
ಬೆಂಗಳೂರು, ಡಿಸೆಂಬರ್ 20, 2024: ಕರ್ನಾಟಕದಲ್ಲಿ ಕಾರ್ಮಿಕರ ಹಕ್ಕುಗಳು ಮತ್ತು ಜನಪರ ಆರ್ಥಿಕ ನೀತಿಗಳ ಜಾರಿಗೆ ಒತ್ತಾಯಿಸಿ, ಸಿಐಟಿಯು (CITU) ರಾಜ್ಯ ಸಮಿತಿ ಭಾರಿ ಪ್ರತಿಭಟನೆಯನ್ನು ಆಯೋಜಿಸಿದೆ. “ಶ್ರೀಮಂತರ ಮೇಲೆ ತೆರಿಗೆ ಹೆಚ್ಚಿಸಿ, ಬಡವರಿಗೆ ಬದುಕು ಕಲ್ಪಿಸಿ” ಎಂಬ ಘೋಷಣೆಯೊಂದಿಗೆ ಮಾರ್ಚ್ 3 ರಿಂದ 7, 2025 ರವರೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅಹೋರಾತ್ರಿ ಧರಣಿ ನಡೆಯಲಿದೆ ಎಂದು ಸಮಿತಿಯ ಮುಖಂಡರು ತಿಳಿಸಿದ್ದಾರೆ.
ರಾಜ್ಯದ ಕಾರ್ಮಿಕರ ಪ್ರಮುಖ ಬೇಡಿಕೆಗಳು
ರಾಜ್ಯದ ಕಾರ್ಮಿಕರ ಹಲವು ಬೇಡಿಕೆಗಳು ದೀರ್ಘಕಾಲದಿಂದ ಪ್ರಗತಿ ಕಾಣದೆ ಇರುವುದರಿಂದ, ಶ್ರಮಶಕ್ತಿಯ ಸಮರ್ಪಕ ನಿರ್ವಹಣೆ ಹಾಗೂ ಕಾರ್ಮಿಕರಿಗೆ ನ್ಯಾಯ ಒದಗಿಸಲು ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸಿಐಟಿಯು ಒತ್ತಾಯಿಸಿದೆ. ಸರ್ಕಾರವು ಕೇಂದ್ರ ಸರ್ಕಾರದ ಕಾರ್ಪೊರೇಟ್ ಪರ ನೀತಿಗಳನ್ನು ಅನುಸರಿಸುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ.
ಮಾರ್ಚ್ 3 ರಂದು ಗ್ರಾಮ ಪಂಚಾಯಿತಿ ಕಾರ್ಮಿಕರು, ಮಾರ್ಚ್ 4 ರಂದು ಅಕ್ಷರ ದಾಸೋಹ ಕಾರ್ಮಿಕರು, ಮಾರ್ಚ್ 5 ರಂದು ಕಟ್ಟಡ ನಿರ್ಮಾಣ ಕಾರ್ಮಿಕರು, ಮಾರ್ಚ್ 6 ರಂದು ಕಾರ್ಖಾನೆ ಕಾರ್ಮಿಕರು ಹಾಗೂ ಅಸಂಘಟಿತ ಕಾರ್ಮಿಕರು ಭಾಗವಹಿಸಲಿದ್ದಾರೆ. ಮಾರ್ಚ್ 7 ರಂದು ಅಂಗನವಾಡಿ ಕಾರ್ಮಿಕರು ಸೇರಿದಂತೆ ವಿವಿಧ ವೃತ್ತಿಗಳ ಕಾರ್ಮಿಕರು ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ. 50,000ಕ್ಕೂ ಹೆಚ್ಚು ಕಾರ್ಮಿಕರು ಭಾಗವಹಿಸುವ ನಿರೀಕ್ಷೆಯಿದೆ.
