“ಮಕ್ಕಳ ಲೈಫ್‌ಸ್ಟೈಲ್ ಟೆಕ್ನಾಲಜಿ ವಿಭಾಗಕ್ಕೆ ಬೋಟ್ ಎಂಟ್ರಿ”ಸೇಲರ್ ನ್ಯಾವ್ ಸ್ಮಾರ್ಟ್‌ವಾಚ್, ಸೇಲರ್ ಪ್ಲೇ ಹೆಡ್‌ಫೋನ್ ಬಿಡುಗಡೆ

ಗುರುಗ್ರಾಮ, ಜುಲೈ 28: ಭಾರತದ ಮುಂಚೂಣಿ ಆಡಿಯೊ ಮತ್ತು ವೇರಬಲ್ಸ್ ಬ್ರ್ಯಾಂಡ್ ಬೋಟ್ ಮಕ್ಕಳಿಗಾಗಿ ವಿಶೇಷವಾಗಿ ರೂಪಿಸಿರುವ ‘ಕಿಡ್ ಸೀರೀಸ್’ ಅನ್ನು ಬಿಡುಗಡೆ ಮಾಡುವ ಮೂಲಕ ಮಕ್ಕಳ ಲೈಫ್‌ಸ್ಟೈಲ್ ಟೆಕ್ನಾಲಜಿ ವಿಭಾಗಕ್ಕೆ ಅಧಿಕೃತವಾಗಿ ಕಾಲಿಟ್ಟಿದೆ. ಈ ಸರಣಿಯಲ್ಲಿ ಮಕ್ಕಳ ಸುರಕ್ಷತೆ ಮತ್ತು ಪೋಷಕರೊಂದಿಗೆ ನಿರಂತರ ಸಂಪರ್ಕವನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಿರುವ ಸೇಲರ್ ನ್ಯಾವ್ ಸ್ಮಾರ್ಟ್‌ವಾಚ್ ಹಾಗೂ ಸೇಲರ್ ಪ್ಲೇ ವೈರ್‌ಲೆಸ್ ಹೆಡ್‌ಫೋನ್ಗಳನ್ನು ಪರಿಚಯಿಸಲಾಗಿದೆ.

ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ಶಿಕ್ಷಣ, ಡಿಜಿಟಲ್ ಮನರಂಜನೆ ಮತ್ತು ಪ್ರಯಾಣದ ಸಂದರ್ಭಗಳಲ್ಲಿ ಮಕ್ಕಳು ತಂತ್ರಜ್ಞಾನವನ್ನು ಹೆಚ್ಚಾಗಿ ಬಳಸುತ್ತಿರುವ ಹಿನ್ನೆಲೆಯಲ್ಲಿ, ಅವರ ವಯಸ್ಸಿಗೆ ಹೊಂದುವ ಸುರಕ್ಷಿತ, ಆರಾಮದಾಯಕ ಹಾಗೂ ಸುಲಭವಾಗಿ ಬಳಸಬಹುದಾದ ಸಾಧನಗಳ ಬೇಡಿಕೆ ಹೆಚ್ಚುತ್ತಿದೆ. ಇದೇ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ಬೋಟ್ ತನ್ನ ಹೊಸ ಕಿಡ್ ಸೀರೀಸ್ ಅನ್ನು ಅಭಿವೃದ್ಧಿಪಡಿಸಿದೆ.
ಈ ಸರಣಿಯ ಪ್ರಮುಖ ಉತ್ಪನ್ನವಾಗಿರುವ ಸೇಲರ್ ನ್ಯಾವ್ ಸ್ಮಾರ್ಟ್‌ವಾಚ್ ಮಕ್ಕಳ ಸುರಕ್ಷತೆ ಮತ್ತು ಸಂಪರ್ಕಕ್ಕೆ ಆದ್ಯತೆ ನೀಡುತ್ತದೆ.

