
- ಪಂಚಮಸಾಲಿಗಳು ಸೇರಿ ವೀರಶೈವ ಲಿಂಗಾಯತ ಸಮುದಾಯಕ್ಕೆ 2ಎ ಮೀಸಲಾತಿ ನೀಡುವ ಪ್ರಸ್ತಾವನೆಗೆ ರಾಜ್ಯ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದು ಇದು ಅತಿಹಿಂದುಳಿದ ವರ್ಗಗಳಿಗೆ ಮಾಡುವ ಘೋರ ಅನ್ಯಾಯವಾಗಿದೆ. ಹಿಂದುತ್ವದ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಕೇವಲ ವೀರಶೈವ ಲಿಂಗಾಯತ ಪಂಚಮಸಾಲಿಗಳನ್ನು ಓಲೈಸಲು ಹೊರಟಿದ್ದು ಆ ಸಮುದಾಯಕ್ಕೆ ಶೇ.15 ರಷ್ಟು ಮೀಸಲಾತಿ ದೊರಕಿಸಿಕೊಡಲು ಹೊರಟರೆ ಪ್ರಸ್ತುತ ಪ್ರವರ್ಗ 2ಎ ಪಟ್ಟಿಯಲ್ಲಿರುವ 102ಕ್ಕೂ ಹೆಚ್ಚು ಜಾತಿಗಳು ಮೀಸಲಾತಿಯಿಂದ ವಂಚಿತವಾಗುತ್ತವೆ. ಬಲಿಷ್ಠ ಸಮಾಜಕ್ಕೆ ಪೂರ್ತಿ ಮೀಸಲಾತಿ ಸವಲತ್ತು ಹೊರೆತು ಸಣ್ಣ ಅತಿಸಣ್ಣ ಹಿಂದುಳಿದ ವರ್ಗಗಳಿಗೆ ಪ್ರಾತಿನಿಧ್ಯ ಸಿಗಬೇಕೆಂಬ ಮೀಸಲಾತಿಯ ಸಾಂವಿಧಾನಿಕ ಆಶಯವೇ ಮಣ್ಣು ಪಾಲಾಗಲಿದೆ. ಇದನ್ನು ಖಂಡಿಸಿ ಕರ್ನಾಟಕ ಕ್ಷತ್ರಿಯ ಒಕ್ಕೂಟ ರಾಜ್ಯಾದ್ಯಂತ ಉಗ್ರ ಹೋರಾಟ ಕೈಗೆತ್ತಿಕೊಳ್ಳಲು ನಿರ್ಧರಿಸಿದೆ.
ರಾಜ್ಯದಲ್ಲಿ ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಪ್ರಬಲವಾಗಿರುವ ಪಂಚಮಸಾಲಿ ಸೇರಿ ವೀರಶೈವ ಲಿಂಗಾಯತ ಸಮುದಾಯ ಮತ್ತು ಅದರೊಳಗಿನ ಉಪಜಾತಿಗಳನ್ನು 2ಎ ಪಟ್ಟಿಗೆ ಸೇರ್ಪಡೆ ಮಾಡಿದರೆ ಪ್ರವರ್ಗ 2ಎ ಮೀಸಲಾತಿ ಪಟ್ಟಿಯಲ್ಲಿರುವ ಕೃತಿಯ ಜನಾಂಗ ಮತ್ತು ನಮ್ಮ ಉಪಜಾತಿಗಳು ಸೇರಿ ಅತಿ ಹಿಂದುಳಿದ 102ಕ್ಕೂ ಹೆಚ್ಚು ಜಾತಿಗಳಿಗೆ ಅನ್ಯಾಯವಾಗುತ್ತದೆ. ಇದು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದ್ದು ನಾವು ಸಹಿಸಲು ಸಾಧ್ಯವಿಲ್ಲ.
