ಸಿಸಿಬಿ ತನಿಖೆ  ಆಗಲೇ ಬೇಕು ಮೇಲೆ ಸಂತ್ರಸ್ತರ ಆಗ್ರಹ

ಸಾಂಸ್ಕೃತಿಕ ನಗರಿ ಮೈಸೂರು ಇದೀಗ ಬಹುಚರ್ಚಿತ ಬಂಗಾರದ ವಂಚನೆ ಪ್ರಕರಣದಿಂದ ರಾಜ್ಯದಾದ್ಯಂತ ಸುದ್ದಿಯಲ್ಲಿದೆ. ಚಿನ್ನತಂಬಿ ಅಲಿಯಾಸ್ ಸೌಂದರ್ ರಾಜನ್ ಎಂಬಾತನ ವಿರುದ್ಧ ಹೊರಬರುತ್ತಿರುವ ಆರೋಪಗಳು ದಿನದಿಂದ ದಿನಕ್ಕೆ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿವೆ. ಪ್ರಕರಣದ ಕುರಿತಾಗಿ ಹೊಸಹೊಸ ಮಾಹಿತಿ ಬಹಿರಂಗವಾಗುತ್ತಿದ್ದು, ಸಾವಿರಾರು ಮಂದಿ ವಂಚನೆಗೆ ಒಳಗಾಗಿರುವ ಸಾಧ್ಯತೆ ವ್ಯಕ್ತವಾಗಿದೆ.
‘ರಿಲೀಡ್ ಗೋಲ್ಡ್’ ಸೇರಿದಂತೆ ವಿವಿಧ ಹೆಸರಿನ ಕಂಪನಿಗಳನ್ನು ನಡೆಸುತ್ತಿದ್ದ ಚಿನ್ನತಂಬಿ, ಬ್ಯಾಂಕ್‌ಗಳಲ್ಲಿ ಅಡವಿಟ್ಟಿದ್ದ ಚಿನ್ನವನ್ನು ಕಡಿಮೆ ಬಡ್ಡಿದರದಲ್ಲಿ ಬಿಡಿಸಿಕೊಡುವುದಾಗಿ ಭರವಸೆ ನೀಡುತ್ತಿದ್ದನು ಎನ್ನಲಾಗಿದೆ. ಬಳಿಕ ತನ್ನ ಸಂಸ್ಥೆಯಲ್ಲೇ ಇನ್ನೂ ಕಡಿಮೆ ಬಡ್ಡಿಯಲ್ಲಿ ಗಿರವಿ ಇಡುವುದಾಗಿ ನಂಬಿಸಿ, ಏಜೆಂಟರು ಹಾಗೂ ಬ್ರೋಕರ್‌ಗಳ ಮೂಲಕ ಗ್ರಾಹಕರ ಚಿನ್ನವನ್ನು ತನ್ನ ವಶಕ್ಕೆ ಪಡೆದುಕೊಳ್ಳುತ್ತಿದ್ದನೆಂದು ಆರೋಪಿಸಲಾಗಿದೆ.

ಗ್ರಾಹಕರು ಬಡವರು, ಮಹಿಳೆಯರು ಅಥವಾ ಕಡಿಮೆ ವಿದ್ಯಾವಂತರಾಗಿದ್ದರೆ ಚಿನ್ನದ ಅಸಲೀಯತ್ತಿನ ಬಗ್ಗೆ ಪ್ರಶ್ನೆ ಎತ್ತುವುದು, ಅವರ ಅನುಮತಿ ಇಲ್ಲದೆ ಚಿನ್ನ ಕರಗಿಸಿರುವಂತೆ ತೋರಿಸುವುದು, ತೂಕ ಮತ್ತು ಗುಣಮಟ್ಟದಲ್ಲಿ ಮೋಸ ಮಾಡುವುದು, ರೌಡಿಗಳ ಮೂಲಕ ಬೆದರಿಕೆ ಹಾಕಿ ಕಡಿಮೆ ಮೊತ್ತಕ್ಕೆ ರಾಜಿ ಮಾಡಿಸುವುದು ನಡೆದಿತ್ತು ಎಂದು ಸಂತ್ರಸ್ತರು ದೂರಿದ್ದಾರೆ. ಕೆಲವರಿಗೆ ಹಣ ನೀಡದೆ ದಿನಗಟ್ಟಲೆ ಸತಾಯಿಸಿ, “ಸೊಸೈಟಿಯಲ್ಲಿ ಚಿನ್ನ ಇಡಲಾಗಿದೆ”, “ಪಾರ್ಟ್ನರ್ ಅನುಮತಿ ಬೇಕು”, “ಬೋರ್ಡ್ ಆಫ್ ಡೈರೆಕ್ಟರ್ ಒಪ್ಪಿಗೆ ಅಗತ್ಯ” ಮುಂತಾದ ನೆಪಗಳನ್ನು ಹೇಳಿ ತಪ್ಪಿಸಿಕೊಳ್ಳಲಾಗುತ್ತಿತ್ತು ಎಂಬ ಆರೋಪವೂ ಕೇಳಿಬಂದಿದೆ.

