
ಬೆಂಗಳೂರು, ಜುಲೈ 16: ಮಂಜುನಾಥ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯ ವತಿಯಿಂದ, ಶ್ರೀ ಮಾರುತಿ ಕ್ರೀಡಾ ಮತ್ತು ಹವ್ಯಾಸಿ ಸಂಘ (ರಿ.), ಶ್ರೀ ಜುಂಜಪ್ಪಸ್ವಾಮಿ ದೇವಸ್ಥಾನದ ಸೇವಾ ಸಮಿತಿ (ರಿ.) ಹಾಗೂ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ಸೇವಾ ಸಮಿತಿ (ರಿ.)ಗಳ ಸಹಯೋಗದಲ್ಲಿ ಜುಲೈ 23, ಗುರುವಾರ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ.
ಶಿಬಿರವು ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಮಲ್ಲಸಂದ್ರದ ಶ್ರೀ ಆಂಜನೇಯಸ್ವಾಮಿ ದೇವಾಲಯದ ಹಿಂಭಾಗದಲ್ಲಿರುವ ಯದುನಂದನ ರಂಗಮಂದಿರದಲ್ಲಿ ನಡೆಯಲಿದೆ.
ಕಾರ್ಯಕ್ರಮಕ್ಕೆ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಎಸ್. ಮುನಿರಾಜು ನೇತೃತ್ವ ವಹಿಸಲಿದ್ದು, ಮಾಜಿ ಬಿಬಿಎಂಪಿ ಸದಸ್ಯೆ ಶಶಿ ಶಿವಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಮಲ್ಲಸಂದ್ರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಎಂ. ಕಾರ್ಯಕ್ರಮದ ರೂವಾರಿಯಾಗಿದ್ದಾರೆ.

ಶಿಬಿರದಲ್ಲಿ ಕಣ್ಣಿನ ವಿವಿಧ ಕಾಯಿಲೆಗಳ ತಪಾಸಣೆ, ನೂತನ ತಂತ್ರಜ್ಞಾನದ ಮೂಲಕ ಕಣ್ಣಿನ ಸ್ಕ್ಯಾನಿಂಗ್, ರಕ್ತದೊತ್ತಡ (ಬಿಪಿ) ಹಾಗೂ ಮಧುಮೇಹ ಪರೀಕ್ಷೆ ಸೇರಿದಂತೆ ಸಮಗ್ರ ಆರೋಗ್ಯ ತಪಾಸಣೆ ನಡೆಸಲಾಗುತ್ತದೆ. ಅಗತ್ಯವಿರುವವರಿಗೆ ಲೇಸರ್ ತಂತ್ರಜ್ಞಾನದ ಮೂಲಕ ಹೊಲಿಗೆ ರಹಿತ ಕಣ್ಣಿನ ಶಸ್ತ್ರಚಿಕಿತ್ಸೆಗೆ ಸಲಹೆ ನೀಡಲಾಗುವುದು. ಆಯ್ಕೆಯಾದ ಫಲಾನುಭವಿಗಳಿಗೆ ನಿಗದಿತ ದಿನಾಂಕದಂದು ಉಚಿತ ಶಸ್ತ್ರಚಿಕಿತ್ಸೆಯ ಸೌಲಭ್ಯವೂ ಲಭ್ಯವಿರುತ್ತದೆ.
ಶಿಬಿರದಲ್ಲಿ ಯಶಸ್ವಿನಿ ಕಾರ್ಡ್, ಸಂಪೂರ್ಣ ಸುರಕ್ಷಾ ಆರೋಗ್ಯ ರಕ್ಷಾ ಕಾರ್ಡ್ (ಧರ್ಮಸ್ಥಳ ಆರೋಗ್ಯ ಕಾರ್ಡ್) ಹೊಂದಿರುವವರಿಗೆ ಸಂಬಂಧಿತ ಸೌಲಭ್ಯಗಳು ದೊರೆಯಲಿವೆ. ಕಾರ್ಡ್ ಇಲ್ಲದವರಿಗೆ ರಿಯಾಯಿತಿ ದರದಲ್ಲಿ ಶಸ್ತ್ರಚಿಕಿತ್ಸೆ ಮಾಡಿಕೊಡಲಾಗುತ್ತಿದ್ದು, ಲೆನ್ಸ್ ವೆಚ್ಚವನ್ನು ಫಲಾನುಭವಿಗಳೇ ಭರಿಸಬೇಕಾಗುತ್ತದೆ.

ಶಿಬಿರಕ್ಕೆ ಆಗಮಿಸುವವರು ಯಶಸ್ವಿನಿ ಕಾರ್ಡ್, ಆಧಾರ್ ಕಾರ್ಡ್, ಧರ್ಮಸ್ಥಳ ಆರೋಗ್ಯ ಕಾರ್ಡ್ (ಇದ್ದಲ್ಲಿ) ಹಾಗೂ ಮೊಬೈಲ್ ಸಂಖ್ಯೆಯನ್ನು ಕಡ್ಡಾಯವಾಗಿ ತರಬೇಕು ಎಂದು ಸಂಘಟಕರು ಮನವಿ ಮಾಡಿದ್ದಾರೆ.
ಮಲ್ಲಸಂದ್ರ ಹಾಗೂ ಸುತ್ತಮುತ್ತಲಿನ ಸಾರ್ವಜನಿಕರು ಈ ಉಚಿತ ಆರೋಗ್ಯ ಸೇವೆಯ ಸದುಪಯೋಗ ಪಡೆದುಕೊಳ್ಳುವಂತೆ ಆಯೋಜಕರು ಕೋರಿದ್ದಾರೆ.
City Today News 9341997936
