ನಗರಗಳಲ್ಲಿ ಹರಡುತ್ತಿದೆ ಪ್ರಾಸ್ಟೇಟ್ ಕ್ಯಾನ್ಸರ್

ಭಾರತದ ನಗರ ಪ್ರದೇಶಗಳಲ್ಲಿ ಎರಡನೇ ಸ್ಥಾನದಲ್ಲಿರುವ ಪ್ರಾಸ್ಟೇಟ್ ಕ್ಯಾನ್ಸರ್, ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕ್ಯಾನ್ಸರ್ ಪ್ರಕರಣಗಳು. ವಿಶೇಷವಾಗಿ ಕೆಲವು ವರ್ಷಗಳ ಹಿಂದೆ ದೆಹಲಿ, ಪುಣೆ ಮತ್ತು ಬೆಂಗಳೂರು ನಗರಗಳಲ್ಲಿ ನಾಲ್ಕನೇ ಸ್ಥಾನದಲ್ಲಿದ್ದ ಪ್ರಾಸ್ಟೇಟ್ ಕ್ಯಾನ್ಸರ್ ಇದೀಗ ಎರಡನೇ ಸ್ಥಾನಕ್ಕೇರಿದೆ
ಸೊಸೈಟಿ ಆಫ್ ಜೆನಿಟೋರಿನರಿ ಆಂಕಾಲಾಜಿಸ್ಟ್ ಆಯೋಜಿಸಿರುವ SOGOCON 2022 ಸಮ್ಮೇಳನದಲ್ಲಿ 300 ಕ್ಕೂ ಹೆಚ್ಚು ತಜ್ಞ ವೈದ್ಯರು ಪಾಲ್ಗೊಂಡಿದ್ದಾರೆ
ಯುರೋಆಂಕಾಲಾಜಿಯು ಪ್ರಾಸ್ಟೇಟ್, ಮೂತ್ರಕೋಶ ಮತ್ತು ಮೂತ್ರಪಿಂಡಗಳಂತಹ ಮೂತ್ರನಾಳದ ಕ್ಯಾನ್ಸರ್, ಶಿಶ್ನ ಮತ್ತು ವೃಷಣಗಳು ಸೇರಿದಂತೆ ಪುರುಷ ಸಂತಾನೋತ್ಪತ್ತಿ ಅಂಗಗಳಿಗೆ ಸಂಬಂಧಿಸಿದ ಸಮಸ್ಯೆಗಳೊಂದಿಗೆ ವ್ಯವಹರಿಸುತ್ತದೆ

ಬೆಂಗಳೂರು, ಆಗಸ್ಟ್ 27, 2022: ಭಾರತದಲ್ಲಿ ವರ್ಷದಿಂದ ವರ್ಷಕ್ಕೆ ಮೂತ್ರನಾಳದ ಕ್ಯಾನ್ಸರ್ ಪ್ರಕರಣಗಳ ಹರಡುವಿಕೆ ಪ್ರಮಾಣ ಹೆಚ್ಚುತ್ತಿದೆ ಮತ್ತು ಪ್ರಸ್ತುತ ದೇಶದಲ್ಲಿ ಕಾಣಿಸಿಕೊಳ್ಳುತ್ತಿರುವ ಎಲ್ಲಾ ಕ್ಯಾನ್ಸರ್ ಗಳಿಗೆ ಹೋಲಿಸಿದರೆ ಈ ಮೂತ್ರನಾಳದ ಕ್ಯಾನ್ಸರ್ ಪ್ರಮಾಣ ಶೇ.15 ರಿಂದ 20 ರಷ್ಟು ಇದೆ. ವಿಶೇಷವಾಗಿ ಮಹಿಳೆಯರಿಗಿಂತ ಪುರುಷರಲ್ಲಿ ಈ ರೋಗ ಹೆಚ್ಚಾಗಿ ಪರಿಣಾಮ ಬೀರುತ್ತಿದೆ ಮತ್ತು ಈ ಪ್ರಾಸ್ಟೇಟ್ ಕ್ಯಾನ್ಸರ್ ನಗರ ಪ್ರದೇಶದ ಜನರಲ್ಲೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ದೆಹಲಿ, ಪುಣೆ ಮತ್ತು ಬೆಂಗಳೂರಿನಂತಹ ನಗರಗಳಲ್ಲಿ ಕಳೆದ ಕೆಲವು ವರ್ಷಗಳಿಂದೀಚೆಗೆ ಈ ಪ್ರಾಸ್ಟೇಟ್ ಕ್ಯಾನ್ಸರ್ ನಾಲ್ಕನೇ ಸ್ಥಾನದಿಂದ ಎರಡನೇ ಸ್ಥಾನಕ್ಕೇರಿರುವುದು ಆತಂಕ ತಂದೊಡ್ಡಿದೆ. ಬೆಂಗಳೂರಿನಲ್ಲಿ ಸೊಸೈಟಿ ಆಫ್ ಜೆನಿಟೋರಿನರಿ ಆಂಕಾಲಾಜಿಸ್ಟ್(SOGO) ಆಯೋಜಿಸಿರುವ ಮೊದಲ SOGOCON 2022 ಸಮ್ಮೇಳನದಲ್ಲಿ ಪಾಲ್ಗೊಂಡಿರುವ ಯೋರೋ-ಆಂಕಾಲಾಜಿ ಪರಿಣತರು ಈ ಆತಂಕಕಾರಿ ಅಂಶವನ್ನು ತಿಳಿಸಿದ್ದಾರೆ.

