“ಸಮಾನತೆಯ ಸಂದೇಶದೊಂದಿಗೆ ಅಂಬೇಡ್ಕರ್ ಜಯಂತಿ” 18 ಮಂದಿಗೆ ಪ್ರಶಸ್ತಿ ಪ್ರದಾನ

ಬೆಂಗಳೂರು, ಏಪ್ರಿಲ್ 16: ಭಾರತ ರತ್ನ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ 135ನೇ ಜನ್ಮ ಜಯಂತಿ ಅಂಗವಾಗಿ ನಿನ್ನೆ ನಗರದಲ್ಲಿ ವೈಭವಯುತವಾಗಿ ವಿಶೇಷ ಕಾರ್ಯಕ್ರಮ ನಡೆಯಿತು. ಗ್ರೇಟರ್ ಬೆಂಗಳೂರು ಪ್ರಾಧಿಕಾರ ಪಾಲಿಕೆಗಳ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ (ನೋಂದಾಯಿತ) ವತಿಯಿಂದ ಆಯೋಜಿಸಲಾದ ಈ ಸಮಾರಂಭವು ಬೆಂಗಳೂರಿನ ಪ್ರತಿಷ್ಠಿತ ಸರ್ ಪುಟ್ಟಣ್ಣಚೆಟ್ಟಿ ಪುರಭವನದಲ್ಲಿ ಭರ್ಜರಿಯಾಗಿ ಜರುಗಿತು.

ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆಗೈದ 18 ಮಂದಿ ಸಾಧಕರು ಮತ್ತು ಸಾಧಕಿಯರಿಗೆ “ಡಾ. ಬಿ.ಆರ್. ಅಂಬೇಡ್ಕರ್ ರತ್ನ” ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸುಮಂಗಲಿ ಸೇವಾಶ್ರಮದ ಸಂಸ್ಥಾಪಕ ಅಧ್ಯಕ್ಷೆ, ಪದ್ಮಶ್ರೀ ಪುರಸ್ಕೃತ ಡಾ. ಎಸ್. ಸುಶೀಲಮ್ಮ ಅವರು ಸೇರಿದಂತೆ ಅನೇಕ ಗಣ್ಯರು ಈ ಗೌರವವನ್ನು ಸ್ವೀಕರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಯಾದ ಹೆಚ್. ಟಿ. ನರೇಂದ್ರ ಪ್ರಸಾದ್ ವಹಿಸಿಕೊಂಡಿದ್ದು, ಉದ್ಘಾಟನೆಯನ್ನು ಮತ್ತೊಬ್ಬ ನ್ಯಾಯಮೂರ್ತಿ ರಾಚಯ್ಯ ನೆರವೇರಿಸಿದರು. ಸಮಾರಂಭದಲ್ಲಿ ಹಿರಿಯ ಪತ್ರಕರ್ತ ಮೋಹನ್ ಭೀಮರಾವ್ ಕುಲಕರ್ಣಿ, ಜಾನಪದ ಗಾಯಕ ಗುರುರಾಜ್ ಹೊಸಕೋಟೆ ಹಾಗೂ ಬೀದರಿನ ಹಿರಿಯ ರಂಗಕಲಾವಿದ ವೈಜನಾಥ್ ಬಿರಾದಾರ್ ಸೇರಿದಂತೆ ಹಲವು ಗಣ್ಯರು ಪ್ರಶಸ್ತಿ ಸ್ವೀಕರಿಸಿ ಸನ್ಮಾನಿತರಾದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಅತಿಥಿಗಳು ಡಾ. ಅಂಬೇಡ್ಕರ್ ಅವರ ಕನಸುಗಳು ಇನ್ನೂ ಸಂಪೂರ್ಣವಾಗಿ ಸಾಕಾರವಾಗದಿರುವುದನ್ನು ಉಲ್ಲೇಖಿಸಿ, ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜದಲ್ಲಿ ಸಮಾನತೆ ಮತ್ತು ನ್ಯಾಯವನ್ನು ಸಾಧಿಸಲು ಒಟ್ಟಾಗಿ ಪ್ರಯತ್ನಿಸಬೇಕೆಂದು ಕರೆ ನೀಡಿದರು.

ಸಂಘದ ಅಧ್ಯಕ್ಷರಾದ  ಎ. ಅಮೃತರಾಜ್ ಸ್ವಾಗತ ಭಾಷಣ ಮಾಡುತ್ತಾ, ಸಂಘದ ಭವಿಷ್ಯದ ದಿಕ್ಕು-ನಿರ್ದೇಶನಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಕಾರ್ಯಕ್ರಮದ ಕೊನೆಯಲ್ಲಿ ಗುರುರಾಜ್ ಹೊಸಕೋಟೆ ಅವರ ಅರ್ಥಪೂರ್ಣ ಜಾನಪದ ಗಾನವು ಸಮಾರಂಭಕ್ಕೆ ವಿಶೇಷ ಮೆರಗು ನೀಡಿದ್ದು, ಸಂಪೂರ್ಣ ಕಾರ್ಯಕ್ರಮಕ್ಕೆ ಸಾಂಸ್ಕೃತಿಕ ಸೊಗಡನ್ನು ತಂದಿತು.

City Today News 9341997936

Leave a comment

This site uses Akismet to reduce spam. Learn how your comment data is processed.