ಅನಧಿಕೃತ ನೀರಾವರಿ ಪಂಪ್ ಸೆಟ್ ಗಳನ್ನು ಸಕ್ರಮಗೊಳಿಸಲು ಮೂಲಸೌಕರ್ಯಗಳನ್ನು ಕಲ್ಪಿಸಲು ಕರೆಯಲಾಗಿರುವ ಟೆಂಡರ್ ಗಳಿಗೆ ಕೂಡಲೇ ಕಾರ್ಯಾದೇಶ ನೀಡಲು ಎಲೆಕ್ನಿಕಲ್ ಇಪಿಸಿ ಕಾಂಟ್ರಾಕ್ಟರ್ಸ್ ಅಸೋಸಿಯೇಷನ್ ಉದ್ದೇಶಪೂರ್ವಕವಾಗಿ ವಿಳಂಬ ನೀತಿಯನ್ನು ಅನುಸರಿಸುತ್ತಿರುವ ಸರಕಾರ

ಅನಧಿಕೃತ ನೀರಾವರಿ ಪಂಪ್ ಸೆಟ್ ಗಳನ್ನು ಸಕ್ರಮಗೊಳಿಸಲು ಮೂಲಸೌಕರ್ಯಗಳನ್ನು ಕಲ್ಪಿಸಲು ಕರೆಯಲಾಗಿರುವ ಟೆಂಡರ್ ಗಳಿಗೆ ಕೂಡಲೇ ಕಾರ್ಯಾದೇಶ ನೀಡಲು ಎಲೆಕ್ನಿಕಲ್ ಇಪಿಸಿ ಕಾಂಟ್ರಾಕ್ಟರ್ಸ್ ಅಸೋಸಿಯೇಷನ್ ಉದ್ದೇಶಪೂರ್ವಕವಾಗಿ ವಿಳಂಬ ನೀತಿಯನ್ನು ಅನುಸರಿಸುತ್ತಿರುವ ಸರಕಾರದ ಧೋರಣೆಯನ್ನು ಅಸೋಸಿಯೇಷನ್ ಖಂಡಿಸಿದೆ. ಸರ್ಕಾರವನ್ನು ಆಗ್ರಹಪಡಿಸಿದೆ.

ಪ್ರೆಸ್ಸ್ ಕ್ಲಬ್ ಆಫ್ ಬೆಂಗಳೂರಿನಲ್ಲಿ ನಡೆದ ಪತ್ರಿಕಾ ಘೋಷ್ಠಿ

ಸರಕಾರ 31-05-2022ರಲ್ಲಿ ರೈತರ ಪಂಪ್ ಸೆಟ್ ಗಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಟೆಂಡ‌ರ್ ಆಹ್ವಾನಿಸಿರುತ್ತದೆ. ಅರ್ಹ ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಲು ಎಲ್ಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಾಗಿರುತ್ತದೆ. ಕನಿಷ್ಠ ಮೊತ್ತಕ್ಕೆ ಬಿಡ್ ಮಾಡಿರುವ ಗುತ್ತಿಗೆದಾರರನ್ನು ಆಹ್ವಾನಿಸಿ ದರ ಸಂಧಾನ ತೀರ್ಮಾನವನ್ನು ಕೈಗೊಂಡಿರುತ್ತದೆ. ನಂತರ ಲೆಟರ್ ಆಫ್ ಇಂಟೆಂಟ್ ನೀಡಿರುತ್ತದೆ. ಈ ದರಕ್ಕೆ ಗುತ್ತಿಗೆದಾರರು ಒಪ್ಪಿದ್ದು ಕಾಮಗಾರಿಗಳನ್ನು ನಡೆಸಲು ದ್ವಿಪಕ್ಷೀಯ ಒಪ್ಪಂದ ಮಾಡಿಕೊಳ್ಳಲಾಗುತ್ತದೆ. ಗುತ್ತಿಗೆದಾರರು ಬ್ಯಾಂಕ್ ಖಾತರಿ ಒಪ್ಪಂದ ಪತ್ರವನ್ನು ನೀಡಿರುತ್ತಾರೆ. ಅದರಂತೆ ರಾಜ್ಯದ ಎಸ್ಕಾಂಗಳು ಅನಧಿಕೃತ ಪಂಪ್ ಸೆಟ್ ಗಳಿಗೆ ಮೂಲಸೌಕರ್ಯ ಕಲ್ಪಿಸಲು ವಿಸ್ತತ ಕಾರ್ಯಾದೇಶ ನೀಡಿರುತ್ತದೆ. ಈ ಎಲ್ಲ ಪ್ರಕ್ರಿಯೆಗಳು ಪೂರ್ಣಗೊಂಡಿದ್ದು 23-10-2023 ರಂದು ಸರಕಾರ ರೈತರ ಪಂಪ್ ಸೆಟ್ ಗಳನ್ನು ಸಕ್ರಮಗೊಳಿಸಲು ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಸರ್ಕಾರದ ಆದೇಶ ಹೊರಡಿಸಿರುತ್ತದೆ. ಪ್ರತಿ ಅಂದಾಜುಪಟ್ಟಿಗೆ ಪ್ರತ್ಯೇಕ ಕಾರ್ಯಾದೇಶ ನೀಡಬೇಕಾಗಿರುತ್ತದೆ. ಆದರೆ ಪ್ರತ್ಯೇಕ ಕಾರ್ಯಾದೇಶ ನೀಡಲು ಸರಕಾರ ಮೀನಮೇಷ ಎಣಿಸುತ್ತಿದೆ.