ಈ ಮೂರು ದಿನಗಳ ಕಾರ್ಯಕ್ರಮವು ಭಾರತದಲ್ಲಿ ಇದೇ ಮೊದಲ ಬಾರಿಗೆ ನಡೆಯುತ್ತಿದೆ. ಪುರುಷ ಮತ್ತು ಸ್ತ್ರೀ ಮೂತ್ರನಾಳ ಮತ್ತು ಪುರುಷ ಸಂತಾನೋತ್ಪತ್ತಿ ಅಂಗಗಳ ಕ್ಯಾನ್ಸರ್ ಗಳೊಂದಿಗೆ ವ್ಯವಹರಿಸುವ ಯೂರೋ-ಆಂಕಾಲಜಿ ಅಭ್ಯಾಸವನ್ನು ಉತ್ತೇಜಿಸುವುದು ಇದರ ಪ್ರಮುಖ ಉದ್ದೇಶವಾಗಿದೆ. ಗ್ಲೋಬಲ್ ಹೆಲ್ತ್ ಅಕಾಡೆಮಿಯ ಸಹಯೋಗದಲ್ಲಿ ಎಸ್ಒಜಿಒ ಈ ಸಮ್ಮೇಳನವನ್ನು ಆಯೋಜಿಸಿದ್ದು, ಇದರಲ್ಲಿ ದೇಶ, ವಿದೇಶಗಳ 300 ಕ್ಕೂ ಹೆಚ್ಚು ವೈದ್ಯರು ಭಾಗವಹಿಸುತ್ತಿದ್ದಾರೆ.

ಎಚ್ ಸಿಜಿ ಕ್ಯಾನ್ಸರ್ ಆಸ್ಪತ್ರೆ ಬೆಂಗಳೂರು, SOGOCON 2022 ನ ಸಂಘಟನಾ ಕಾರ್ಯದರ್ಶಿ ಡಾ.ರಘುನಾಥ್ ಎಸ್ ಕೆ ಅವರು ಮಾತನಾಡಿ, “ಇತರೆ ಕ್ಯಾನ್ಸರ್ ಗಳಿಗೆ ಹೋಲಿಸಿದರೆ ಈ ಪ್ರಾಸ್ಟೇಟ್ ಕ್ಯಾನ್ಸರ್ ವಿಶಿಷ್ಟವಾಗಿದೆ. ಇದು ಗ್ರಾಮೀಣ ಪ್ರದೇಶದ ಜನರಿಗಿಂತ ಹೆಚ್ಚಾಗಿ ನಗರ ಪ್ರದೇಶದ ಜನರಲ್ಲಿ ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ. ಅಲ್ಲದೇ, ನಗರಗಳಲ್ಲಿ ವಾಸಿಸುತ್ತಿರುವ ಜನರಲ್ಲಿ ಈ ಕ್ಯಾನ್ಸರ್ ಕಾಣಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚುತ್ತಿದೆ. ಭಾರತದಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್ ನಿಂದ ಪತ್ತೆಯಾಗಿರುವ ಎಲ್ಲಾ ರೋಗಿಗಳಲ್ಲಿ ಶೇ.65 ರಷ್ಟು ಜನರು ಈ ರೋಗದಿಂದ ಸಾವನ್ನಪ್ಪುತ್ತಿದ್ದಾರೆ. ಆಸ್ಟ್ರೇಲಿಯಾ ಮತ್ತು ಯುಎಸ್ ನಂತಹ ದೇಶಗಳಲ್ಲಿ ಈ ಅಂಕಿಅಂಶವು ಕೇವಲ ಶೇ.12 ರಷ್ಟಿದೆ. ಇದಕ್ಕೆ ಪ್ರಮುಖ ಕಾರಣವೆಂದರೆ ಈ ಪ್ರಾಸ್ಟೇಟ್ ಕ್ಯಾನ್ಸರ್ ಬಗ್ಗೆ ಅರಿವಿನ ಕೊರತೆ ಇರುವುದು. ಈ ಅರಿವಿನ ಕೊರತೆಯಿಂದಾಗಿ ಜನರು ಪ್ರಾಸ್ಟೇಟ್ ಕ್ಯಾನ್ಸರ್ ಅನ್ನು ತಡವಾಗಿ ಪತ್ತೆ ಮಾಡಿಸಿಕೊಳ್ಳುತ್ತಿದ್ದಾರೆ. ಜೀವನ ಶೈಲಿ, ನಾವು ಸೇವಿಸುವ ಆಹಾರ, ಒತ್ತಡ, ಮಾಲಿನ್ಯ, ವ್ಯಾಯಾಮದ ಕೊರತೆ ಹಾಗೂ ತಡವಾಗಿ ಕೆಲಸ ಮಾಡುವುದರಿಂದ ಮೂತ್ರನಾಳದ ಕ್ಯಾನ್ಸರ್ ಪ್ರಮಾಣ ಹೆಚ್ಚುತ್ತಿದೆ. ಇದು ಭಾರತದಲ್ಲಿ ಹೆಚ್ಚಾಗುತ್ತಿರುವುದು ಕಳವಳಕಾರಿಯಾಗಿದೆ. ಹೆಚ್ಚು ಹೆಚ್ಚು ಕಾಲ ಕೆಲಸ ಮಾಡುವುದು, ರಾಸಾಯನಿಕರಗಳಿಗೆ ನಮ್ಮನ್ನು ಒಡ್ಡಿಕೊಳ್ಳುವುದರ ಜೊತೆಗೆ ತಡವಾದ ರೋಗನಿರ್ಣಯದೊಂದಿಗೆ ಅನಾರೋಗ್ಯ ಮತ್ತು ಮರಣದ ವಿಷಯದಲ್ಲಿ ಭಾರತೀಯರ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡುವಂತೆ ಮಾಡಿದೆ’’ ಎಂದರು.