- ವೀರಶೈವ-ಲಿಂಗಾಯತ-ಪಂಚಮಸಾಲಿ ಸಮುದಾಯ ಒಂದೇ ಜಾತಿಯಾಗಿ ಗುರುತಿಸಿಕೊಂಡಿರುವುದು ಮತ್ತು ರಾಜ್ಯದ ರಾಜಕೀಯ, ಶಿಕ್ಷಣ, ಉದ್ಯಮ ಎಲ್ಲಾ ವಲಯದಲ್ಲಿ ಪ್ರಬಲವಾಗಿ ಬೆಳೆದಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ. ಸ್ವಾತಂತ್ರ್ಯ ಬಂದಾಗಿನಿಂದ ಈವರೆಗೂ ಕರ್ನಾಟಕದಲ್ಲಿ ಲಿಂಗಾಯತ ಸಮುದಾಯವೇ ಬಹುತೇಕ ರಾಜ್ಯ ರಾಜಕಾರಣವನ್ನು ನಿಯಂತ್ರಿಸುತ್ತ ಬಂದಿದೆ. ಶೇ.50ಕ್ಕೂ ಹೆಚ್ಚು ರಾಜಕೀಯ ಪಾಲು ಈ ಸಮುದಾಯ ಪಡೆದಿದೆ. ಹತ್ತಾರು ಮಠಗಳು ಸರ್ಕಾರದಿಂದ ದೊಡ್ಡ ಪ್ರಯೋಜನ ಪಡೆಯುತ್ತಾ ಬಂದಿವೆ. ಪ್ರತಿವರ್ಷ ಈಗಲೂ ನೂರಾರು ಕೋಟಿ ಅನುದಾನ ಪಡೆಯುತ್ತಿವೆ. ಲಿಂಗಾಯತ ಸಮುದಾಯದ ಜನಪ್ರತಿನಿಧಿಗಳು ಶೇ 25ಕ್ಕೂ ಹೆಚ್ಚು ಮಂದಿ ವಿಧಾನಸಭೆಗೆ ಆಯ್ಕೆ ಆಗುತ್ತಿದ್ದಾರೆ ( 2018ರಲ್ಲಿ 58 ಶಾಸಕರು). ವಿಧಾನಪರಿಷತ್, ಲೋಕಸಭೆಗೂ ರಾಜ್ಯದಿಂದ ಅತಿ ಹೆಚ್ಚು ಅದೇ ಸಮುದಾಯ ಆಯ್ಕೆ ಆಗುತ್ತಿದೆ. ರಾಜ್ಯದ ಪ್ರಬಲ ಭೂಮಾಲೀಕತ್ವವೂ ಅದೇ ಸಮುದಾಯದವರ ಕೈನಲ್ಲಿದೆ. ಬೃಹತ್ ಉದ್ಯಮಗಳು, ಶಿಕ್ಷಣ ಸಂಸ್ಥೆಗಳು, ಸರ್ಕಾರಿ ಉದ್ಯೋಗ, ಆಡಳಿತರಂಗ ಹೀಗೆ ಲಿಂಗಾಯತ ಸಮುದಾಯ ಮತ್ತು ಅದರ ಉಪಜಾತಿಗಳು ಎಲ್ಲಾ ವಲಯದಲ್ಲಿ ಸಿಂಹಪಾಲು ಹೊಂದಿವೆ. ಇದರಿಂದ ಆ ಸಮಾಜ ಸಹಜವಾಗಿಯೇ ಬಲಿಷ್ಠವಾಗಿದೆ. ಹೀಗಿದ್ದಾಗ್ಯೂ ಅತೀ ಹಿಂದುಳಿದ ಸಮುದಾಯ ಎಂದು ಹೇಳಿಕೊಳ್ಳುವುದು ಅರ್ಥಹೀನವಾಗಿದೆ. ಮತ ಬ್ಯಾಂಕ್‌ಗಾಗಿ ಬಿಜೆಪಿ ಸೇರಿ ರಾಜಕೀಯ ಪಕ್ಷಗಳು ಪಂಚಮಸಾಲಿ ಮತ್ತು ವೀರಶೈವ ಲಿಂಗಾಯತರ 2ಎ ಪ್ರಸ್ತಾವನೆಗೆ ಕುಮ್ಮಕ್ಕು ನೀಡುತ್ತಿರುವುದು ಅತಿ ಹಿಂದುಳಿದ ವರ್ಗಗಳು ದಮನ ಮಾಡಲು ಪ್ರಯತ್ನಿಸಿದಂತೆಯೇ ಸರಿ.
- ಬಲಿಷ್ಠವಾಗಿ ಬೆಳೆದು ರಾಜ್ಯದ ಮೇಲ್ವರ್ಗದಾಗಿ ಗುರುತಿಸಿಕೊಂಡರೂ ಪ್ರವರ್ಗ ‘2ಎ’ಗೆ ಸೇರಲು ಹವಣಿಸುತ್ತಿರುವುದು ಆ ಪ್ರವರ್ಗಕ್ಕೆ ಮೀಸಲಿರುವ ಶೇ. 15 ರಷ್ಟು ಮೀಸಲು ಕಬಳಿಸಲು ಎಂಬುದು ಎಂತವರಿಗಾದರೂ ಅರ್ಥವಾಗುವಂತದ್ದಾಗಿದ್ದು ಇದಕ್ಕೆ ಬಿಜೆಪಿ ಪ್ರೋತ್ಸಾಹ ನೀಡುತ್ತಿರುವುದು ಅತಿ ಹಿಂದುಳಿದ ವರ್ಗಗಳಿಗೆ ದನಿ ಇಲ್ಲದ ಸಮುದಾಯಗಳಿಗೆ ವಂಚನೆ ಮಾಡುವ ಧೋರಣೆಯಾಗಿದೆ.