ಈ ಟೆಂಡ‌ರ್ ಆಹ್ವಾನಿಸಲು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್ ಸಿ) ಒಪ್ಪಿಗೆ ನೀಡಿರುತ್ತದೆ. ಈ ವರ್ಷದಲ್ಲೇ ಅನುದಾನ ಬಿಡುಗಡೆ ಮತ್ತು ಇಲಾಖೆಯ ಬಜೆಟ್‌ನಲ್ಲಿ ಹಣ ಹೊಂದಿಸಿಕೊಳ್ಳಲು ಸಮ್ಮತಿ ನೀಡಿರುತ್ತದೆ. ಈ ಆದೇಶದನ್ವಯ ಎಲ್ಲಾ ಎಸ್ಕಾಂಗಳು ಅನುದಾನದ ಹೊಂದಾಣಿಕೆ ಮಾಡಿಕೊಂಡಿರುತ್ತವೆ. ಹೆಸ್ಕಾಂ, ಬೆಸ್ಕಾಂ ಮತ್ತು ಸೆಸ್ಕ್ ನಲ್ಲಿ ಸುಮಾರು 1,500 ಕೋಟಿ ರೂಪಾಯಿ ಮೊತ್ತಕ್ಕೆ, ಟೆಂಡರ್ ಆಹ್ವಾನಿಸಲಾಗಿರುತ್ತದೆ. ಈ ಮಧ್ಯೆ ಸರಕಾರದ ಆದೇಶವಿದ್ದು, ಬಜೆಟ್ ನಲ್ಲಿ ಹಣ ನಿಗಧಿಯಾಗಿರುವುದರಿಂದ ಹೆಸ್ಕಾಂನಲ್ಲಿ ಸುಮಾರು 200 ಕೋಟಿ ರೂ.ಗಳಷ್ಟು ಮೊತ್ತದ ಕಾಮಗಾರಿಗಳು ಚಾಲ್ತಿಯಲ್ಲಿವೆ. ಸೆಸ್ಕ್ ಕೇಂದ್ರ ಕಚೇರಿಯಿಂದ ವಿಭಾಗೀಯ ಕಚೇರಿಗಳಿಗೆ ಅಲ್ಪ ಪ್ರಮಾಣದ ಅನುದಾನ ಬಿಡುಗಡೆಯಾಗಿದ್ದು ಅಲ್ಲಿಯೂ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ.

ಸಾಮಗ್ರಿಗಳನ್ನು ಖರೀದಿ ಮಾಡಿರುವ ಗುತ್ತಿಗೆದಾರ:

ಹೆಸ್ಕಾಂ, ಬೆಸ್ಕಾಂ ಮತ್ತು ಸೆಸ್ಕ್ ನಲ್ಲಿ ಆದೇಶ ಇದೆ ಎಂಬ ಕಾರಣಕ್ಕೆ ಟೆಂಡರ್ ಪಡೆದುಕೊಂಡಿರುವ ಗುತ್ತಿಗೆದಾರರು ವಿದ್ಯುತ್ ಕಾಮಗಾರಿಗಳಿಗೆ ಅಗತ್ಯವಿರುವ ಸಾಮಗ್ರಿಗಳನ್ನು ಇಲಾಖಾ ತಪಾಸಣೆ ನಡೆಸಿದ ನಂತರ ಖರೀದಿ ಮಾಡಿರುತ್ತಾರೆ. ಈ ವಸ್ತುಗಳನ್ನು ದಾಸ್ತಾನು ಮಾಡಲು ಗೋದಾಮುಗಳನ್ನು ನಿರ್ಮಿಸಿಕೊಳ್ಳಲಾಗಿದೆ ಇಲ್ಲವೇ ಬಾಡಿಗೆಗೆ ಪಡೆಯಲಾಗಿದೆ. 1500 ಕೋಟಿ ರೂ. ಟೆಂಡರ್ ಗೆ 500-600 ಕೋಟಿ ರೂ.ಗಳಷ್ಟು ಬಂಡವಾಳ ಹೂಡಿ ಅಗತ್ಯ ವಸ್ತುಗಳನ್ನು ಖರೀದಿ ಮಾಡಲಾಗಿದೆ. ಈ ಗೋದಾಮುಗಳಿಗೆ 24 ಭದ್ರತೆ, ಸಿಸಿಟಿವಿ ಮತ್ತು ಕಚೇರಿ ಮತ್ತು ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗಿದೆ. ಈ ಎಲ್ಲ ಖರ್ಚು ವೆಚ್ಚಗಳನ್ನು ಗುತ್ತಿಗೆದಾರರೇ ಭರಿಸುತ್ತಿದ್ದಾರೆ. ಕಾಮಗಾರಿಗಳು ಯಾವುದೇ ಕ್ಷಣದಲ್ಲಿ ಆರಂಭವಾಗಬಹುದು ಎಂಬ ನಿರೀಕ್ಷೆಯಲ್ಲಿ ಹಲವಾರು ಗುತ್ತಿಗೆದಾರರು ಕಾರ್ಮಿಕರನ್ನು ನೇಮಿಸಿಕೊಂಡು ಸಂಬಳವನ್ನೂ ನೀಡುತ್ತಿರುವ ಉದಾಹರಣೆಗಳುಂಟು. ಈ ಸಾಮಗ್ರಿಗಳ ಖರೀದಿಗೆ ಬ್ಯಾಂಕ್ ಗಳಿಂದ ಓವರ್ ಡ್ರಾಫ್ಟ್ ಪಡೆದುಕೊಂಡು ಬಡ್ಡಿ ಕಟ್ಟುತ್ತಿದ್ದೇವೆ. ಕಾಲಮಿತಿಯೊಳಗೆ ಈ ಓವರ್ ಡ್ರಾಫ್ಟ್ ಹಣವನ್ನು ಪಾವತಿಸುವಂತೆ ಬ್ಯಾಂಕ್ ಗಳು ಒತ್ತಡ ಹೇರುತ್ತಿವೆ. ಸಕಾಲದಲ್ಲಿ ಪಾವತಿ ಮಾಡದಿದ್ದರೆ ಗುತ್ತಿಗೆದಾರರನ್ನು ಸುಸ್ತಿದಾರರನ್ನಾಗಿ ಮಾಡುವ ಸಂಭವವಿರುತ್ತದೆ. ಹೆಚ್ಚವರಿ ಹಣಕ್ಕೆ ಆಸ್ತಿಪಾಸ್ತಿಗಳನ್ನು ಅಡಮಾನ ಮಾಡಿದ್ದೇವೆ. ಖಾಸಗಿ ಲೇವಾದೇವಿಗಾರರಿಂದ ಬಡ್ಡಿಗೆ ಹಣ ತಂದಿರುತ್ತೇವೆ. ಆದರೆ ಸರಕಾರ ಮಾತ್ರ ಕಾರ್ಯಾದೇಶ ನೀಡದೆ ಸತಾಯಿಸುತ್ತಿದೆ. ವಿಧಾನಸೌಧದ ಮಟ್ಟದಲ್ಲಿ ನಾವು ಕಾರ್ಯಾದೇಶ ನೀಡಿರುತ್ತೇವೆ ಎಂದು ಹೇಳುತ್ತಾರೆ. ಆದರೆ ವಿಭಾಗೀಯ ಕಚೇರಿಗಳಲ್ಲಿ ಯಾವುದೇ ಕಾರ್ಯಾದೇಶ ನೀಡಬೇಡಿ ಎಂದು ಮೌಖಿಕವಾಗಿ ಆದೇಶ ಬಂದಿರುತ್ತದೆ ಎಂದು ಸ್ಥಳಿಯ ಮಟ್ಟದ ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸುತ್ತಾರೆ. ಅಂತಿಮವಾಗಿ ನಷ್ಟ ಅನುಭವಿಸುವುದು ಗುತ್ತಿಗೆದಾರ. ರೈತರು ಹಣ ಪಾವತಿಸಿ ಐದಾರು ವರ್ಷಗಳಾದರೂ ಸಕ್ರಮಗೊಳಿಸಲಾಗದೆ ಪರೋಕ್ಷವಾಗಿ ಸರಕಾರವೂ ನಷ್ಟ ಅನುಭವಿಸುವಂತಾಗುತ್ತದೆ.