ಗೂಗಲ್ ಮ್ಯಾಪ್ಸ್ ಆಧಾರಿತ ರಿಯಲ್-ಟೈಮ್ ಲೊಕೇಶನ್ ಟ್ರ್ಯಾಕಿಂಗ್, 5-ಪಾಯಿಂಟ್ ಸ್ಯಾಟಲೈಟ್ ಪೊಸಿಷನಿಂಗ್, ಜಿಯೋ-ಫೆನ್ಸಿಂಗ್, 4ಜಿ ಟು-ವೇ ವಾಯ್ಸ್ ಮತ್ತು ವಿಡಿಯೋ ಕಾಲಿಂಗ್, ಎಸ್‌ಒಎಸ್ ಬಟನ್ ಹಾಗೂ ಆಡಿಯೊ ಚಾಟ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಇದರ ಮೂಲಕ ಪೋಷಕರು ಮಕ್ಕಳ ಸ್ಥಳವನ್ನು ಸುಲಭವಾಗಿ ತಿಳಿದುಕೊಳ್ಳುವುದರ ಜೊತೆಗೆ ಅಗತ್ಯವಿದ್ದಾಗ ತಕ್ಷಣ ಸಂಪರ್ಕ ಸಾಧಿಸಲು ಸಾಧ್ಯವಾಗುತ್ತದೆ.

ಇದರೊಂದಿಗೆ ಪರಿಚಯಿಸಿರುವ ಸೇಲರ್ ಪ್ಲೇ ವೈರ್‌ಲೆಸ್ ಹೆಡ್‌ಫೋನ್ ಮಕ್ಕಳಿಗೆ ಸುರಕ್ಷಿತ ಮತ್ತು ಆರಾಮದಾಯಕ ಶ್ರವಣ ಅನುಭವ ನೀಡುವ ಉದ್ದೇಶದಿಂದ ವಿನ್ಯಾಸಗೊಳಿಸಲಾಗಿದೆ. ‘ಸೇಫ್ ಅಂಡ್ ಸೌಂಡ್ ಲಿಸನಿಂಗ್’ ತಂತ್ರಜ್ಞಾನದಡಿ ಗರಿಷ್ಠ 85 ಡಿಬಿ ವಾಲ್ಯೂಮ್ ಮಿತಿಯನ್ನು ಹೊಂದಿದ್ದು, ಮೃದುವಾದ ಇಯರ್‌ಕಪ್‌ಗಳು ಹಾಗೂ ಮಕ್ಕಳಿಗೆ ಹೊಂದುವಂತೆ ಟ್ಯೂನ್ ಮಾಡಲಾದ 40 ಎಂಎಂ ಡ್ರೈವರ್‌ಗಳನ್ನು ಒಳಗೊಂಡಿದೆ.

ಸಂಗೀತ, ಕಥೆಗಳು ಮತ್ತು ಶೈಕ್ಷಣಿಕ ವಿಷಯಗಳನ್ನು ಉತ್ತಮ ಗುಣಮಟ್ಟದಲ್ಲಿ ಆಲಿಸಲು ಇದು ನೆರವಾಗುತ್ತದೆ. ಒಂದು ಬಾರಿ ಚಾರ್ಜ್ ಮಾಡಿದರೆ 60 ಗಂಟೆಗಳವರೆಗೆ ಬ್ಯಾಟರಿ ಬ್ಯಾಕಪ್ ನೀಡುತ್ತದೆ.