ಎಚ್ ಸಿಜಿ ಕ್ಯಾನ್ಸರ್ ಆಸ್ಪತ್ರೆ ಬೆಂಗಳೂರು, SOGOCON 2022 ಅಧ್ಯಕ್ಷ ಡಾ.ಶೇಖರ್ ಪಾಟೀಲ್ ಅವರು ಮಾತನಾಡಿ, “ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ಮೂಲಕ ನಾವು ವಿವಿಧ ವಿಧಾನಗಳಿಂದ ಮರಣ ಮತ್ತು ರೋಗವನ್ನು ಕಡಿಮೆ ಮಾಡಬಹುದು. ನಿಯಮಿತ ಆರೋಗ್ಯ ತಪಾಸಣೆಯ ಮೂಲಕ ಜಾಗೃತಿ ಮೂಡಿಸಲು ಹಾಗೂ ಆರಂಭಿಕ ಪತ್ತೆಯನ್ನು ಉತ್ತೇಜಿಸಲು ಸರ್ಕಾರವು ಆಸ್ಪತ್ರೆಗಳೊಂದಿಗೆ ಪಾಲುದಾರಿಕೆಯನ್ನು ಹೊಂದಿರಬೇಕು. ವೈದ್ಯರು ಆರಂಭಿಕ ಹಂತದಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್ ನಲ್ಲಿ ಶಸ್ತ್ರಚಿಕಿತ್ಸೆಯನ್ನು ನಡೆಸಿದಾಗ ಸಂಬಂಧಿತ ರೋಗ ಮತ್ತು ಮರಣ ಪ್ರಮಾಣವು ತುಂಬಾ ಕಡಿಮೆಯಾಗಿದೆ. ಅದೃಷ್ಠವಶಾತ್, ಭಾರತದಲ್ಲಿ ಲಭ್ಯವಿರುವ ಸುಧಾರಿತ ಕಿಮೋಥೆರಪಿ, ರೊಬೊಟಿಕ್ ಶಸ್ತ್ರಚಿಕಿತ್ಸೆ ಮತ್ತು ವಿಕಿರಣ ಸೌಲಭ್ಯಗಳನ್ನು ಒಳಗೊಂಡಂತೆ ಮೂತ್ರನಾಳದ ಕ್ಯಾನ್ಸರ್ ಪ್ರಕರಣಗಳಿಗೆ ಎಲ್ಲಾ ಸುಧಾರಿತ ಚಿಕಿತ್ಸಾ ಆಯ್ಕೆಗಳನ್ನು ನಾವು ಹೊಂದಿದ್ದೇವೆ. ಆದಾಗ್ಯೂ, ಈ ತಂತ್ರಜ್ಞಾನ ಮತ್ತು ಚಿಕಿತ್ಸೆಯನ್ನು ಭಾರತೀಯ ರೋಗಿಗಳಿಗೆ ಕೈಗೆಟುಕುವಂತೆ ಮಾಡುವುದು ದೊಡ್ಡ ಸವಾಲಾಗಿದೆ. ಏಕೆಂದರೆ, ಹೆಚ್ಚಿನವರು ಆರೋಗ್ಯ ವಿಮೆಯನ್ನು ಹೊಂದಿಲ್ಲ ಮತ್ತು ಇದಕ್ಕೆ ಆಗುವ ವೆಚ್ಚವನ್ನು ತಾವೇ ಭರಿಸಬೇಕಾಗುತ್ತದೆ. ಈ ಅಂಶಗಳ ಬಗ್ಗೆ ಕಾಳಜಿ ವಹಿಸಿದರೆ ನಮ್ಮಲ್ಲಿ ಇತ್ತೀಚಿನ ಎಲ್ಲಾ ತಂತ್ರಜ್ಞಾನ ಮತ್ತು ಚಿಕಿತ್ಸೆಗಾಗಿ ನುರಿತ ವೈದ್ಯರು ಇದ್ದಾರೆ. ಈ ವಿಚಾರದಲ್ಲಿ ರೊಬೊಟಿಕ್ ಸರ್ಜರಿ ವಿಶೇಷವಾಗಿ ವರದಾನವಾಗಿದೆ. ಇದು ರೋಗಪೀಡಿತರಾಗುವ ಪ್ರಮಾಣವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ ಹಾಗೂ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ’’ ಎಂದು ಹೇಳಿದರು.

