ಬೆಂಗಳೂರಿನ ಪಮುಖ ಸಮಾಜ ಸೇವಾ ಸಂಸ್ಥೆಗಳಲ್ಲಿ ಒಂದಾದ ಜಸ್ಟೀಸ್ ಹೊಂಬೇಗೌಡ ಸೇವಾ ಸಮಿತಿ (ಐಟಿಐ)ಗೆ ಸುವರ್ಣ ಮಹೋತ್ಸವ ಸಂಭ್ರಮ.

ಸಮಾಜ ಸೇವಾ ಚಟುವಟಿಕೆಗಳಲ್ಲಿ 50 ವರ್ಷಗಳನ್ನು ಪೂರ್ಣಗೊಳಿಸುವುದು ಹೆಗ್ಗಳಿಕೆಯೇ ಸರಿ. ಸುವರ್ಣ ಮಹೋತ್ಸವದ ಅಂಗವಾಗಿ ಸಮಿತಿಯು ದಿನಾಂಕ 13- 10-2024 ಭಾನುವಾರ ಸಮಾರಂಭವನ್ನು ಹಮ್ಮಿಕೊಂಡಿದೆ. ಅಂದು ಸಂಜೆ ಬೆಂಗಳೂರಿನ ವಿ.ವಿ. ಪುರಂ, ಕೆ ಆರ್ ರಸ್ತೆಯ ಕುವೆಂಪು ಕಲಾಕ್ಷೇತ್ರದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.

ಸಮಾರಂಭದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿರವರು, ಪಟ್ಟನಾಯಕನಹಳ್ಳಿ ಸ್ಪಟಿಕಪುರಿ ಮಹಾಸಂಸ್ಥಾನ ಮಠದ ಆಶೀರ್ವಚನ ನೀಡಲಿದ್ದಾರೆ. ಪೀಠಾಧ್ಯಕ್ಷರಾದ ನಂಜಾವಧೂತ ಸ್ವಾಮೀಜಿರವರು

ಜಸ್ಟೀಸ್ ಹೊಂಬೇಗೌಡ ಪ್ರಶಸ್ತಿಯನ್ನು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಶ್ರೀ ವಿ.ಗೋಪಾಲಗೌಡ, ಹೈ ಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳಾದ ಶ್ರೀ ಎ.ಜೆ.ಸದಾಶಿವ, ಶ್ರೀ ಚಂದ್ರಶೇಖರಯ್ಯ, ಶ್ರೀ ಹೆಚ್.ಎನ್. ನಾಗಮೋಹನ್‌ದಾಸ್ ಮತ್ತು ಶ್ರೀ ಹುಲವಾಡಿ ಜಿ.ರಮೇಶ್ ಅವರಿಗೆ ನೀಡಿ ಗೌರವಿಸಲಾಗುತ್ತಿದೆ.

ಶಾಸಕರಾದ ಎಂ. ಕೃಷ್ಣಪ್ಪ, ಕೆ. ಗೋಪಾಲಯ್ಯ, ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷರು ಶಾಸಕರೂ ಆದ ಸಿ.ಎನ್, ಬಾಲಕೃಷ್ಣ, ನಿವೃತ್ತ ಹಿರಿಯ ವಿಜ್ಞಾನಿಗಳಾದ ಶರಶ್ಚಂದ್ರ ಹೊಂಬೇಗೌಡ, ಐ.ಆರ್.ಎಸ್ ಅಧಿಕಾರಿ ಜಯರಾಮ್ ರಾಯಪುರ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ಈ ಸಂದರ್ಭದಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷರಾದ ಶುಭಧನಂಜಯ ಅವರ ಶಿಷ್ಯ ವೃಂದದಿಂದ ನೃತ್ಯ ಕಾರ್ಯಕ್ರಮ ನಡೆಯಲಿದೆ. ಅಂತಾರಾಷ್ಟ್ರೀಯ ಖ್ಯಾತಿಯ ಜೋಗಿಲ ಸಿದ್ದರಾಜು ಮತ್ತು ತಂಡದಿಂದ ಸುಗಮ ಸಂಗೀತ ಕಾರ್ಯಕ್ರಮ ಹಾಗೂ ಅರುಣೋದಯ ಲೀಗಲ್ ಸ್ಟಡೀಸ್ ಕಾಲೇಜು ಹಾಗೂ ಇಂಡಿಯನ್ ಹೈಸ್ಕೂಲ್ ವಿದ್ಯಾರ್ಥಿಗಳಿಂದ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಜಸ್ಟೀಸ್ ಹೊಂಬೇಗೌಡ ಸೇವಾ ಸಮಿತಿ ಸ್ಥಾಪನೆ:

ಐ.ಟಿ.ಐ. ಕಾರ್ಖಾನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಅಧಿಕಾರಿಗಳು ಮತ್ತು ನೌಕರರು ತಮ್ಮ ಜನಾಂಗದ ಸಾಮಾಜಿಕ ಆರ್ಥಿಕ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಏಳಿಗೆಗಾಗಿ ಸಂಘಟನೆಯನ್ನು ಹುಟ್ಟು ಹಾಕಲು ನಿರ್ಧಾರ ಮಾಡಿದ್ದರು. ದಿನಾಂಕ 02-12- 1974 ರಂದು ಜಸ್ಟೀಸ್ ಹೊಂಬೇಗೌಡ ಸೇವಾ ಸಮಿತಿ ಸ್ಥಾಪನೆಯಾಯಿತು. ಜಸ್ಟೀಸ್ ಹೊಂಬೇಗೌಡ ಅವರ ಹೆಸರಿನಲ್ಲಿ ಸಮಿತಿಯನ್ನು ಹುಟ್ಟು ಹಾಕಲು ಕಾರಣ ಏನೆಂದು ನಿಮಗೆ ಕುತೂಹಲ ಮೂಡಬಹುದು. ಜಸ್ಟೀಸ್ ಹೊಂಬೇಗೌಡರವರು

ಕರ್ನಾಟಕ ಹೈ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿಗಳಾಗಿ ಅತ್ಯುತ್ತಮ ಸೇವೆ ಸಲ್ಲಿಸಿದ್ದರು. ಒಕ್ಕಲಿಗ ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ ಶ್ರೇಷ್ಠ ಕೊಡುಗೆ ನೀಡಿದ್ದರು. ಹಾಗಾಗಿ ಸಮಾಜದ ಹಿರಿಯ ಮುಖಂಡರು ಮತ್ತು ನಿವೃತ್ತ ಐ.ಎ.ಎಸ್. ಅಧಿಕಾರಿ ಆರ್. ಮರುದೇವೆಗೌಡ ರವರ ಸಲಹೆಯಂತೆ ಜಸ್ಟೀಸ್ ಹೊಂಬೇಗೌಡ ಸೇವಾ ಸಮಿತಿಯನ್ನು ನೋಂದಣಿ ಮಾಡಲಾಯಿತು.

ಸಮಿತಿ ಸಾಧನೆಯ ಮೈಲಿಗಲ್ಲುಗಳು

ಐ.ಟಿ.ಐ. ಕಾರ್ಖಾನೆಯ ಒಕ್ಕಲಿಗ ಸಮುದಾಯದ ನೌಕರರು ಹುಟ್ಟು ಹಾಕಿದ ಈ ಸಮಿತಿಯು ತನ್ನ ಸೇವೆಯನ್ನು ಕೇವಲ ಸದಸ್ಯರು ಹಾಗೂ ಅವರ ಕುಟುಂಬದವರಿಗೆ ಮಾತ್ರ ಸೀಮಿತಗೊಳಿಸಲಿಲ್ಲ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿರುವ ಒಕ್ಕಲು ಸಮುದಾಯದ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಕಾರವನ್ನು ನೀಡುತ್ತಾ ಬಂದಿದೆ.

ಪ್ರತಿವರ್ಷವೂ ಪ್ರತಿಭಾವಂತ ಗ್ರಾಮೀಣ ವಿದ್ಯಾರ್ಥಿಗಳಿಗೆ ಧನ ಸಹಾಯ, ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಸಾಮೂಹಿಕ ವಿವಾಹ, ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರಲಾಗುತ್ತಿದೆ. ಗೋಕಾಕ್ ಚಳವಳಿ, ಚಿನ್ನಪ್ಪರೆಡ್ಡಿ ವರದಿ ವಿರುದ್ಧ ನಡೆದ ಹೋರಾಟ, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರಿಡಲು ಹೋರಾಟ ನಡೆಸಿದೆ. ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ, ಕಾವೇರಿ ನ್ಯಾಯಮಂಡಳಿ ತೀರ್ಪಿನ ವಿರುದ್ಧ ನಡೆದ ಹೋರಾಟ, ಕೆಂಪಾಂಬುದಿ ಕೆರೆ ಉಳಿಸಲು ನಡೆದ ಹೋರಾಟ, ಮಾಗಡಿ ಕೋಟೆ ಮತ್ತು ಹಲವಾರು ಸ್ಮಾರಕಗಳನ್ನು ಉಳಿಸಲು ನಡೆದ ಹೋರಾಟಗಳಲ್ಲಿ ಭಾಗಿಯಾಗಿದೆ. ಆದಿಚುಂಚನಗಿರಿ ಮಠದ ವಿಜಯನಗರ ಶಾಖೆಯಲ್ಲಿ ಸಮಿತಿಯಿಂದ ಒಂದು ಕೊಠಡಿಯನ್ನು ಕಟ್ಟಿಸಿಕೊಡಲಾಗಿದೆ.