ಈ ಕುರಿತು ಪ್ರತಿಕ್ರಿಯಿಸಿರುವ ಬೋಟ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗೌರವ್ ನಯ್ಯರ್ ಅವರು, ಇಂದಿನ ಮಕ್ಕಳ ಜೀವನದಲ್ಲಿ ತಂತ್ರಜ್ಞಾನ ಸಹಜ ಭಾಗವಾಗಿದ್ದು, ಪೋಷಕರು ಸುರಕ್ಷತೆ ಮತ್ತು ಅರ್ಥಪೂರ್ಣ ಸಂಪರ್ಕಕ್ಕೆ ಆದ್ಯತೆ ನೀಡುವ ಉತ್ಪನ್ನಗಳನ್ನು ನಿರೀಕ್ಷಿಸುತ್ತಿದ್ದಾರೆ. ಕಿಡ್ ಸೀರೀಸ್ ಮೂಲಕ ಮಕ್ಕಳ ಕುತೂಹಲ ಮತ್ತು ಸ್ವಾವಲಂಬನೆಯನ್ನು ಬೆಂಬಲಿಸುವುದರ ಜೊತೆಗೆ ಪೋಷಕರಿಗೆ ಹೆಚ್ಚಿನ ವಿಶ್ವಾಸ ಮತ್ತು ಮನಶಾಂತಿ ನೀಡುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದೇವೆ ಎಂದು ತಿಳಿಸಿದ್ದಾರೆ.

ಕಿಡ್ ಸೀರೀಸ್ ಬಿಡುಗಡೆ ಮೂಲಕ ಬೋಟ್ ತನ್ನ ಉತ್ಪನ್ನ ಪೋರ್ಟ್‌ಫೋಲಿಯೊವನ್ನು ಮತ್ತಷ್ಟು ವಿಸ್ತರಿಸಿದ್ದು, ವೈಯಕ್ತಿಕ ಆಡಿಯೊ ಮತ್ತು ವೇರಬಲ್ಸ್ ಕ್ಷೇತ್ರದಾಚೆ ಚಾರ್ಜಿಂಗ್ ಸೊಲ್ಯೂಷನ್‌, ಹೋಮ್ ಎಂಟರ್‌ಟೇನ್‌ಮೆಂಟ್ ಹಾಗೂ ಪರ್ಸನಲ್ ಗ್ರೂಮಿಂಗ್ ಸೇರಿದಂತೆ ಹಲವು ವಿಭಾಗಗಳಲ್ಲಿ ತನ್ನ ಅಸ್ತಿತ್ವವನ್ನು ಬಲಪಡಿಸುತ್ತಿದೆ.

ಬೆಲೆ ಮತ್ತು ಲಭ್ಯತೆ
ಸೇಲರ್ ನ್ಯಾವ್ ಸ್ಮಾರ್ಟ್‌ವಾಚ್ ₹6,499 ಬೆಲೆಯಲ್ಲಿ ಫೇರಿ ಪಿಂಕ್ ಮತ್ತು ಸ್ಕೈ ಬ್ಲೂ ಬಣ್ಣಗಳಲ್ಲಿ ಲಭ್ಯವಿರಲಿದೆ. ಸೇಲರ್ ಪ್ಲೇ ವೈರ್‌ಲೆಸ್ ಹೆಡ್‌ಫೋನ್ ₹1,499 ಬೆಲೆಯಲ್ಲಿ ಬಬಲ್‌ಗಮ್ ಪಿಂಕ್, ಶಾರ್ಕ್ ಬ್ಲೂ ಹಾಗೂ ಕೊರಲ್ ಬ್ಲೂ ಬಣ್ಣಗಳಲ್ಲಿ ದೊರೆಯಲಿದೆ. ಎರಡೂ ಉತ್ಪನ್ನಗಳು ಬೋಟ್‌ನ ಅಧಿಕೃತ ಆನ್‌ಲೈನ್ ಸ್ಟೋರ್ ಹಾಗೂ ಪ್ರಮುಖ ಇ-ಕಾಮರ್ಸ್ ವೇದಿಕೆಗಳಲ್ಲಿ ಖರೀದಿಗೆ ಲಭ್ಯವಿರುತ್ತವೆ.

City Today News 9341997936

Leave a comment

This site uses Akismet to reduce spam. Learn how your comment data is processed.