ಈ ವಂಚನೆಗೆ ಕೆಲ ಪೊಲೀಸ್ ಅಧಿಕಾರಿಗಳು ಸಹಕಾರ ನೀಡಿದ್ದು, ಸ್ಥಳೀಯ ಠಾಣೆಗಳ ಸಂಪರ್ಕದ ಹೆಸರಿನಲ್ಲಿ ಗ್ರಾಹಕರ ಮೇಲೆ ಒತ್ತಡ ಹೇರಿ ರಾಜಿ ಮಾಡಿಸುತ್ತಿದ್ದರು ಎಂದು ಸಂತ್ರಸ್ತರು ಆರೋಪಿಸಿದ್ದಾರೆ. ಆದಾಯ ತೆರಿಗೆ ಮತ್ತು ಜಿಎಸ್‌ಟಿ ಅಧಿಕಾರಿಗಳ ಬೆಂಬಲವಿದೆ ಎಂದು ಹೇಳಿಕೊಂಡು ಚಿನ್ನತಂಬಿ ತನ್ನ ಪ್ರಭಾವವನ್ನು ಬಳಸಿಕೊಂಡಿದ್ದಾನೆ ಎನ್ನಲಾಗಿದೆ.
ಇತ್ತೀಚೆಗೆ ಮಹಿಳಾ ಗ್ರಾಹಕರ ಮೇಲೆ ಕಚೇರಿಯಲ್ಲೇ ಹಲ್ಲೆ ನಡೆಸಿರುವುದು ಹಾಗೂ ಕೊಲೆ ಬೆದರಿಕೆ ಹಾಕಿರುವುದಾಗಿ ಕೂಡ ಗಂಭೀರ ಆರೋಪಗಳು ಕೇಳಿಬಂದಿವೆ. ಈ ನಡುವೆ ಸಿಸಿಬಿ ಪೊಲೀಸರು ಕೇವಲ ಸಾಂಕೇತಿಕ ಬಂಧನ ಮಾಡಿ, ಗಂಭೀರ ಆರೋಪಗಳನ್ನು ದಾಖಲಿಸದೆ ಪ್ರಕರಣವನ್ನು ಸಡಿಲಗೊಳಿಸುವ ಯತ್ನ ನಡೆಸುತ್ತಿದ್ದಾರೆ ಎಂಬ ಅನುಮಾನವನ್ನು ಸಂತ್ರಸ್ತರು ವ್ಯಕ್ತಪಡಿಸಿದ್ದಾರೆ. ಕೊಲೆ ಬೆದರಿಕೆ ಪ್ರಕರಣ ದಾಖಲಿಸದೆ ಕೇವಲ ವಂಚನೆ ಪ್ರಕರಣದಡಿ ಬಂಧಿಸಿರುವುದರಿಂದ, ಆರೋಪಿ ಸುಲಭವಾಗಿ ಜಾಮೀನು ಪಡೆಯುವ ಸಾಧ್ಯತೆ ಇದೆ ಎಂದು ಅವರು ಆಕ್ಷೇಪಿಸಿದ್ದಾರೆ.
ಸಂತ್ರಸ್ತರು ಪೊಲೀಸ್ ಠಾಣೆ ಹಾಗೂ ಹಿರಿಯ ಅಧಿಕಾರಿಗಳ ಬಳಿ ದೂರು ನೀಡಲು ಹೋದಾಗ, “ಹೋಗಿ ಸೆಟಲ್ ಮಾಡಿಕೊಂಡುಕೊಳ್ಳಿ” ಎಂಬ ರೀತಿಯ ಪ್ರತಿಕ್ರಿಯೆ ಸಿಕ್ಕಿದೆ ಎಂದು ದೂರಲಾಗಿದೆ. ಈ ರೀತಿಯ ನಡೆ ವಂಚಕರಿಗೆ ಪ್ರೋತ್ಸಾಹ ನೀಡುವಂತಾಗಿದ್ದು, ಬಡ ಮತ್ತು ಅಮಾಯಕ ಜನರಿಗೆ ನ್ಯಾಯ ಸಿಗದಂತಾಗಿದೆ ಎಂಬ ಅಸಮಾಧಾನ ವ್ಯಕ್ತವಾಗಿದೆ.