ಅರ್ಹರಿಗೆ ಗುತ್ತಿಗೆ ನೀಡಲು ಮನವಿ:

ಟೆಂಡ‌ರ್ ಗಳನ್ನು ಆಹ್ವಾನಿಸುವಾಗ ವಿನಾಕಾರಣ ಇಲ್ಲಸಲ್ಲದ ಮತ್ತು ಅನಾವಶ್ಯಕವಾದ ನಿಬಂಧನೆಗಳನ್ನು ಹಾಕುವುದನ್ನು ಕೈ ಬಿಡಬೇಕು. ತಮಗೆ ಬೇಕಾಗಿರುವ ಗುತ್ತಿಗೆದಾರರ ಹಿತ ಕಾಪಾಡಲು ಈ ರೀತಿ ಮಾಡಲಾಗುತ್ತದೆ ಎನ್ನುವುದು ರಹಸ್ಯವೇನಲ್ಲ. ಹಲವು ದಶಕಗಳ ಅನುಭವ ಇರುವ ಗುತ್ತಿಗೆದಾರರು ಕಾಮಗಾರಿಗಳನ್ನು ಪಡೆದುಕೊಳ್ಳಲು ವಿದ್ಯುತ್ ಕಾಮಗಾರಿ ಕುರಿತು ಕನಿಷ್ಠ ಜ್ಞಾನವೂ ಇಲ್ಲದ ಮೂರನೇ ವ್ಯಕ್ತಿಗೆ ನಮಸ್ಕಾರ ಹಾಕಬೇಕಾಗುತ್ತದೆ. ಈ ಮೂರನೇ ವ್ಯಕ್ತಿಯನ್ನು ನೇಮಕ ಮಾಡಿಕೊಳ್ಳುವವರು ಯಾರು ಎಂದು ಸರಕಾರವೇ ಬಹಿರಂಗಪಡಿಸಬೇಕು.

ಅನುದಾನ ಇದ್ದಷ್ಟೇ ಟೆಂಡ‌ರ್ ಆಹ್ವಾನಿಸಿ:

ಪ್ರತಿ ಹೊಸ ಸರಕಾರ ರಚನೆಯಾದಾಗ ಮತ್ತು ಹೊಸ ಸಚಿವರು ನೇಮಕಗೊಂಡಾಗ ಸಾವಿರಾರು ಕೋಟಿ ರೂ.ಗಳ ಕಾಮಗಾರಿಗಳನ್ನು ಆಹ್ವಾನಿಸುವುದು ಸರಕಾರಗಳಿಗೆ ಚಾಳಿಯಾಗಿಬಿಟ್ಟಿದೆ. ಕರ್ನಾಟಕ ರಾಜ್ಯ ವಿದ್ಯುತ್ ಪ್ರಸರಣ ನಿಗಮ(ಕೆಪಿಟಿಸಿಎಲ್)ಮಾರ್ಚ್ ಅಂತ್ಯಕ್ಕೆ ಸುಮಾರು 10,000 ಕೋಟಿ ರೂ.ಗಳ ಕಾಮಗಾರಿಗಳಿಗೆ ಟೆಂಡರ್ ಆಹ್ವಾನಿಸಿದೆ. ಆದರೆ ಬಜೆಟ್ ಅನುದಾನ ಇರುವುದು ಕೇವಲ 3,562 ಕೋಟಿ ರೂಪಾಯಿಗಳು ಮಾತ್ರ! ಇದರಿಂದ ಸರಕಾರ ಅಥವಾ ಅಧಿಕಾರಿಗಳಿಗೆ ಯಾವುದೇ ನಷ್ಟ ಉಂಟಾಗುವುದಿಲ್ಲ. ಬಂಡವಾಳ ಹೂಡಿ ಕಾಮಗಾರಿಗಳನ್ನು ಪೂರ್ಣಗೊಳಿಸಿ ಆಸ್ತಿಯನ್ನು ಸರಕಾರಕ್ಕೆ ವರ್ಗಾವಣೆ ಮಾಡುವ ಗುತ್ತಿಗೆದಾರ ತೊಂದರೆಗೀಡಾಗುತ್ತಾನೆ. ಉಳಿದ 6,500 ಕೋಟಿ ರೂ.ಗಳನ್ನು ಸರಕಾರ ಹೇಗೆ ಹೊಂದಾಣಿಕೆ ಮಾಡಿಕೊಳ್ಳುತ್ತದೆ? ಗುತ್ತಿಗೆದಾರ ಸರ್ಕಾರದ ಭಾಗವಲ್ಲ. ಹಾಗಾಗಿ ಎಷ್ಟು ಅನುದಾನ ಇದೆ, ಇಲ್ಲ ಎನ್ನುವುದು ಎಂದು ತಿಳಿಯುವ ವೇಳೆಗೆ ಕಾಲ ಮಿಂಚಿ ಹೋಗಿರುತ್ತದೆ. ಇದರಿಂದ ಗುತ್ತಿಗೆದಾರ ಮತ್ತೆ ಸಾಲಗಾರನಾಗುತ್ತಾನೆ. ಸರಕಾರ ದಯಮಾಡಿ ಅನುದಾನ ಲಭ್ಯತೆ ಎಷ್ಟಿರುತ್ತದೆಯೋ ಅಷ್ಟು ಮೊತ್ತಕ್ಕೆ ಮಾತ್ರ ಟೆಂಡರ್ ಆಹ್ವಾನಿಸಬೇಕು ಎಂದು ಕೇಳಿಕೊಳ್ಳುತ್ತೇವೆ.

ಬೆಸ್ಕಾಂ ನಿಮಗಳಿಗೆ ಬದ್ಧವಾಗಿರಬೇಕು:

ಬೆಸ್ಕಾಂ ಮೂರು ವರ್ಷಗಳ ಹಿಂದೆ ತನ್ನ ಎಲ್ಲಾ 18 ಗ್ರಾಮೀಣ ವಿಭಾಗಗಳಲ್ಲಿ ರೇಟ್ ಕಾಂಟ್ರಾಕ್ಟ್ ಕರೆದಿರುತ್ತದೆ. ಈ ಒಪ್ಪಂದದ ಪ್ರಕಾರ ಆ ವಿಭಾಗದಲ್ಲಿ ನಡೆಯುವ ಎಲ್ಲ ಕಾಮಗಾರಿಗಳನ್ನು ಒಪ್ಪಂದ ಮಾಡಿಕೊಂಡಿರುವ ಗುತ್ತಿಗೆದಾರ ಎರಡು ವರ್‌ಷ ನಿರ್ವಹಿಸಬೇಕಾಗಿರುತ್ತದೆ. ಸರಕಾರ, ಸಚಿವ ಮತ್ತು ಅಧಿಕಾರಿ ಬದಲಾದಾಗ ಈ ನಿಯಮ ಬಾಯಿ ಮಾತಿನಲ್ಲಿ ಬದಲಾಗಿ ಬಿಡುತ್ತದೆ. ಆ ಹೊಸ ಅಧಿಕಾರಿ ಮತ್ತೆ ಟೆಂಡರ್ ಆಹ್ವಾನಿಸಿ ಹೊಸ ಗುತ್ತಿಗೆದಾರನಿಗೆ ಟೆಂಡ‌ರ್ ನೀಡುತ್ತಾನೆ. ಇದು ನಿಯಮಗಳ ಸ್ಪಷ್‌ಟ ಉಲ್ಲಂಘನೆಯಾಗಿರುತ್ತದೆ. ಆ ಹೊಸ ಗುತ್ತಿಗೆದಾರ ಹೊಸ ಅಧಿಕಾರಿಯ ಬೇಕುಬೇಡಗಳನ್ನು ಪೂರೈಸುತ್ತಾನೆ. ಎರಡು ವರ್ಷದ ಕೊನೆಯಲ್ಲಿ ಹಳೆಯ ಗುತ್ತಿಗೆದಾರನಿಗೆ ಕೆಲವು ಕಾಮಗಾರಿಗಳನ್ನು ನೀಡಲಾಗುತ್ತದೆ. ಒಪ್ಪಂದದ ಅವಧಿಯ ಕೊನೆಯಲ್ಲಿ ಕಾಮಗಾರಿಗಳನ್ನು ನೀಡುವುದರಿಂದ ಕಾಲಮಿತಿಯೊಳಗೆ ಪೂರ್ಣಗೊಳಿಸಲು ಸಾಧ್ಯ ಇರುವುದಿಲ್ಲ. ಮತ್ತೆ ಗುತ್ತಿಗೆದಾರನಿಗೆ ದಂಡ ವಿಧಿಸುವ ಪ್ರಕ್ರಿಯೆ ಆರಂಭವಾಗುತ್ತದೆ. ಕಾಲಮಿತಿಯ ವಿಸ್ತರಣೆಗೆ ಮತ್ತೆ ಅಧಿಕಾರಿಯ ಬೇಕು ಬೇಡಗಳನ್ನು ಪೂರೈಸಬೇಕಾಗಿರುತ್ತದೆ. ಈ ಎಲ್ಲ ಸಮಸ್ಯೆಗಳನ್ನು ಕುರಿತು ಮತ್ತೊಮ್ಮೆ ಮುಖ್ಯಮಂತ್ರಿಗಳು, ಇಂಧನ ಸಚಿವರಿಗೆ ಪತ್ರ ಬರೆಯುತ್ತೇವೆ. ಭ್ರಷ್ಟಾಚಾರವನ್ನು ಕೊನೆಗಾಣಿಸಲು ಪಾರದರ್ಶಕವಾಗಿ ಟೆಂಡರ್ ಪ್ರಕ್ರಿಯೆಗಳನ್ನು ನಡೆಸಬೇಕು. ಅರ್ಹ ಗುತ್ತಿಗೆದಾರರಿಗೆ ಕಾಮಗಾರಿಗಳು ಲಭ್ಯವಾಗಬೇಕು. ಸ್ಪರ್ಧಾತ್ಮಕವಾಗಿ ಟೆಂಡರ್ ಗಳನ್ನು ನಡೆಸಿದರೆ ಭ್ರಷ್ಟಾಚಾರವನ್ನು ಕೊನಗಣಿಸಬಹುದಾಗಿದೆ. ಅನುದಾನ ಲಭ್ಯತೆ ಆಧರಿಸಿ ಟೆಂಡರ್ ಆಹ್ವಾನಿಸಬೇಕು ಮತ್ತು ಕಾಮಗಾರಿಗಳನ್ನು ನಡೆಸಬೇಕು ಎಂದು ಸರ್ಕಾರವನ್ನು ಕೇಳಿಕೊಳ್ಳುತ್ತೇವೆ. ವಿದ್ಯುತ್ ಗುತ್ತಿಗೆದಾರರ ಸಮಸ್ಯೆಗಳು ಮತ್ತು ಬೇಡಿಕೆಗಳನ್ನು ಕುರಿತು ಚರ್ಚಿಸಲು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಇಲಾಖೆಯ ಸಚಿವರು ಮತ್ತು ಹಿರಿಯ ಅಧಿಕಾರಿಗಳ ಸಭೆ ಕರೆಯಬೇಕು ಎಂದು ವಿನಂತಿಸುತ್ತೇವೆ. ಸುದ್ದಿಗೋಷ್ಠಿಯಲ್ಲಿ ಎಚ್.ಎನ್.ರಾಮಕೃಷ್ಣ ಅಧ್ಯಕ್ಷರು, ಉಪಾಧ್ಯಕ್ಷ ಎಂ. ವಿ. ನಿಖಿತ್ ಗೌಡ, ಕಾಯದರ್ಶಿ ಅರ್ಜುನ್ ಕೋರೆ ಖಜಾಂಚಿ ಟಿ. ಕೆ. ಪ್ರವೀಣ್ ಮತ್ತು ಸದಸ್ಯ ಎಂ.ಎಸ್.ಮಂಜುನಾಥ ಉಪಸ್ಥಿತರಿದ್ದರು.

City Today News 9341997936