಅವರು ತಮ್ಮ ಕಚೇರಿಯಲ್ಲಿ ಕಿರಿಯ ಸಹೋದ್ಯೋಗಿಯೊಂದಿಗೆ ಕೆಲಸ ನಿರ್ವಹಿಸುತ್ತಿದ್ದಾಗ, ಅಪರಿಚಿತ ವ್ಯಕ್ತಿಗಳಿಬ್ಬರು ಫೈಬರ್ ಪೈಪ್‌ಗಳೊಂದಿಗೆ ಕಚೇರಿಗೆ ನುಗ್ಗಿ, ದುರ್ಬಾಷೆ ಉಪಯೋಗಿಸಿ ಅವರ ತಾಯಿ ಹಾಗೂ ಡಿ.ಎನ್. ನಂಜುಂಡರೆಡ್ಡಿ ಎಂಬ ವ್ಯಕ್ತಿಯ ಕುರಿತು ಘೋಷಣೆಗಳನ್ನು ಕೂಗಿದರು. ನಂತರ ಅವರನ್ನು ಹಲ್ಲೆ ಮಾಡಲು ಮುಂದಾಗಿ, ಫೈಬರ್ ಪೈಪ್ ನಿಂದ ಅವರ ಬಲಗೈ, ಎಡ ಮೊಣಕೈ ಹಾಗೂ ಎಡ ಅಡಿಗೆ ಭಾಗದಲ್ಲಿ ಗಂಭೀರ ಗಾಯಗಳು ಉಂಟುಮಾಡಿದರು. ಮೂಳೆ ಮುರಿತದ ಜೊತೆಗೆ ರಕ್ತ ಗಾಯಗಳೂ ಸಂಭವಿಸಿದ್ದು, ತಕ್ಷಣವೇ ಅವರಿಗೆ ಚಿಕಿತ್ಸೆ ನೀಡಲಾಗಿದೆ.

ಘಟನೆಗೆ ಸಂಬಂಧಪಟ್ಟಂತೆ ಇನ್ನೊಬ್ಬ ವ್ಯಕ್ತಿಯು ಸಂಪೂರ್ಣ ಹಲ್ಲೆಯ ವೀಡಿಯೋವನ್ನು ದಾಖಲಿಸಿರುವುದಾಗಿ ಮಾಹಿತಿ ಲಭಿಸಿದ್ದು, ಹಲ್ಲೆಗೆ ಹಿಂದೆ ಯಾವುದೇ ವೈಯಕ್ತಿಕ ದ್ವೇಷವೋ ಅಥವಾ ಆಕ್ಷೇಪಾರ್ಹ ಉದ್ದೇಶವೋ ಇರುವ ಸಾಧ್ಯತೆಯ ಕುರಿತು ಅನುಮಾನ ವ್ಯಕ್ತವಾಗಿದೆ.

ವಕೀಲರ ಸಮುದಾಯದ ಪ್ರತಿಕ್ರಿಯೆ:

ರಾಜ್ಯದ ಎಲ್ಲ ವಕೀಲ ಸಂಘಗಳು, ನಾಗರಿಕ ಸಂಘಟನೆಗಳು ಮತ್ತು ಮಾಧ್ಯಮಗಳು ಈ ಅಮಾನವೀಯ ಕೃತ್ಯವನ್ನು ಖಂಡಿಸಬೇಕು ಎಂದು ರಾಜ್ಯ ವಕೀಲರ ಪರಿಷತ್ತು ಕರೆ ನೀಡಿದೆ. ವಕೀಲರ ಭದ್ರತೆ ಕಾಪಾಡುವ ದಿಶೆಯಲ್ಲಿ ತಕ್ಷಣ ಕ್ರಮಕೈಗೊಳ್ಳುವ ಅಗತ್ಯವಿದೆ ಎಂದು ಪರಿಷತ್ತು ತೀವ್ರವಾಗಿ ಒತ್ತೆಯಿಟ್ಟಿದೆ.

ಪ್ರತಿಭಟನೆ ಮತ್ತು ನಿರ್ಧಾರಗಳು:

ಈ ಘಟನೆಯ ಖಂಡನೆಯಾಗಿ ದಿನಾಂಕ 21 ಏಪ್ರಿಲ್ 2025 ರಂದು ರಾಜ್ಯದ ಎಲ್ಲಾ ವಕೀಲರು ತಮ್ಮ ಬಲಗೈಗೆ ಕೆಂಪು ಪಟ್ಟಿಯನ್ನು ಧರಿಸಿ, ಮೌನ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಪ್ರತಿ ವಕೀಲರ ಸಂಘವು ಸಂಬಂಧಪಟ್ಟ ಜಿಲ್ಲಾಧಿಕಾರಿ/ಅಪರ ಜಿಲ್ಲಾಧಿಕಾರಿ/ತಹಶೀಲ್ದಾರರಿಗೆ ಖಂಡನಾ ಮನವಿ ಪತ್ರವನ್ನು ಸಲ್ಲಿಸುವ ಮೂಲಕ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಲಿದೆ.

ಪರಿಷತ್ತಿನ ಆಗ್ರಹ:

ಈ ಅಮಾನವೀಯ ದಾಳಿಗೆ ಸಂಬಂಧಪಟ್ಟವರ ವಿರುದ್ಧ ಕಠಿಣ ಹಾಗೂ ಕಾನೂನುಬದ್ಧ ಕ್ರಮಗಳನ್ನು ತಕ್ಷಣ ಕೈಗೊಳ್ಳಬೇಕು. ಘಟನೆಯ ಕುರಿತು ಸಮಗ್ರ, ಸೂಕ್ತ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಯಬೇಕು. ವಕೀಲ ವೃತ್ತಿಯ ಗೌರವ ಹಾಗೂ ಭದ್ರತೆಗೆ ಧಕ್ಕೆಯಾಗದಂತೆ ಸರ್ಕಾರ ತ್ವರಿತ ಕ್ರಮ ಕೈಗೊಳ್ಳಬೇಕು ಎಂಬುದು ಪರಿಷತ್ತಿನ ನಿರ್ಧಾರವಾಗಿದೆ.

City Today News 9341997936