ಪ್ರತಿಭಟನೆಯಲ್ಲಿ ಕನಿಷ್ಠ ವೇತನ ಹೆಚ್ಚಳ, ಗುತ್ತಿಗೆ ಕಾರ್ಮಿಕರನ್ನು ಖಾಯಂ ಮಾಡುವುದು, ಸಮಾನ ಕೆಲಸಕ್ಕೆ ಸಮಾನ ವೇತನ, ಅಸಂಘಟಿತ ಕಾರ್ಮಿಕರ ಕಲ್ಯಾಣ ಯೋಜನೆಗಳು, ಸರ್ಕಾರಿ ಯೋಜನೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ನ್ಯಾಯ ಒದಗಿಸುವುದು ಸೇರಿ 37 ಬೇಡಿಕೆಗಳನ್ನು ಪ್ರಸ್ತಾಪಿಸಲಾಗಿದೆ.
ಸರ್ಕಾರದ ಕಾರ್ಮಿಕ ನೀತಿಯ ವಿರೋಧ
ಸಿಐಟಿಯು ರಾಜ್ಯ ಸಮಿತಿಯು ಬಿಜೆಪಿ ನೇತೃತ್ವದ ಹಿಂದಿನ ಸರ್ಕಾರ ಜಾರಿಗೆ ತಂದ ಕಾರ್ಮಿಕ ಕಾನೂನು ತಿದ್ದುಪಡಿಗಳನ್ನು ಕಾಂಗ್ರೆಸ್ ನೇತೃತ್ವದ ಸರ್ಕಾರ ಕೂಡ ಮುಂದುವರಿಸುತ್ತಿದೆ ಎಂದು ಆರೋಪಿಸಿದೆ. ಕೃಷಿ ಕ್ಷೇತ್ರದಲ್ಲಿ ಎಪಿಎಂಸಿ ಕಾಯಿದೆ ತಿದ್ದುಪಡಿ ಹಿಂಪಡೆಯದೆ, ಜನತೆಗೆ ನೀಡಿದ ಭರವಸೆಗಳನ್ನು ಪಾಲಿಸದ ಹಿನ್ನೆಲೆಯಲ್ಲಿ ಈ ಪ್ರತಿಭಟನೆ ಅನಿವಾರ್ಯವಾಗಿದೆ ಎಂದು ಸಂಘಟನೆ ಹೇಳಿದ್ದಾರೆ.
ರಾಜ್ಯ ಸರ್ಕಾರ ಕಾರ್ಮಿಕ ಮುಖಂಡರೊಂದಿಗೆ ಮಾತುಕತೆ ನಡೆಸಲು ನಿರಾಕರಿಸಿರುವುದರಿಂದ, ಬಜೆಟ್ ಪೂರ್ವ ಚರ್ಚೆಗಳಲ್ಲೂ ಕಾರ್ಮಿಕರ ಸಮಸ್ಯೆಗಳಿಗೆ ತಕ್ಕ ಪ್ರತಿಕ್ರಿಯೆ ದೊರಕದೆ ಇರುವುದರಿಂದ ಈ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಸಿಐಟಿಯು ರಾಜ್ಯ ಸಮಿತಿ ಪ್ರಕಟಣೆ ನೀಡಿದೆ. ಸರ್ಕಾರ ಪ್ರಜಾಸತ್ತಾತ್ಮಕ ತತ್ವಗಳನ್ನು ಪಾಲಿಸಬೇಕಾದರೆ, ಬಜೆಟ್ ಪ್ರಸ್ತಾವನೆಗಳಲ್ಲಿ ಈ ಬೇಡಿಕೆಗಳ ಕುರಿತು ಸ್ಪಷ್ಟ ಘೋಷಣೆ ಮಾಡಬೇಕು ಎಂದು ಸಮಿತಿಯು ಆಗ್ರಹಿಸಿದೆ.
ಈ ಪತ್ರಿಕಾಗೋಷ್ಠಿಯಲ್ಲಿ ಸಿಐಟಿಯು ರಾಜ್ಯ ಸಮಿತಿ ಅಧ್ಯಕ್ಷರಾದ ಎಸ್. ವರಲಕ್ಷ್ಮಿ, ಪ್ರಧಾನ ಕಾರ್ಯದರ್ಶಿಗಳಾದ ಮೀನಾಕ್ಷಿ ಸುಂದರಂ, ಎಚ್.ಎಸ್. ಸುನಂದಾ ಮತ್ತು ಮಾಲಿನಿ ಮೇಸ್ತ ಉಪಸ್ಥಿತರಿದ್ದರು.
City Today News 9341997936





You must be logged in to post a comment.