ಪ್ರಾಸ್ಟೇಟ್ ನಂತಹ ಮೂತ್ರನಾಳದ ಕ್ಯಾನ್ಸರ್ ಗಳೊಂದಿಗೆ ವ್ಯವಹರಿಸುವ ವೈದ್ಯಕೀಯ ವಿಜ್ಞಾನದ ಈ ಕ್ಷೇತ್ರದಲ್ಲಿ ಸಮಗ್ರ ರೋಗಿಗಳ ಆರೈಕೆಯನ್ನು ಸುಧಾರಿಸುವ ಗುರಿಯೊಂದಿಗೆ ಶಿಕ್ಷಣ, ತರಬೇತಿ, ಸಹಯೋಗ ಮತ್ತು ಸಂಶೋಧನೆಗಾಗಿ ಭಾರತದಲ್ಲಿ ಯೂರೋ ಆಂಕೋಲಾಜಿ ವೃತ್ತಿಪರರನ್ನು ಒಗ್ಗೂಡಿಸುವ SOGOCON ರಾಷ್ಟ್ರೀಯ ವೇದಿಕೆಯನ್ನು ರಚಿಸಿದೆ. ಮೂತ್ರಕೋಶ, ಮೂತ್ರಪಿಂಡ ಮತ್ತು ಶಿಶ್ನ ಮತ್ತು ವೃಷಣಗಳು ಸೇರಿದಂತೆ ಪುರುಷ ಸಂತಾನೋತ್ಪತ್ತಿ ಅಂಗಗಳಿಗೆ ಸಂಬಂಧಿಸಿದಂತೆ ಈ ವೈದ್ಯಕೀಯ ವಿಜ್ಞಾನ ಗಮನಹರಿಸುತ್ತಿದೆ. ಈ ಸಮ್ಮೇಳನದಲ್ಲಿ ಮೂತ್ರಶಾಸ್ತ್ರಕ್ಕೆ ಸಂಬಂಧಿಸಿದ ಹಲವಾರು ಉಪನ್ಯಾಸಗಳು, ಪ್ರಕರಣ-ಆಧಾರಿತ ಚರ್ಚೆಗಳು, ಸಂವಾದಗಳು ನಡೆಯಲಿವೆ. ಬೆಂಗಳೂರಿನ ನಾಲ್ಕು ಪ್ರಮುಖ ಆಸ್ಪತ್ರೆಗಳಾದ ಎಚ್ ಸಿಜಿ ಆಂಕಾಲಾಜಿ ಆಸ್ಪತ್ರೆ, ಮಣಿಪಾಲ್ ಆಸ್ಪತ್ರೆ, ಶ್ರೀ ಶಂಕರ ಕ್ಯಾನ್ಸರ್ ಆಸ್ಪತ್ರೆ & ಸಂಶೋಧನಾ ಕೇಂದ್ರ ಮತ್ತು ಎಂಎಸ್ ರಾಮಯ್ಯ ಸ್ಮಾರಕ ಆಸ್ಪತ್ರೆಯಲ್ಲಿ ನಡೆಸುವ ಶಸ್ತ್ರಚಿಕಿತ್ಸೆಗಳನ್ನು ನೇರ ಪ್ರಸಾರ ಮಾಡಲಾಗುತ್ತದೆ ಮತ್ತು ಆ ಬಗ್ಗೆ ಚರ್ಚೆಗಳನ್ನು ನಡೆಸಲಾಗುತ್ತದೆ.

City Today News

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.