- ಪ್ರವರ್ಗ 2ಎ ಪಟ್ಟಿಯಲ್ಲಿರುವ 102 ಜಾತಿಗಳ ಪೈಕಿ ಬೆರಣಿಕೆಯನ್ನು ಸಮುದಾಯಗಳು ಬಿಟ್ಟು ಇತರೆ ಯಾವುದೇ ಸಮುದಾಯ ಈವರೆಗೂ ನ್ಯಾಯಬದ್ಧ ಹಕ್ಕು ಪಡೆದುಕೊಂಡಿಲ್ಲ. ಅನೇಕ ಸಣ್ಣ ಅತಿ ಸಣ್ಣ ಸಮುದಾಯಗಳು ಇಂದಿಗೂ ನಿಕೃಷ್ಣ ಸ್ಥಿತಿಯಲ್ಲಿ ಬದುಕುತ್ತಿವೆ. ಶಿಕ್ಷಣ, ಉದ್ಯೋಗ, ಆರ್ಥಿಕ ಮತ್ತು ಸಾಮಾಜಿಕವಾಗಿ ಸುಧಾರಣೆಯಾಗದೆ ಸಮಾಜದ ಮುಖ್ಯವಾಹಿನಿಯಿಂದ ದೂರ ಉಳಿದಿವೆ, ಕುಂಬಾರ, ಮಡಿವಾಳ, ಸವಿತಾ, ಗಾಣಿಗ, ಹಳೆಪೈಕ, ದೇವಾಂಗ ಇಂತಹ ಸಮಾಜಗಳಲ್ಲದೆ ಕ್ಷತ್ರಿಯ ಸಮುದಾಯದ ರಾಮ ಕ್ಷತಿಯ, ಕೋಟೆ ಕೃತಿಯ ಸೋಮವಂಶ ಕ್ಷತ್ರಿಯ, ರಾಜು ಕ್ಷತ್ರಿಯ, ಕುಮಾರ ಕ್ಷತ್ರಿಯ, ಕುಮಾರ ಪಂತ್ ಕೃತಿಯ ಸೋಮವಂಶ ಸಹಸ್ರಾರ್ಜುನ ಕೃತಿಯ ಭಾವಸಾರ ಕ್ಷತ್ರಿಯ, ಪತ್ನಿಕುಲ ಕ್ಷತ್ರಿಯ, ಅಗ್ನಿಕುಲ ಕ್ಷತ್ರಿಯ, ಶಂಭುಕುಲ ಕ್ಷತ್ರಿಯ, ತಿಗಳ, ನಯನಜ ಕ್ಷತ್ರಿಯ ಹೀಗೆ ಅನೇಕ ಜಾತಿಗಳು ರಾಜಕೀಯವಾಗಿ ಮತ್ತು ಆರ್ಥಿಕವಾಗಿ ದುರ್ಬಲವಾಗಿವೆ. ಪಂಚಮಸಾಲಿಗಳನ್ನು ಮತ್ತು ಲಿಂಗಾಯತರನ್ನು ಪ್ರವರ್ಗ 2ಎಗೆ ಸೇರಿಸಿದರೆ ಈ ಸಮುದಾಯಗಳಿಗೆ ಮೀಸಲಾತಿ ಬಾಗಿಲು ಸಂಪೂರ್ಣ ಮುಚ್ಚಿ ಹೋಗುತ್ತದೆ.
- ಪ್ರಬಲ ಸಮುದಾಯ 2ಎ ಪಟ್ಟಿಯಲ್ಲಿರುವ ನಮ್ಮ ಪಾಲನ್ನು ಕಬಳಿಸಲು ಬಂದರೆ ನಾವೆಲ್ಲಿ ಹೋಗಬೇಕು? ಪರ್ಯಾಯ ವ್ಯವಸ್ಥೆ ಆಗದೆ ಬಲಿಷ್ಠ ಸಮಾಜವನ್ನು ದುರ್ಬಲ ಸಮುದಾಯಗಳ ನಡುವೆ ತಂದು ಬಿಟ್ಟರೆ ನಾವು ಉಳಿಯುವುದು ಸಾಧ್ಯವೇ? ಇದನ್ನು ಒಪ್ಪಲು ಎಂದಿಗೂ ಸಾಧ್ಯವಿಲ್ಲ.