ಒಂದು ರೀತಿಯಲ್ಲಿ ಎಲೆ ಮರೆಯ ಕಾಯಿಯಂತೆ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ. ಹಾಗೆಯೇ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿ, ಸಾಧನೆ ಮಾಡಿ ಹೆಸರು ಗಳಿಸಿರುವ ಗಣ್ಯರಿಗೆ ಸನ್ಮಾನ ಮಾಡಿ ಗೌರವಿಸುತ್ತಾ ಬಂದಿದೆ. ಇದುವರೆಗೆ ಪ್ರೊ.ದೊಡ್ಡರಂಗೇಗೌಡ, ಪ್ರೊ. ಎಂ. ಹೆಚ್. ಕೃಷ್ಣಯ್ಯ, ಪ್ರೊ. ಕೆ.ಎಸ್. ಭಗವಾನ್, ಪ್ರೊ. ಕರೀಗೌಡ, ವೈ.ಕೆ. ಮುದ್ದುಕೃಷ್ಣ, ಆಲೂರು ನಾಗಪ್ಪ (ಜಾನಪದ), ಪಿ.ಆರ್.ರಮೇಶ್ (ಮಾಜಿ ಮಹಾ ಪೌರರು) ಮೊದಲಾದವರ ಸೇವೆಯನ್ನು ಗುರುತಿಸಿ ಗೌರವಿಸುವ ಕೆಲಸ ಮಾಡಿದೆ.

ಸಮಿತಿಯ ಸಮಾಜಮುಖಿ ಕಾರ್ಯಕ್ರಮಗಳಿಗೆ

ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಹಿಂದಿನ ಪೀಠಾಧ್ಯಕ್ಷರಾದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಗಳು ತುಂಬು ಹೃದಯದಿಂದ ಆಶೀರ್ವದಿಸಿದ್ದಾರೆ. ಮಾಜಿ ಪ್ರಧಾನಿಗಳಾದ ಹೆಚ್. ಡಿ. ದೇವೇಗೌಡರು, ಮಾಜಿ ಸಚಿವರಾದ ಹೆಚ್.ಸಿ. ಶ್ರೀಕಂಠಯ್ಯ, ಬಿ. ಎನ್. ಬಚ್ಚೇಗೌಡ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಚಿತ್ರನಟ ಅಂಬರೀಷ್‌, ಸಿ. ಚೆನ್ನಿಗಪ್ಪ, ರಾಮಚಂದ್ರೇಗೌಡ, ಬಿ.ಎಲ್. ಶಂಕರ್, ಎಲ್. ಆರ್. ಶಿವರಾಮೇಗೌಡ, ಎನ್. ರಾಜಣ್ಣ, ಸಿ. ಎಂ. ನಾಗರಾಜು, ಎಲ್.ಟಿ. ಕಾಲೆ, ಸಿ.ನಾರಾಯಣಸ್ವಾಮಿ, ಲಕ್ಕಣ್ಣ ಮೊದಲಾದವರು ಸಲಹೆ, ಸಹಕಾರ ಹಾಗೂ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ.

ದಿವಂಗತ ಗುತ್ತಲಗೌಡರು ಎರಡು ದಶಕಗಳ ಕಾಲ ಸಮಿತಿಯ ಗೌರವ ಅಧ್ಯಕ್ಷರಾಗಿ ಮಾರ್ಗದರ್ಶನ ಮಾಡಿದ್ದಾರೆ. ನಂತರ ಗಂಗಾಧರ್ ರವರು ಅಧ್ಯಕ್ಷರಾಗಿ ಸಮಿತಿಯನ್ನು, ದಕ್ಷತೆಯಿಂದ ಮುನ್ನಡೆಸಿದ್ದಾರೆ.

ದಿನಾಂಕ:10-03-2011 ರಿಂದ ಶ್ರೀ ಎಂ.ಎ. ಆನಂದ್ ಅವರು ಸಮಿತಿಯ ಅಧ್ಯಕ್ಷರಾಗಿ ಸಮಿತಿಯನ್ನು ನಡೆಸಿಕೊಂಡು ಬರುತ್ತಿದ್ದಾರೆ. ಇವರು ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾಗಿ ಕಾರ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಅರುಣೋದಯ ಗ್ರೂಪ್ ಆಫ್ ಇನ್ ಸ್ಟಿಟ್ಯೂಷನ್ಸ್ ಗೌರವ ಅಧ್ಯಕ್ಷರಾಗಿ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರ ಎಂದು ಎಂ.ಎ.ಆನಂದ್, ಗೌರವಾಧ್ಯಕ್ಷರು, ಜೆ. ಮಂಜುನಾಥಸ್ವಾಮಿ, ಕಾರ್ಯಾಧ್ಯಕ್ಷರು ಹಾಗೂ ಕೆ.ಹೆಚ್. ಚನ್ನಪ್ಪ, ಉಪಾಧ್ಯಕ್ಷರು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ತಿಳಿಸಿದರು.

City Today News 9341997936

Leave a comment

This site uses Akismet to reduce spam. Learn how your comment data is processed.