ಚಿನ್ನತಂಬಿಗೆ ಕೆಲ ಮಾಜಿ ಶಾಸಕರು ಹಾಗೂ ಒಬ್ಬ ಮಾಜಿ ಸಂಸದನ ಬೆಂಬಲವಿದೆ ಎಂಬ ಆರೋಪವೂ ಕೇಳಿಬಂದಿದೆ. ಗ್ರಾಹಕರ ಚಿನ್ನಾಭರಣಗಳನ್ನು ರಾಜಕೀಯ ನಾಯಕರಿಗೆ ಉಡುಗೊರೆಯಾಗಿ ನೀಡಲಾಗಿದೆ ಎನ್ನಲಾಗುತ್ತಿದ್ದು, ಅವರ ಕುಟುಂಬದ ಸದಸ್ಯರ ಬಳಿಯೂ ಆಭರಣಗಳು ಕಂಡುಬಂದಿವೆ ಎಂದು ಕೆಲವರು ದೂರಿದ್ದಾರೆ. ಉತ್ತಮ ಗುಣಮಟ್ಟದ ಆಭರಣಗಳನ್ನು ಕುಟುಂಬ ಸದಸ್ಯರ ಹೆಸರಿನಲ್ಲಿ ಬ್ಯಾಂಕ್‌ಗಳಲ್ಲಿ ಸಾಲ ಪಡೆದು ಕಟ್ಟಡ ನಿರ್ಮಾಣ ಮತ್ತು ಲೇಔಟ್ ವ್ಯವಹಾರಗಳಿಗೆ ಬಳಸಿಕೊಂಡಿದ್ದಾನೆ ಎನ್ನಲಾಗಿದೆ. ಕೆಲವು ಆಭರಣಗಳನ್ನು ದೊಡ್ಡ ಮಳಿಗೆಗಳಿಗೆ ಮಾರಾಟ ಮಾಡಲಾಗಿದ್ದು, ಹಳೆಯ ಹಾಗೂ ಕಳಪೆ ಗುಣಮಟ್ಟದ ಚಿನ್ನವನ್ನು ಮಾತ್ರ ಕರಗಿಸಿ ಗಟ್ಟಿಗಳ ರೂಪದಲ್ಲಿ ಸ್ಥಳೀಯ ಹಾಗೂ ಬೆಂಗಳೂರು ಬುಲಿಯನ್ ವ್ಯಾಪಾರಿಗಳಿಗೆ ಮಾರಾಟ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

ಈ ಕುರಿತು ಆದಾಯ ತೆರಿಗೆ ಹಾಗೂ ಜಿಎಸ್‌ಟಿ ಇಲಾಖೆಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಸಂತ್ರಸ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಚಿನ್ನತಂಬಿಗೆ ಪ್ರಭಾವಿ ರಾಜಕಾರಣಿಗಳ ಬೆಂಬಲವಿದ್ದು, ಎಲ್ಲ ಪಕ್ಷಗಳ ನಾಯಕರ ಜೊತೆ ಸಂಪರ್ಕವಿದೆ. ಯಾರೂ ಏನೂ ಮಾಡಲು ಸಾಧ್ಯವಿಲ್ಲ” ಎಂದು ಅಧಿಕಾರಿಗಳೇ ಹೇಳುತ್ತಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಈ ಹಗರಣದಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಮಂದಿ ಸಂತ್ರಸ್ತರಾಗಿರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

ಈ ಸಂಬಂಧ ಮೇ 8ರಂದು ಮೈಸೂರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಸ್ಪಂದನೆ ದೊರೆತಿಲ್ಲ ಎಂದು ಮುಖಂಡರು ತಿಳಿಸಿದ್ದಾರೆ. ಪ್ರಕರಣದ ಗಂಭೀರತೆಯನ್ನು ಗಮನಿಸಿ, ಚಿನ್ನತಂಬಿ ನಡೆಸುತ್ತಿರುವ ಕಂಪನಿಗಳ ವಿರುದ್ಧ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ (ಇಡಿ) ತನಿಖೆ ನಡೆಸುವಂತೆ ಸರ್ಕಾರ ಆದೇಶಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಇಲ್ಲವಾದರೆ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಜೆಡಿಯು ವತಿಯಿಂದ ಸಂತ್ರಸ್ತರ ಸಮಾವೇಶಗಳನ್ನು ಆಯೋಜಿಸಿ, ನ್ಯಾಯ ದೊರೆಯುವವರೆಗೆ ಹೋರಾಟ ಮುಂದುವರಿಸಲಾಗುವುದು ಎಂದು ಪ್ರೆಸ್ ಕ್ಲಬ್ ಆಫ್ ಬೆಂಗಳೂರುದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮುಖಂಡರ ಸಮ್ಮುಖದಲ್ಲಿ ಶಿವರಾಮ್ ಕೆ.ವಿ ತಿಳಿಸಿದ್ದಾರೆ.

City Today News 9341997936

Leave a comment

This site uses Akismet to reduce spam. Learn how your comment data is processed.