- ಬಿಜೆಪಿ ಸಮಸ್ತ ಹಿಂದುಗಳ ಹೆಸರಿನಲ್ಲಿ ಹಿಂದುತ್ವದ ಮೂಲಕ ಅಧಿಕಾರಕ್ಕೆ ಬಂದಿದೆಯೇ ಹೊರತು ಕೇವಲ ಲಿಂಗಾಯತರಿಂದಲ್ಲ. ಕೇವಲ ಲಿಂಗಾಯತ ಪಕ್ಷ ಅನ್ನುವುದಾದರೆ ಅದನ್ನು ಬಹಿರಂಗವಾಗಿ ಘೋಷಣೆ ಮಾಡಲಿ ಇಲ್ಲವೇ 2ಎ ಮೀಸಲಾತಿ ಪ್ರಸ್ತಾವನೆಗೆ ಉತ್ತೇಜನ ಮಾಡುವುದನ್ನು ಬಿಡಲಿ, ಅವೈಜ್ಞಾನಿಕ ಅಂಶಗಳನ್ನು ಮುಂದಿಟ್ಟುಕೊಂಡು ಲಿಂಗಾಯತ ಒಳಪಂಗಡಗಳು ಹಿಂದುಳಿದಿವೆ ಎಂದರೆ ಅದಕ್ಕೆ ಕಿಮ್ಮತ್ತಿಲ್ಲ.
- ಪಂಚಮಸಾಲಿಗಳು ಮತ್ತು ಸಮಸ್ತ ಲಿಂಗಾಯತರು ವೀರಶೈವ ಲಿಂಗಾಯತರ ಹೆಸರಿನಲ್ಲಿ 3ಬಿ ಪ್ರವರ್ಗದಲ್ಲಿರುವುದು ಸಮಂಜಸವಾಗಿದೆ. ಅತೀ ಹಿಂದುಳಿದ ವರ್ಗಗಳ ಪಾಲು ಕಸಿದುಕೊಂಡು ಹೆಚ್ಚು ಹೆಚ್ಚು ಮೀಸಲಾತಿ ಪ್ರಯೋಜನ ಪಡೆಯಲು ಎ ಪ್ರವರ್ಗದ ಶೇ.15ರ ಮೀಸಲಾತಿ ಮೇಲೆ ಕಣ್ಣು ಹಾಕಿದರೆ ದುರ್ಬಲ ವ್ಯಕ್ತಿಯ ಅನ್ನ ಕಸಿದಂತೆಯೇ ಸರಿ. ದುರ್ಬಲರನ್ನು ಮೇಲೆತ್ತುವುದರ ಬದಲು ಸರ್ಕಾರ ಅವರನ್ನು ತುಳಿಯಲು ಹೊರಟರೆ ಅಮಾನವೀಯವಾಗುತ್ತದೆ.
- 2ಎ ಪ್ರವರ್ಗಕ್ಕೆ ಲಿಂಗಾಯತ ಒಳಪಂಗಡಗಳನ್ನು ಸೇರಿಸುವುದನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವೇ ಇಲ್ಲ. ಹೀಗಾಗಿ ಇದನ್ನು ನಾವು ಉಗ್ರವಾಗಿ ಖಂಡಿಸುತ್ತೇವೆ. ಈ ಸಂಬಂಧ ಕರ್ನಾಟಕ ಕ್ಷತ್ರಿಯ ಒಕ್ಕೂಟ ರಾಜ್ಯವ್ಯಾಪಿ ಹೋರಾಟ ಕೈಗೆತ್ತಿಕೊಳ್ಳಲಿದೆ. ಘನತೆವೆತ್ತ ರಾಜ್ಯಪಾಲರಿಗೆ ಮತ್ತು ಕೇಂದ್ರ ಸರ್ಕಾರಕ್ಕೆ ದೂರು ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ಉದಯ ಸಿಂಗ್ ರಾಜ್ಯಾಧ್ಯಕ್ಷರು-ಕರ್ನಾಟಕ ಕ್ಷತ್ರಿಯ ಒಕ್ಕೂಟ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು .
City Today News
9341997936