ಕೃಷ್ಣ ಜನ್ಮಾಷ್ಟಮಿ, ಶಿಕ್ಷಕರ ದಿನಾಚರಣೆ ಹಾಗೂ ಇಂಡಿಯಾ ರೆಕಾರ್ಡ್ಸ್ ಪ್ರಶಸ್ತಿ ಪ್ರದಾನ ಸಮಾರಂಭ ವೈಭವದಿಂದ ಆರಂಭ

ಬೆಂಗಳೂರು, ಸೆಪ್ಟೆಂಬರ್ 7: ಆರ್ಟ್ ಕಲ್ಚರಲ್ ಎಜುಕೇಷನಲ್ ಎನ್‌ಲೈಟ್ ಫೌಂಡೇಶನ್ (ರಿ) ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ, ಶಿಕ್ಷಕರ ದಿನಾಚರಣೆ ಹಾಗೂ “ಇಂಡಿಯಾ ರೆಕಾರ್ಡ್ಸ್” ವಿಶ್ವ ದಾಖಲೆ ಪ್ರಶಸ್ತಿ ಪತ್ರ ಪ್ರದಾನ ಸಮಾರಂಭವನ್ನು ಬೆಂಗಳೂರಿನ ಎಂ.ಜಿ. ರಸ್ತೆ ಮೆಟ್ರೋ ನಿಲ್ದಾಣದ ರಂಗಸ್ಥಳ ಸಭಾಂಗಣದಲ್ಲಿ ಸೆಪ್ಟೆಂಬರ್ 6ರಂದು ಅದ್ದೂರಿಯಾಗಿ ಆಯೋಜಿಸಲಾಗಿತ್ತು.
ಸಂಸ್ಥೆಯ ಸಂಸ್ಥಾಪಕಿ ಅಂಬಿಕಾ ಸಿ. ಅವರ ನೇತೃತ್ವದಲ್ಲಿ ನಡೆದ ಈ ವಿಶೇಷ ಕಾರ್ಯಕ್ರಮದಲ್ಲಿ ಕಬ್ಬನ್ ಪಾರ್ಕ್‌ನ ಉಪ ನಿರ್ದೇಶಕಿ ಶ್ರೀಮತಿ ಜಿ. ಕುಸುಮಾ, ಹಿರಿಯ ಪತ್ರಕರ್ತ ಶ್ರೀ ಪ್ರಸನ್ನ ಹಾಗೂ ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘದ ರಾಜ್ಯಾಧ್ಯಕ್ಷೆ ರೋಶನಿ ಗೌಡ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ಯೋಗ, ಕಲೆ, ಸಂಸ್ಕೃತಿ, ಶಿಕ್ಷಣ ಹಾಗೂ ದೈಹಿಕ ಮತ್ತು ಮಾನಸಿಕ ಆರೋಗ್ಯ ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಶಿಕ್ಷಕರನ್ನು ಇದೇ ಸಂದರ್ಭದಲ್ಲಿ ಗೌರವಿಸಿ ಸನ್ಮಾನಿಸಲಾಯಿತು. ಗೋಪಾಲ್ ಆಚಾರ್, ಸರೋಜಾ ಗೋಪಾಲ್, ರೂಪಶ್ರೀ ಎನ್.ಆರ್., ಸುರೇಖಾ ರವಿಕುಮಾರ್, ಕಿಶೋರ್ ಕುಮಾರ್, ಗೋಪಿ ಡಿ., ಪುಷ್ಪಾ ಸಿ. ಹಾಗೂ ಅನ್ನಪೂರ್ಣಮ್ಮ ಅವರುಗಳು ಸನ್ಮಾನ ಸ್ವೀಕರಿಸಿದರು.

ಇದೇ ಸಂದರ್ಭದಲ್ಲಿ “ಇಂಡಿಯಾ ರೆಕಾರ್ಡ್ಸ್” ವಿಶ್ವ ದಾಖಲೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ಸು ಸಾಧಿಸಿದ ಯೋಗ ಹಾಗೂ ಗಾಂಧಾರಿ ವಿದ್ಯೆ ವಿದ್ಯಾರ್ಥಿಗಳಿಗೆ ವಿಶ್ವ ದಾಖಲೆ ಪ್ರಶಸ್ತಿ ಪತ್ರಗಳನ್ನು ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ಸಾಂಸ್ಕೃತಿಕ ಭಾಗವೂ ವಿಶೇಷ ಆಕರ್ಷಣೆಯಾಗಿತ್ತು. ಯಕ್ಷ ಸಂಜೀವಿನಿ ತಂಡದ ಕಲಾವಿದರು ಪ್ರದರ್ಶಿಸಿದ ‘ಕಂಸ ವಧೆ’ ಪೌರಾಣಿಕ ಯಕ್ಷಗಾನ ನಾಟಕವು ಶ್ರೀಕೃಷ್ಣನ ಜೀವನಗಾಥೆ ಮತ್ತು ಧರ್ಮದ ವಿಜಯದ ಸಂದೇಶವನ್ನು ಮನೋಜ್ಞವಾಗಿ ಅನಾವರಣಗೊಳಿಸಿತು.

ಕೃಷ್ಣಾವತಾರ ನೃತ್ಯ ಹಾಗೂ ಭರತನಾಟ್ಯ ಪ್ರದರ್ಶನಗಳು ನೋಡುಗರ ಗಮನ ಸೆಳೆದವು. ವಿಶೇಷವಾಗಿ ಶ್ರೀಕೃಷ್ಣನ ವೇಷದಲ್ಲಿ ಕಂಗೊಳಿಸುತ್ತಿದ್ದ ಪುಟ್ಟ ಮಕ್ಕಳು ಬಾಲಕೃಷ್ಣನ ಲೀಲಾವತಾರವನ್ನು ಮುದ್ದಾಗಿ ಪ್ರದರ್ಶಿಸಿ ಸಭಿಕರ ಮನ ಗೆದ್ದರು. ಅವರ ಆಕರ್ಷಕ ಅಭಿನಯ ಮತ್ತು ಮನಮೋಹಕ ಪ್ರದರ್ಶನ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ನೀಡಿತು.

ಶಿಕ್ಷಣ, ಸಂಸ್ಕೃತಿ, ಕಲೆ ಹಾಗೂ ಭಾರತೀಯ ಪರಂಪರೆಯ ಮಹತ್ವವನ್ನು ಒಂದೇ ವೇದಿಕೆಯಲ್ಲಿ ಸಾರಿದ ಈ ಕಾರ್ಯಕ್ರಮವು ಸಂಭ್ರಮ ಮತ್ತು ಸಾಂಸ್ಕೃತಿಕ ವೈಭವದಿಂದ ಯಶಸ್ವಿಯಾಗಿ ನೆರವೇರಿತು.

City Today News 9341997936

Leave a comment

This site uses Akismet to reduce spam. Learn how your comment data is processed.