“ಸರ್ಕಾರದ ನಿರ್ಲಕ್ಷ್ಯಕ್ಕೆ ತೀವ್ರ ಆಕ್ರೋಶ” ಮೇ 20ರಿಂದ ಬಸ್ ಸಂಚಾರಕ್ಕೆ ಭೀತಿ

ಬೆಂಗಳೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಮೇ 20, 2026ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದೆ.

ಸಂಘದ ಪ್ರಕಟಣೆಯ ಪ್ರಕಾರ, 2024ರ ಜನವರಿ 1ರಿಂದ ಬಾಕಿ ಇರುವ ವೇತನ ಪರಿಷ್ಕರಣೆಯನ್ನು ತಕ್ಷಣ ಜಾರಿಗೆ ತರಬೇಕು. ನಿವೃತ್ತ ನೌಕರರಿಗೆ ಬಾಕಿಯಾಗಿರುವ 12 ತಿಂಗಳ ವೇತನವನ್ನು ಪಾವತಿಸುವುದರ ಜೊತೆಗೆ, 26 ತಿಂಗಳ ಬಾಕಿ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಲಾಗಿದೆ.
ಇದೇ ವೇಳೆ, ಕೋವಿಡ್ ಅವಧಿಯಲ್ಲಿ (2020) ಸೇವೆ ಸಲ್ಲಿಸಿದ ಸಿಬ್ಬಂದಿಗೆ ಪ್ರೋತ್ಸಾಹಧನ ನೀಡಬೇಕು. 2022ರ ಜುಲೈ 1ರಿಂದ ಬಾಕಿಯಾಗಿರುವ ಶೇ.31ರ ತುಟ್ಟಿ ಭತ್ಯೆಯನ್ನು ಮರು ವೇತನದಲ್ಲಿ ವಿಲೀನಗೊಳಿಸಿ ಅದರ ಬಾಕಿ ಮೊತ್ತವನ್ನು ಪಾವತಿಸಬೇಕೆಂದು ಜಂಟಿ ಸಮಿತಿ ಆಗ್ರಹಿಸಿದೆ.

ಸಾರಿಗೆ ನಿಗಮಗಳ ಸಿಬ್ಬಂದಿಗೆ ಸರ್ಕಾರಿ ನೌಕರರ ಸ್ಥಾನಮಾನ ನೀಡುವ ಪ್ರಮುಖ ಬೇಡಿಕೆಯನ್ನೂ ಮುಂದಿಟ್ಟಿದ್ದು, ನಾಲ್ಕು ನಿಗಮಗಳ ನೌಕರರಿಗೆ ನಾಲ್ಕು ವರ್ಷಕ್ಕೊಮ್ಮೆ 7ನೇ ವೇತನ ಆಯೋಗದ ಮಾದರಿಯಲ್ಲಿ ಶೇ.27.5ರ ವೇತನ ಹೆಚ್ಚಳ ನೀಡಬೇಕು ಎಂದು ಹೇಳಿದೆ.

ಈ ಬೇಡಿಕೆಗಳ ಕುರಿತು ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದರೂ ಸ್ಪಂದನೆ ಸಿಗದ ಹಿನ್ನೆಲೆ ಮುಷ್ಕರ ಅನಿವಾರ್ಯವಾಗಿದೆ ಎಂದು ಜಂಟಿ ಕ್ರಿಯಾ ಸಮಿತಿ ತಿಳಿಸಿದೆ.

ಈ ಸಂಬಂಧ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಿ. ಜಯದೇವರಾಜೇ ಅರಸು, ಜ್ಯೋತಿ ಅನಂತ ಸುಬ್ಬರಾವ್, ವಿಜಯ ಭಾಸ್ಕರ್, ಎಚ್.ಎಸ್. ಮಂಜುನಾಥ್, ಗಂಡಸಿ ಸದಾನಂದಸ್ವಾಮಿ, ಸೋಮಣ್ಣ ಸೇರಿದಂತೆ ಹಲವರು ಭಾಗವಹಿಸಿದ್ದರು.

City Today News 9341997936

Leave a comment

This site uses Akismet to reduce spam. Learn how your comment data is processed.